Home Mangalorean News Kannada News ಏಪ್ರಿಲ್ 1 ರಿಂದ ಉಡುಪಿ ಜಿಲ್ಲೆಯಲ್ಲಿ ಪಡಿತರ ವಿತರಣೆ, ಓಟಿಪಿ ಅಗತ್ಯವಿಲ್ಲ – ಸಚಿವ ಕೋಟ...

ಏಪ್ರಿಲ್ 1 ರಿಂದ ಉಡುಪಿ ಜಿಲ್ಲೆಯಲ್ಲಿ ಪಡಿತರ ವಿತರಣೆ, ಓಟಿಪಿ ಅಗತ್ಯವಿಲ್ಲ – ಸಚಿವ ಕೋಟ ಶ್ರೀನಿವಾಸ ಪೂಜಾರಿ

Spread the love

ಏಪ್ರಿಲ್ 1 ರಿಂದ ಉಡುಪಿ ಜಿಲ್ಲೆಯಲ್ಲಿ ಪಡಿತರ ವಿತರಣೆ, ಓಟಿಪಿ ಅಗತ್ಯವಿಲ್ಲ – ಸಚಿವ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ : ಜಿಲ್ಲೆಯಲ್ಲಿ ಏಪ್ರಿಲ್ 1 ರಿಂದ ಪಡಿತರ ವಿತರಣೆ ಆರಂಭವಾಗಲಿದ್ದು, ಕೊರೋನಾ ಹಿನ್ನಲೆಯಲ್ಲಿ ಎರಡು ತಿಂಗಳ ಪಡಿತರವನ್ನು ಒಂದೇ ಬಾರಿಗೆ ವಿತರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯದ ಬಂದರು,ಮೀನುಗಾರಿಕೆ ಹಾಗೂ ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಅವರು ಮಂಗಳವಾರ, ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಕುರಿತು ಕೈಗೊಂಡಿರುವ ಕ್ರಮಗಳ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿನ ಅಂತ್ಯೋದಯ, ಬಿಪಿಎಲ್ ಮತ್ತು ಆಹಾರ ಪಡೆಯಲು ನೊಂದಾಯಿಸಿರುವ ಎಪಿಲ್ ಕಾರ್ಡ್ದಾರರಿಗೆ ಸರಕಾರದ ಸೂಚನೆಯಂತೆ, ಎರಡು ತಿಂಗಳ ಪಡಿತರವನ್ನು ವಿತರಿಸುವಂತೆ ಸೂಚಿಸಿದ ಸಚಿವ ಕೋಟ, ಪಡಿತರ ಪಡೆಯಲು ಒಟಿಪಿ ಸಂಖ್ಯೆಯನ್ನು ಕಡ್ಡಾಯಗೊಳಿಸಿದೇ, ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿಕೊಂಡು ಪಡಿತರ ವಿತರಿಸಿ, ಪಡಿತರ ವಿತರಣೆಯಲ್ಲಿ ಜನಸಂದಣಿ ತಪ್ಪಿಸಲು , ಪ್ರತಿ ಅಂಗಡಿಯಲ್ಲಿ, ದಿನದಲ್ಲಿ ನಿಗಧಿತ ಸಂಖ್ಯೆಯ ಪಡಿತರದಾರರಿಗೆ ಮಾತ್ರ ಅಂಗಡಿಗೆ ಬರುವಂತೆ ಮಾಹಿತಿ ನೀಡಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ವಿತರಿಸುವಂತೆ ಸೂಚಿಸಿದ ಅವರು, ಎಲ್ಲಾ ತಾಲೂಕುಗಳ ತಹಸೀಲ್ದಾರರು ಪಡಿತರ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಉಸ್ತುವಾರಿ ವಹಿಸಿಕೊಳ್ಳುವಂತೆ ಸೂಚಿಸಿದರು.

ಶಾಲೆಗಳಲ್ಲಿ ಉಳಿದಿರುವ ಬಿಸಿಯೂಟದ ಅಕ್ಕಿಯನ್ನು ವಿದ್ಯಾರ್ಥಿಗಳ ಪೋಷಕರಿಗೆ ನೀಡುವಂತೆ ಮತ್ತು ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡಲಾಗುವ ಕಿಟ್ ಗಳನ್ನು ಅವರ ಮನೆಗೆಳಿಗೆ ತಲುಪಿಸುವ ವ್ಯವಸ್ಥೆ ಮಾಡುವಂತೆ ಸಂಬಂದಪಟ್ಟ ಅಧಿಕಾರಿಗಳಿಗೆ ಸಚಿವ ಕೋಟ ಸೂಚಿಸಿದರು.

ಜಿಲ್ಲೆಯಲ್ಲಿ ಕೊರೋನ ಪತ್ತೆ ಹಚ್ಚುವ ಲ್ಯಾಬ್ ತೆರೆಯಲು ಎಲ್ಲಾ ಅಗತ್ಯ ಮೂಲಭೂತ ಸೌಲಭ್ಯಗಳಿದ್ದು, ಕೂಡಲೇ ಲ್ಯಾಬ್ ಗೆ ಅನುಮತಿ ನೀಡುವಂತೆ ಕುರಿತಂತೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಸಚಿವ ಕೋಟ ತಿಳಿಸಿದರು.

ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ದಿನಸಿವಸ್ತುಗಳ ಖರೀದಿಗೆ ಬೆಳಗ್ಗೆ 7 ರಿಂದ 11 ರ ವರೆಗ ಸಮಯ ನಿಗಧಿಪಡಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿಸುವಂತೆ ಸೂಚನೆ ನೀಡಿದ್ದು, ಯಾವುದೇ ಸಮಸ್ಯೆಗಳಿಲ್ಲ, ಜಿಲ್ಲೆಯಲ್ಲಿರುವ ನಿರಾಶ್ರಿತರಿಗೆ ಅಗತ್ಯ ಆಹಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ, 3 ತಾಲೂಕುಗಳಲ್ಲಿ ಶಂಕಿತ ಕೊರೋನಾ ರೋಗಿಗಳನ್ನು ದಾಖಲು ಮಾಡಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಉಡುಪಿಯ ಡಾ.ಟಿ.ಎಂ.ಎ ಪೈ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ 19 ಪೀಡಿತರ ಚಿಕಿತ್ಸೆಗೆ ಮೀಸಲಿಡಲಾಗಿದೆ, ಜಿಲ್ಲೆಗೆ ಇನ್ಪೋಸಿಸ್ ವತಿಯಿಂದ 80 ಲಕ್ಷ ರೂ ವೆಚ್ಚದಲ್ಲಿ ಅಗತ್ಯವಿರುವ ಸುರಕ್ಷಾ ಉಪಕರಣಗಳ ಸರಬರಾಜು ಆಗುತ್ತಿದೆ ಹಾಗೂ ಸ್ಥಳಿಯ ದಾನಿಗಳ ನೆರವಿನಿಂದ ಆಹಾರ ಕಿಟ್ ಗಳು ಮತ್ತು ಅಗತ್ಯ ವಸ್ತುಗಳ ನೆರವು ದೊರೆಯುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಜಿಲ್ಲೆಯಲ್ಲಿ ಇದುವರೆಗೆ 2309 ಮಂದಿಯನ್ನು ಪರೀಕ್ಷಿಸಿದ್ದು, 1056 ರ ಜನರಿಗೆ ಹೋಂ ಕ್ವಾರಟೈಂನ್ ವಿಧಿಸಿದ್ದು, 1072 ಜನ 14 ದಿನದ ಮತ್ತು 127 ಜನ 28 ದಿನದ ಕ್ವಾರಟೈಂನ್ ಅವಧಿ ಪೂರೈಸಿದ್ದು, 140 ಜನ ಶಂಕಿತರ ಮಾದರಿಯನ್ನು ಪರೀಖ್ಷಗೆ ಕಳುಹಿಸಿದ್ದು, 126 ಮಂದಿಯ ವರದಿ ಬಂದಿದ್ದು, 123 ನೆಗೆಟಿವ್ ಮತ್ತು 3 ಪಾಸಿಟಿವ ವರದಿ ಬಂದಿದೆ 14 ಮಂದಿಯ ವರದಿ ಬರಲು ಬಾಕಿ ಇದೆ, ಪಾಸಿಟಿವ್ ವರದಿ ಬಂದಿರುವ 3 ರೋಗಿಗಳನ್ನು ಕೆಎಂಸಿಯಲ್ಲಿ ದಾಖಲಿಸಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಇದೆ ಎಂದು ಡಿಹೆಚ್ಓ ಡಾ. ಸುಧೀರ್ ಚಂದ್ರ ಸೂಡಾ ಮಾಹಿತಿ ನೀಡಿದರು.

ಸಭೆಯಲ್ಲಿ ರಾಜ್ಯ ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಡುಪಿ ಶಾಸಕ ರಘುಪತಿ ಭಟ್ , ಕಾಪು ಶಾಸಕ ಲಾಲಾಜಿ ಮೆಂಡನ್, ಜಿ.ಪಂ ಸಿಇಓ ಪ್ರೀತಿ ಗೆಹಲೋತ್, ಎಸ್ಪಿ ವಿಷ್ಣುವರ್ಧನ್ ಹಾಗೂ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳು ಮತ್ತು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version