Home Mangalorean News Kannada News ಐಟಿ ಅಧಿಕಾರಿಗಳ ಸೋಗಿನಲ್ಲಿ ದರೋಡೆಗೆ ಯತ್ನಿಸಿದ್ದ ಆರೋಪಿಗಳ ಬಂಧನ

ಐಟಿ ಅಧಿಕಾರಿಗಳ ಸೋಗಿನಲ್ಲಿ ದರೋಡೆಗೆ ಯತ್ನಿಸಿದ್ದ ಆರೋಪಿಗಳ ಬಂಧನ

Spread the love

ಐಟಿ ಅಧಿಕಾರಿಗಳ ಸೋಗಿನಲ್ಲಿ ದರೋಡೆಗೆ ಯತ್ನಿಸಿದ್ದ ಆರೋಪಿಗಳ ಬಂಧನ

  • ಸೈನ್ ಇನ್ ಸೆಕ್ಯೂರಿಟಿ ಸಮಯಪ್ರಜ್ಞೆಯಿಂದ ತಪ್ಪಿದ ಬಹುದೊಡ್ಡ ದುರಂತ

ಕುಂದಾಪುರ: ಐಟಿ ಅಧಿಕಾರಿಗಳ ಸೋಗಿನಲ್ಲಿ ಬಂದು ದರೋಡೆಗೆ ವಿಫಲ ಯತ್ನ ನಡೆಸಿದ ದರೋಡೆಕೋರರನ್ನು ಬಂಧಿಸುವ ಮೂಲಕ ಜಿಲ್ಲೆಯಲ್ಲೇ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.

ಮೂಲತ: ಚಿಕ್ಕಮಗಳೂರು ಜಿಲ್ಲೆಯವನಾದ ಮುಂಬೈ ನಿವಾಸಿ ಸಂತೋಷ್‌ ನಾಯಕ್‌(45) ಹಾಗೂ ಮೂಲತ: ಉಡುಪಿ ಜಿಲ್ಲೆ ಕಾಪು ಪೊಲಿಪುವಿನ ಪ್ರಸ್ತುತ ಮುಂಬೈ ನಿವಾಸಿಯಾದ ದೇವರಾಜ್‌ ಸುಂದರ್‌ ಮೆಂಡನ್‌(46) ಬಂಧಿತ ಆರೋಪಿಗಳು.

ಈರ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಿದೆ. ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರನ್ನು ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ಸ್ಥಳೀಯರು ಸೇರಿದಂತೆ ಹಲವರು ಭಾಗಿಯಾಗಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, ಉಳಿದ ಆರೋಪಿತರ ಪತ್ತೆಗಾಗಿ ಹುಡುಕಾಟ ನಡೆದಿದೆ.

ಏನಿದು ಪ್ರಕರಣ?:
ಜು.25 ರಂದು ಬೆಳಿಗ್ಗೆ 8.30 ರ ವೇಳೆಯಲ್ಲಿ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ತೆಕ್ಕಟ್ಟೆ ಮಣೂರಿನ ನಿವಾಸಿ ಕವಿತಾ ಅವರ ಮನೆಯ ಗೇಟಿನ ಹೊರಗೆ ಶಿಫ್ಟ್ ಮತ್ತು ಇನೋವಾ ಕಾರಿನಲ್ಲಿ ಸುಮಾರು 6 -8 ಜನ ಅಪರಿಚಿತರು ತಂಡ ಐಟಿ ಅಧಿಕಾರಿಗಳ ಸೋಗಿನಲ್ಲಿ ಅವರ ಮನೆಯ ಒಳ ನುಗ್ಗುವ ಪ್ರಯತ್ನ ಮಾಡಿತ್ತು. ಈ ತಂಡದಲ್ಲಿದ್ದವರು ಅಧಿಕಾರಿಗಳಂತೆ ದಿರಿಸು ಧರಿಸಿದ್ದಲ್ಲದೆ, ಒಬ್ಬ ಪೊಲೀಸ್ ಅಧಿಕಾರಿಯ ಸಮವಸ್ತ್ರವನ್ನು ಧರಿಸಿದ್ದನು. ಗೇಟಿನ ಬಾಗಿಲು ತೆರೆಯಲು ಪ್ರಯತ್ನಿಸಿದ್ದ ತಂಡ ವಿಫಲವಾದಾಗ ಮನೆಯ ಗೇಟನ್ನು ಹಾರಿ ಮನೆಗೆ ಅಕ್ರಮ ಪ್ರವೇಶ ಮಾಡಲು ಪ್ರಯತ್ನ ನಡೆಸಿತ್ತು.

ಮನೆಯ ಹೊರಗಡೆ ಅಳವಡಿಸಲಾದ ಸೈನ್ ಇನ್ ಸೆಕ್ಯೂರಿಟಿ ಸಿಸಿ ಕ್ಯಾಮರಾ ಕಣ್ಗಾವಲಿನ ತಂಡ ಅನುಮಾನಗೊಂಡು ಮನೆಯವರನ್ನು ಸಂಪರ್ಕಿಸಿ ಅಪಾಯದ ಮುನ್ಸೂಚನೆಗಳನ್ನು ನೀಡುವ ಪ್ರಯತ್ನ ನಡೆಸಿತ್ತು. ಈ ವೇಳೆ ಸೈನ್ ಇನ್ ಸೆಕ್ಯೂರಿಟಿ ಸಿಬ್ಬಂದಿಯ ಕರೆಗೆ ಮನೆಯವರಿಂದ ಸೂಕ್ತ ಸ್ಪಂದನ ದೊರಕದೆ ಇದ್ದಾಗ ಸಂಸ್ಥೆಯ ಮಾಲಿಕ ಕೃಷ್ಣ ಪೂಜಾರಿ ಸ್ವತ: ಕರೆ ಮಾಡಿ ಯಾವುದೇ ಕಾರಣಕ್ಕೂ ಮನೆಯ ಬಾಗಿಲು ತೆರೆಯದಂತೆ ಸೂಚಿಸಿದ್ದರು. ಮನೆಯ ಬಾಗಿಲು ತೆರೆಯುವ ವಿಫಲ ಪ್ರಯತ್ನ ನಡೆಸಿ ಸಫಲವಾಗದೆ ಇದ್ದಾಗ ತಂಡ ಬರಿಗೈಲಿ ವಾಪಾಸಾಗಿತ್ತು.

ದರೋಡೆಯ ವಿಫಲ ಯತ್ನ ನಡೆಸಿದ್ದ ಅಪರಿಚಿತರ ತಂಡ ಸಾಸ್ತಾನ ಟೋಲ್ ಗೇಟ್‌ನಲ್ಲಿ ಸಾಗದೆ ಬಾರ್ಕೂರು ಮೂಲಕ ಪರಾರಿಯಾಗಿರುವ ಅಂಶ ಪೊಲೀಸ್ ತನಿಖೆಯ ವೇಳೆ ಬಯಲಾಗಿತ್ತು. ದೂರು ದಾಖಲಿಸಿಕೊಂಡಿದ್ದ ಕೋಟ ಪೊಲೀಸ್ ಠಾಣೆಯ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಗಳ ಆಧಾರದಲ್ಲಿ ಅಪರಿಚಿತ ಅರೋಪಿಗಳ ಜಾಲ ಹುಡುಕಲು ಮುಂದಾಗಿದ್ದರು. ಎಸ್‌.ಪಿ ಡಾ.ಅರುಣ್ ಅವರ ಮಾರ್ಗದರ್ಶನದಲ್ಲಿ ಬ್ರಹ್ಮಾವರ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಂ ನೇತೃತ್ವದಲ್ಲಿ ಕೋಟ ಠಾಣಾ ಎಸ್‌ಐಗಳಾದ ಗುರುನಾಥ ಬಿ ಹಾದಿಮನಿ ಹಾಗೂ ಸುಧಾಪ್ರಭು, ಹಿರಿಯಡ್ಕ ಠಾಣಾ ಎಸ್‌ಐ ಮಂಜುನಾಥ ಅವರನ್ನು ಒಳಗೊಂಡ ಪ್ರತ್ಯೇಕ 3 ತಂಡಗಳನ್ನು ರಚಿಸಲಾಗಿತ್ತು. ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು, ಮುಂಬೈ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಆರೋಪಿಗಳ ಚಲನವಲನಗಳನ್ನು ಪತ್ತೆ ಮಾಡಿದ್ದ ಪೊಲೀಸರ ತಂಡ ಮುಂಬೈಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ಮಹಾರಾಷ್ಟ್ರದಿಂದ ಬಂದಿದ್ದ ಆರೋಪಿತರು ಸ್ಥಳೀಯರ ಸಹಕಾರ ಪಡೆದುಕೊಂಡು, ನಕಲಿ ಐಟಿ ದಾಳಿ ಮಾಡುವ ನೆಪದಲ್ಲಿ ಮನೆಗೆ ನುಗ್ಗಿ ದರೋಡೆ ಮಾಡುವ ಸಂಚು ರೂಪಿಸಿದ್ದರು ಎನ್ನುವ ಅಂಶಗಳು ಬೆಳಕಿಗೆ ಬಂದಿದೆ.

ಸೈನ್ ಇನ್ ಸೆಕ್ಯೂರಿಟಿ ಸಮಯಪ್ರಜ್ಙೆಗೆ ತಪ್ಪಿದ ಭಾರಿ ದುರಂತ :

ಕವಿತಾ ಅವರ ಮನೆಯ ಸಿಸಿ ಕ್ಯಾಮರಾ ದೃಶ್ಯಾವಳಿಗಳ ಕಣ್ಗಾವಲು ನಡೆಸುತ್ತಿದ್ದ ಸೈನ್ ಇನ್‌ ಸೆಕ್ಯೂರಿಟಿ ಸಂಸ್ಥೆಯವರ ಸಮಯಪ್ರಜ್ಙೆಯಿಂದಾಗಿ ಸಂಭವಿಸಬಹುದಾದ ಭಾರಿ ದುರಂತವೊಂದು ತಪ್ಪಿದೆ. ಇತ್ತೀಚೆಗೆ ಕಮಲಶಿಲೆ ದೇವಸ್ಥಾನದ ಗೋವುಗಳ ಕಳ್ಳತನ, ಮುಳ್ಳಿಕಟ್ಟೆಯ ಸೊಸೈಟಿಯೊಂದರ ಕಳವು ಪ್ರಯತ್ನ ಸೇರಿದಂತೆ ಈವರೆಗೆ ಸಾಕಷ್ಟು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿದ ಸಂಸ್ಥೆಯವರು, ಕ್ಷಿಪ್ರವಾಗಿ ಸಂಬಂಧಿಸಿದವರಿಗೆ ಹಾಗೂ ಪೊಲೀಸ್ ಇಲಾಖೆಗೆ ಸಕಾಲಿಕ ಮಾಹಿತಿ ನೀಡುವ ಮೂಲಕ ಸಂಭಾವ್ಯ ಅನಾಹುತಗಳನ್ನು ತಪ್ಪಿಸಿರುವ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.


Spread the love

Exit mobile version