Home Mangalorean News Kannada News ಕಟಪಾಡಿ ಚರ್ಚ್ ಅಮೃತ ಮಹೋತ್ಸವ – ಹಸಿರು ಹೊರೆ ಕಾಣಿಕೆ ಸಮರ್ಪಣೆ

ಕಟಪಾಡಿ ಚರ್ಚ್ ಅಮೃತ ಮಹೋತ್ಸವ – ಹಸಿರು ಹೊರೆ ಕಾಣಿಕೆ ಸಮರ್ಪಣೆ

Spread the love

ಕಟಪಾಡಿ ಚರ್ಚ್ ಅಮೃತ ಮಹೋತ್ಸವ – ಹಸಿರು ಹೊರೆ ಕಾಣಿಕೆ ಸಮರ್ಪಣೆ

ಉಡುಪಿ: ಕಟಪಾಡಿ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಚರ್ಚ್ ಇದರ ಅಮೃತಮಹೋತ್ಸವ ಆಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ಶುಕ್ರವಾರ ಸಂಜೆ ಸರ್ವಧರ್ಮಿಯರ ಸಹಭಾಗಿತ್ವದಲ್ಲಿ ಹೊರೆಕಾಣಿಕೆ ಮೆರವಣಿಗೆ ಜರುಗಿತು.

ಕಟಪಾಡಿ ರಾಷ್ಟ್ರೀಯ ಹೆದ್ದಾರಿ ಬಳಿಯಿಂದ ಹೊರಟು ಕಟಪಾಡಿ ಚರ್ಚ್ ವರೆಗೆ ನಡೆದ ಅದ್ದೂರಿ ಮೆರವಣಿಗೆಯಲ್ಲಿ ಹಸಿರು ಹೊರೆ ಕಾಣಿಕೆಯನ್ನು ಬ್ಯಾಂಡ್, ಚಂಡೆ ವಾದ್ಯಗಳೊಂದಿಗೆ ಶೋಭಾಯಾತ್ರೆಯಲ್ಲಿ ತರಲಾಯಿತು.

ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಸಮಾಜಸೇವಕ ರವಿ ಕಟಪಾಡಿ ಚಾಲನೆ ನೀಡಿ ಮಾತನಾಡಿ ಸಮಾಜ ಸೇವೆಯನ್ನು ಮಾಡಿಕೊಂಡು ಬಂದಿರುವ ತನಗೆ ನನ್ನ ಊರಿನಲ್ಲಿ ಈ ಅವಕಾಶ ನೀಡಿರುವುದು ನನ್ನ ಭಾಗ್ಯ. ಇರುವ ಒಂದು ಜೀವನವನ್ನು ಸಮಾಜದಲ್ಲಿನ ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡುವಾಗ ಸಿಗುವ ಸಂತೃಪ್ತಿಗೆ ಬೆಲೆ ಕಟ್ಟಲಾಗದು. ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂಬ ಭಾವನೆಯೊಂದಿಗೆ ಬದುಕಿದಾಗ ಜೀವನ ಸಾರ್ಥಕವಾಗುತ್ತದೆ ಎಂದರು.

ಹೊರೆಕಾಣಿಕೆ ಮೆರವಣಿಗೆಯಲ್ಲಿ ಉಡುಪಿ ವಲಯದ ವಿವಿಧ ಚರ್ಚುಗಳು, ಕಟಪಾಡಿ ವಿಶ್ವನಾಥ ಕ್ಷೇತ್ರ, ಲಯನ್ಸ್ ಕ್ಲಬ್, ಮಣಿಪುರ ಸಿಎಸ್ಐ ಚರ್ಚು, ಕಟಪಾಡಿ ಚರ್ಚಿನ ವಿವಿಧ ವಾಳೆಗಳು, ನವೋದಯ ಸ್ವಸಹಾಯ ಸಂಘದ ಸದಸ್ಯರು ಹಸಿರು ಹೊರೆಕಾಣಿಕೆಯನ್ನು ಸಮರ್ಪಿಸಿದರು. ಹೊರೆಕಾಣಿಕೆ ಸಮರ್ಪಿಸಿದ ಚರ್ಚುಗಳು ಹಾಗೂ ಸಂಘಟನೆಯ ಸದಸ್ಯರನ್ನು ಚರ್ಚಿನಲ್ಲಿ ಗೌರವಿಸಲಾಯಿತು.

ಈ ವೇಳೆ ಉಡುಪಿ ವಲಯ ಪ್ರಧಾನ ಧರ್ಮಗುರು ವಂ|ಚಾರ್ಲ್ಸ್ ಮಿನೇಜಸ್, ಕಟಪಾಡಿ ಚರ್ಚಿನ ಧರ್ಮಗುರು ವಂ|ರಾಜೇಶ್ ಪಸನ್ನಾ, ಕಟಪಾಡಿ ಹೋಲಿಕ್ರಾಸ್ ಸ್ಟೂಡೆಂಟ್ ಹೋಮ್ ಇದರ ನಿರ್ದೇಶಕರಾದ ವಂ|ರೋನ್ಸನ್ ಡಿಸೋಜಾ, ಮೂಡುಬೆಳ್ಳೆ ಚರ್ಚಿನ ವಂ|ಜೋರ್ಜ್ ಡಿಸೋಜಾ, ಕುಂತಲನಗರ ಚರ್ಚಿನ ವಂ|ವಿಲ್ಸನ್, ಉಡುಪಿ ಚರ್ಚಿನ ವಂ|ರೋಯ್ ಲೋಬೊ, ಕಟಪಾಡಿ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷ ಬ್ರಾಯನ್ ಕೊರೆಯಾ, ಕಾರ್ಯದರ್ಶಿ ತೆರೆಸಾ ಲೋಬೊ, 20 ಆಯೋಗಗಳ ಸಂಚಾಲಕರಾಗಿ ಲುವಿಸ್ ಡಿಸಿಲ್ವಾ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕ್ಯಾಥರಿನ್ ರೊಡ್ರಿಗಸ್ ನಿರೂಪಿಸಿದರು. ನವೆಂಬರ್ 11 ರಂದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.


Spread the love

Exit mobile version