ಕುಂದಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಕುಸಿತ- ಸಾಲುಗಟ್ಟಿ ನಿಂತ ವಾಹನಗಳು
ಕುಂದಾಪುರ: ಜಿಲ್ಲೆಯ ಕುಂದಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಕುಸಿತವಾಗಿದೆ. ಬೈಂದೂರಿನ ಒತ್ತಿನೆಣೆ ಜೇಡಿ ಮಣ್ಣು ಗುಡ್ಡ ರಸ್ತೆ ಮೇಲೆ ಕುಸಿದಿದೆ.
ರಾಷ್ಟ್ರೀಯ ಹೆದ್ದಾರಿ ಅಗಲ ಕಾಮಗಾರಿಗಾಗಿ ಗುಡ್ಡ ಕೊರೆಸಿದ್ದು, ಮಳೆಯಿಂದ ಮಣ್ಣು ಸಂಪೂರ್ಣ ತೇವಗೊಂಡು ರಸ್ತೆ ಮೇಲೆ ಕುಸಿದಿದೆ. ಮಣ್ಣು ಕುಸಿತದಿಂದಾಗಿ ಉಡುಪಿ- ಕಾರವಾರ- ಗೋವಾ ಸಂಪರ್ಕ ಮಾಡುವ ಈ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸ್ಥಗಿತಗೊಂಡಿವೆ. ಸಾಲುಗಟ್ಟಿ ನಿಂತಿರುವ ನೂರಾರು ವಾಹನಗಳನ್ನು ಮುಂದೆ ಗುಡ್ಡದ ಕಡೆ ಬಾರದಂತೆ ಪೊಲೀಸರು ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ. ಮಣ್ಣು ತೆಗೆಯುವ ಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿದೆ.
ಸುಮಾರು ಮೂರು ಗಂಟೆಗಳ ನಿರಂತರ ಕಾರ್ಯಾಚರಣೆ ನಡೆದ ನಂತರ ಒಂದು ರಸ್ತೆಯ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಉಡುಪಿ- ಕುಂದಾಪುರ- ಕಾರವಾರ ರಾಷ್ಟ್ರೀಯ ಹೆದ್ದಾರಿ ಅಗಲ ಕಾಮಗಾರಿ ನಡೆಯುತ್ತಿದೆ. ಈ ಮಳೆಗಾಲಕ್ಕೂ ಮುನ್ನ ಹೆದ್ದಾರಿ ಕಾಮಗಾರಿ ಪೂರ್ಣವಾಗಬೇಕಿತ್ತು. ಆದ್ರೆ ಸೇತುವೆಗಳ ಕಾಮಗಾರಿ ವಿಳಂಬವಾಗಿರುವುದರಿಂದ ರಸ್ತೆ ಕಾಮಗಾರಿಯೂ ವಿಳಂಬವಾಗಿದೆ.
ಕಳೆದೆರಡು ದಿನಗಳಿಂದ ಇಲ್ಲಿ ಮಳೆ ಸುರಿಯುತ್ತಿದೆ. ಮಳೆಯಿಂದ ಮಣ್ಣು ಸಂಪೂರ್ಣ ತೇವಗೊಂಡು ಒತ್ತಿನೆಣೆ ಎಂಬಲ್ಲಿ ಗುಡ್ಡ ರಸ್ತೆಗೆ ಕುಸಿದಿದೆ. ಕಳೆದ ಒಂದು ತಿಂಗಳಿಂದ ಒತ್ತಿನೆಣೆ ಗುಡ್ಡ ಅಪಾಯದ ಮುನ್ಸೂಚನೆ ನೀಡಿತ್ತು. ಒಂದು ವಾರದಿಂದ ಗುಡ್ಡ ಕುಸಿಯುವ ಭೀತಿಯಿತ್ತು.