ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಪ್ರಿಲ್ 21ರಂದು ದಕ್ಷಿಣಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ವಿವಿಧ ಇಲಾಖೆಗಳ ಯೋಜನೆಗಳ ಪ್ರಗತಿ ಕುರಿತು ಪರಿಶೀಲನೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಕುರಿತು ಪತ್ರಕರ್ತರ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ಅವರು ಮುಖ್ಯಮಂತ್ರಿಯವರ ಬೆಳಿಗ್ಗೆ 9.30 ಕ್ಕೆ ಬಜ್ಪೆಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದು, ರೂ. 11 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ವಿಮಾನ ನಿಲ್ದಾಣದ ನಿರ್ಗಮನ ರಸ್ತೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವರು.
ಅಲ್ಲಿಂದ ಬಂಟ್ವಾಳದ ಸಜಿಪ ಗ್ರಾಮಕ್ಕೆ ತೆರಳಲಿರುವ ಮುಖ್ಯಮಂತ್ರಿ ಅವರು ಅಲ್ಲಿ ನಿರ್ಮಿಸಿರುವ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಮತ್ತು ಜ್ಞಾನ ಮಂದಿರ ಉದ್ಘಾಟಿಸುವರು. ಬಳಿಕ ಪುರಭವನದಲ್ಲಿ ನಡೆಯುವ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸುವರು. ಇಲ್ಲಿ ಅವರು ರೂ. 41 ಕೋಟಿ ವೆಚ್ಚದ ನೂತನ ಜಿಲ್ಲಾಡಳಿತ ಸಂಕಿರ್ಣ ನಿರ್ಮಾಣ ಕಾಮಾಗಾರಿ, ರೂ. 5 ಕೋಟಿ ವೆಚ್ಚದ ಅಂತರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣ ಕಾಮಾಗಾರಿ, ರೂ. 18 ಕೋಟಿ ವೆಚ್ಚದ ವೆನ್ಲಾಕ್ ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣ, ಮಂಗಳೂರು ನಗರ ಪೋಲಿಸರ 114 ವಸತಿ ಗೃಹಗಳ ನಿರ್ಮಾಣ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೋಲಿಸರ 96 ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವರು.
ಅದರ ಬಳಿಕ ಶಕ್ತಿನಗರಕ್ಕೆ ಭೇಟಿ ನೀಡುವ ಸಿದ್ದರಾಮಯ್ಯ ಅವರು ಅಲ್ಲಿ ಕೊಂಕಣಿ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸುವರು. ನಂತ ಸುರತ್ಕಲ್ ಪಾಲಿಕೆ ವಲಯ ಕಚೇರಿ ಉದ್ಘಾಟಿಸುವರು. ಸುರತ್ಕಲ್ – ಎಂಆರ್ ಪಿಎಲ್ ರಸ್ತೆ, ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳಿಗೆ ಇದೇ ವೇಳೆ ಚಾಲನೆ ನೀಡುವರು. ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಾರೆ ಎಂದು ಹೇಳಿದರು.