Home Mangalorean News Kannada News ಕಟೀಲು ಅಸ್ರಣ್ಣ ಮನೆ ದರೋಡೆ : ಮತ್ತೆ ನಾಲ್ವರು ಪ್ರಮುಖ ಆರೋಪಿಗಳ ಬಂಧನ

ಕಟೀಲು ಅಸ್ರಣ್ಣ ಮನೆ ದರೋಡೆ : ಮತ್ತೆ ನಾಲ್ವರು ಪ್ರಮುಖ ಆರೋಪಿಗಳ ಬಂಧನ

Spread the love

ಕಟೀಲು ಅಸ್ರಣ್ಣ ಮನೆ ದರೋಡೆ : ಮತ್ತೆ ನಾಲ್ವರು ಪ್ರಮುಖ ಆರೋಪಿಗಳ ಬಂಧನ

ಮಂಗಳೂರು: ಕಟೀಲು ಅಸ್ರಣ್ಣರವರ ಮನೆಯಲ್ಲಿ ದರೋಡೆ ಮಾಡಿದ ಆರೋಪಿಗಳ ಪೈಕಿ ಪ್ರಮುಖ 4 ಜನರನ್ನು ಬಂಧಿಸುವಲ್ಲಿ ಹಾಗೂ ದರೋಡೆ ಮಾಡಿದ ಚಿನ್ನಾಭರಣಗಳು ಮತ್ತು ದರೋಡೆ ಸಮಯದಲ್ಲಿ ಉಪಯೋಗಿಸಿದ ಪಿಸ್ತೂಲು, ರಿವಾಲ್ವರ್ ಹಾಗೂ ಮಾರಾಕಾಸ್ತ್ರ ಗಳನ್ನು ಸ್ವಾಧೀನಪಡಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು  ಯಶಸ್ಸಿಯಾಗಿರುತ್ತಾರೆ.

asaranna-dacoity-bajpe

ಬಂಧಿತರನ್ನು ಕಾರ್ಕಳ ಪಳ್ಳಿ ನಿವಾಸಿ ಭರತ್ ಶೆಟ್ಟಿ (30), ಬಂಟ್ವಾಳ ಮೇಲ್ಕಾರ್ ನಿವಾಸಿ ಮೊಹಮ್ಮದ್ ಆಲಿ (35), ಹಳೆಯಂಗಡಿ ಪಾವಂಜೆ ನಿವಾಸಿ ಪುರುಷೋತ್ತಮ (44), ಸೋಮೇಶ್ವರ ಉಚ್ಚಿಲ ನಿವಾಸಿ ಹರೀಶ್ ಗಟ್ಟಿ (41) ಎಂದು ಗುರುತಿಸಲಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ನಗರ ಆಯುಕ್ತರಾದ ಚಂದ್ರಶೇಖರ್ ಅವರು ಅಕ್ಟೋಬರ್ 4 ರಂದು ಬೆಳಗ್ಗಿನ ಜಾವ ಕಟೀಲು ಅಸ್ರಣ್ಣರವರ ಮನೆಗೆ 7-8 ಅಪರಿಚಿತರು ಮಾರಾಕಾಯುಧ ಮತ್ತು ರಿವಾಲ್ವರ್ ಗಳೊಂದಿಗೆ ಅಕ್ರಮವಾಗಿ ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದ ಅಸ್ರಣ್ಣರವರ ಮಗ ದೇವಿಕುಮಾರ ಅಸ್ರಣ್ಣ ಹಾಗೂ ಮನೆಯಲ್ಲಿದ್ದವರನ್ನು ಕಟ್ಟಿ ಹಾಕಿ  ಒಟ್ಟು ಅಂದಾಜು 80 ಪವನ್ ಚಿನ್ನಾಭರಣಗಳನ್ನು ಹಾಗೂ ನಗದು ಹಣವನ್ನು ದರೋಡೆ ಮಾಡಿಕೊಂಡು ಹೋಗಿದ್ದು ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ಆರೋಪಿ ಮತ್ತು ಸೊತ್ತು ಪತ್ತೆಯ ಗಾಗಿ  ತಂಡಗಳನ್ನು ರಚಿಸಿದ್ದು,  ಈಗಾಗಲೇ  ಒಟ್ಟು 7 ಜನರನ್ನು ದಸ್ತಗಿರಿ ಮಾಡಲಾಗಿದೆ. ಮಂಗಳೂರು ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್  ಸುನಿಲ್ ವೈ ನಾಯಕ್ ರವರು ಪ್ರಕರಣದಲ್ಲಿ  ತಲೆಮರೆಸಿಕೊಂಡಿರುವ  ಆರೋಪಿಗಳ ಪತ್ತೆಯ ಬಗ್ಗೆ ತನ್ನ ತಂಡದೊಂದಿಗೆ ಹೊರರಾಜ್ಯವಾದ ಮಹಾರಾಷ್ಟ್ರ (ಪನ್ವೆಲ್, ಥಾಣೆ, ಅಂದೇರಿ, ದೊಂಬಿವಿಲಿ,ಪೂಣಾ) ಗೋವಾ,ಹಾಗೂ ಹೊರಜಿಲ್ಲೆಗಳಾದ ಚಿಕ್ಕಮಂಗಳೂರು, ಉಡುಪಿ  ಮೊದಲಾದ ಕಡೆಗಳಲ್ಲಿ ಸಂಚರಿಸಿ ಆರೋಪಿ ಪತ್ತೆಯ ಬಗ್ಗೆ ಶ್ರಮಿಸಿದ್ದು,  ಕಾರ್ಕಳದ ಭರತ್ ಶೆಟ್ಟಿ ಎಂಬವನು ದೀಪಾವಳಿ ಹಬ್ಬದ ಪ್ರಯುಕ್ತ ಊರಿಗೆ ಬಂದಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ್ದು ಅಕ್ಟೋಬರ್ 30  ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದಲ್ಲಿರುವ ಭರತ್ ಶೆಟ್ಟಿಯ ಮನೆಯಿಂದ ಭರತ್ ಶೆಟ್ಟಿಯನ್ನು ವಶಕ್ಕೆ ಪಡೆದಿದ್ದು, ಈತನಿಂದ 455 ಗ್ರಾಂ ತೂಕದ  ಚಿನ್ನಾಭರಗಳು, ಒಂದು ರಿವಾಲ್ವರ್, ನಾಲ್ಕು ಸಜೀವ ಗುಂಡುಗಳು, ಒಂದು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ನಂತರ  ಭರತ್ ಶೆಟ್ಟಿಯು ನೀಡಿದ ಮಾಹಿತಿಯಂತೆ ಬಂಟ್ವಾಳ ತಾಲೂಕಿನ ಮೆಲ್ಕಾರು ಎಂಬಲ್ಲಿಯ ವಾಸಿ ಮೊಹಮ್ಮದ್ ಆಲಿಯನ್ನು  ಆತನ ಮನೆಯಿಂದ  ವಶಕ್ಕೆ ಪಡೆದು  ಆತನಿಂದ ಒಂದು ಪಿಸ್ತೂಲು, ನಾಲ್ಕು ಸಜೀವ ಗುಂಡು, ಒಂದು ಮೋಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ನಂತರ  ಭರತ್ ಶೆಟ್ಟಿಯು ನೀಡಿದ ಮಾಹಿತಿಯಂತೆ ಹಳೆಯಂಗಡಿ ವಾಸಿ ಪುರುಷೋತ್ತಮ ಮತ್ತು ಸೋಮೇಶ್ವರ ಗ್ರಾಮದ ಸಂಕೊಲಿಗೆ ವಾಸಿ ಹರೀಶ್ ಗಟ್ಟಿ ಎಂಬವರುಗಳನ್ನು ಬಿಜೈ ಕಾಪಿಕಾಡಿನಿಂದ ವಶಕ್ಕೆ ಪಡೆಯಲಾಗಿದೆ. ಈತನಿಂದ ಬ್ರೀಚ್ ಲೋಡಿಂಗ್ ಬಂದೂಕು, ಒಂದು ಕತ್ತಿ, ಎರಡು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ಭರತ್ ಶೆಟ್ಟಿಯ ವಿರುದ್ಧ ಕಾರ್ಕಳದಲ್ಲಿ ಸುಲೈಮಾನ್ ಕೊಲೆ ಪ್ರಕರಣ, ಲಿಯೋ ಪಿರೇರಾ ಎಂಬವರ  ಅಪಹರಣ ಪ್ರಕರಣ ಹಾಗೂ ಮುಂಬಾಯಿಯ ವೀಟಿ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಈತನು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಈಗ ವಾರಂಟು ಜ್ಯಾರಿಯಲ್ಲಿರುತ್ತದೆ.  ಈ ಪ್ರಕರಣದಲ್ಲಿ ಉಳಿದ ಮೂರು ಜನರು ಕೂಡ ಬಾಗಿಯಾಗಿದ್ದು ತನಿಖೆಯಲ್ಲಿ ಕಂಡುಬರುತ್ತದೆ.

ಪೊಲೀಸ್ ಕಮೀಷನರ್ ಎಂ ಚಂದ್ರಶೇಖರ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ  ಕೆ.ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಡಾ: ಸಂಜೀವ್ ಎಂ. ಪಾಟೀಲ್ ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಇನ್ಸಪೆಕ್ಟರ್ ಸುನೀಲ್ ವೈ ನಾಯಕ್, ಪಿಎಸ್ ಐ ಶ್ಯಾಮ್ ಸುಂದರ್ ರವರು ಹಾಗೂ ಸಿಬ್ಬಂದಿ ಯವರಾದ  ರಾಮಪೂಜಾರಿ, ಶೀನಪ್ಪ, ಗಣೇಶ್ ಕಲ್ಲಡ್ಕ, ಚಂದ್ರಶೇಖರ, ಚಂದ್ರಹಾಸ, ಚಂದ್ರ.ಕೆ, ಯೋಗೀಶ, ಪ್ರಶಾಂತ್ ಶೆಟ್ಟಿ, ದಾಮೋದರ, ಶಾಜು.ಕೆ.ನಾಯರ್, ರಾಜೇಂದ್ರ ಪ್ರಸಾದ್, ಮಣಿ.ಎಂ.ಎನ್, ಸುಧೀರ್ ಶೆಟ್ಟಿ, ಅಬ್ದುಲ್ ಜಬ್ಬಾರ್, ಸುನೀಲ್ ಕುಮಾರ್, ಇಸಾಕ್, ಆಶಿತ್ ವಿಶಾಲ್ ಡಿ’ಸೋಜ, ತೇಜಕುಮಾರ್, ಮತ್ತು ಕಂಪ್ಯೂಟರ್ ವಿಭಾಗದ  ಸಿಬ್ಬಂದಿಯವರಾದ ಮನೋಜ್ ಕುಮಾರ್ ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

 


Spread the love

Exit mobile version