ಒಳನಾಡು ಮೀನುಗಾರಿಕೆ ಹೊಸ ನೀತಿ ರಚನೆಗೆ ಕ್ರಮ : ಕಲಬುರಗಿಯಲ್ಲಿ ಪ್ರಮೋದ್ ಮಧ್ವರಾಜ್
ಕಲಬುರಗಿ: ಮೀನುಗಾರಿಕೆಯಿಂದ ಮೀನುಗಾರರಿಗೆ ಮತ್ತು ಸರ್ಕಾರಕ್ಕೆ ಆದಾಯ ದೊರೆಯುವ ನಿಟ್ಟಿನಲ್ಲಿ ನೂತನವಾಗಿ ಒಳನಾಡು ಮೀನುಗಾರಿಕೆ ನೀತಿ ರಚಿಸುವ ಬಗ್ಗೆ ಸರ್ಕಾರದಿಂದ ಸೂಕ್ತ ಕ್ರಮ ಜರುಗಿಸಲಾಗುತ್ತಿದೆ ಎಂದು ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.
ಅವರು ಸೋಮವಾರ ಕಲಬುರಗಿಯ ಗಂಡೋರಿ ನಾಲಾ ಜಲಾಶಯಕ್ಕೆ ಭೇಟಿ ನೀಡಿ ಮೀನುಗಾರರೊಂದಿಗೆ ಮಾತನಾಡಿ, ಒಳನಾಡು ಮೀನುಗಾರಿಕೆ ನೀತಿ ರಚನೆಗೆ ನಾಲ್ಕು ಅಧಿಕಾರಿಗಳ ತಂಡ ರಚಿಸಲಾಗಿದೆ. ಈ ತಂಡ ನೀಡುವ ವರದಿಯ ಮೇಲೆ ನೀತಿ ರೂಪಿಸಲಾಗುವುದು ಎಂದರು.
ಗಂಡೋರಿ ನಾಲಾ ಜಲಾಶಯದ ಮೀನು ಹಿಡಿಯಲು 83ಜನ ಮೀನುಗಾರರಿಗೆ ಲೈಸೆನ್ಸ್ ನೀಡಲಾಗಿದೆ. ನಾರಾಯಣಪುರ ಮತ್ತು ಹೊಸಪೇಟೆ ಜಲಾಶಯಗಳಿಂದ ಈ ಜಲಾಶಯಕ್ಕೆ 6 ಲಕ್ಷ ಮೀನು ಮರಿಗಳನ್ನು ಒಂದು ತಿಂಗಳೊಳಗಾಗಿ ಬಿಡುವ ವ್ಯವಸ್ಥೆ ಮಾಡಲಾಗುವುದು. ನಂತರ ಮೀನುಗಾರರು ದೊಡ್ಡ ಗಾತ್ರದ ಮೀನುಗಳನ್ನು ಹಿಡಿಯಬೇಕು. ಮರಿಗಳನ್ನು ಹಿಡಿಯಬಾರದು. ಇದಕ್ಕಾಗಿ ಕನಿಷ್ಠ ಎರಡೂವರೆ ಇಂಚು ಅಳತೆಯ ಕಣ್ಣಿನ ಮೀನಿನ ಬಲೆಯನ್ನು ಬಳಸಬೇಕು ಎಂದರು.
ಮೀನುಗಾರರಿಗೆ ವಸತಿ ಸೌಕರ್ಯ ಕಲ್ಪಿಸಲು ರಾಜ್ಯಕ್ಕೆ 3000 ಮನೆಗಳನ್ನು ನೀಡಲಾಗಿದ್ದು, ಪ್ರತಿ ಮತಕ್ಷೇತ್ರಕ್ಕೆ 10 ಮನೆಗಳನ್ನು ನೀಡಲಾಗುವುದು. ಮೀನುಗಾರರು ದೂರದ ಪ್ರದೇಶಗಳಿಗೆ ಸಂಚರಿಸಿ ಮೀನು ಮಾರಾಟ ಮಾಡಲು ಅನುಕೂಲವಾಗುವಂತೆ ಕಲಬುರಗಿ ಜಿಲ್ಲೆಗೆ 5 ಜನ ಮೀನುಗಾರರಿಗೆ ಟಿ.ವಿ.ಎಸ್. ಮೊಪೆಡ್ ಒದಗಿಸಲಾಗುವುದು ಎಂದು ತಿಳಿಸಿದ ಸಚಿವರು ಮೀನು ಹಿಡಿಯಲು ಪರವಾನಿಗೆ ಪಡೆದ ಮೀನುಗಾರರು ಕಡ್ಡಾಯವಾಗಿ ಸರ್ಕಾರಕ್ಕೆ ಶುಲ್ಕವನ್ನು ಭರಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಜಿ. ರಾಮಕೃಷ್ಣ, ಗಣ್ಯರಾದ ಭಾಗನಗೌಡ ಸಂಕನೂರ, ತಿಪ್ಪಣ್ಣಪ್ಪ ಕಮಕನೂರ, ಮಲ್ಲಿನಾಥ ಪಾಟೀಲ್ ಸೊಂತ, ವೈಜನಾಥ ತಡಕಲ್, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹರೀಶಕುಮಾರ್, ಸಹಾಯಕ ನಿರ್ದೇಶಕ ಶರಣಪ್ಪ ಬಿರಾದಾರ್ ಮತ್ತಿತರರು ಉಪಸ್ಥಿತರಿದ್ದರು.
ನೂತನ ಕ್ರೀಡಾ ನೀತಿ ಶೀಘ್ರದಲ್ಲಿ ಜಾರಿಗೆ : ಪ್ರಮೋದ್ ಮಧ್ವರಾಜ್
ಕಲಬುರಗಿ: ವಿದ್ಯಾರ್ಥಿಗಳನ್ನು ಕ್ರೀಡೆಗಳತ್ತ ಸೆಳೆಯಲು ಹಾಗೂ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಲು ನೂತನವಾಗಿ ರಚಿಸಲಾದ ಕ್ರೀಡಾ ನೀತಿಯನ್ನು ಶೀಘ್ರ ಜಾರಿಗೆ ತರಲಾಗುವುದೆಂದು ಯುವ ಸಬಲೀಕರಣ ಹಾಗೂ ಕ್ರೀಡಾ ರಾಜ್ಯ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.
ಅವರು ಸೋಮವಾರ ಕಲಬುರಗಿಯ ಮಹಾಗಾಂವ ಕ್ರಾಸಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ವಿಶೇಷ ಅಂಕಗಳನ್ನು ನೀಡುವ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ನೀಡುವ ಮೂಲಕ ಎಲ್ಲ ಕ್ರೀಡೆಗಳಿಗೆ ಪ್ರೋತ್ಸಾಹಿಸಲಾಗುವುದು. ಇತ್ತೀಚೆಗೆ ಜರುಗಿದ ರಿಯೋ ಓಲಂಪಿಕ್ಸ್ನಲ್ಲಿ ಭಾರತ ದೇಶ ಕೇವಲ ಎರಡು ಪದಕಗಳನ್ನು ಪಡೆಯುವ ಮೂಲಕ 67ನೇ ಸ್ಥಾನದಲ್ಲಿದೆ. ಮುಂದಿನ ಬಾರಿ ಟೋಕಿಯೋದಲ್ಲಿ ನಡೆಯುವ ಓಲಂಪಿಕ್ಸ್ನಲ್ಲಿ ರಾಜ್ಯದ ಕ್ರೀಡಾಪಟುಗಳು ಕನಿಷ್ಠ ಒಂದು ಬಂಗಾರದ ಪದಕ ಪಡೆಯುವ ಮೂಲಕ ಎರಡೂ ಪದಕಗಳನ್ನಾದರೂ ಪಡೆಯುವಂತೆ ಕ್ರಮ ಜರುಗಿಸಲಾಗುವುದು. ಇದಕ್ಕಾಗಿ ಕನಿಷ್ಠ ಐದು ಕ್ರೀಡಾಪಟುಗಳನ್ನು ದತ್ತು ಪಡೆದು ಇಲಾಖೆಯಿಂದ ಅವರವರ ಕ್ಷೇತ್ರದಲ್ಲಿ ಸುಧಾರಿತ ತಂತ್ರಜ್ಞಾನದ ತರಬೇತಿ ನೀಡಿ ಓಲಂಪಿಕ್ಸ್ಗೆ ಸಜ್ಜುಗೊಳಿಸಲಾಗುವುದು ಎಂದರು.
ಮಹಾಗಾಂವನಲ್ಲಿ ನಿರ್ಮಿಸಲಾಗುತ್ತಿರುವ 3 ಕೋಟಿ ರೂ.ಗಳ ವೆಚ್ಚದ ಕ್ರೀಡಾಂಣಗವು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಹಕಾರದಿಂದ ಶೀಘ್ರವಾಗಿ ಪೂರ್ಣಗೊಳ್ಳುವುದೆಂಬ ವಿಶ್ವಾಸ ಹೊಂದಿದ್ದು, ಜಿಲ್ಲಾಧಿಕಾರಿಗಳು ಕ್ರೀಡಾಂಗಣ ನಿವೇಶನ ಒತ್ತುವರಿಯಾಗದಂತೆ ಫೆನ್ಸಿಂಗ್ ನಿರ್ಮಿಸಲು 5 ಲಕ್ಷ ರೂ. ನೀಡಿದ್ದಾರೆ. ಕ್ರೀಡಾಂಗಣ ನಿರ್ಮಾಣಕ್ಕೆ ರಾಜ್ಯಸಭಾ ಸದಸ್ಯರಾದ ಕಸ್ತೂರಿ ರಂಗನ್ ಅವರಿಂದ 25 ಲಕ್ಷ ರೂ., ಹೆಚ್.ಕೆ.ಆರ್.ಡಿ.ಬಿ.ಯಿಂದ ಪ್ರತಿ ವರ್ಷ 1 ಕೋಟಿ ರೂ. ಗಳಂತೆ 2 ಕೋಟಿ ರೂ., ಸಂಸದ ಬಸವರಾಜ ಪಾಟೀಲ್ ಸೇಡಂ ಅವರಿಂದ 10 ಲಕ್ಷ ರೂ ಹಾಗೂ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ ಅವರ ನಿಧಿಯಿಂದ 20 ಲಕ್ಷ ರೂ. ಹೀಗೆ ಒಟ್ಟು 2.6 ಕೋಟಿ ರೂ.ಗಳ ಅನುದಾನ ಲಭ್ಯವಿರುವುದಾಗಿ ತಿಳಿಸಿದರು. ಕ್ರೀಡಾಂಗಣಗಳ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಪ್ರೊಫೇಸರ್ಗಳನ್ನೊಳಗೊಂಡ ತಾಂತ್ರಿಕ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಜಿ. ರಾಮಕೃಷ್ಣ, ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ, ಗಣ್ಯರಾದ ಭಾಗನಗೌಡ ಸಂಕನೂರ, ತಿಪ್ಪಣ್ಣಪ್ಪ ಕಮಕನೂರ, ಮಲ್ಲಿನಾಥ ಪಾಟೀಲ್ ಸೊಂತ, ವೈಜನಾಥ ತಡಕಲ್, ಗುರುರಾಜ ಪಾಟೀಲ, ಅರುಣ ಪಾಟೀಲ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಅನುಪಮ ಅಗರವಾಲ, ಸಹಾಯಕ ನಿರ್ದೇಶಕ ನಾಗರಾಜ ಮತ್ತಿತರರು ಉಪಸ್ಥಿತರಿದ್ದರು.
ಕ್ರೀಡಾ ಸಚಿವರಿಂದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ
ಕಲಬುರಗಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಯುವ ಸಬಲೀಕರಣ ಮತ್ರು ಕ್ರೀಡಾ ಇಲಾಖೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಸೋಮವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮೀನುಗಾರಿಕೆ ರಾಜ್ಯ ಸಚಿವ ಪ್ರಮೋದ ಮಧ್ವರಾಜ್ ಅವರು ಕ್ರೀಡಾ ಉಪಹಾರ ಗೃಹ, ಮಳಿಗೆಗಳು, ಶೌಚಾಲಯ ಮತ್ತು ವಸ್ತ್ರ ಬದಲಾವಣೆ ಕೋಣೆಗಳನ್ನು ಉದ್ಘಾಟಿಸಿದರು.
ಇದಲ್ಲದೇ ವೆಲ್ನೆಸ್ ಮತ್ತು ಹೈಡ್ರೋಥೆರಪಿ ಕೇಂದ್ರ, ಚಂದ್ರಶೇಖರ ಪಾಟೀಲ ಸ್ಮಾರಕ ಉದ್ಯಾನವನ ಮತ್ತು ಜುಡೋ, ಕರಾಟೆ ಮತ್ತು ಆತ್ಮರಕ್ಷಣಾ ಸೌಲಭ್ಯದ ನಿರ್ಮಾಣ ಕಾಮಗಾರಿಗಳ ಶಂಕುಸ್ಥಾಪನೆ ಸಹ ನೆರವೇರಿಸುವರು.
ಕಲಬುರಗಿ ದಕ್ಷಿಣ ವಿಧಾನಸಭಾ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಲಾಜಿ, ಉಪಾಧ್ಯಕ್ಷ ಶೋಭಾ ಸಿದ್ದು ಸಿರಸಗಿ, ವಿಧಾನ ಪರಿಷತ್ ಶಾಸಕರುಗಳಾದ ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಉಜ್ವಲ್ಕುಮಾರ್ ಘೋಷ್, ಯುವ ಸಬಲೀಕರಣ ಇಲಾಖೆಯ ನಿರ್ದೇಶಕ ಅನುಪಮ ಅಗರವಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಮತ್ತಿತರರು ಪಾಲ್ಗೊಂಡಿದ್ದರು.