ಒಳ ಮೀಸಲಾತಿ ವರ್ಗೀಕರಣಕ್ಕೆ ಸೂಕ್ತ ಮಾನದಂಡಗಳನ್ನು ರೂಪಿಸಿ – ಲೋಲಾಕ್ಷ
ಮಂಗಳೂರು: ಕರ್ನಾಟಕ ರಾಜ್ಯಕ್ಕಾಗಿ ಅಧಿಸೂಚಿತ ಎಲ್ಲ 101 ಪರಿಶಿಷ್ಟ ಜಾತಿಗಳ ಪ್ರತಿಯೊಬ್ಬರಿಗೂ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಖಾತರಿ ಪಡಿಸುವ ಸಲುವಾಗಿ ಈ ಜಾತಿಗಳ ಕುಟುಂಬದ ಆರ್ಥಿಕ ಸ್ಥಿತಿಗತಿ ಆಧಾರದಲ್ಲೇ ಒಳ ಮೀಸಲಾತಿ ವರ್ಗೀಕರಣಕ್ಕೆ ಸೂಕ್ತ ಮಾನದಂಡಗಳನ್ನು ರೂಪಿಸಬೇಕು ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾಒಕ್ಕೂಟ ಒತ್ತಾಯಿಸಿದೆ. ಈ ಬಗ್ಗೆ ವರ್ಗೀಕರಣದ ಕರಡು ಮಾದರಿಯೊಂದನ್ನು ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗಕ್ಕೆ ಸಲ್ಲಿಸಿರುವುದಾಗಿ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿರುವ 101 ಪರಿಶಿಷ್ಟ ಜಾತಿಗಳ ಪ್ರತಿ ಸದಸ್ಯರಿಗೆ ಸಂವಿಧಾನದ ವಿಧಿ 15(4) ಮತ್ತು 16(4)ರ ಅನ್ವಯ ಶಿಕ್ಷಣ ಸಂಸ್ಥೆಗಳಿಗೆ ಸೇರ್ಪಡೆ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಸಮಾನ ಅವಕಾಶಗಳನ್ನು ಖಾತರಿ ಪಡಿಸಲು ಉದ್ದೇಶಿಸಲಾಗಿರುವ ಒಳ ಮೀಸಲಾತಿ ನೀತಿಗೆ ಅಗತ್ಯವಾದ ನ್ಯಾಯೋಚಿತವಾದ ವರ್ಗೀಕರಣವನ್ನು ಪ್ರತಿ ಕುಟುಂಬದ ಆರ್ಥಿಕ ಸ್ಥಿತಿ ಗತಿ/ವಾರ್ಷಿಕ ಆದಾಯದ ಆಧಾರದ ಮಾನದಂಡದಲ್ಲಿ ಮಾಡಬೇಕಾಗಿದೆ. ಜಾತೀಯ ನೆಲೆಗಟ್ಟಿನಲ್ಲಿ ವರ್ಗೀಕರಣ ಮಾಡಬಾರದು ಎಂದು ಹೇಳಿದ ಅವರು, ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗಕ್ಕೆ ಬರೆದಿರುವ ಸುದೀರ್ಘ ಪತ್ರದಲ್ಲಿ, ಈ ವಿಷಯವನ್ನು ಮಹಾಒಕ್ಕೂಟ ಸ್ಪಷ್ಟಪಡಿಸಿದೆ ಎಂದರು.
ಈಗಾಗಲೇ ಜಾತೀಯ ನೆಲೆಗಟ್ಟಿನಲ್ಲಿ ನಿಂತ ಅಸ್ಪೃಶ್ಯತೆ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಯ ಆಧಾರದಲ್ಲೇ ಸಂವಿಧಾನದ ವಿಧಿ 341ರ ಅಡಿಯಲ್ಲಿ ಕರ್ನಾಟಕ ರಾಜ್ಯಕ್ಕಾಗಿ 101 ಜಾತಿಗಳನ್ನು ಪರಿಶಿಷ್ಟ ಜಾತಿಗಳು ಎಂಬ ಹೆಸರಿನಲ್ಲಿ ಪ್ರವರ್ಗ ರಚಿಸಿ ಅಧಿಸೂಚಿಸಲಾಗಿದೆ. ಈ ಜಾತಿಗಳಿಗೆ ಸೇರಿದ ಪ್ರತಿ ವ್ಯಕ್ತಿಗೆ ಸಂವಿಧಾನದ ವಿಧಿ 14ರಲ್ಲಿ ಪ್ರತಿಪಾದಿಸಲಾದ ಸಮಾನತೆಯ ತತ್ವಕ್ಕೆ ಚ್ಯುತಿ ಬಾರದಂತೆ, ವಿಧಿ 15(1)ರಲ್ಲಿ ಸ್ಪಷ್ಟಪಡಿಸಿರುವಂತೆ ಜಾತಿ ಮತ್ತು ಲಿಂಗ ಆಧಾರಿತ ತಾರತಮ್ಯ ಇಲ್ಲದಂತೆ, ವಿಧಿ 15(4) ರಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸೇರ್ಪಡೆಯಲ್ಲಿ ಮೀಸಲಾತಿ ಕಲ್ಪಿಸಲು ಮತ್ತು ಸಂವಿಧಾನದ ವಿಧಿ 16(1) ರಲ್ಲಿ ಎಲ್ಲಾ ಪ್ರಜೆಗಳಿಗೆ ಸಾರ್ವಜನಿಕ ಸೇವೆಗಳಲ್ಲಿ ಸಮಾನ ಅವಕಾಶವನ್ನು ಖಾತರಿಮಾಡುವ ಆಶಯಕ್ಕೆ ಚ್ಯುತಿ ಬಾರದಂತೆ, ವಿಧಿ 16(4) ರಲ್ಲಿ ನ್ಯಾಯೋಚಿತ ರೀತಿಯಲ್ಲಿ ಮೀಸಲಾತಿ ಕಲ್ಪಿಸಬೇಕಾದರೆ ಒಳಮೀಸಲಾತಿ ವರ್ಗೀಕರಣವು ಕುಟುಂಬದ ಆರ್ಥಿಕ ಸ್ಥಿತಿಗತಿ / ವಾರ್ಷಿಕ ಆದಾಯದ ನೆಲೆಗಟ್ಟಿನಲ್ಲಿಯೇ ನಡೆಯಬೇಕು ಎಂದು ಮಹಾ ಒಕ್ಕೂಟ ಪ್ರತಿಪಾದಿಸಿದೆ ಎಂದವರು ಹೇಳಿದರು.