ಐಸಿವೈಎಮ್ ರಾಷ್ಟ್ರೀಯ ಯುವ ಸಮ್ಮೇಳನ: ಉಡುಪಿಯಲ್ಲಿ ಡೇಸ್ ಇನ್ ಡಯಾಸಿಸ್
ಉಡುಪಿ: ಮಂಗಳೂರಿನ ಸಂತ ಜೋಸೆಫ್ ತಾಂತ್ರಿಕ ಮಹಾವಿದ್ಯಾಲಯ ವಾಮಂಜೂರಿನಲ್ಲಿ ಜನವರಿ 18 ರಿಂದ 22 ರ ತನಕ ನಡೆಯುವ ಭಾರತೀಯ ಕೆಥೊಲಿಕ್ ಯುವ ಸಂಚಾಲನ ಇದರ ರಾಷ್ಟ್ರೀಯ ಯುವ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ನಡೆಯುವ ‘ಡೇಸ್ ಇನ್ ಡಯಾಸಿಸ್’ (ಧರ್ಮಪ್ರಾಂತ್ಯದಲ್ಲಿ ಯವಜನರ ವಾಸ್ತವ್ಯ) ಕಾರ್ಯಕ್ರಮಕ್ಕೆ ದೇಶದ ವಿವಿಧ ಧರ್ಮಪ್ರಾಂತ್ಯಗಳ ಯುವ ಪ್ರತಿನಿಧಿಗಳು ಉಡುಪಿ ಧರ್ಮಪ್ರಾಂತ್ಯಕ್ಕೆ ಜನವರಿ 14 ರಂದು ಆಗಮಿಸಿಲಿದ್ದಾರೆ.
ಏನಿದು ಡೇಸ್ ಇನ್ ಡಯಾಸಿಸ್?
ಕೆಥೊಲಿಕ್ ಧರ್ಮಸಭೆಗೆ ಒಳಪಟ್ಟ ರಾಷ್ಟ್ರೀಯ ಕೆಥೊಲಿಕ್ ಬಿಷಪ್ ಮಂಡಳಿಯ ಅಧೀನದಲ್ಲಿ ಬರುವ ಭಾರತೀಯ ಕೆಥೊಲಿಕ್ ಯುವಸಂಚಾಲನದ ರಾಷ್ಟ್ರೀಯ ಸಮ್ಮೇಳನ ಪ್ರತಿ ಎರಡು ವರುಷಗಳಿಗೊಮ್ಮೆ ನಡೆಯುತ್ತದೆ. 2013 ಪಂಜಾಬ್ ರಾಜ್ಯದ ಜಲಂದರ್ನಲ್ಲಿ 9 ನೇ ಸಮ್ಮೇಳನದಲ್ಲಿ 10 ನೇ ಸಮ್ಮೇಳನ ನಡೆಸುವ ಜವಾಬ್ದಾರಿ ಕರ್ನಾಟಕ ಪ್ರಾಂತ್ಯಕ್ಕೆ ಸಿಕ್ಕದ್ದು, ಸಮ್ಮೇಳನಕ್ಕೆ ದೇಶದ ವಿವಿಧ ಧರ್ಮಪ್ರಾಂತ್ಯಗಳಿಂದ ಸುಮಾರು 2000ದಷ್ಟು ಪ್ರತಿನಿಧಿಗಳು ಆಗಮಿಸುತ್ತಿದ್ದು ಅವರಿಗೆ ಈ ಭಾಗದ ಕಲೆ, ಸಂಸ್ಕತಿ, ಆಚಾರ ವಿಚಾರಗಳನ್ನು ಪರಿಚಯಿಸುವ ಉದ್ದೇಶದಿಂದ ಡೇಸ್ ಇನ್ನ ಡಯಾಸಿಸ್ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಸಮ್ಮೇಳನಕ್ಕೆ ಆಗಮಿಸುವ ಯುವ ಪ್ರತಿನಿಧಿಗಳು ಒಂದು ವಾರದ ಮುಂಚಿತವಾಗಿ ಆಗಮಿಸಿ ಸಮ್ಮೇಳನ ನಡೆಯುವ ಧರ್ಮಪ್ರಾಂತ್ಯ ಹಾಗೂ ನೆರೆಯ ಧರ್ಮಪ್ರಾಂತ್ಯದಲ್ಲಿ ಬರುವ ಯುವ ಘಟಕದ ಸದಸ್ಯರುಗಳ ಮನೆಯಲ್ಲಿ ವಾಸ್ತವ್ಯವಿದ್ದು ಅಲ್ಲಿನ ಸಂಸ್ಕತಿ, ಆಚಾರ ವಿಚಾರ, ಸ್ಥಳೀಯ ಪ್ರವಾಸಿ ತಾಣಗಳು, ಆಹಾರ ಪದ್ದತಿಯ ಮಾಹಿತಿಯನ್ನು ಅರಿತುಕೊಳ್ಳುವುದರೊಂದಿಗೆ ಹೊಸ ಅನುಭವನನ್ನು ಅವರಿಗೆ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಅದರಂತೆ ಉಡುಪಿ ಧರ್ಮಪ್ರಾಂತ್ಯಕ್ಕೆ ದೇಶದ ವಿವಿಧ ಧರ್ಮಪ್ರಾಂತ್ಯಗಳಿಂದ ಸುಮಾರು 500 ಪ್ರತಿನಿಧಿಗಳು ಆಗಮಿಸುತ್ತಿದ್ದಾರೆ.
ರೈಲು, ವಿಮಾನ, ಹಾಗೂ ಬಸ್ಸುಗಳ ಮೂಲಕವಾಗಿ ಆಗಮಿಸಿದ ಯುವ ಪ್ರತಿನಿಧಿಗಳನ್ನು ಉಡುಪಿ ಧರ್ಮಪ್ರಾಂತ್ಯದ ಯುವ ಪ್ರತಿನಿಧಿಗಳು ವೈಯುಕ್ತಿಕವಾಗಿ ಹಾಜರಿದ್ದು ಸ್ವಾಗತಿಸಿತ್ತಾರೆ. ಜನವರಿ 14 ರಂದು ಬಂದ ಎಲ್ಲಾ ಯುವ ಪ್ರತಿನಿಧಿಗಳನ್ನು ಉಡುಪಿ ಧರ್ಮಪ್ರಾಂತ್ಯದ ಪರವಾಗಿ ಉಡುಪಿ ಸಂತ ಸಿಸಿಲಿಸ್ ಕಾಲೇಜಿನಲ್ಲಿ ಅಧಿಕೃತವಾಗಿ ಮಧ್ಯಾಹ್ನ 2.30 ಕ್ಕೆ ಸ್ವಾಗತಿಸಲಾಗುವುದು. ಬಳಿಕ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ ಡೆನಿಸ್ ಡೆಸಾ ಅವರು ಯುವ ಪ್ರತಿನಿಧಿಗಳಿಗೆ ಉಡುಪಿ ಧರ್ಮಪ್ರಾಂತ್ಯದ ಪರಿಚಯ ಮಾಡಿಕೊಟ್ಟ ಬಳಿಕ ಪ್ರತಿಯೊಬ್ಬ ಯುವ ಪ್ರತಿನಿಧಿಯನ್ನು ಧರ್ಮಪ್ರಾಂತ್ಯದ ಶಾಲು ಹೊದಿಸಿ ಸ್ವಾಗತಿಸಲಾಗುತ್ತದೆ. ಬಳಿಕ ಉಡುಪಿ ಧರ್ಮಪ್ರಾಂತ್ಯದ 51 ಧರ್ಮಕೇಂದ್ರಗಳಿಗೆ ದೇಶದ ವಿವಿಧ ಕಡೆಯಿಂದ ಬಂದ ಯುವ ಪ್ರತಿನಿಧಿಗಳನ್ನು ಕಳುಹಿಸಲಾಗುತ್ತದೆ. 14 ಸಂಜೆಯಿಂದ ಜನವರಿ 17 ಬೆಳಗಿನ ತನಕ ಆಯಾ ಧರ್ಮಕೇಂದ್ರಗಳಲ್ಲಿ ಈ ಯುವ ಪ್ರತಿನಿಧಿಗಳು ವಾಸ್ತವ್ಯವಿದ್ದು, ಇಲ್ಲಿನ ಸಂಸ್ಕತಿ, ಆಚಾರ ವಿಚಾರ, ಸ್ಥಳೀಯ ಪ್ರವಾಸಿ ತಾಣಗಳು, ಆಹಾರ ಪದ್ದತಿಯ ಮಾಹಿತಿಯನ್ನು ಪಡೆಯುತ್ತಾರೆ.
ಜನವರಿ 17ರಂದು ಡೇಸ್ ಇನ್ ಡಯಾಸಿಸ್ ಸಮಾರೋಪ : ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ಸಮಾರೋಪ ನಡೆಯಲ್ಲಿದ್ದು ಬೆಳಿಗ್ಗೆ 10 ಗಂಟೆಗೆ ಪುಣ್ಯಕ್ಷೇತ್ರಕ್ಕೆ ಪಾದಯಾತ್ರೆ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಬಲಿಪೂಜೆ ನಡೆಯಲಿದ್ದು ಬಲಿಪೂಜೆಯ ಬಳಿಕ ಸಮಾರೋಪ ಸಮಾರಂಭ ಜರುಗಲಿದ್ದು, ಯುವಪ್ರತಿನಿಧಿಗಳನ್ನು ಬಿಳ್ಕೋಡಲಾಗುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಯುವ ನಿರ್ದೇಶಕ ವಂ ಎಡ್ವಿನ್ ಡಿ’ಸೋಜಾ ಹಾಗೂ ಅಧ್ಯಕ್ಷ ಲೊಯಲ್ ಡಿಸೋಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.