ಕಂಚಿನ ಮೂರ್ತಿ ಎಂದು ಹೇಳಿ ಫೈಬರ್ ಮೂರ್ತಿ ಸ್ಥಾಪಿಸಿ ಹಿಂದೂಗಳಿಗೆ ಅವಮಾನಿಸಿದ ಸುನೀಲ್ ಕುಮಾರ್– ರಮೇಶ್ ಕಾಂಚನ್
ಉಡುಪಿ: ಪರಶುರಾಮನ ಕಂಚಿನ ಮೂರ್ತಿ ಎಂದು ಪ್ರಚಾರ ಮಾಡಿ ಫೈಬರ್ ಮೂರ್ತಿ ಸ್ಥಾಪಿಸಿ ಹಿಂದೂಗಳ ಭಾವನೆಗೆ ದಕ್ಕೆ ಉಂಟು ಮಾಡಿದಕ್ಕಾಗಿ ಆಕ್ರೋಶವಿದೆ. ಕಾಂಗ್ರೆಸ್ ಪಕ್ಷವು ಸದಾ ಅಭಿವೃದ್ಧಿಗೆ ಬೆಂಬಲಿಸಲಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್ ಹೇಳಿದ್ದಾರೆ
ಪರಶುರಾಮ ಥೀಮ್ ಪಾರ್ಕ್ ಧಾರ್ಮಿಕ ಕ್ಷೇತ್ರವೇ ಅಲ್ಲ ಎನ್ನುವ ಶಾಸಕ ಸುನೀಲ್ ಕುಮಾರ್ ಎರಡು ನಾಲಿಗೆಯವರು ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಈ ಹಿಂದೆ ಪರಶುರಾಮನ ಪ್ರತಿಮೆ ನಿರ್ಮಾಣ ಕಾರ್ಯ ನಡೆಯುತ್ತಿರುವ ಸಮಯದಲ್ಲಿ ಇದೇ ಮಾಜಿ ಸಚಿವರು ಇದೊಂದು ಸಾಂಸ್ಕೃತಿಕ, ಧಾರ್ಮಿಕ ಹಾಗೂ ಪ್ರವಾಸೋದ್ಯಮ ಕ್ಷೇತ್ರವಾಗಿ ಬೆಳೆಯುವ ನಿಟ್ಟಿನಲ್ಲಿ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಸಮುದ್ರ ಮಟ್ಟದಿಂದ 500 ಅಡಿ ಎತ್ತರದಲ್ಲಿ ಸುಮಾರು 33 ಅಡಿ ಎತ್ತರದ ಕಂಚಿನಿಂದ ಕೂಡಿ ಪರಶುರಾಮನ ಮೂರ್ತಿಯನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿಕೊಂಡು ಈಗ ತಮ್ಮ ವರಸೆಯನ್ನು ಬದಲಿಸಿ ಆ ಸ್ಥಳದಲ್ಲಿ ಯಾರಿಗೂ ತೆಂಗಿನ ಕಾಯಿ ಒಡೆಯಲು, ಉದುಬತ್ತಿ ಹಚ್ಚಲು ಹಾಗೂ ಮಂಗಳಾರತಿ ಮಾಡಲು ಅವಕಾಶವೇ ಇಲ್ಲ ಎನ್ನುವ ಸುನೀಲ್ ಕುಮಾರ್ ಅವರಿಗೆ ಎಷ್ಟು ನಾಲಿಗೆ ಎನ್ನುವುದು ಸ್ಪಷ್ಟಪಡಿಸಬೇಕು.
ತುಳುನಾಡಿನ ಜನರು ಪರಶುರಾಮನನ್ನು ಧಾರ್ಮಿಕ ಭಾವನೆಯಿಂದ ಕಾಣುತ್ತಿರುವುದು ಜಗತ್ತಿಗೆ ತಿಳಿದಿರುವ ವಿಚಾರ. ಹಾಗಿದ್ದಲ್ಲಿ ಪರಶುರಾಮ ಥೀಮ್ ಪಾರ್ಕ್ನಲ್ಲಿ ತೆಂಗಿನ ಕಾಯಿ ಒಡೆದೋ, ಮಂಗಳಾರತಿ ಮಾಡಿ ನಮ್ಮ ಭಕ್ತಿ ತೋರಿಸಿದರೆ ಮಾತ್ರ ಅದನ್ನು ಧಾರ್ಮಿಕ ಕ್ಷೇತ್ರವಾಗಿ ಹೇಳಬೇಕೆಂದಿಲ್ಲ. ಪರಶುರಾಮನಿಗೆ ಧಾರ್ಮಿಕ ಗೌರವ ನೀಡಿದ ಬಳಿಕ ಅದು ಯಾವುದೇ ಸ್ಥಳವಾದರೂ ಕೂಡ ಅಲ್ಲೋಂದು ಭಕ್ತಿಯ ಸೆಳೆತ ಇರುತ್ತದೆ ಎನ್ನುವ ಕನಿಷ್ಠ ಜ್ಞಾನ ಸುನೀಲ್ ಕುಮಾರ್ ಅವರಿಗೆ ಇಲ್ಲವಾಯಿತೇ ?.
ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಇಲ್ಲಸಲ್ಲದ ಹೇಳಿಕೆ ನೀಡಿಕೊಂಡು ಮೊದಲು ಕಂಚಿನ ಮೂರ್ತಿಯನ್ನು ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಿದ್ದೇವೆ ಎಂಬ ಪ್ರಚಾರವನ್ನು ಪಡೆದುಕೊಂಡು ಈಗ ಮೂರ್ತಿಯಲ್ಲಿ ಸಣ್ಣಪುಟ್ಟ ಬದಲಾವಣೆಗಳಿವೆ ಮತ್ತು ಅದಕ್ಕೆ ಎರಡು ತಿಂಗಳ ಕಾಲಾವಕಾಶ ಬೇಕು ಎಂದು ಹೇಳುವುದು ಯಾವ ಉದ್ದೇಶಕ್ಕಾಗಿ ?
ಪ್ರತಿಮೆ ಲೋಕಾರ್ಪಣೆ ಮಾಡುವಾಗಲೇ ಸದ್ಯ ಇರುವ ಮೂರ್ತಿ ಕಂಚಿನದ್ದು ಅಲ್ಲ ತನಗೆ ಹಿಂದುತ್ವದ ಹೆಸರಿನಲ್ಲಿ ಮತಗಳನ್ನು ಪಡೆಯಬೇಕು ಅದಕ್ಕಾಗಿ ತಾತ್ಕಾಲಿಕ ಮೂರ್ತಿಯನ್ನು ನಿರ್ಮಿಸಲಾಗಿದೆ ಎಂದು ಬಹಿರಂಗವಾಗಿ ಒಪ್ಪಿಕೊಳ್ಳಬಹುದಿತ್ತು ಅಲ್ಲವೇ?
ಕಾಂಗ್ರೆಸ್ ಎಂದೂ ಕೂಡ ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡಿಲ್ಲ. ಕರಾವಳಿಯ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳು ಪ್ರವಾಸೋದ್ಯಮದಲ್ಲಿ ಬೆಳೆಯಲು ನಮ್ಮದೇ ಆದ ಕೊಡುಗೆಯನ್ನು ಕಾಂಗ್ರೆಸ್ ಸರಕಾರಗಳು ನೀಡಿಕೊಂಡು ಬಂದಿದ್ದು ಬಿಜೆಪಿಗರು ಧರ್ಮದ ಹೆಸರಿನಲ್ಲಿ ಪ್ರವಾಸೋದ್ಯಮಕ್ಕೆ ಕಳಂಕ ತಂದಿರುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಪರಶುರಾಮ ಥೀಮ್ ಪಾರ್ಕ್ ಕೂಡ ಪ್ರವಾಸೋದ್ಯಮ ಕ್ಷೇತ್ರವಾಗಿ ಬೆಳೆಯಲು ನಮ್ಮದೇನು ಅಭ್ಯಂತರವಿಲ್ಲ ಆದರೆ ಸರಕಾರದ ಹಣವನ್ನು ಭ್ರಷ್ಠಾಚಾರ ಮಾಡಿ ಹಿಂದೂ ಜನರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿ ತಮ್ಮ ಮತಬ್ಯಾಂಕನ್ನು ಗಟ್ಟಿ ಮಾಡಿಕೊಂಡ ಸುನೀಲ್ ಕುಮಾರ್ ಅವರ ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.