ಐ.ಸಿ.ವೈ.ಎಮ್ ಸದಸ್ಯರು ತ್ಯಾಜ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸಿ; ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್
ಉಡುಪಿ: ಪ್ರತಿಯೊಬ್ಬರು ತ್ಯಾಜ್ಯ ನಿರ್ವಹಣೆ ವಿಚಾರದಲಿ ಜನರಲ್ಲಿ ಅರಿವು ಮೂಡಿಸಿದಾಗ ಮಾತ್ರ ಜಿಲ್ಲೆಯನ್ನು ಸಂಪೂರ್ಣ ತ್ಯಾಜ್ಯ ಮುಕ್ತ ಜಿಲ್ಲೆಯಾಗಿ ಪರಿವರ್ತಿಸಲು ಸಾಧ್ಯವಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.
ಅವರು ಭಾನುವಾರ ಉಡುಪಿ ಶೋಕಮಾತಾ ಇಗರ್ಜಿಯ ಸಭಾಂಗಣದಲ್ಲಿ ಭಾರತೀಯ ಕೆಥೊಲಿಕ್ ಯುವ ಸಂಚಾಲನ ಉಡುಪಿ ವಲಯ ಹಾಗೂ ಘಟಕದ ಸಹಯೋಗದಲ್ಲಿ ಆಯೋಜಿಸಿದ ನಮ್ಮ ಪರಿಸರ ನಮ್ಮ ಜವಾಬ್ದಾರಿ ಪರಿಸರ ಜಾಗೃತಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಪ್ರತಿಯೊಂದು ಮನೆಯ ಜನರು ತಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕಿದೆ. ಪ್ಲಾಸ್ಟಿಕ್ ಉತ್ಪನ್ನಗಳನ್ನು ಸುಡುವುದರಿಂದ, ಎಲ್ಲೆಂದರಲ್ಲಿ ಎಸೆಯುವುದರಿಂದ ಕ್ಯಾನ್ಸರ್ನಂತಹ ಮಾರಕ ರೋಗ ಬರುತ್ತದೆ. ಇಂತಹ ರೋಗದಿಂದ ದೂರವಿಡಬೇಕಾದರೆ ಪ್ಲಾಸ್ಟಿಕ್ ಬಳಕೆಯನ್ನು ಪ್ರತಿಯೊಬ್ಬರು ನಿಲ್ಲಿಸುವುದರೊಂದಿಗೆ ಪರಿಸರಯೋಗ್ಯ ವಸ್ತುಗಳನ್ನು ಹೆಚ್ಚು ಹೆಚ್ಚು ಬಳಸಬೇಕಾಗುತ್ತದೆ. ಜಿಲ್ಲಾ ಆಡಳಿತದಿಂದ ಈಗಾಗಲೇ ಹಸಿರು ಶಿಷ್ಟಾಚಾರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು ಆರಂಭಿಸಿದ್ದು, ಇದರ ಬಗ್ಗೆ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ ಅರಿವು ಮೂಡಿಸಬೇಕಾಗಿದೆ. ಉಡುಪಿ ಜಿಲ್ಲೆ ಈಗಾಗಲೇ ಬಯಲು ಶೌಚ ಮುಕ್ತ ಜಿಲ್ಲೆಯಾಗಿ ಘೋಷಣೆಯಾಗಿದ್ದು, ಅದೇ ರೀತಿ ಇಡೀ ದೇಶದಲ್ಲಿ ಉಡುಪಿಯನ್ನು ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಜೆರಾಲ್ಡ್ ಐಸಾಕ್ ಲೋಬೊ ಅವರು ಮಾತನಾಡಿ ಇಡೀ ಜಗತ್ತು ಎನ್ನುವುದ ನಮ್ಮ ಮನೆ ಅದನ್ನು ಉಳಿಸಿ ಬೆಳೆಸಿ ಪೋಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಹವಾಮಾನದ ವೈಪರಿತ್ಯದ ಪರಿಣಾಮ ಜಾಗತಿಕ ತಾಪಮಾನ ಹೆಚ್ಚಿದ್ದು, ನೀರಿನ ಮಟ್ಟ ಕಡಿಮೆಯಾಗುತ್ತಿದೆ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅರಣ್ಯದ ನಾಶ ಇದಕ್ಕೆಲ್ಲಾ ಪ್ರಮುಖ ಕಾರಣವಾಗಿದೆ. ಇಂದು ನಾವು ಸೇವಿಸುವ ಗಾಳಿ, ಆಹಾರ ಪ್ರತಿಯೊಂದು ವಿಷಮಯವಾಗಿದೆ.
ಎಲ್ಲಿ ಕಣ್ಣು ಹಾಯಿಸದರೂ ಕಾಣ ಸಿಗುವ ಕಸ ಪರಿಸರ ಮಾಲಿನ್ಯಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ ಇದರಿಂದ ಮುಕ್ತಿ ಹೊಂದಬೇಕಾದರೆ ಪ್ರತಿಯೊಬ್ಬರು ಜಾಗೃತಿ ಮೂಡಿಸುವುದರಿಂದ ಮಾತ್ರ ಸಾಧ್ಯವಿದೆ. ಮುಂದಿನ ಜನಾಂಗಕ್ಕೆ ಈ ಪರಿಸರವನ್ನು ಅನುಭವಿಸಲು ಅವಕಾಶ ಮಾಡಿಕೊಡಬೇಕಾದ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಕಳೆದ ಇಡೀ ವರ್ಷ ಧರ್ಮಪ್ರಾಂತ್ಯದಾದ್ಯಂತ ಪ್ರತಿ ಚರ್ಚುಗಳಲ್ಲಿ ಸ್ವತಃ ತಾನೇ ಹೋಗಿ ಗಿಡ ನೆಡುವ ಮಹತ್ವವನ್ನು ಒತ್ತಿ ಹೇಳಿದ್ದು ಇಡೀ ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ ಸುಮಾರು 20000 ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಇದರೊಂದಿಗೆ ನೀರಿನ ಮಟ್ಟ ಏರಿಕೆಯಾಗಲು ನೀರು ಇಂಗಿಸುವಿಕೆ, ನೀರಿನ ಮಿತಬಳಕೆ ಹೆಚ್ಚು ಹೆಚ್ಚು ಸೌರಶಕ್ತಿಯ ಬಳಕೆಯ ಮೂಲಕ ನಮ್ಮ ಪರಿಸರದ ಮೇಲಿನ ಅಸಮತೋಲನವನ್ನು ತಡೆಯುವುತ್ತ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುವುದನ್ನು ಕೂಡ ಕಡಿಮೆ ಮಾಡುವಂತೆ ಪ್ರತಿಯೊಬ್ಬರು ಪ್ರತಿಜ್ಞೆ ಕೈಗೊಂಡಾಗ ಮಾತ್ರ ಸ್ವಚ್ಚ ಪರಿಸರ ನಿರ್ಮಿಸಲು ಸಹಕಾರಿಯಾಗುತ್ತದೆ.
ನಮ್ಮ ರಾಷ್ಟ್ರಪಿತ ಮಹಾತ್ಮಾಗಾಂಧಿ ಹಾಗೂ ಇಂದಿನ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಚ ಭಾರತದ ಕನಸು ನನಸಾಗಬೇಕಾದರೆ ಅದು ಮೊದಲು ನನ್ನಿಂದ ನಡೆಯಬೇಕು. ಮೊದಲು ನನ್ನ ಮನೆಯಲ್ಲಿ ಸ್ವಚ್ಚತೆಯ ಅರಿವಿನ ಜಾಗೃತಿ ಮೂಡಿದಾಗ ಮಾತ್ರ ಸ್ವಚ್ಚ ಭಾರತ ನಿರ್ಮಾಣ ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ವಲಯ ಪ್ರಧಾನ ಧರ್ಮಗುರು ಹಾಗೂ ಉಡುಪಿ ಶೋಕಮಾತಾ ಇಗರ್ಜಿ ಇದರ ಧರ್ಮಗುರು ವಂ ವಲೇರಿಯನ್ ಮೆಂಡೊನ್ಸಾ, ಐಸಿವೈಎಮ್ ವಲಯ ಸಚೇತಕ ವಂ. ಲಾರೆನ್ಸ್ ಕುಟಿನ್ಹಾ, ಉಡುಪಿ ಘಟಕದ ಅಧ್ಯಕ್ಷ ಸ್ಟೀವರ್ಟ್ ಪಿಂಟೊ ಉಪಸ್ಥಿತರಿದ್ದರು. ವಲಯಾಧ್ಯಕ್ಷ ಡಿಯೋನ್ ಡಿಸೋಜಾ ಸ್ವಾಗತಿಸಿ, ಕಾರ್ಯದರ್ಶಿ ಶೈನಿ ಆಳ್ವ ವಂದಿಸಿದರು.
ಕಾರ್ಯಕ್ರಮದ ಬಳಿಕ ಮೂಕಾಭಿನಯ ಮತ್ತು ಬ್ಯಾನರ್ ಪೈಂಟಿಂಗ್ ಸ್ಪರ್ಧೆಗಳು, ರ್ಯಾಲಿ ಮತ್ತು ಬೀದಿ ನಾಟಕ ಪ್ರದರ್ಶನ ಜರುಗಿತು. ಇದೇ ವೇಳೆ 3000 ಹತ್ತಿ ಚೀಲಗಳನ್ನು ಸಹ ವಿತರಿಸಲಾಯಿತು.