ಕಡತ ಕಾಣೆಯಾಗಿದೆಯಾ ಇಲ್ಲಾ ಹೊಸದಾಗಿ ಕಡತ ನಿರ್ಮಾಣವಾಗುತ್ತಿದೆಯಾ? ಕೆ. ವಿಕಾಸ್ ಹೆಗ್ಡೆ

Spread the love

ಕಡತ ಕಾಣೆಯಾಗಿದೆಯಾ ಇಲ್ಲಾ ಹೊಸದಾಗಿ ಕಡತ ನಿರ್ಮಾಣವಾಗುತ್ತಿದೆಯಾ? ಕೆ. ವಿಕಾಸ್ ಹೆಗ್ಡೆ

ಕುಂದಾಪುರ: ಪುರಸಭೆ ಅಧ್ಯಕ್ಷರ ಮನೆಯ ಮಹಡಿ ನಿರ್ಮಾಣಕ್ಕೆ ಪುರಸಭೆ ನೀಡಿದ ಪರವಾನಗೆಯ ಕಡತ ಕಾಣೆಯಾಗಿದೆಯಾ ಇಲ್ಲಾ ಅಕ್ರಮವಾಗಿ ಮಹಡಿ ನಿರ್ಮಾಣ ಮಾಡಿ ಈಗ ಹೊಸದಾಗಿ ಅಕ್ರಮವಾಗಿ ಪರವಾನಗೆಯ ಕಡತ ರಚನೆ ಮಾಡುವ ಹುನ್ನಾರ ನಡೆಯುತ್ತಿದೆಯಾ ಎನ್ನುವುದನ್ನು ಪುರಸಭೆಯ ಮುಖ್ಯಾಧಿಕಾರಿಗಳು ತಿಳಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ.

ಪುರಸಭೆಯ ಕಡತ ಕಾಣೆಯಾಗುವುದು ಒಂದು ಗಂಭೀರ ಪ್ರಕರಣ. ಇದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮವಾಗಬೇಕು. ಆದರೆ ಪುರಸಭೆಯ ಮುಖ್ಯಾಧಿಕಾರಿಗಳು ಮಾಹಿತಿ ಹಕ್ಕಿನಲ್ಲಿ ನೀಡಿದ ಉತ್ತರದಲ್ಲಿ ಅಧ್ಯಕ್ಷರ ಮಹಡಿ ನಿರ್ಮಾಣದ ದಾಖಲೆಗಳು ಇಲ್ಲಾ ಎನ್ನುವ ಮಾಹಿತಿ ನೀಡಿದ್ದು ಈಗ ಕಡತ ಕಾಣೆಯಾಗಿದೆ ಎನ್ನುವ ಹೊಸ ಉತ್ತರ ಹಲವು ಅನುಮಾನಗಳಿಗೆ ಏಡೆ ಮಾಡಿದೆ. ಪುರಸಭೆ ಅಕ್ರಮ ನಿರ್ಮಾಣದ ಬಗ್ಗೆ ಸಾರ್ವಜನಿಕರಿಗೆ ಅನುಸರಿಸುವ ಕಾನೂನಿನ ಅಡಿಯಲ್ಲಿ ಅಧ್ಯಕ್ಷರು ಬರುವುದಿಲ್ಲವಾ? ಅಥವಾ ಅಧ್ಯಕ್ಷರಿಗೆ ವಿಶೇಷ ಕಾನೂನು ಇದೆಯಾ ಎನ್ನುವುದನ್ನು ಸಾರ್ವಜನಿಕವಾಗಿ ತಿಳಿಸಬೇಕು.

ಅಧ್ಯಕ್ಷರು ಸಾರ್ವಜನಿಕ ಜವಾಬ್ದಾರಿಯುತ ವ್ಯಕ್ತಿಯಾಗಿದ್ದು ಪರವಾನಗೆಯ ಕಡತ ಪುರಸಭೆಯಲ್ಲಿ ಕಾಣೆಯಾಗಿರ ಬಹುದು ಆದರೆ ಅದರ ಪ್ರತಿ ಅಧ್ಯಕ್ಷರ ಬಳಿ ಇರಲೇ ಬೇಕು ಅದನ್ನು ಅಧ್ಯಕ್ಷರು ಸಾರ್ವಜನಿಕವಾಗಿ ಬಹಿರಂಗ ಪಡಿಸಲಿ. ಅಧ್ಯಕ್ಷರು ಅಧಿಕಾರ ಪಡೆದ ದಿನದಿಂದ ತಾನೊಬ್ಬ ನಿರಂಕುಶ ಆಡಳಿತ ನಡೆಸುವವ ಎನ್ನುವ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾನೂನು ಬಾಹಿರವಾಗಿ ಗುತ್ತಿಗೆದಾರರ ಸಭೆ ನಡೆಸುವುದು, ಸದಸ್ಯರು ಅಕ್ರಮ ನಿರ್ಮಾಣದ ಬಗ್ಗೆ ಪ್ರಶ್ನೆ ಕೇಳಿದರೆ ಕುಳಿತು ಮಾತನಾಡುವ ಎನ್ನುವುದು, ಈಗ ಅಧ್ಯಕ್ಷರ ಮನೆ ಮಹಡಿ ನಿರ್ಮಾಣದ ಕಡತ ನಾಪತ್ತೆ ಇದೆಲ್ಲವೂ ಸಹ ಅಧಿಕಾರದ ದುರುಪಯೋಗವಾಗಿದೆ. ಪುರಸಭೆಯ ಮುಖ್ಯಾಧಿಕಾರಿಗಳು ಇದೆಲ್ಲದಕ್ಕೂ ಜವಾಬ್ದಾರರಾಗಿದ್ದು ಅವರು ಸಾರ್ವಜನಿಕವಾಗಿ ಇದಕ್ಕೆ ಉತ್ತರಿಸಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments