ಐದು ವರ್ಷ ಉಡುಪಿ ಮತದಾರರ ಚಾಕರಿ ಮಾಡಿದ್ದೇನೆ, ಈಗ ಕೂಲಿ ಕೇಳುತ್ತಿದ್ದೇನೆ – ಪ್ರಮೋದ್ ಮಧ್ವರಾಜ್
ಉಡುಪಿ: ಉಡುಪಿಯ ಮತದಾರರು ಒಂದು ದಿನ ಬಂದು ಹೋಗವ ಪಿಎಮ್(ಪ್ರೈಮ್ ಮಿನಿಸ್ಟರ್) ಬಗ್ಗೆ ಆಸಕ್ತಿ ಹೊಂದಿಲ್ಲ ಬದಲಾಗಿ ಸದಾ ಅವರಿಗೆ ಹತ್ತಿರದಲ್ಲೇ ಸಿಗುವ ಪಿಎಮ್ (ಪ್ರಮೋದ್ ಮಧ್ವರಾಜ್) ಬಗ್ಗೆ ಹೆಚ್ಚಿನ ಒಲವನ್ನು ಹೊಂದಿದ್ದಾರೆ. ಕಾರಣ ದೆಹಲಿಯಿಂದ ಬರುವ ಪಿಎಮ್ ಕೇವಲ ಸುಳ್ಳು ಭರವಸೆಗಳನ್ನು ನೀಡಿ ನಾಲ್ಕು ವರ್ಷ ಕಳದರೆ ಉಡುಪಿಯ ಪಿಎಮ್ ಕಳೆದ ಐದು ವರ್ಷಗಳಲ್ಲಿ ನುಡಿದಂತೆ ನಡೆಯುವ ಪ್ರಯತ್ನ ಮಾಡಿದ್ದಾರೆ. ಇನ್ನೂ ಹೆಚ್ಚು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಮತ್ತೊಮ್ಮೆ ಜನರ ಆಶೀರ್ವಾದವನ್ನು ಬಯಸಿದ್ದಾರೆ. ಹೀಗೆಂದವರು ಉಡುಪಿಯ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಚಿವ ಪ್ರಮೋದ್ ಮಧ್ವರಾಜ್ ಅವರು.
ಬಿಡುವಿಲ್ಲದ ಚುನಾವಣಾ ಪ್ರಚಾರದ ನಡುವೆಯೂ ಕೂಡ ಮ್ಯಾಂಗಲೋರಿಯನ್ ತಂಡದೊಂದಿಗೆ ತನ್ನ ಚುನಾವಣಾ ಪ್ರಚಾರ, ತನ್ನ ಸರಕಾರದ ಸಾಧನೆಗಳನ್ನು ಮನಬಿಚ್ಚಿ ಹಂಚಿಕೊಂಡ ಪ್ರಮೋದ್ ಮಧ್ವರಾಜ್ ಮುಂದಿನ ಚುನಾವಣೆಯಲ್ಲಿ ಗೆದ್ದರೆ ಉಡುಪಿ ವಿಧಾನಸಭಾ ಕ್ಷೇತ್ರವನ್ನು ಮಾದರಿ ವಿಧಾನಸಭಾ ಕ್ಷೇತ್ರವಾಗಿ ರೂಪಿಸುವ ಕನಸನ್ನು ಹೊಂದಿರುವುದಾಗಿ ಹೇಳಿಕೊಂಡರು.
ತನ್ನ ಕ್ಷೇತ್ರಕ್ಕೆ ಕಳೆದ ಐದು ವರ್ಷದ ಅವಧಿಯಲ್ಲಿ ರೂ. 2026 ಕೋಟಿ ಅನುದಾವನ್ನು ಪಡೆದು ನುಡಿದಂತೆ ನಡೆದಿರುವ ಶಾಸಕ ಪ್ರಮೋದ್ ಮಧ್ವರಾಜ್ ಅವರು ತನ್ನ ಕ್ಷೇತ್ರದಲ್ಲಿ ನಡೆಸಿದ ವಿವಿಧ ಅಭಿವೃದ್ಧಿ ಕೆಲಸಗಳ ಕುರಿತು ವಿವರಿಸಿದ ಸಚಿವರು, ಉಡುಪಿ ಕ್ಷೇತ್ರಕ್ಕೆ ಮೀನುಗಾರಿಕೆ ಮತ್ತು ಬಂದರುಗಳ ಅಭಿವೃದ್ಧಿಗೆ ರೂ 433 ಕೋಟಿ ಅನುದಾನವನ್ನು ವ್ಯಯಿಸಿದ್ದು, 84 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಸೇತುವೆ ಕಾಮಗಾರಿಗಳು ಮುಗಿದಿವೆ ಅಥವಾ ಪ್ರಗತಿಯಲ್ಲಿವೆ. ಕೆಲವು ಟೆಂಡರ್ ಹಂತದಲ್ಲಿವೆ. ಸೇತುವೆಗಳ ಮಟ್ಟಿಗೆ ಹೆಚ್ಚುಕಡಿಮೆ ಬೇಡಿಕೆಗಳು ಬಾಕಿ ಇಲ್ಲ ಎನ್ನುವಷ್ಟರ ಮಟ್ಟಿಗೆ ಕೆಲಸಗಳಾಗಿವೆ.
ಮೀನುಗಾರಿಕಾ ದೋಣಿಗಳಿಗೆ ಫೀಸಿಬಿಲಿಟಿ ಪ್ರಮಾಣಪತ್ರ ಇರಲಿಲ್ಲ. ಅಂತಹ ಸುಮಾರು 163 ಅಕ್ರಮ ದೋಣಿಗಳನ್ನು ಸಕ್ರಮ ಗೊಳಿಸಲಾಗಿದೆ. ಸುಮಾರು ಒಂದು ಸಾವಿರ ಹೊಸ ಫೀಸಿಬಿಲಿಟಿ ಸರ್ಟಿಫಿಕೇಟ್ಗಳನ್ನು ನಮ್ಮ ಮೀನುಗಾರ ಯುವಕರಿಗೆ ನೀಡಲಾಗಿದೆ. ಹಿಂದೆ ಈ ಸರ್ಟಿಫಿಕೇಟ್ಗಳು ಐದು ಹತ್ತು ಲಕ್ಷ ರೂಪಾಯಿ ಲಂಚಕ್ಕೆ ಬಿಕರಿಯಾಗುತ್ತಿತ್ತು. ಡೀಸಲ್ ಸಬ್ಸಿಡಿ ಕಳೆದ ಮಾರ್ಚ್ ತಿಂಗಳ ತನಕ ಬಿಡುಗಡೆ ಮಾಡಿದ್ದು ಯಾವುದೇ ಬಾಕಿ ಇಲ್ಲ. ಮಿನುಗಾರ ಮಹಿಳೆಯರಿಗೆ ಕೊಡುವ ಸಬ್ಸಿಡಿಯ ಬಡ್ಡಿ ಕೂಡ ನನ್ನ ಅವಧಿಯಲ್ಲಿ 16 ಕೋಟಿಯಷ್ಟು ಬಿಡುಗಡೆ ಆಗಿದ್ದು ಅದರಲ್ಲೂ ಯಾವುದೆ ಬಾಕಿ ಉಳಿಸಿಕೊಂಡಿಲ್ಲ. ಮೀನುಗಾರಿಕೆಯ ವೇಳೆ ಸಮುದ್ರದಲ್ಲಿ ಅವಘಡಗಳಾಗಿ ಮೃತಪಡುವ ಮೀನುಗಾರರ ಕುಟುಂಬಕ್ಕೆ 2 ಲಕ್ಷ ಇದ್ದ ಪರಿಹಾರ ಧನವನ್ನು 6 ಲಕ್ಷಕ್ಕೆ ಏರಿಸಲಾಗಿದೆ. ಮಲ್ಪೆ ಬಂದರಿಗೆ ನನ್ನ ಅವಧಿಯಲ್ಲಿ 20 ಕೋಟಿಯಷ್ಟು ಅನುದಾನ ಬಂದಿದೆ.
ಹಿಂದಿನ ಶಾಸಕರು ಆರೋಪಿಸುವಂತೆ ಯಾವುದೇ ರಸ್ತೆಗಳು ಚತುಷ್ಪತವಾಗಿಲ್ಲ ರಸ್ತೆಗಳ ಅಭಿವೃದ್ಧಿ ಆಗಿಲ್ಲ ಎಂಬುದು ನೂರಕ್ಕೆ ನೂರು ಸುಳ್ಳು. ಹಿಂದೆ ನಗರದ ರಸ್ತೆಗಳು ಮಾತ್ರ ಅಭಿವೃದ್ಧಿಯಾದರೆ ನನ್ನ ಅವಧಿಯಲ್ಲಿ ನಗರದ ರಸ್ತೆಗಳ ಜೊತೆಯಲ್ಲಿ ಗ್ರಾಮೀಣ ರಸ್ತೆಗಳೂ ಕೂಡ ಅಭಿವೃದ್ಧಿಯಾಗಿದೆ. ಉಡುಪಿ ವಿಧಾನಸಭಾ ಕ್ಷೇತ್ರದ ಮೂಲಸೌಕರ್ಯದ ರಸ್ತೆ ಅಭಿವೃದ್ಧಿಗಾಗಿ 3348 ಕಾಮಗಾರಿಗಳಿಗೆ ಒಟ್ಟು 788 ಕಿಮಿ ರಸ್ತೆ ನಿರ್ಮಾಣಕ್ಕಾಗಿ ರೂ 468 ಕೋಟಿ ಹಣ ಮಂಜೂರಾಗಿದ್ದು, ಈ ಪೈಕಿ 2695 ಕಾಮಗಾರಿ 573 ಕಿಮೀ ರಸ್ತೆ ಪೂರ್ಣಗೊಂಡಿದ್ದು, ರೂ 286.48 ಕೋಟಿ ಖರ್ಚಾಗಿದೆ. ಬಾಕಿ ಇನ್ನುಳಿದ 215 ಕಿಮೀ ನ ರೂ 182.52 ಕೋಟಿ ಮೊತ್ತದ 653 ರಸ್ತೆ ಕಾಮಗಾರಿಗಳ ಪ್ರಗತಿಯಲ್ಲಿದೆ.
ಉಡುಪಿ ನಗರದ ಅಭಿವೃದ್ಧಿಗಾಗಿ ರೂ 445 ಕೋಟಿ ಮತ್ತು ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ರೂ 16.70 ಕೋಟಿ ವ್ಯಯಿಸಲಾಗಿದ್ದು, ಅತ್ಯಂತ ಬಡತನ ಹಾಗೂ ಸ್ವಂತ ನಿವೇಶನ ಮನೆಗಳಿಲ್ಲದ ಅರ್ಹ ಫಲಾನುಭವಿಗಳಿಗೆ ಗುರುತಿಸಿ ಅವರಿಗೆ ಸುಬ್ರಹ್ಮಣ್ಯ ನಗರದ ಲಿಂಗೋಟಿಗುಡ್ಡೆ, ಪರ್ಕಳ ವಾರ್ಡಿನ ಕೋಡಂಗೆ ಹಾಗೂ ಸಣ್ಣಕ್ಕಿಬೆಟ್ಟು ಭಾಗಗಳಲ್ಲಿ ಸುಮಾರು 500 ನಿವೇಶನಗಳನ್ನು ನೀಡುವ ಮೂಲಕ ಸರ್ಕಾರದ ವಸತಿ ಯೋಜನೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗ ೆರೂ 3.30 ಲಕ್ಷ ಹಾಗೂ ಇತರರಿಗೆ 2.70 ಲಕ್ಷ ರೂ ದೊರಕಿಸುವ ಪ್ರಯತ್ನ ಮಾಡಲಾಗಿದೆ.
ಸದಾ ಬಿಜೆಪಿಯವರು ಕಾಂಗ್ರೆಸ್ ಪಕ್ಷವನ್ನು ಹಾಗೂ ಮುಖ್ಯಮಂತ್ರಿಯನ್ನು ಹಿಂದೂ ವಿರೋಧಿ ಸರಕಾರ ಮತ್ತು ಮುಖ್ಯಮಂತ್ರಿ ಎಂದು ಹೀಗಳೆಯುತ್ತಾರೆ ಆದರೆ ಉಡುಪಿ ಕ್ಷೇತ್ರಕ್ಕೆ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ರೂ 6.07 ಕೋಟಿ ಅನುದಾನವನ್ನು ನೀಡಲಾಗಿದೆ ಮತ್ತು ಹಿಂದುಗಳಿದ ವರ್ಗಗಳ ಅಭಿವೃದ್ಧಿಗಾಗಿ ರೂ 17.89 ಕೋಟಿ ಅನುದಾನ ನೀಡಲಾಗಿದೆ.
ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರಕಾರ ಹೆಚ್ಚಿನ ಆದ್ಯತೆ ನೀಡಿದ್ದು ಕ್ಷೇತ್ರದಲ್ಲಿ ಕೃಷಿ ನೀರಾವರಿ, ಜಲಾನಯನ ಮತ್ತು ತೋಟಗಾರಿಕೆ ಮತ್ತು ಪಶುಸಂಗೋಪನೆಗಾಗಿ ರೂ 71 ಕೋಟಿ ಅನುದಾನ ನೀಡಲಾಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಕಿಂಡಿ ಅಣೆಕಟ್ಟು, ನದಿದಂಡೆ ಸಂರಕ್ಷಣೆ ಕಾಮಗಾರಿಗಳು, ಕೆರೆ ಅಭಿವೃದ್ಧಿ ಮತ್ತು ಉದ್ಯಾನವನ ಕಾಮಗಾರಿಗಳು ಹೆಚ್ಚಿನ ಸಂಖ್ಯೆಯ್ಲಲಿ ನಡೆಸಲಾಗಿದೆ.
ಮೊದಲ ಅವಧಿಯ ಶಾಸಕತ್ವದ ಅವಧಿಯಲ್ಲಿ ಮೂರು ಭಡ್ತಿಗಳನ್ನು ಪಡೆದ ನಾನು ನನಗೆ ಲಭಿಸಿದ ಹುದ್ದೆಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿರುವ ಸಂತೋಷ ತನಗಿದೆ. ರಾಜ್ಯದ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿಯಾಗಿ, ರಾಜ್ಯದ ಕ್ರೀಡಾ ಸಚಿವರಾಗಿ ಕ್ಯಾಬಿನೆಟ್ ಸಚಿವರಾಗಿ ಮೂರು ಭಡ್ತಿಯನ್ನು ಪಡೆದಿರುತ್ತೇನೆ. ಕ್ರೀಡಾ ಸಚಿವನಾಗಿ ರಾಜ್ಯದ ಕ್ರೀಡಾಳುಗಳಿಗೆ ಮತ್ತು ಯುವಜನರಿಗೆ ನ್ಯಾಯ ಒದಗಿಸುವ ಕೆಲಸ ನಡೆಸಲಾಗಿದೆ. ಇಷ್ಟರ ತನಕ ರಾಜ್ಯಕ್ಕೆ ಕ್ರೀಡಾ ನೀತಿ ಅಂತಲೇ ಇರಲಿಲ್ಲ. ಮೊದಲ ಕ್ರೀಡಾ ನೀತಿಯನ್ನು ನಾನು ಸಚಿವನಾದ ಮೇಲೆ ಜಾರಿಗೆ ತಂದಿದ್ದೇವೆ. ಯುವ ಚೈತ್ಯನ್ಯ ಎನ್ನುವ ಸ್ಪೋರ್ಟ್ಸ್ ಕಿಟ್ಗಳನ್ನ ವಿತರಣೆ ಮಾಡಲಾಗಿದೆ. 5 ಸಾವಿರ ಸ್ಪೋರ್ಟ್ಸ್ ಕ್ಲಬ್ಗಳಿಗೆ 20 ಕೋಟಿ ವೆಚ್ಚದಲ್ಲಿ ಈ ಕಿಟ್ಗಳನ್ನ ನೀಡಲಾಗಿದೆ. ಮೂಲಸೌಕರ್ಯಗಳನ್ನ ಅಭಿವೃದ್ಧಿಪಡಿಸುವ ಕೆಲಸಗಳಾಗಿವೆ. ಇನ್ನೊಂದು ಮಹತ್ವದ ಕೆಲಸ ಎಂದರೆ ಟಾಪ್ ತೌಸಂಡ್ ಸ್ಪೋರ್ಟ್ಸ್ ಪರ್ಸನ್ಗಳನ್ನು ಗುರುತಿಸಿ ಅವರಿಗೆ ಕಾರ್ಪೊರೇಟ್ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ನೆರವು ನೀಡುವ ಯೋಜನೆಯನ್ನು ಮಾಡಿದ್ದೇವೆ. ಇದರಲ್ಲಿ ಮುಕ್ಕಾಲು ಪಾಲು ಕ್ರೀಡಾಳುಗಳು 19 ವರ್ಷಕ್ಕೂ ಕಡಿಮೆ ವಯಸ್ಸಿನವರು. ಈ ರೀತಿ ಕ್ರೀಡಾ ಇಲಾಖೆಯಲ್ಲಿ ಬಹಳ ಸುಧಾರಣೆಗಳನ್ನು ಮಾಡಲಾಗಿದೆ.ಅಲ್ಲದೆ ಉಡುಪಿಗೂ ಕ್ರೀಡಾ ಇಲಾಖೆ ಮತ್ತು ಯುವ ಸಬಲೀಕರಣ ಇಲಾಖೆಯಿಂದ ರೂ 25 ಕೋಟಿಯ ಅನುದಾವನ್ನು ಒದಗಿಸಲಾಗಿದೆ.
ಈ ಹಿಂದಿನ 3 ಮುಖ್ಯಮಂತ್ರಿಗಳಿಂದ ತಿರಸ್ಕೃತಗೊಂಡ ನರ್ಮ್ ಬಸ್ಗಳ ಯೋಜನೆ ನಮ್ಮ ಸರಕಾರದ ಸಾಕಾರಗೊಂಡಿದೆ. ಈ ನರ್ಮ್ ಬಸ್ನಲ್ಲಿ ಶಾಲಾ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಹತ್ತಲು ಮತ್ತು ಇಳಿಯಲು ಅನುಕೂಲಕ್ಕಾಗಿ ಕೆಳ ಅಂತಸ್ತು ಮಾದರಿಯ ವಿನ್ಯಾಸ ಮಾಡಲಾಗಿದೆ. ಖಾಸಗಿ ಬಸ್ಸುಗಳ ತೀವ್ರ ಪೈಪೋಟಿ ಹಾಗೂ ವಿರೋಧ ನಡುವೆಯೂ ನಗರ ಹಾಗೂ ಗ್ರಾಮೀಣ ಪ್ರದೇಶದ ನಾಗರಿಕರಿಗೆ ಉತ್ತಮ ಸಾರಿಗೆ ಸಂಪರ್ಕವನ್ನು ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಆರಂಭವಾದ ಜೆ-ನರ್ಮ್ ಬಸ್ಸುಗಳು ಯಶಸ್ವಿಯಾಗಿದೆ.
ನಡೆಯುತ್ತಿರುವ ಕೋಮು ಹಿಂಸೆಯ ಬಗ್ಗೆ ಮಾತನಾಡಿದ ಸಚಿವ ಪ್ರಮೋದ್ ಕರಾವಳಿಯಲ್ಲಿ ಕೋಮು ಹಿಂಸಾಚಾರಕ್ಕೆ ಯುವಕರನ್ನು ಬಳಸಿಕೊಳ್ಳುತ್ತಿರುವುದು ಖೇದಕರ ಆದರೆ ಉಡುಪಿಯಲ್ಲಿ ಅಂತಹ ಹಿಂಸೆಗೆ ಈ ವರೆಗೆ ಯಾವುದೇ ಅವಕಾಶ ಕಳೆದ ಐದು ವರ್ಷಗಳಲ್ಲಿ ನೀಡಿಲ್ಲ. ಇಲ್ಲಿ ಎಲ್ಲಾ ಧರ್ಮದವರು ಜೊತೆಯಾಗಿ ಸಹಬಾಳ್ವೆ ನಡೆಸಬೇಕೆಂಬುದು ನನ್ನ ಅಪೇಕ್ಷೆ ಅದರಂತೆ ಎಲ್ಲಿಯೂ ಕೂಡ ಕೋಮು ಹಿಂಸೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ ಅಲ್ಲದೆ ಯುವಕರಿಗೆ ಅಂತಹ ಹಿಂಸಾಚಾರದಲ್ಲಿ ಭಾಗವಹಿಸಿದಂತೆ ಎಚ್ಚರಿಕೆ ಕೂಡ ನೀಡಲಾಗಿದ್ದು ಸ್ವತಃ ತಾನು ಕಾಲೇಜುಗಳಿಗೆ ಭೇಟಿ ನೀಡಿದ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಉತ್ತಮ ಜೀವನ ನಡೆಸುವಂತೆ ಉತ್ತೇಜನ ನೀಡಲಾಗುತ್ತದೆ.
ಬಡ, ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ಊಟ-ಉಪಹಾರ ಒದಗಿಸುವ ಚಿಂತನೆಯೊಂದಿಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಇಂದಿರಾ ಕ್ಯಾಂಟೀನ್ ಯೋಜನೆ ಉಡುಪಿಯಲ್ಲಿ ಕೂಡ ಜಾರಿಗೆ ಮಾಡಿದ್ದು ಮಣಿಪಾಲ ಮತ್ತು ಉಡುಪಿಯಲ್ಲಿ ಎರಡು ಕ್ಯಾಂಟಿನ್ ಗಳನ್ನು ತೆರೆಯಲಾಗಿದ್ದು ಪ್ರತಿನಿತ್ಯ ನೂರಾರು ಮಂದಿ ಬಡವರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಮಹಿಳಾ ಸಬಲೀಕರಣಕ್ಕಾಗಿ ಸವಿರುಚಿ ಕ್ಯಾಂಟಿನ್ ಕೂಡ ಜಿಲ್ಲೆಯಲ್ಲಿ ಆರಂಭಗೊಳಿಸಲಾಗಿದೆ ಎಂದರು.
ದ್ವೀಪ ಪ್ರದೇಶವಾದ ಪಡುಕೆರೆಯಿಂದ ಮಲ್ಪೆಗೆ ಇರುವ ದೂರ ಕೇವಲ 800 ಮೀಟರ್ ಆದರೆ ಮಲ್ಪೆಯಿಂದ ಕಾಪು ಕೈಪುಂಜಾಲು ವರೆಗೆ ಉದ್ದಕ್ಕೆ ಹರಡಿರುವ ದ್ವೀಪ ಪ್ರದೇಶದ ಜನರಿಗೆ ದೋಣಿ ಬಿಟ್ಟರೆ ಹೊರಗೆ ಹೋಗಲು 10 ಕಿಮಿ ದೂರ ದಾರಿಯನ್ನು ಸುತ್ತುವರಿದು ಹೋಗಬೇಕಾದ ಪರಿಸ್ಥಿತಿ. ಮೀನುಗಾರಿಕೆಯನ್ನೇ ನೆಚ್ಚಿಕೊಂಡಿರುವ ಇಲ್ಲಿ ಜನರು ಪ್ರತಿನಿತ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದರು. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ನಿತ್ಯ ಕೆಲಸಕ್ಕೆ ತೆರಳುವ ಮಂದಿ ನದಿ ದಾಟಲು ದೋಣಿಯನ್ನೇ ಅವಲಂಬಿಸಬೇಕಾಗಿತ್ತು. ತಮ್ಮ ಭಾಗಕ್ಕೆ ಸೇತುವೆಯನ್ನು ಪಡೆಯುವುದಕ್ಕೆ ಈ ಭಾಗದ ಜನ ಸಾಕಷ್ಟು ಹೋರಾಟವನ್ನು ನಡೆಸಿದ್ದರು. ಸ್ಥಳೀಯ ಮೀನುಗಾರರ ಬೇಡಿಕಗೆಯಂತೆ ಸೇತುವೆಯ ಎತ್ತರ, ಅಗಲವನ್ನು ಹೆಚ್ಚಿಸಿ, ಅಗತ್ಯವಾದ ಅನುದಾವನ್ನು ಕಾಂಗ್ರೆಸ್ ಸರ್ಕಾರದಿಂದ ಬಿಡುಗಡೆ ಮಾಡಿಸಿ ಈ ಭಾಗದ ಬಹುವರ್ಷಗಳ ಕನಸನ್ನು ನನಸುಗೊಳಿಸಲಾಗಿದೆ ಎಂದರು. ಹಿಂದಿನ ಬಿಜೆಪಿ ಸರ್ಕಾರ ಇದನ್ನು ಮಂಜೂರು ಮಾಡಿತ್ತು. ಆದರೇ ಅದಕ್ಕೆ ಬೇಕಾದ ಅನುದಾನದ ಪೈಸೆಪೈಸೆಯನ್ನು ನಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಸರ್ಕಾರದಿಂದ ಏನೂ ಆಗಿರಲಿಲ್ಲ. ಗುತ್ತಿಗೆದಾರರಿಗೆ ಹಣ ನೀಡದೇ ಕಾಮಗಾರಿ ವಿಳಂಭವಾಗಿದೆ ಎಂದು ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರದಿಂದಲೇ ಈ ಸೇತುವೆ ನಿರ್ಮಾಣವಾಗಿದೆ ಇಂತಹ ನೂರಾರು ಅಭಿವೃದ್ಧಿಪರ ಕೆಲಸಗಳು ಉಡುಪಿ ಕ್ಷೇತ್ರದಲ್ಲಿ ಪೂರ್ಣಗೊಳಿಸಿದ ತೃಪ್ತಿ ತನಗಿದೆ ಎಂದರು.
ತನ್ನ ಚುನಾವಣಾ ಪ್ರಚಾರ ಹಾಗೂ ಎದುರಾಳಿ ಅಭ್ಯರ್ಥಿಯ ಆರೋಪಗಳ ಬಗ್ಗೆ ಮಾತನಾಡಿದ ಪ್ರಮೋದ್ ಅವರು ನನ್ನ ಎದುರಾಳಿ ಅಭ್ಯರ್ಥಿ ರಘುಪತಿ ಭಟ್ ಅವರ ಬಗ್ಗೆ ನಾನೇನು ಹೇಳಬೇಕಾಗಿಲ್ಲ ಈ ಕ್ಷೇತ್ರದ ಜನತೆಯೇ ಅವರ ಬಗ್ಗೆ ತಿಳಿದುಕೊಂಡಿದ್ದಾರೆ. ಅವರು ನನ್ನ ಬಗ್ಗೆ ಕೀಳು ಮಟ್ಟದ ಆರೋಪ ಮಾಡಿರಬಹುದು ಆದರೆ ನಾನು ಅಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ. ನಾನು ಐದು ವರ್ಷದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸ, ಜನರಿಗೆ ಸಲ್ಲಿಸಿರುವ ಸೇವೆಯನ್ನು ನೆಚ್ಚಿಕೊಂಡಿದ್ದೇನೆ. ಕಾರ್ಯಕರ್ತರು ಹಾಗೂ ಸಂಘಟನೆಯ ಮೂಲಕ ಚುನಾವಣಾ ಪ್ರಚಾರ ಮಾಡುತ್ತಿದ್ದೇನೆ.
‘ನಾನು ಮಾಡಿರುವ ಅಭಿವೃದ್ಧಿ ಕೆಲಸವೇ ನನಗೆ ಶ್ರೀರಕ್ಷೆಯಾಗಲಿದೆ. ವಿರೋಧ ಪಕ್ಷದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಈ ವರೆಗೆ ನಾಲ್ಕು ಚುನಾವಣೆಗಳನ್ನು ಎದುರಿಸಿದ್ದೇನೆ. ನನ್ನದೇ ಶೈಲಿಯಲ್ಲಿ ಚುನಾವಣಾ ಪ್ರಚಾರ ಮಾಡಿದ್ದೇನೆ. ಈ ಬಾರಿ ಸ್ಥಳೀಯ ನಾಯಕರೊಂದಿಗೆ ಪ್ರಚಾರ ಮಾಡಲಾಗುತ್ತಿದೆ. ಆದರೆ ಪಕ್ಷ ನನ್ನ ಹಿಂದೆ ಇದೆ. ಪ್ರತಿ ದಿನ ಚುನಾವಣಾ ಪ್ರಚಾರ ಸಭೆ ಹಾಗೂ ಕಾರ್ಯಕರ್ತರ ಸಭೆಯನ್ನು ಮಾಡುತ್ತಿದ್ದೇನೆ.
ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಈ ಬಾರಿಯ ಚುನಾವಣೆಯ ಮುಖ್ಯ ವಿಷಯವಾಗಿದೆ. ಈಗಾಗಲೇ ಆ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದೇನೆ. ರೂ. 270 ಕೋಟಿ ವೆಚ್ಚದಲ್ಲಿ ವಾರಾಹಿ ಕುಡಿಯುವ ನೀರಿನ ಯೋಜನೆ ಜಾರಿ ಮಾಡಲಾಗುತ್ತಿದೆ. ಸುಮಾರು 40 ಕಿ.ಮೀ ಪೈಪ್ಲೈನ್ ಮೂಲಕ ವಾರಾಹಿ ನೀರನ್ನು ತಂದು ಉಡುಪಿ ವಿಧಾನಸಭಾ ಕ್ಷೇತ್ರದ ಜನರಿಗೆ ನೀಡಲಾಗುವುದು. ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ಸಹ ಆರಂಭವಾಗಿದೆ.
ತೆಂಕನಿಡಿಯೂರು ಹಾಗೂ ಚಾಂತಾರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಸಹ ಜಾರಿ ಮಾಡಲಾಗುವುದು. ಉಡುಪಿ ಜಿಲ್ಲೆಗೆ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು ಎಂಬ ಬೇಡಿಕೆ ಇದೆ. ಕಾಲೇಜು ಬಂದರೆ ಅದರೊಂದಿಗೆ ಹೈಟೆಕ್ ಆಸ್ಪತ್ರೆ ಸಹ ಬರಲಿದೆ. ಅದಕ್ಕಾಗಿ ಪ್ರಯತ್ನ ಮುಂದುವರೆಯಲಿದೆ. ಸೂರಿಲ್ಲದ ಬಡವರಿಗೆ ನಿವೇಶನ ನೀಡಲಾಗುವುದು. ಆ ನಂತರ ವಸತಿ ಯೋಜನೆಯಲ್ಲಿ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಅವರು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಹಾಗೂ ನಗರ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡಿರುವರಿಗೆ 94ಸಿ– 94ಸಿಸಿ ಅನ್ವಯ ಹಕ್ಕುಪತ್ರ ನೀಡಲು ಗಮನಹರಿಸಲಾಗುವುದು. ಪರಿಭಾವಿತ ಅರಣ್ಯ, ಪರಂಬೋಕು ಜಮೀನು ಮುಂತಾದ ಸಮಸ್ಯೆಗಳಿವೆ. ಅದನ್ನು ಪರಿಹರಿಸಲಾಗುವುದು ಎಂದರು.
ಕರ್ನಾಟಕದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಗೆಲ್ಲಲಿದ್ದು, ಮತ್ತೊಮ್ಮೆ ಸಿದ್ದರಾಮಯ್ಯ ನೇತೃತ್ವದಲ್ಲಿ ಸರಕಾರ ರಚನೆ ಮಾಡಲಿದೆ. ಕಳೆದ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ನೀಡಿದ ನಂತರ ಕ್ಷೇತ್ರದ ಜನರ ಚಾಕರಿ ಮಾಡಿದ್ದೇನೆ. ಕಳೆದ ಬಾರಿಯ ಚುನಾವಣೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇನೆ ಎಂದು ನಾನು ಹೇಳುವುದಿಲ್ಲ. ಆದರೆ ಬಹುತೇಕ ಬೇಡಿಕೆಗಳನ್ನು ಈಡೇರಿಸಿದ್ದೇನೆ ಎಂದು ಧೈರ್ಯದಿಂದ ಹೇಳುತ್ತೇನೆ. ಮುಖ್ಯಮಂತ್ರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಬಳಿ ಬೇಡಿ ಅನುದಾನ ಮಂಜೂರು ಮಾಡಿಸಿಕೊಂಡು ಬಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ. ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲಿಸುವ ಹೊಣೆಗಾರಿಕೆ ಮತದಾರರ ಮೇಲಿದ್ದು, ಮತ್ತೊಂದು ಅವಕಾಶ ನೀಡಿದರೆ ಮತ್ತೆ ಐದು ವರ್ಷಗಳ ಕಾಲ ನಿರಂತರವಾಗಿ ಕ್ಷೇತ್ರದ ಮತದಾರರ ಸೇವೆ ಮಾಡುತ್ತೇನೆ ಎಂದರು.