ಐ.ಪಿ.ಎಲ್ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆಗೆ ಕುಂದಾಪುರ ಪೊಲೀಸರ ದಾಳಿ: 9 ಆರೋಪಿಗಳ ಬಂಧನ
ಕುಂದಾಪುರ: ಈಗ ಎಲ್ಲೆಲ್ಲೂ ಇಂಡಿಯನ್ ಪ್ರಿಮೀಯರ್ ಲೀಗ್ ಫೀವರ್ ಜೋರಾಗಿದೆ. ಐಪಿಎಲ್ ಆರಂಭವಾದರೆ ಕೆಲವರು ಆಟ ನೋಡುವ ಖುಷಿಯಲ್ಲಿದ್ದರೆ. ಇನ್ನೂ ಕೆಲವರು ಬೆಟ್ಟಿಂಗ್ ಮಾಡಬಹುದು ಎನ್ನುವ ಹುಮ್ಮಸ್ಸಿನಲ್ಲಿರುತ್ತಾರೆ. ಇದೀಗ ಇದೇ ಹುಮ್ಮಸ್ಸಿನಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಗಳ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದ 9 ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕೊಟೇಶ್ವರ ಮಠದಬೆಟ್ಟು ನಿವಾಸಿ ಪ್ರಸಾದ್ ಆಚಾರಿ (29), ಕೊಟೇಶ್ವರ ಬೀಜಾಡಿ ನಿವಾಸಿ ಶರತ್ (28), ಪ್ರಶಾಂತ್ (29), ಕುಂಭಾಶೀ ನಿವಾಸಿ ಪುರಂದರ (40), ಕೊಟೇಶ್ವರ ನಿವಾಸಿ ಸಚಿನ್ ಆಚಾರಿ (30), ಸಂತೋಷ (36), ಹರೀಶ (29), ಸುಧಾಕರ (35), ಕುಂಭಾಶಿ ನಿವಾಸಿ ಪ್ರಸಾದ್ ಪೂಜಾರಿ (25) ಎಂದು ಗುರುತಿಸಲಾಗಿದೆ
ಸೋಮವಾರ ಕುಂದಾಪುರ ನಗರ ಠಾಣೆಯ ಠಾಣಾಧಿಕಾರಿ ಸದಾಶಿವ ಗವರೋಜಿ ಅವರಿಗೆ ಕುಂದಾಪುರ ತಾಲೂಕು ಕೊಟೇಶ್ವರ ಗ್ರಾಮದ ಕುಂಬ್ರಿ ಜಂಕ್ಷನ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾಟದ ಸೋಲು ಗೆಲುವಿನ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದಿದ್ದು, ಅದರಂತೆ ಸದ್ರಿ ಸ್ಥಳಕ್ಕೆ ದಾಳಿ ಮಾಡಿದ ವೇಳೆ ಸಾರ್ವಜನಿಕ ಸ್ಥಳದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೂ 1000ಕ್ಕೆ 1000 ರೂ, ಡೆಲ್ಲಿ ಕ್ಯಾಪಿಟಲ್ಸ್ 1000 ಕ್ಕೆ 1300 ಎಂದು ಜೋರಾಗಿ ಹೇಳುತ್ತಾ ನೋಟ್ ಪುಸ್ತಕದಲ್ಲಿ ವಿವರಗಳನ್ನು ಬರೆದುಕೊಳ್ಳುತ್ತಿದ್ದು ಇತರರು ಕೈಯಲ್ಲಿ ಹಣವನ್ನು ಹಿಡಿದುಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ರೂ 1000ಕ್ಕೆ 1000 ರೂ, ಡೆಲ್ಲಿ ಕ್ಯಾಪಿಟಲ್ಸ್ 1000 ಕ್ಕೆ 1300 ಎಂದು ಹೇಳುತ್ತಿರುವುದನ್ನು ಗಮನಿಸಿ ಇವರುಗಳು ತಮ್ಮ ಸ್ವಂತ ಲಾಭಕ್ಕಾಗಿ ಕ್ರಿಕೆಟ್ ಪಂದ್ಯದ ಮೇಲೆ ಹಣವನ್ನು ಪಣವಾಗಿಟ್ಟು ಬೆಟ್ಟಿಂಗ್ ನಡೆಸುತ್ತಾ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವುದು ಕಂಡುಬಂದಿದೆ.
ಬಂಧಿತರಿಂದ ಬೆಟ್ಟಿಂಗ್ ನಡೆಸಲು ಉಪಯೋಗಿಸಿದ ನಗದು ರೂ 17,000/-, ರೆಡ್ ಮಿ ಮೊಬೈಲ್ ಫೋನ್-1 ಹಾಗೂ ಒಂದು ನೋಟ್ ಪುಸ್ತಕವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.