ಕಟೀಲು ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ -ವಾಹನ ಸಂಚಾರದಲ್ಲಿ ಮಾರ್ಪಾಡು

Spread the love

ಕಟೀಲು ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ -ವಾಹನ ಸಂಚಾರದಲ್ಲಿ ಮಾರ್ಪಾಡು

ಮಂಗಳೂರು : ಅಕ್ಟೋಬರ್ 10 ರಿಂದ ಅಕ್ಟೋಬರ್ 18 ರವರೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ಲಲಿತ ಪಂಚಮಿಯ ಪೂಜಾ ಕಾರ್ಯಕ್ರಮ, ವಾಹನ ಪೂಜೆ ಮತ್ತು ಆಯುಧ ಪೂಜೆ ಇತ್ಯಾದಿ ಮಹೋತ್ಸವ ನಡೆಯಲಿರುವುದರಿಂದ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡಿ ಬದಲಿ ವ್ಯವಸ್ಥೆ ಸೂಚಿಸಿ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿ 1989 ರ ನಿಯಮ 221 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅವರು ಆದೇಶಿಸಿದ್ದಾರೆ.

ಮಂಗಳೂರು ಬಜಪೆ ಕಡೆಯಿಂದ ಕಟೀಲಿಗೆ ಬರುವ ವಾಹನಗಳು ಮಲ್ಲಿಗೆಯಂಗಡಿ ಕ್ರಾಸ್‍ನಿಂದ ಏಕಮುಖವಾಗಿ ಚಲಿಸಿ, ಗಿಡಿಗೆರೆ ರಸ್ತೆ ಮೂಲಕ ಕಟೀಲು ಕಾಲೇಜು ಮುಖ್ಯ ರಸ್ತೆಯನ್ನು ಸೇರುವುದು. ಕಟೀಲಿನಿಂದ ಮಂಗಳೂರು ಕಡೆಗೆ ಹೋಗುವ ಎಲ್ಲಾ ವಾಹನಗಳು ದೇವಸ್ಥಾನದ ಪದವಿ ಪೂರ್ವ ಕಾಲೇಜು ಮೈದಾನದ ಮೂಲಕ ವಿಜಯ ಬ್ಯಾಂಕ್ ಎದುರುಗಡೆ ರಸ್ತೆಯಲ್ಲಿ ಚಲಿಸಿ, ಬಜಪೆ-ಮಂಗಳೂರು ಕಡೆಗೆ ಹೋಗುವುದು. ಕಾರು ಹಾಗೂ ಇತರ ವಾಹನಗಳಿಗೆ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್‍ಗೆ ಹೆಚ್ಚಿನ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್ಸುಗಳು ಎಂದಿನಂತೆ ಬಸ್ಸು ನಿಲ್ದಾಣಕ್ಕೆ ಬಂದು ಹೋಗುವುದು. ದೇವಸ್ಥಾನದ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಿಂದ ವಿಜಯಬ್ಯಾಂಕ್ ವರೆಗಿನ ಇಕ್ಕೆಲಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣ ನಿಷೇಧಿಸಿದೆ.
ಈ ನಿರ್ಬಂಧನೆಗಳು, ಪೊಲೀಸ್ ವಾಹನಗಳು ಹಾಗೂ ತುರ್ತು ಸೇವೆಯ ವಾಹನಗಳಿಗೆ ಅನ್ವಯಸುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.


Spread the love