Home Mangalorean News Kannada News ಓಝೋನ್ ಪದರ ರಕ್ಷಣೆ ಮರ ಗಿಡಗಳಿಂದ ಮಾತ್ರ ಸಾಧ್ಯ. – ಎ. ಗೋಪಾಲ್

ಓಝೋನ್ ಪದರ ರಕ್ಷಣೆ ಮರ ಗಿಡಗಳಿಂದ ಮಾತ್ರ ಸಾಧ್ಯ. – ಎ. ಗೋಪಾಲ್

Spread the love

ಓಝೋನ್ ಪದರ ರಕ್ಷಣೆ ಮರ ಗಿಡಗಳಿಂದ ಮಾತ್ರ ಸಾಧ್ಯ. – ಎ. ಗೋಪಾಲ್

ಉಡುಪಿ : ಪ್ರಿಡ್ಜ್, ಏರ್‍ಕಂಡೀಶನ್ ಮುಂತಾದ ಮನುಷ್ಯನ ಐಶಾರಾಮಿ ಬಳಕೆಗಳು ಹೊರ ಸೂಸುವ ಅನಿಲಗಳಿಂದಾಗಿ ಇಂದು ಓಝೋನ್ ಪದರಕ್ಕೆ ಹಾನಿ ಉಂಟಾಗಿ ಅದು ದುರ್ಬಲವಾಗುತ್ತಿದೆ. ಈ ಓಝೋನ್ ಪದರ ರಕ್ಷಿಸಬೇಕಾದರೆ ನಾವು ಗಿಡ ಮರಗಳನ್ನು ಬೆಳೆಸಿ ಉಳಿಸಬೇಕು ಇಲ್ಲವಾದರೆ ಮುಂದೊಂದು ದಿನ ಭೂಮಿಗೆ ಗಂಡಾಂತರ ಕಾದಿದೆ. ಒಂದು ಗಿಡ ನೆಟ್ಟು ಬೆಳೆಸುವುದೆಂದರೆ ಅದು ನಾವು ಭೂಮಿಯನ್ನು ಉಳಿಸುವ ಕೆಲಸ ಮಾಡಿದಂತೆ ಎಂದು ಶಂಕರ ನಾರಾಯಣ ವಲಯ ಅರಣ್ಯಾಧಿಕಾರಿಗಳಾದ ಶ್ರೀ ಎ. ಗೋಪಾಲರವರು ಸೇವಾ ಮತ್ತು ಸಾಂಸ್ಕøತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್‍ನ ಆಶ್ರಯದಲ್ಲಿ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಸಾಗುವಾನಿ ಗಿಡ ವಿತರಣಾ ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ನುಡಿದರು.

ಅವರು ಮುಂದುವರಿಯುತ್ತಾ ಮಕ್ಕಳಿಗೆ ಎಳವೆಯಲ್ಲಿಯೇ ಪರಿಸರ ರಕ್ಷಣೆಯ ಬಗ್ಗೆ ತಿಳಿ ಹೇಳಿ ಅವರಿಂದ ಗಿಡ ನೆಟ್ಟು ಬೆಳೆಸುವಂತಹ ಕಾರ್ಯ ಮಾಡಿರುವುದು ಅತ್ಯಂತ ಸ್ತುತ್ಯಾರ್ಹ ಕೆಲಸ. ಉದ್ಯಾವರ ಫ್ರೆಂಡ್ಸ್ ಸರ್ಕಲ್ ಇದನ್ನು ಒಂದು ನೇಮದಂತೆ ಕಳೆದ 20 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಮಾಡಿಕೊಂಡು ಬಂದಿರುವುದು ಇದರ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ ಅಂದರು.

ಇವತ್ತು ನಾವು ತೀವ್ರವಾದ ನೀರಿನ ಬರವನ್ನು ಎದುರಿಸುತ್ತಿದ್ದೇವೆ. ಇದಕ್ಕೆ ಕಾರಣ ನಾವು ಅಭಿವೃದ್ಧಿಯ ಹೆಸರಲ್ಲಿ ಮರ ಗಿಡಗಳನ್ನು ನಾಶ ಮಾಡುತ್ತಿರುವುದು. ನೀರಿನ ಬರವನ್ನು ಸಮರ್ಪಕವಾಗಿ ಎದುರಿಸಲು ಮರಗಿಡಗಳನ್ನು ಬೆಳೆಸುವುದೊಂದೇ ದಾರಿ ಎಂದು ಮತ್ತೋರ್ವ ಮುಖ್ಯ ಅತಿಥಿ ಉಡುಪಿ ಅರಣ್ಯ ರಕ್ಷಕರಾದ ಶ್ರೀ ದೇವರಾಜ ಪಾಣ ನುಡಿದು ಗಿಡ ನೆಟ್ಟು ಬೆಳೆಸುವುದರ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ನಿರ್ದೇಶಕ, ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕರಾದ ಶ್ರೀ ಉದ್ಯಾವರ ನಾಗೇಶ್ ಕುಮಾರ್‍ರವರು ಮಾತನಾಡಿ ಸಂಸ್ಥೆ ನಿರಂತರವಾಗಿ ಕಳೆದ 20ಕ್ಕೂ ಮಿಕ್ಕಿ ವರ್ಷಗಳಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಒಂದು ವರ್ಷದ ಅವಧಿಯಲ್ಲಿ ಉತ್ತಮವಾಗಿ ಗಿಡ ಬೆಳೆಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡುತ್ತಿದೆ. ಇದರ ಈ ಕಾರ್ಯವನ್ನು ಗಮನಿಸಿದ ಬೆಂಗಳೂರಿನ ಸಾಲು ಮರದ ತಿಮ್ಮಕ್ಕ ಫೌಂಡೇಶನ್ ಸಂಸ್ಥೆಯನ್ನು ಕಳೆದ ಬಾರಿ ಸನ್ಮಾನಿಸಿದೆ. ಇದು ಸಂಸ್ಥೆಯ ಪರಿಸರ ರಕ್ಷಣೆ ಕೆಲಸಕ್ಕೆ ಸಿಕ್ಕಿದ ಮನ್ನಣೆ. ಈ ಕೆಲಸ ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಆಗಬೇಕಾಗಿದೆ ಎಂದರು.

ವೇದಿಕೆಯಲ್ಲಿ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಗಣಪತಿ ಕಾರಂತ್, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಗಂಧಿ ಶೇಖರ್, ಉಪಾಧ್ಯಕ್ಷರಾದ ರಿಯಾಝ್ ಪಳ್ಳಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಗಿರೀಶ್ ಕುಮಾರ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಯು, ಆರ್. ಚಂದ್ರಶೇಖರ್ ಅತಿಥಿಗಳನ್ನು ಸ್ವಾಗತಿಸಿದರು. ಕೊನೆಯಲ್ಲಿ ಹಿರಿಯ ಸದಸ್ಯ ಶೇಖರ್ ಕೆ. ಕೋಟ್ಯಾನ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ತಿಲಕ್‍ರಾಜ್ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳಿಗೆ ಸಾಗುವಾನಿ, ಮಾಗುವಾನಿ, ಬೀಟೆ, ರಕ್ತ ಚಂದನ, ಶ್ರೀಗಂಧ ಮೊದಲಾದ 500ಕ್ಕೂ ಮಿಕ್ಕಿ ಗಿಡಗಳನ್ನು ವಿತರಿಸಲಾಯಿತು.


Spread the love

Exit mobile version