Home Mangalorean News Kannada News ಕಣ್ಣೀರು ತರಿಸುತ್ತೆ ಪೊಲೀಸರ ನಿತ್ಯ ಜೀವನ! ನಮ್ಮೊಳಗಿನ ಖಾಕಿ ‘ಕೊರೋನಾ ವಾರಿಯರ್ಸ್’ಗೊಂದು ಹ್ಯಾಟ್ಸಫ್

ಕಣ್ಣೀರು ತರಿಸುತ್ತೆ ಪೊಲೀಸರ ನಿತ್ಯ ಜೀವನ! ನಮ್ಮೊಳಗಿನ ಖಾಕಿ ‘ಕೊರೋನಾ ವಾರಿಯರ್ಸ್’ಗೊಂದು ಹ್ಯಾಟ್ಸಫ್

Spread the love

ಕಣ್ಣೀರು ತರಿಸುತ್ತೆ ಪೊಲೀಸರ ನಿತ್ಯ ಜೀವನ! ನಮ್ಮೊಳಗಿನ ಖಾಕಿ ‘ಕೊರೋನಾ ವಾರಿಯರ್ಸ್’ಗೊಂದು ಹ್ಯಾಟ್ಸಫ್

ನಮ್ಮೆಲ್ಲರ ನಾಳೆಗಳು ಚೆನ್ನಾಗಿರಲು ಕೊರೋನಾ ಜಾಗೃತಿಗಾಗಿ ತಮ್ಮ-ತಮ್ಮ ಕುಟುಂಬಗಳಿಂದ ದೂರ ಉಳಿದು ಹಗಲಿರುಳೆನ್ನದೆ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಎಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೂ “ಮ್ಯಾಂಗಲೋರಿಯನ್ ಡಾಟ್ ಕಾಮ್” ಈ ಮೂಲಕ ಧನ್ಯವಾದ ಅರ್ಪಿಸುತ್ತಿದೆ.

ಕೊರೋನಾ ಎಂಬ ಮಹಾಮಾರಿ ವಿಶ್ವಾದ್ಯಂತ ಮರಣ ಮೃದಂಗ ಬಾರಿಸುತ್ತಿದೆ. ವಿಶ್ವದಾದ್ಯಂತ ವೈದ್ಯಕೀಯ ಸಿಬ್ಬಂದಿ, ಪೊಲೀಸರು ಮಾತ್ರ ತಮ್ಮ ಜೀವದ ಹಂಗು ತೊರೆದು ಜನರ ಸೇವೆಗೆ ನಿಂತಿದ್ದಾರೆ. ತಮ್ಮ ಕುಟುಂಬದ ಸದಸ್ಯರನ್ನು ನೋಡದೇ ಪತ್ನಿ, ಮಕ್ಕಳ ಜೊತೆಗೆ ಬೆರೆಯದೆ ಕೊರೋನಾ ವಿರುದ್ದದ ಯುದ್ಧದಲ್ಲಿ ದಿನನಿತ್ಯ ಹೋರಾಟ ನಡೆಸುತ್ತಿದ್ದಾರೆ.

ಹೌದು, ಕಣ್ಣೀಗೆ ಕಾಣದೇ ಇರುವ ಒಂದು ವೈರಸ್ ಇಡೀ ವಿಶ್ವವನ್ನೇ ಬುಡಮೇಲು ಮಾಡುತ್ತಿದೆ. ಇಂತಹ ಮಾರಕ ವೈರಸ್ ವಿರುದ್ದ ಯುದ್ದ ಸಾರಲು ವೈದರಂತೆಯೇ ಪೊಲೀಸರು ಕೂಡ ದಿನ ನಿತ್ಯ ಹೋರಾಟ ನಡೆಸುತ್ತಿದ್ದಾರೆ. ಮನೆ ಮಕ್ಕಳು ಕುಟುಂಬ ತೊರೆದು ಸಾರ್ವಜನಿಕರ ಸೇವೆ ಹಗಲು ಇರುಳು ಶ್ರಮಿಸುತ್ತಿದ್ದಾರೆ. ಅವರೇ ಈ ಕೊರೋನಾ ಯುದ್ದದಲ್ಲಿ ಭಾಗಿಯಾಗಿರುವ ಕೊರೋನಾ ವಾರಿಯರ್ಸ್ ಎಂದರೆ ತಪ್ಪಾಗಲಾರದು.

ದೇಶದಾದ್ಯಂತ ಹರಡುತ್ತಿರುವ ಕೊರೋನಾ ವೈರಸ್ಸನನ್ನು ತಡೆಯಲು ವೈದ್ಯರು ಶ್ರಮಪಡುತ್ತಿರುವಂತೆ ಲಾಕ್ ಡೌನ್ ವೇಳೆ ಜನರು ಅನಗತ್ಯವಾಗಿ ಹೊರಗೆ ಓಡಾಡುವುದನ್ನು ತಪ್ಪಿಸುವ ಮೂಲಕ ಸೋಂಕು ಹರಡದಂತೆ ತಡೆಯಲು ಪೊಲೀಸರೂ ಸಾಕಷ್ಟು ಸೇವೆ ನೀಡುತ್ತಿದ್ದಾರೆ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಿಗೆ ಭದ್ರತೆ ನೀಡುವ ವೇಳೆ, ರಸ್ತೆಯಲ್ಲಿ ಜನರು ಅನಾವಶ್ಯಕವಾಗಿ ತಿರುಗಾಡುವ ವೇಳೆ ತಮ್ಮ ಆರೋಗ್ಯವನ್ನೇ ಪಣಕ್ಕಿಟ್ಟು ಕೆಲಸ ನಿರ್ವಹಿಸಬೇಕಾಗುತ್ತದೆ. ಬೆಳಿಗ್ಗಿನಿಂದ ಸಂಜೆಯ ತನಕ ಕೆಲವೊಮ್ಮೆ ನಡು ರಾತ್ರಿಯ ವರೆಗೆ ಮನೆಯಿಂದ ಹೊರಗಡೆ ಕರ್ತವ್ಯ ನಿರ್ವಹಿಸಿ ವಾಪಾಸಾಗುವಾಗ ಕೋರೋನಾ ವೈರಸ್ ಭಯದಿಂದ ಮನೆಯವರೊಂದಿಗೂ ಸಹ ಬೆರೆಯದೆ ನೋವು ಅನುಭವಿಸಬೇಕಾದ ಪರಿಸ್ಥಿತಿ ಪೊಲೀಸರದ್ದು.

ಕಾನೂನು ಪಾಲನೆ, ನಿರ್ಗತಿಕರಿಗೆ ಊಟ, ಲಾಕ್ ಡೌನ್ ಸಮಯದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಹೀಗೆ ಹತ್ತು ಹಲವು ಕೆಲಸಗಳನ್ನು ಪೊಲೀಸರು ಮಾಡಬೇಕಾಗುತ್ತದೆ. ಜವಾಬ್ದಾರಿಯುತ ಸಾರ್ವಜನಿಕ ಸೇವೆಯಲ್ಲಿರುವ ಎಲ್ಲಾ ಕೆಲಸಗಳನ್ನು ಮಾಡುವುದು ಕರ್ತವ್ಯವಾದರೂ ಮನೆಯಲ್ಲಿ ಕೂಡ ತನ್ನ ಪ್ರೀತಿಪಾತ್ರರಿಂದ ದೂರವಿರುವುದು ಮಾತ್ರ ಮನಸ್ಸಿಗೆ ಹಿಂಸೆಯೇ ಸರಿ.

ವಿವಿಧ ರಾಜ್ಯ, ಜಿಲ್ಲೆಗಳಿಂದ ಬಂದಿರುವವರು ನೇರವಾಗಿ ಕ್ವಾರಂಟೈನ್ಗೆ ಒಳಪಡುವುದುದಿಲ್ಲ. ಆಶಾ ಕಾರ್ಯಕರ್ತರ ಮೂಲಕ ಮಾಹಿತಿ ಕಲೆ ಹಾಕುವ ಆರೋಗ್ಯ ಇಲಾಖೆ ಅವರನ್ನು ಕ್ವಾರೆಂಟೈನ್ಗೆ ಒಳಪಡಿಸಲು ಪೊಲೀಸರ ಸಹಾಯ ಕೇಳುತ್ತಾರೆ. ಹೀಗೆ ಕೆಲವರು ಕ್ವಾರೆಂಟೈನ್ಗೆ ಒಳಪಡಲು ಒಪ್ಪದಿದ್ದಾಗ ಪೊಲೀಸರು ಅನಿವಾರ್ಯವಾಗಿ ಕೈಹಿಡಿದು ಕರೆದೊಂಡಾದರೂ ಬರಲೇಬೇಕಾಗುತ್ತದೆ. ಚೆಕ್ಪೋಸ್ಟ್ಗಳಲ್ಲಿ ವಾಹನ ತಪಾಸಣೆ, ವಲಸೆ ಕಾರ್ಮಿಕ ಪುನರ್ವಸತಿ ಕೇಂದ್ರ ಹೀಗೆ ಎಲ್ಲಾ ಕಡೆಗಳಲ್ಲೂ ಪೊಲೀಸರು ತಮ್ಮ ಕರ್ತವ್ಯಗಳನ್ನು ಚಾಚುತಪ್ಪದೆ ಪಾಲಿಸುತ್ತಾರೆ. ಸರ್ಕಾರಿ ಅಧಿಕಾರಿಗಳು ದಿನವಡೀ ಸೇವೆಯಲ್ಲಿದ್ದರೆ, ಪೊಲೀಸರು ಹಗಲು-ರಾತ್ರಿಯೆನ್ನದೇ ದಿನದ ಇಪ್ಪತ್ತನಾಲ್ಕು ಗಂಟೆಯೂ ಕರ್ತವ್ಯದಲ್ಲಿತ್ತಾರೆ. ಈತನ್ಮದ್ಯೆ ಅವರ ಮನೆಯವರ ಜೊತೆ ಕಾಲ ಕಳೆಯಲಾಗದೆ ಮನೆಯವರಿಂದ ದೂರ ಉಳಿಯುವ ಪೊಲೀಸರ ವೈಯಕ್ತಿಕ ಬದುಕು ಕಣ್ಣೀರು ತರುತ್ತದೆ.

ಕೊರೋನಾ ಲಾಕ್ ಡೌನ್ ಬಳಿಕ ನಾನು 24 ಗಂಟೆಯೂ ಸೇವೆಗೆ ಲಭ್ಯವಿದ್ದು, ಪ್ರತಿದಿನ ಹಲವಾರು ಸಭೆಗಳಿಗೆ ಭಾಗವಹಿಸಬೇಕಾದ ಅನಿವಾರ್ಯತೆ ಇದೆ. ಸಂಜೆ ಮತ್ತು ಮಧ್ಯಾಹ್ನ ಮನೆಗೆ ತೆರಳುವಾಗ ನನ್ನ 6 ವರ್ಷದ ಮಗಳು ಮತ್ಗು 4 ವರ್ಷದ ಮಗ ನನ್ನನ್ನು ಅಪ್ಪಿಕೊಳ್ಳಲು ಬಂದಾಗ ಪತ್ನಿಯೇ ಅವರನ್ನು ತಡೆಯುತ್ತಾಳೆ. ಮನೆಗೆ ತೆರಳಿದ ಬಳಿಕ ಮೊದಲು ನನ್ನ ಮೊಬೈಲ್ ಸಂಪೂರ್ಣ ಸ್ಯಾನಿಟೈಜ್ ಮಾಡಿದ ಮೊದಲು ಸ್ನಾನವಾಗಿ ಮನೆಯ ಒಳಗೆ ಬರುವುದನ್ನು ರೂಢಿ ಮಾಡಿಕೊಂಡು ಬಂದಿರುತ್ತೇನೆ. ಅಲ್ಲದೆ ಮಕ್ಕಳೊಂದಿಗೆ ಕೊರೋನಾ ಭಯದಿಂದ ಅಂತರವನ್ನು ಕಾಪಾಡಿಕೊಂಡು ಬರುತ್ತಿದ್ದೇನೆ ಇದು ನನಗೆ ನೋವು ತರುತ್ತದೆಯಾದರೂ ಇಂತಹ ಸಂದಿಗ್ದ ಸ್ಥಿತಿಯಲ್ಲಿ ಅನಿವಾರ್ಯ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್.

ಕೊರೋನಾ ಜಾಗೃತಿಗಾಗಿ ಲಾಕ್ಡೌನ್ ಆರಂಭವಾದ ದಿನದಿಂದಲೂ ಹನ್ನೊಂದು ತಿಂಗಳ ನನ್ನ ಪುಟ್ಟ ಮಗುವಿನೊಂದಿಗೆ ಸರಿಯಾಗಿ ಸಮಯ ಕಳೆದಿಲ್ಲ. ಡ್ಯೂಟಿ ಮುಗಿಸಿ ಮನೆಗೆ ಹೋದಾಗ ಅಂಬೆಗಾಲಿಟ್ಟು ನಗುತ್ತಾ ನನ್ನ ಬಳಿ ಬರುವ ಅವನನ್ನು ಎತ್ತಿಕೊಂಡು ಮುದ್ದಾಡಿಸಲು ಸಾಧ್ಯವಾಗದ ಸಂದಿಗ್ಧ ಪರಿಸ್ಥಿತಿ ನನ್ನದು. ಈ ನಡುವೆ ಕರ್ತವ್ಯ ಮುಗಿಸಿ ಮನೆಗೆ ಹೋಗೋದಕ್ಕೆ ನಿಜವಾಗಿಯೂ ಭಯ ಇದೆ. ಮಗ ಹುಟ್ಟಿದ ದಿನದಿಂದಲೂ ಆತನೊಂದಿಗೆ ಹೆಚ್ಚು ಕಾಲ ಕಳೆದಿಲ್ಲ. ಮಗನೊಂದಿಗೆ ಹೆಚ್ಚಿನ ಸಮಯ ಕಳೆಯಬೇಕೆಂದು ಮಗು ಹಾಗೂ ಪತ್ನಿಯನ್ನು ಊರಿನಿಂದ ಎರಡು ತಿಂಗಳ ಹಿಂದೆ ಕರೆದುಕೊಂಡು ಬಂದಿದ್ದೇನೆ. ಇದೀಗ ಮಗು ನನ್ನ ಬಳಿಯಿದ್ದರೂ ಆತನನ್ನು ಮುದ್ದಾಡಿಸಲು ಸಾಧ್ಯವಾಗುತ್ತಿಲ್ಲ. ಅವನು ಹತ್ತಿರ ಬಂದಾಗಲೆಲ್ಲಾ ಒಲ್ಲದ ಮನಸ್ಸಿನಿಂದಲೇ ಪತ್ನಿಯನ್ನು ಕರೆದು ಅವನನ್ನು ಕರೆದುಕೊಂಡು ಹೋಗುವಂತೆ ಹೇಳುತ್ತೇನೆ. ದೂರದಲ್ಲೇ ನಿಂತು ಅವನು ಆಟವಾಡುವುದನ್ನು ನೋಡಿ ಕರ್ತವ್ಯಕ್ಕೆ ತೆರಳುತ್ತೇನೆ ಎನ್ನುತ್ತಾರೆ ಕುಂದಾಪುರ ನಗರ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್.

ದಿನದ 24 ಗಂಟೆಯೂ ಪೋಲಿಸ್ ಕರ್ತವ್ಯದ ಮೇರೆಗೆ ಹಲವಾರು ಮಂದಿಯನ್ನು ಭೇಟಿಯಾಗಬೇಕಾದ ಪರಿಸ್ಥಿತಿ ನಮ್ಮದು. ಆದ್ದರಿಂದ ಮನೆಯಲ್ಲಿ ಕುಟುಂಬಿಕರೊಂದಿಗೆ ಅಂತರ ಕಾಯಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ತನ್ನ ಇಬ್ಬರು ಪುಟ್ಟ ಮಕ್ಕಳು ಹಾಗೂ ಪತ್ನಿಯನ್ನು ಊರಿಗೆ ಕಳುಹಿಸಿದ್ದು, ತನ್ನ ಪ್ರೀತಿ ಪಾತ್ರರ ನೆನಪಿನಲ್ಲಿಯೇ ಡ್ಯೂಟಿ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಮ್ಮದು ಕೋರೊನಾ ಒಂದು ಮಹಾಮಾರಿಯಾಗಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿ. ಆದ್ದರಿಂದ ಯಾರೂ ಕೂಡ ಅನಾವಶ್ಯಕ ಮನೆಯಿಂದ ಹೊರಬಾರದಿರಿ ಎನ್ನುವುದು ಬ್ರಹ್ಮಾವರ ಪಿಎಸ್ ಐ ರಾಘವೇಂದ್ರ ಅವರ ಕಳಕಳಿಯ ಮನವಿ.

ಡ್ಯೂಟಿ ಮುಗಿಸಿ ಮನೆಗೆ ಹೋದ ಕೂಡಲೇ ಮೊದಲು ಸ್ನಾನ ಮಾಡಿ ಬಳಿಕ ಮನೆಯೊಳಗೆ ಹೋಗುವುದನ್ನು ರೂಢಿ ಮಾಡಿಕೊಂಡಿದ್ದೇನೆ ಎನ್ನುತ್ತಾರೆ 5 ಮಂದಿ ಸದಸ್ಯರನ್ನೊಳಗೊಂಡ ಕಂಡ್ಲೂರು ಪಿಎಸ್ ಐ ರಾಜ್ ಕುಮಾರ್.

ದೇಶದ ಜನತೆಯನ್ನು ಮನೆಯಿಂದ ಹೊರಬಾರದಂತೆ ವಿನಂತಿಸಿ ತಮ್ಮ ಜೀವದ ಹಂಗು ತೊರೆದು ಜನರ ಸೇವೆಗೆ ನಿಂತಿರುವ ಪೊಲೀಸರು, ವೈದ್ಯರು ಸೇರಿದಂತೆ ಕೊರೊನಾ ವಿರುದ್ದ ಹೋರಾಟ ನಡೆಸುತ್ತಿರುವ ಪ್ರತಿಯೊಬ್ಬ ಕೊರೋನಾ ವಾರಿಯರ್ಸ್ ಗೆ ನಾವು ಸೆಲ್ಯೂಟ್ ಹೇಳಲೇ ಬೇಕು. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 14ರಂದು ದೇಶಕ್ಕೆ ನೀಡಿದ ತನ್ನ ಸಂದೇಶದಲ್ಲಿ ಕೂಡ ಇನ್ನೂ ಮುಂದಿನ ಮೂರು ವಾರ ನಮ್ಮ ಎದುರು ಮತ್ತಷ್ಟು ಕಠಿಣ ಸವಾಲುಗಳಿವೆ. ಈ ಅವಧಿಯಲ್ಲಿ ಹೊಸ ಹಾಟ್ ಸ್ಪಾಟ್ ಉದ್ಭವವಾಗದಂತೆ ನಾವು ನೋಡಿಕೊಳ್ಳಬೇಕು. ಸಾಮಾಜಿಕ ಅಂತರವನ್ನು ಮತ್ತಷ್ಟು ಕಟ್ಟುನಿಟ್ಟಿನಿಂದ ಪಾಲಿಸಬೇಕು. ನಮಗಾಗಿ ಸಹಾಯ ಮಾಡುತ್ತಿರುವ ವೈದ್ಯರು, ಪೊಲೀಸರು, ಪೌರ ಕಾರ್ಮಿಕರನ್ನು ನಾವು ನೆನೆಯಬೇಕು” ಎಂದು ತಿಳಿಸಿದ್ದಾರೆ.

ಪ್ರತಿಯೊಬ್ಬ ಪೊಲೀಸ್ ಕೂಡ ಕೊರೋನಾ ವೈರಸ್ ಭಯದಿಂದ ತನ್ನ ಮನೆಯವರೊಂದಿಗೆ ಸಾಮಾಜಿಕ ಅಂತರ ಕಾಯ್ದಕೊಂಡು ಬದುಕುತ್ತಿದ್ದು ಇವರು ನಿಸ್ವಾರ್ಥ ಸೇವೆ ಜನರ ಸಹಕಾರ ಕೂಡ ಅಗತ್ಯವಿದೆ. ಜನರು ಈ ನಿಟ್ಟಿನಲ್ಲಿ ಪೊಲೀಸರೊಂದಿಗೆ ಸಂಯಮದಿಂದ ವರ್ತಿಸಿ ಅಲ್ಲೊಂದು ಇಲ್ಲೊಂದು ನಡೆದ ಪೊಲೀಸರ ಅತೀರೇಕದ ವರ್ತನೆಯನ್ನೇ ದೊಡ್ಡದಾಗಿಸದೆ ಪೊಲೀಸರಿಗೂ ಕೂಡ ಒಂದು ಕುಟುಂಬವಿದೆ ಅವರೂ ಕೂಡ ನಮ್ಮಂತೆಯೇ ಮನುಷ್ಯರು ಎಂದು ಅರ್ಥ ಮಾಡಿಕೊಂಡು ಅವರ ಸೇವೆಗೆ ಸೂಕ್ತ ಸಹಕಾರ ನೀಡಬೇಕಾಗಿದೆ


Spread the love

Exit mobile version