ಏಪ್ರಿಲ್ 21 ರಂದು ಬಾರ್ಕೂರು ಮಹಾ ಸಂಸ್ಥಾನಂ ಭಾರ್ಗವ ಬೀಡು ಲೋಕಾರ್ಪಣೆ
ಉಡುಪಿ: ಬಾರ್ಕೂರು 365 ದೇವಸ್ಥಾನಗಳ ನೆಲೆಬೀಡು, ಇಲ್ಲಿ ಇದೇ ಏಪ್ರಿಲ್ 19ರಿಂದ 21ನೇ ತಾರೀಕಿನ ವರೆಗೆ ಶ್ರೀ ಬಾರ್ಕೂರು ಮಹಾ ಸಂಸ್ಥಾನಂ ಭಾರ್ಗವ ಬೀಡು ಬಾರ್ಕೂರು ಇದರ ಲೋಕಾರ್ಪಣೆ ಹಾಗೂ ಶ್ರೀ ನಾಗದೇವರ ಮತ್ತು ಮೂಲ ದೈವಗಳ ಪುನರ್ ಪ್ರತಿ ಷ್ಠಾಪನೆ ಮತ್ತು ಪರಮ ಪವಿತ್ರ ಮಹಾನಾಗಮಂಡಲೋತ್ಸವ ಆಯೋಜಿಸಲಾಗಿದೆ. ದೈವರಾಧನೆ ಮತ್ತು ನಾಗರಾಧನೆಗೆ ಹೆಚ್ಚಿನ ಮಹತ್ವ ನೀಡುವ ಬೈಂದೂರಿನಿಂದ ಹಿಡಿದು ಕಾಸರಗೋಡಿನ ಚಂದ್ರಗಿರಿಯವರೆಗಿನ ಅವಳಿ ಜಿಲ್ಲೆಗಳ ರಾಜಧಾನಿಯಾಗಿ ಬಾರ್ಕೂರು ಗುರುತಿಸಿಕೊಂಡಿರುವ ಹಿನ್ನಲೆಯಲ್ಲಿ ಮಹಾ ನಾಗಮಂಡಲೋತ್ಸವವನ್ನು ಇಲ್ಲಿ ಏಪ್ರಿಲ್ 21ರಂದು ಆಯೋಜಿಸಲಾಗಿದೆ. ಒಟ್ಟು 35 ರಿಂದ 40 ಸಾವಿರ ಭಕ್ತಾದಿಗಳ ನಿರೀಕ್ಷೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಾರ್ಕೂರಿನ ಭಾರ್ಗವ ಬೀಡು, ಬಾರ್ಕೂರು ಮಹಾ ಸಂಸ್ಥಾನದ ವಿದ್ಯಾ ವಾಚಸ್ಪತಿ ಶ್ರೀ ವಿಶ್ವ ಸಂತೋಷ ಭಾರತಿ ಶ್ರೀ ಪಾದಂಗಳವರು ಹೇಳಿದರು.
ಅವರು ಭಾನುವಾರದಂದು ಬಾರ್ಕೂರು ಭಾರ್ಗವ ಬೀಡು ಇಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಾರ್ಕೂರಿನ ಇತಿಹಾಶ ಪುರಾಣ ಹಾಗೂ ಜನಪದ ಸಂಸ್ಕøತಿಗಳ ದಾಖಲೆಗಳನ್ನು ಅಮೂಲಾಗ್ರವಾಗಿ ಶೋಧಿಸಿ ಅಭ್ಯಸಿಸಿ ಬಾರಕೂರು ಮಹಾ ಸಂಸ್ಥಾನವನ್ನು ಸ್ಥಾಪನೆ ಮಾಡಿ ಉಸ್ತವಾರಿಗಾಗಿ ಅಭಿಮಾನಿಗಳ ಮತ್ತು ವಿಶ್ವಸ್ತ ಮಂಡಳಿಯನ್ನು ರಚಿಸಲಾಗಿದೆ. ಸರ್ವಧರ್ಮಗಳ ಸಮನ್ವಯ ಕ್ಷೇತ್ರವಾಗಿ ಸಂಸ್ಕøತಿ, ಕಲೆ, ಕೃಷಿ, ವಿದ್ಯಾಭ್ಯಾಸ, ಆರೋಗ್ಯ ಇಲ್ಲಿನ ಜನತೆಗೆ ಸಿಗಬೇಕು ಎನ್ನುವುದು ಸಂಸ್ಥಾನದ ಮೂಲ ಉದ್ದೇಶವಾಗಿದೆ. ಇದರೊಂದಿಗೆ ದೈವರಾಧನೆ ಮತ್ತು ನಾಗರಾಧನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಮೂಲ ದೈವಗಳ ಮತ್ತು ನಾಗದೇವರ ಪುನರ್ ಪ್ರತಿಷ್ಠೆಯ ಜೊತೆಗೆ ಮಹಾ ನಾಗಮಂಡಲೋತ್ಸವ ಆಯೋಜಿಸಲಾಗಿದೆ ಎಂದರು.
ಸಂಸ್ಥಾನದ ಒಳಾಂಗಣದಲ್ಲಿ 5000 ಜನ ಕುಳಿತು ನಾಗಮಂಡಲೋತ್ಸವ ವಿಕ್ಷೀಸುವ ಹಾಗಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ಏಪ್ರಿಲ್ 19ರಂದು ಬೇರೆ ಬೇರೆ ಕಡೆಯ ಹೊರೆ ಕಾಣಿಕೆಗಳು ಒಟ್ಟುಗೂಡಿಸಿ ಬ್ರಹ್ಮಾವರದ ಗಾಂಧಿ ಮೈದಾನದಿಂದ ಹೊರಟು ಮೆರವಣಿಗೆಯ ಮೂಲಕ ಸಂಸ್ಥಾನಕ್ಕೆ ಕರೆ ತರಲಾಗುವುದು. ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಇಂಧನ ಸಚಿವ ಡಿಕೆ ಶಿವಕುಮಾರ್, ಸಚಿವ ಪ್ರಮೋದ್ ಮಧ್ವರಾಜ್, ಶ್ರೀ ಕುಕ್ಕೆ ಕ್ಷೇತ್ರದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಅತಿಥಿಗಳು ಉಪಸ್ಥಿತರಿರಲಿದ್ದಾರೆ.
ಏಪ್ರಿಲ್ 20ರಂದು ತುಳುನಾಡಿನ ಪ್ರಾಚೀನ ಪದ್ಧತಿ ಪರಂಪರೆಯಲ್ಲಿ ಪಾಡ್ದನ ಮತ್ತು ನುಡಿ ಮಂತ್ರಗಳ ಸಹಿತ ದೈವ ದೇವರುಗಳ ಪ್ರತಿಷ್ಠಾಪನೆ ನಡೆಯಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೋಡಿಮಠದ ಶ್ರೀ ಶ್ರೀ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದು, ಕೇಂದ್ರ ಸಚಿವ ಸದಾನಂದ ಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆ ವಹಿಸಲಿದ್ದು ಮತ್ತು ಅನೇಕ ಗಣ್ಯರು ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ.
ಏಪ್ರಿಲ್ 21ರಂದು ಮಹಾ ನಾಗಮಂಡಲೋತ್ಸವ ನಡೆಯಲಿದ್ದು, ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಸುತ್ತೂರು ಮಠದ ಶ್ರೀ ಶ್ರೀ ಶ್ರೀ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಶಿರೂರು ಮಠದ ಶ್ರೀ ಶ್ರೀ ಶ್ರೀ ಲಕ್ಷ್ಮೀವರ ತೀರ್ಥ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದು, ಮೂರು ಸಾವಿರ ಮಠದ ಶ್ರೀ ಶ್ರೀ ಶ್ರೀ ಜಗದ್ಗುರು ಗುರುಸಿದ್ಧರಾಜ ಯೋಗಿಂದ್ರ ಮಹಾಸ್ವಾಮಿಗಳು, ಸಿದ್ಧಗಂಗ ಮಠದ ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಉಪಸ್ಥಿತರಿರಲಿದ್ದಾರೆ. ಶಬರಿಮಲೆ ಪಂದಳ ರಾಜ ವಂಶಸ್ಥರಾದ ರಾಜ ಕೇರಳ ವರ್ಮ ವಿಶೇಷವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂಸ್ಥಾನ ಲೋಕಾರ್ಪಣೆ ಮಾಡಲಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಧ್ಯಕ್ಷತೆವಹಿಸಲಿದ್ದಾರೆ ಎಂದರು.
ಭೂತಾಳ ಪಾಂಡ್ಯ ಪ್ರಶಸ್ತಿ
ಮೂರು ದಿನದಲ್ಲಿ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಮಹಾಸಂಸ್ಥಾನದ ವತಿಯಿಂದ ಪ್ರತಿಷ್ಠಿತ ಭೂತಾಳ ಪಾಂಡ್ಯ ಪ್ರಶಸ್ತಿಯನ್ನು ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ, ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ, ಆಲ್ಕಾರ್ಗೋ ಲಾಜೆಸ್ಟಿಕ್ ಶಶಿಕಿರಣ್ ಶೆಟ್ಟಿ ಮತ್ತು ಮಂಗಳೂರು ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಕೆ.ಚೆನ್ನಪ್ಪ ಗೌಡ ಅವರಿಗೆ ನೀಡಲಾಗುವುದು ಎಂದರು
ಸುದ್ದಿಗೋಷ್ಠಿಯಲ್ಲಿ ಸಂಸ್ಥಾನದ ಗುರ್ಮೆ ಸುರೇಶ್ ಶೆಟ್ಟಿ, ಕೃಷ್ಣ ಪ್ರಸಾದ್ ಅಡ್ಯಂತಾಯ, ಬಾರ್ಕೂರು ಶಾಂತಾರಾಮ ಶೆಟ್ಟಿ, ಗೋಪಾಲಕೃಷ್ಣ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.