ಐ.ಸಿ.ವೈ.ಎಮ್. ಉದ್ಯಾವರ ವತಿಯಿಂದ ಗದ್ದೆಯಲ್ಲಿ ನೇಜಿ ನೆಡುವವರಿಗೆ , ಕೆಲಸ ಮಾಡುವವರಿಗೆ ಸನ್ಮಾನ
ಉಡುಪಿ: ಉದ್ಯಾವರದ ಭಾರತೀಯ ಕಥೋಲಿಕ್ ಯುವ ಸಂಚಾಲನ (ಐಸಿವೈಎಂ) ಸುವರ್ಣ ಮಹೋತ್ಸವ ಸಮಿತಿಯ ವತಿಯಿಂದ ಉದ್ಯಾವರ ಕುತ್ಪಾಡಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪವಿರುವ ಹಿರಿಯ ಕೃಷಿಕ ಜೂಲಿಯನ್ ದಾಂತಿ ಅವರ ಗದ್ದೆಯಲ್ಲಿ, ಭತ್ತದ ಸಸಿ (ನೇಜಿ) ನೆಡುವವರಿಗೆ ಮತ್ತು ಗದ್ದೆ ಕೆಲಸ ಮಾಡುವವರಿಗೆ, ಕೃಷಿ ಮಾಡುವ ಗದ್ದೆಯಲ್ಲಿಯೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ನಮ್ಮದು ಕೃಷಿ ಪ್ರಧಾನ ದೇಶ. ದೇಶದ ಪ್ರಧಾನಿ ಕೃಷಿಗೆ ಉತ್ತಮ ಪ್ರಾಧಾನ್ಯತೆ ನೀಡುತ್ತಿದ್ದಾರೆ. ಓಲ್ಡ್ ಈಸ್ ಗೋಲ್ಡ್ ಎಂಬಂತೆ ಪ್ರಸ್ತುತ ಕಾಲದ ಜನರು ಮತ್ತೆ ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ. ಕೊರೋನದಿಂದ ನಾವೆಲ್ಲಾ ಬಹಳಷ್ಟು ಕಲಿತಿದ್ದೇವೆ. ಉದ್ಯೋಗವನ್ನು ಅರಸಿ ದೂರದ ರಾಜ್ಯಗಳಿಗೆ ತಲುಪಿದ್ದ ನಮ್ಮವರೆಲ್ಲ, ಈಗ ಮತ್ತೆ ಕೃಷಿಯನ್ನು ಆರಂಭಿಸುತ್ತಿರುವುದು ಉತ್ತಮ ವಿಷಯ. ಐಸಿವೈಎಂ ಯುವಕರ ಸಂಘಟನೆಯು ಕೃಷಿಯಲ್ಲಿ ತೊಡಗಿರುವ ಮಹಿಳೆಯರನ್ನು ಗೌರವಿಸಿದ್ದು ನಿಜಕ್ಕೂ ಶಾಘ್ಲನೀಯ ಎಂದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಅಮೀನ್ ಕಟ್ಟೆಗುಡ್ಡೆ ಮಾತನಾಡುತ್ತಾ, ಕೃಷಿಯನ್ನು ಮಾಡುತ್ತಿದ್ದ ನಮ್ಮ ಹಿರಿಯರು ಬಹಳಷ್ಟು ವರ್ಷ ಆರೋಗ್ಯವಾಗಿರುತ್ತಿದ್ದರು. ಆದರೆ ಪ್ರಸ್ತುತ ಕಾಲದಲ್ಲಿ ಕೃಷಿಯಿಂದ ನಾವೆಲ್ಲರೂ ದೂರ ಸರಿದಿದ್ದು ನಿಜಕ್ಕೂ ದುರದೃಷ್ಟ. ಉದ್ಯಾವರ, ಕಡೆಕಾರು ಗ್ರಾಮಗಳಲ್ಲಿ ಹಲವಾರು ಕುಟುಂಬಗಳು ಬಹಳಷ್ಟು ವರ್ಷಗಳಿಂದ ಕೃಷಿಯನ್ನು ಮಾಡುತ್ತಿರುವುದು ಸಂತೋಷದಾಯಕ. ಇಂತಹ ಕೃಷಿ ಕುಟುಂಬಗಳಿಗೆ ಸರಕಾರ ಪ್ರೋತ್ಸಾಹಿಸಬೇಕಾಗಿದೆ. ಕೋರೊನ ಮಹಾಮಾರಿಯ ನಡುವೆಯೂ ನಮ್ಮ ಕೃಷಿ ಕುಟುಂಬಗಳು ಕೃಷಿಯನ್ನು ನಡೆಸುತ್ತಿರುವುದು ಒಳ್ಳೆಯ ವಿಷಯ. ಯುವಕರು ಕೃಷಿಯಲ್ಲಿ ಹಿಂದೆ ಇದ್ದರೂ, ಕೃಷಿ ನಡೆಸುತ್ತಿರುವವರಿಗೆ ಪ್ರೋತ್ಸಾಹಿಸುತ್ತಿರುವುದು ಶಾಘ್ಲನೀಯ ಎಂದರು.
ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ವ್ಯಾಪ್ತಿಯ ಐಸಿವೈಎಂ ಸುವರ್ಣ ಮಹೋತ್ಸವ ಸಮಿತಿಯ 17 ನೇ ಕಾರ್ಯಕ್ರಮವಾಗಿ, ಉದ್ಯಾವರ, ಕುತ್ಪಾಡಿ, ಕಡೆಕಾರ್ ಪರಿಸರದ 35 ಮಹಿಳೆಯರು ಮತ್ತು 10 ಗಂಡಸರು, ಒಟ್ಟು 45 ಮಂದಿಗೆ ಶಾಲ್, ಹೂವಿನ ಮಾಲೆ ಮತ್ತು ಕೃಷಿಗೆ ಬಳಸುವ ಅಡಿಕೆ ಹಾಳೆ (ಪಾಲೆ) ನೀಡಿ ಅವರ ಸೇವೆಯನ್ನು ಗೌರವಿಸಿ, ಅತಿಥಿಗಳು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಗಣೇಶ್ ಕುಮಾರ್, ಉದ್ಯಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಿಯಾಜ್ ಪಳ್ಳಿ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಕುಮಾರ್, ಉದ್ಯಮಿ ಸಂತೋಷ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮಣ, ಲಾರೆನ್ಸ್ ಡೇಸಾ, ರಾಮದೂತ ವ್ಯಾಯಾಮ ಶಾಲೆಯ ಅಧ್ಯಕ್ಷ ಪ್ರಸನ್ನ ಕುಮಾರ್, ಆಯೂಬ್ ಸಾಹೇಬ್, ಐಸಿವೈಎಂ ಅಧ್ಯಕ್ಷ ರೋಯಲ್ ಕಾಸ್ತೆಲಿನೋ, ಕಾರ್ಯದರ್ಶಿ ಪ್ರಿಯಾಂಕಾ ಡಿಸೋಜಾ, ಐಸಿವೈಎಂ ಸುವರ್ಣ ಮಹೋತ್ಸವ ಸಮಿತಿಯ ಪ್ರಮುಖರಾದ ಗಾಡ್ಫ್ರೀ ಡಿಸೋಜಾ, ಮ್ಯಾಕ್ಸಿಂ ಡಿಸಿಲ್ವ, ರೊನಾಲ್ಡ್ ಡಿಸೋಜ, ಎರೋಲ್ ಗೊನ್ಸಾಲ್ವಿಸ್, ಜೂಲಿಯನ್ ದಾಂತಿ, ರಾಯ್ಸ್ಟನ್ ಲೂವಿಸ್, ಮರ್ವಿನ್ ಡಿ ಅಲ್ಮೇಡಾ, ಪ್ರೇಮ್ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.
ಐಸಿವೈಎಂ ಸಲಹೆಗಾರರಾದ ರೋಯ್ಸ್ ಫೆರ್ನಾಂಡಿಸ್ ಸ್ವಾಗತಿಸಿದರೆ, ಜೂಲಿಯಾ ಡಿಸೋಜಾ ಧನ್ಯವಾದ ಸಮರ್ಪಿಸಿದರು. ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಕ್ರಮಗಳ ಸಂಚಾಲಕರಾದ ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.