ಕಡಲ್ಕೊರೆತ ಪ್ರದೇಶಗಳ ನಿವಾಸಿಗಳಿಗೆ ಪುನರ್ವಸತಿ: ಸಚಿವ ಖಾದರ್ ಸೂಚನೆ
ಮಂಗಳೂರು: ಉಳ್ಳಾಲ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರತೀವರ್ಷ ಕಡಲ್ಕೊರೆತ ಸಮಸ್ಯೆಯಿಂದ ಸಂತ್ರಸ್ತರಾಗುವ ಜನತೆಗೆ ಇದರಿಂದ ಮುಕ್ತಿ ನೀಡಲು ಪರ್ಯಾಯ ನಿವೇಶನ ನೀಡಿ ಪುನರ್ವಸತಿ ಕಲ್ಪಿಸಲು ಆಹಾರ ಸಚಿವ ಯು.ಟಿ. ಖಾದರ್ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಡಲ್ಕೊರೆತ ಸಂಬಂಧ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಪ್ರತೀವರ್ಷ ಕಡಲ್ಕೊರೆತದಿಂದ ತೀರ ಪ್ರದೇಶದ ನಿವಾಸಿಗಳು ಅತಂತ್ರರಾಗಿ ಭಯದಿಂದ ಬದುಕು ಸಾಗಿಸಬೇಕಾಗಿದೆ. ಸಂತ್ರಸ್ತ ಕುಟುಂಬಗಳ ಭವಿಷ್ಯದಲ್ಲಿ ನೆಮ್ಮದಿಯಿಂದ ಬದುಕು ಸಾಗಿಸಲು ಇಲ್ಲಿನ ಸಮುದ್ರ ತೀರ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳಿಗೆ ಬೇರೆ ಇತರ ಕಡೆ ನಿವೇಶನ ಮತ್ತು ಪರಿಹಾರ ನೀಡಿ ಪುನರ್ವಸತಿ ಕಲ್ಪಿಸುವುದು ಅಗತ್ಯವಾಗಿದೆ. ಕುಟುಂಬಗಳ ಮಕ್ಕಳು ಭವಿಷ್ಯದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸಲು ಇದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸಮೀಪದಲ್ಲಿಯೇ ಸೂಕ್ತ ಜಾಗ ಹುಡುಕಿ ತ್ವರಿತವಾಗಿ ಕಾರ್ಯಪ್ರವೃತ್ತರಾಗುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಸಮುದ್ರ ತೀರದಲ್ಲಿ ವಾಸಿಸಿವವರ ಸಂಪೂರ್ಣ ಸಮೀಕ್ಷೆ ನಡೆಸಬೇಕು. ಕಡಲ್ಕೊರೆತದಿಂದ ಹೆಚ್ಚು ಅಪಾಯಕಾರಿ ಪ್ರದೇಶದಲ್ಲಿರುವ ಮನೆಗಳನ್ನು ಮೊದಲ ಹಂತದಲ್ಲಿ ಸ್ಥಳಾಂತರಿಸಬೇಕು. ಪುನರ್ವಸತಿ ಪ್ರದೇಶದಲ್ಲಿ ಲಭ್ಯವಿರುವ ನಿವೇಶನ ಅವಲಂಭಿಸಿ ಸ್ಥಳಾಂತರಿಬೇಕು. ಈ ನಿಟ್ಟಿನಲ್ಲಿ ಸ್ಥಳೀಯರ ಮನವೊಲಿಸಿ ಅವರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ಮಾತನಾಡಿ, ಪುನರ್ವಸತಿ ಪ್ರದೇಶವನ್ನು ಅಬಿವೃದ್ಧಿ ಪಡಿಸಿ, ಎಲ್ಲಾ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುವುದು. ಸ್ಥಳಾಂತಗೊಳ್ಳುವವರಿಗೆ ನಿವೇಶನ ಹಾಗೂ ರೂ. 3.30 ಲಕ್ಷ ಪರಿಹಾರ ನೀಡಲಾಗುವುದು. ಒಂದು ತಿಂಗಳೊಳಗೆ ಪುನರ್ವಸತಿ ಪ್ರದೇಶವನ್ನು ಗುರುತಿಸಲಾಗುವುದು ಎಂದು ಹೇಳಿದರು.
ಮಂಗಳೂರು ಸಹಾಯಕ ಆಯುಕ್ತ ರೇಣುಕಾ ಪ್ರಸಾದ್ ಮಾತನಾಡಿ, ಈಗಾಗಲೇ ಮುನ್ನೂರು ಹಾಗೂ ಕೋಣಾಜೆಯಲ್ಲಿ ಪುನರ್ವಸತಿ ಕಲ್ಪಿಸಲು ಸರಕಾರಿ ಜಾಗ ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ನಿವೇಶನ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಕಡಲ್ಕೊರೆತ ಕಾಮಗಾರಿ: ಉಳ್ಳಾಲ ಹಾಗೂ ಸೋಮೇಶ್ವರ ಸುತ್ತಮುತ್ತ ನಡೆಯುತ್ತಿರುವ ಕಡಲ್ಕೊರೆತ ನಿಯಂತ್ರಣ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು. ಹೆಚ್ಚುವರಿಯಾಗಿ 4 ಬರ್ಮ್ಗಳನ್ನು ನಿರ್ಮಿಸಬೇಕು. ಇದಕ್ಕೆ ರಾಜ್ಯ ಸರಕಾರ ಸೂಕ್ತ ಅನುದಾನ ನೀಡಲಿದೆ. ಬರ್ಮ್ ನಿರ್ಮಿಸಲು ಪಾಯಿಂಟ್ ಗುರುತಿಸುವಾಗ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಲಹೆಯನ್ನೂ ಪಡೆಯಲು ಸಚಿವ ಯು.ಟಿ. ಖಾದರ್ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಬರ್ಮ್ಗಳನ್ನು ಟೆಟ್ರಾಪ್ಯಾಡ್ ಮಾದರಿಯಲ್ಲಿ ನಿರ್ಮಿಸಬೇಕು. ಆಳಸಮುದ್ರದಲ್ಲಿ 300 ಮೀಟರ್ಗೊಂದರಂತೆ ಬರ್ಮ್ ನಿರ್ಮಿಸುವುದು ಅವಶ್ಯವಾಗಿದೆ. ಇದಲ್ಲದೇ, ಕಡಲ್ಕೊರೆತ ನಿಯಂತ್ರಣ ಕಾಮಗಾರಿಗಳನ್ನು ಮೂರನೇ ಪಾರ್ಟಿಯಿಂದ ಮೌಲ್ಯಮಾಪನ ಮಾಡಿಸುವಂತೆ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಕಡಲ್ಕೊರೆತದಿಂದ ಮನೆ ಹಾನಿಗೀಡಾದವರಿಗೆ ಸೂಕ್ತ ಪರಿಹಾರ ನೀಡಬೇಕು. ನಿಯಮವನ್ನು ಮುಂದಿಟ್ಟು ಸಮರ್ಪಕ ಪರಿಹಾರ ನೀಡಲು ಹಿಂದೇಟು ಹಾಕಬಾರದು. ಈಗಾಗಲೇ ಸಂತ್ರಸ್ತರಾದವರಿಗೆ ಕಡಿಮೆ ಪರಿಹಾರ ಮಂಜೂರಾಗಿದಲ್ಲಿ, ಮರು ಸಮೀಕ್ಷೆ ಮಾಡಿ ಹೆಚ್ಚುವರಿ ಪರಿಹಾರ ಮಂಜೂರು ಮಾಡಲು ಸಚಿವರು ತಹಸಿಲ್ದಾರ್ಗೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ತಹಶೀಲ್ದಾರ್ ಮಹದೇವಯ್ಯ, ಉಳ್ಳಾಲ ನಗರಸಭೆ ಅಧ್ಯಕ್ಷ ಕುಂಞಮೋನು ಮತ್ತಿತರರು ಇದ್ದರು.