ಕನ್ನಡದ ಚಿಂತನೆಗೆ ಭೇದಭಾವ ಬೇಡ – ಪಿ.ವಿ. ಮೋಹನ್
ಮಂಗಳೂರು: ಕನ್ನಡ ಪರ ಚಿಂತನೆಯಲ್ಲಿ ತೊಡಗಿಸಿಕೊಳ್ಳಲು ಯಾವುದೇ ರೀತಿಯ ಭೇದಭಾವದ ಅಗತ್ಯವಿಲ್ಲ, ಎಲ್ಲಾ ಧರ್ಮದ ಎಲ್ಲಾ ಜಾತಿಯವರಿಗೂ ಈ ಬಗ್ಗೆ ಸಮಾನ ಅವಕಾಶ ಲಭ್ಯವಾಗಬೇಕಿದ್ದು, ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಂಗಳೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಪಿ.ವಿ. ಮೋಹನ್ ಆಗ್ರಹಿಸಿದ್ದಾರೆ. ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಂಜುನಾಥ್ ಎಜುಕೇಷನ್ ಟ್ರಸ್ಟ್ ಆಯೋಜಿಸಿದ್ದ ಕನ್ನಡ ಚಿಂತನ ಮಾಲಿಕೆ ಮತ್ತು ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಹೃದಯವಾಹಿನಿ-ಕರ್ನಾಟಕ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ “ಕರಾವಳಿ ಕರ್ನಾಟಕದಲ್ಲಿ ಕನ್ನಡ ಪರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಹಾಗಾಗಿ ಕರಾವಳಿಯ ಕನ್ನಡಿಗರ ಭಾಷಾಭಿಮಾನ ಪ್ರಶ್ನಾತೀತವಾಗಿದೆ” ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕ ಡಿ.ಡಿ.ಕಟ್ಟೆಮಾರ್‍ರವರನ್ನು ಗೌರವಿಸಿ ಸನ್ಮಾನಿಸಲಾಯಿತು. ಗೌರವ ಪುರಸ್ಕಾರಕ್ಕೆ ಸ್ಪಂದಿಸಿ ಮಾತನಾಡಿದ ಅವರು “ಇಂದು ವಿದ್ಯಾವಂತರ ಸಂಖ್ಯೆ ಹೆಚ್ಚಾಗಿರುವುದರಿಂದ ಸಮಾಜದಲ್ಲಿ ಪ್ರತಿಯೊಬ್ಬರು ಗೌರವ ಮತ್ತು ಘನತೆಯಿಂದ ಜೀವನ ನಡೆಸಬಹುದಾಗಿದೆ” ಎಂದರು. ಕಲ್ಲಚ್ಚು ಪ್ರಕಾಶನದ ಸಾಹಿತಿ ಮಹೇಶ್ ಆರ್. ನಾಯಕ್‍ರವರ ಅಧ್ಯಕ್ಷತೆಯಲ್ಲಿ ಇಜಾಕ್ ಡಿ’ಸೋಜ, ಬದ್ರುದ್ದೀನ್, ಚಂದ್ರಶೇಖರ್ ಬೋಳೂರು, ಪ್ರಿಯಾ ಹರೀಶ್, ಕು. ಶೃತಿ ಮತ್ತು ಕು. ಇಂದಿರಾ ಕವಿ-ಕವಯತ್ರಿಯವರಿಂದ ದೀಪಾವಳಿ ಕವಿಗೋಷ್ಠಿ ನಡೆಯಿತು. ಹಾಗೂ ಸರ್ಕಾರಿ ಮಹಿಳಾ ಐಟಿಐ ವಿದ್ಯಾರ್ಥಿನಿಯರ ‘ಗೆಳತಿಯರು ಮಂಗಳೂರು’ ತಂಡದಿಂದ ಕನ್ನಡ ಗೀತ ಗಾಯನ ಏರ್ಪಡಿಸಲಾಗಿತ್ತು. ಐಟಿಐ ಪ್ರಾಂಶುಪಾಲರು, ಎ. ಬಾಲಕೃಷ್ಣರವರು ಉಪಸ್ಥಿತರಿದ್ದರು. ಶಿವಕುಮಾರ್ ಧನ್ಯವಾದ ಸಮರ್ಪಿಸಿದರು.