ಕದ್ರಿ ಪಾರ್ಕ್‍ನಲ್ಲಿ 2 ದಿನಗಳ ಯುವ ಉತ್ಸವ-2018

Spread the love

ಕದ್ರಿ ಪಾರ್ಕ್‍ನಲ್ಲಿ 2 ದಿನಗಳ ಯುವ ಉತ್ಸವ-2018

ಮಂಗಳೂರು : ಕರಾವಳಿ ಉತ್ಸವ-2018ರ ಅಂಗವಾಗಿ 2 ದಿನಗಳ ಕರಾವಳಿ ಯುವ ಉತ್ಸವವು ಡಿಸೆಂಬರ್ 27 ಮತ್ತು 28 ರಂದು ಕದ್ರಿ ಪಾರ್ಕ್‍ನ ತೆರೆದ ರಂಗಮಂದಿರದಲ್ಲಿ ನಡೆಯಲಿದೆ.

ಡಿಸೆಂಬರ್ 27 ರಂದು ಕರಾವಳಿ ಯುವ ಉತ್ಸವದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಡಿ. ವಹಿಸಲಿದ್ದಾರೆ. ಅತಿಥಿಗಳಾಗಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಅಪರ ಜಿಲ್ಲಾಧಿಕಾರಿ ಕುಮಾರ್, ಒಲಿಂಪಿಕ್ ಕ್ರೀಡಾಪಟು ಸಹನಾ ಕುಮಾರಿ, ಖ್ಯಾತ ಕಾಮಿಡಿ ಕಿಲಾಡಿ ಕಲಾವಿದರು ಸೂರಜ್ ಪಾಂಡೇಶ್ವರ, ಮತ್ತು ಮಿಸೆಸ್ ಮಂಗಳೂರು – 2018 ಸುಧೀಕ್ಷಾ ಕಿರಣ್ ಸುವರ್ಣ ಇವರು ಭಾಗವಹಿಸಲಿದ್ದಾರೆ.

ಕರಾವಳಿ ಯುವ ಉತ್ಸವ 2018ರ ಅಂಗವಾಗಿ ದ.ಕ. ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ಪರ್ಧೆಯ ಆಡಿಶನ್‍ನಲ್ಲಿ ಆಯ್ಕೆಗೊಂಡ ವೈಯಕ್ತಿಕ ಮತ್ತು ಸಮೂಹ ಸ್ಪರ್ಧೆಗಳ ಅಂತಿಮ ಸುತ್ತಿನ ಸ್ಪರ್ಧೆಗಳು ನಡೆಯಲಿವೆ.

ಡಿಸೆಂಬರ್ 27 ರಂದು ನೃತ್ಯ, ಏಕಪಾತ್ರಾಭಿನಯ, ವಾದ್ಯ ಸಂಗೀತ, ಯಕ್ಷ ಯುಗಳ ನೃತ್ಯ ಸ್ಪರ್ಧೆಗಳು ನಡೆಯುತ್ತದೆ ಹಾಗೂ ಡಿಸೆಂಬರ್ 28 ರಂದು ಲಘು ಸಂಗೀತ, ಶಾಸ್ತ್ರೀಯ ಸಂಗೀತ, ಮೂಕಾಭಿನಯ, ಕಿರುನಾಟಕ, ಜಾನಪದ ನೃತ್ಯ ಹಾಗೂ ಸಾಂಪ್ರದಾಯಿಕ ಉಡುಗೆ ತೊಡುಗೆ ಸ್ಪರ್ಧೆಗಳು ನಡೆಯುತ್ತವೆ.

ಕರಾವಳಿ ಯುವ ಉತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮವು ಡಿಸೆಂಬರ್ 28 ರಂದು ರಾತ್ರಿ 9 ಗಂಟೆಗೆ ನಡೆಯಲಿದ್ದು ಅಧ್ಯಕ್ಷತೆಯನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ವೈ.ಭರತ್ ಶೆಟ್ಟಿ ಇವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಸೆಲ್ವಮಣಿ ಆರ್, ಅಇಔ ದ.ಕ.ಜಿಲ್ಲಾ ಪಂಚಾಯತ್, ಡಾ.ಅಪ್ಪಾಜಿ ಗೌಡ, ಜಂಟಿ ನಿರ್ದೇಶಕರು ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಕಚೇರಿ ಮಂಗಳೂರು ಇವರ ಸಮ್ಮುಖದಲ್ಲಿ ನಡೆಯಲಿದೆ.

ಸ್ಪರ್ಧೆಯಲ್ಲಿ ಅತ್ಯುತ್ತಮ ಕರಾವಳಿ ಕಾಲೇಜು, ಪ್ರಥಮ, ದ್ವಿತೀಯ, ತೃತೀಯ, ಹಾಗೂ ಅತ್ಯುತ್ತಮ ಕರಾವಳಿ ಯುವಕ ಮತ್ತು ಯುವತಿಯರನ್ನು ಆಯ್ಕೆ ಮಾಡಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿಜೇತರಿಗೆ ಮತ್ತು ತಂಡಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು.

ಯುವ ಉತ್ಸವನ್ನು ನಿರ್ವಹಿಸಲು ಡಾ. ಪಿ.ದಯಾನಂದ ಪೈ-ಪಿ.ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ ನೋಡಲ್ ಕಾಲೇಜಾಗಿದ್ದು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪ್ರೊ.ಶೇಷಪ್ಪ ಹಾಗೂ ಸಹ ಪ್ರಾಧ್ಯಾಪಕರಾದ ಡಾ.ಕೃಷ್ಣಪ್ರಭ ಎಂ. ಇವರು ಸಂಚಾಲಕರಾಗಿರುತ್ತಾರೆ.

ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ಕರಾವಳಿ ಉತ್ಸವ ಸಮಿತಿಯ ಅಧ್ಯಕ್ಷರಾದ ಪ್ರಮಿಳಾ ಎಂ.ಕೆ. ಸಹಾಯಕ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಹಾಗೂ ಕಾರ್ಯಾಧ್ಯಕ್ಷರಾದ ರಥಬೀದಿ ಕಾಲೇಜಿನ ಪ್ರಾಂಶುಪಾಲರದ ಪ್ರೊ. ರಾಜಶೇಖರ ಹೆಬ್ಬಾರ್ ಸಿ. ಇವರು ನೀಡಲಿದ್ದಾರೆ ಎಂದು ಕರಾವಳಿ ಯುವ ಉತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.


Spread the love