Home Mangalorean News Kannada News ಕನ್ನಡದ ಶಾಸ್ತ್ರೀಯ ನೃತ್ಯ ಗುರುಗಳು ತಮಿಳಿನ ಬದಲು ಕನ್ನಡಕ್ಕೇ ಆದ್ಯತೆ ಕೊಡಬೇಕು – ವಸಂತ ಶೆಟ್ಟಿ...

ಕನ್ನಡದ ಶಾಸ್ತ್ರೀಯ ನೃತ್ಯ ಗುರುಗಳು ತಮಿಳಿನ ಬದಲು ಕನ್ನಡಕ್ಕೇ ಆದ್ಯತೆ ಕೊಡಬೇಕು – ವಸಂತ ಶೆಟ್ಟಿ ಬೆಳ್ಳಾರೆ

Spread the love

ಕನ್ನಡದ ಶಾಸ್ತ್ರೀಯ ನೃತ್ಯ ಗುರುಗಳು ತಮಿಳಿನ ಬದಲು ಕನ್ನಡಕ್ಕೇ ಆದ್ಯತೆ ಕೊಡಬೇಕು – ವಸಂತ ಶೆಟ್ಟಿ ಬೆಳ್ಳಾರೆ

ದೆಹಲಿ ಕರ್ನಾಟಕ ಸಂಘವು ರಾಜಧಾನಿ ದೆಹಲಿಯಲ್ಲಿ ಸಂಘದ ಸದಸ್ಯರಿಂದ ಪ್ರಪ್ರಥಮ ಬಾರಿಗೆ ಒಂದು ದಿನದ ಭಾರತೀಯ ಶಾಸ್ತ್ರೀಯ ನೃತ್ಯ ಸಂಗಮ ಕಾರ್ಯಕ್ರಮವನ್ನುಕನ್ನಡದಲ್ಲೇ ಆಯೋಜಿಸಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಅಧ್ಯಕ್ಷ  ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಅವರು ಬೆಂಗಳೂರು ಮತ್ತು ಕರ್ನಾಟಕದ ಇತರೆಡೆ ಶಾಸ್ತ್ರೀಯ ನೃತ್ಯಗಳಿಗೆ ಕನ್ನಡಿಗ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.ಶಾಸ್ತ್ರೀಯ ನೃತ್ಯಗಳನ್ನು ಕಲಿಸಿಕೊಡುವ ಕನ್ನಡದ ಬಹುತೇಕ ನೃತ್ಯ ಗುರುಗಳು ತಮಿಳು ಹಾಡುಗಳಿಗೆ ನೃತ್ಯ ಕಲಿಸಿಕೊಟ್ಟು ಬೆಂಗಳೂರು ಮತ್ತಿತರ ಕರ್ನಾಟಕದ ನಗರ ಪ್ರದೇಶಗಳು ತಮಿಳು ಮಯವಾಗುವುದಕ್ಕೆ ಕಾರಣವಾಗುತ್ತಿದ್ದಾರೆ ಎಂದರು. ಕನ್ನಡದ ಹಾಗೇ ತಮಿಳು ಕೂಡಾ ಒಂದು ಶ್ರೀಮಂತ ಭಾಷೆ. ಅದನ್ನು ನಾವು ಗೌರವಿಸಬೇಕು, ಆದರೆ ಮೊದಲ ಆದ್ಯತೆ ಕನ್ನಡದಕಡೆಗಿರಬೇಕು ಎಂದರು.

ಕರ್ನಾಟಕ ಸರ್ಕಾರದ ಸಂಸ್ಕøತಿ ಇಲಾಖೆ, ವಾರ್ತಾ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳು ಶಾಸ್ತ್ರೀಯ ನೃತ್ಯ ಕಾರ್ಯಕ್ರಮಗಳನ್ನು ಪ್ರಾಯೋಜಿಸುವಾಗ ನೃತ್ಯಗಾರ್ತಿ ಮತ್ತು ಸಹ ಕಲಾವಿದರು ಕನ್ನಡಿಗರೇ ಆಗಿರಬೇಕೆಂಬ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೆ ಮಾಡಬೇಕೆಂದು ಕರೆಯಿತ್ತರು. ಕನ್ನಡದಲ್ಲೇ ಶಾಸ್ತ್ರೀಯ ನೃತ್ಯವನ್ನು ಮಾಡಿದರೆ ಕರ್ನಾಟಕದಲ್ಲಿ ಕನ್ನಡದ ಪ್ರೇಕ್ಷಕರ ಸಂಖ್ಯೆ ಬೆಳೆಯುವುದಕ್ಕೆ ಸಹಕಾರಿಯಾದೀತು ಎಂದರು. ನಾವು ಕೇವಲ ಕನ್ನಡದ ಹಾಡುಗಳಿಗೆ ಕಲಿಸಿಕೊಡುವ ನೃತ್ಯ ಗುರುಗಳನ್ನು ಆಯ್ಕೆಮಾಡದಿದ್ದರೆ ಮುಂದಿನ ದಿನಗಳಲ್ಲಿ ಕನ್ನಡವನ್ನು ಉಳಿಸಿಕೊಂಡು ಹೋಗುವಲ್ಲಿ ಕಷ್ಟವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಭರತ ನಾಟ್ಯಕಲಾವಿದೆ ಹಾಗೂ ನಾಟ್ಯಗುರು ಶ್ರೀಮತಿ ಮಮತಾ ಕಾರಂತ ಅವರು ಶಾಸ್ತ್ರೀಯ ನೃತ್ಯಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು ಎನ್ನುವುದಕ್ಕೆ ಧ್ವನಿ ಗೂಡಿಸಿದರು.

ಭರತನಾಟ್ಯ, ಕಥಕ್, ಒಡಿಸ್ಸಿ ಕೂಚುಪುಡಿ ಪ್ರಕಾರದ ನೃತ್ಯಗಳನ್ನು ದೆಹಲಿ ಕಲಾವಿದರುಗಳಾದ ಕುಮಾರಿ ಸಪ್ನಾ ಅತ್ತಾವರ, ಕುಮಾರಿ ರಚನಾಜೆ. ಕುಮಾರಿ ರಮ್ಯ, ಕುಮಾರಿ ನವನೀಶ ರಾಜೇಶ್, ಕುಮಾರಿ ಮೇಘಾ ಕಿಣಿ, ಕುಮಾರಿ ಸರಯು ಗಿರೀಶ್, ಕುಮಾರಿ ಕೆ.ಎನ್. ಭಾಗ್ಯಶ್ರೀ ಮತ್ತು ಕುಮಾರಿ ಕೆ.ಎನ್.ಜಯಶ್ರೀ, ಕುಮಾರಿ ಶ್ರುತಿ ಪ್ರಭಾಕರ್, ಕುಮಾರಿ ಪ್ರೇರಣಾರಾವ್, ಕುಮಾರಿ ನಿಖಿತಾ ಹೆಗಡೆ, ಕುಮಾರಿ ಇಷಿಕಾ ಸುದೇಶ್, ಕುಮಾರಿ ಭುವನೇಶ್ವರಿ ಶೆಣೈ, ಪವಿತ್ರಾಕಿರಣ್, ಆರ್ಷಾ ಗೋಪಿನಾಥ್‍ ಅವರುಗಳು ಪ್ರೇಕ್ಷಕರ ಮನಸೆಳೆದರು. ಈ ರೀತಿಯ ಕಾರ್ಯಕ್ರಮವನ್ನು ದೆಹಲಿ ಕರ್ನಾಟಕ ಸಂಘದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಮಮತಾ ಕಾರಂತ ಅವರು ಪ್ರದರ್ಶಿಸಿದ ಭರತ ನಾಟ್ಯ ಎಲ್ಲರ ಮೆಚ್ಚುಗೆ ಗಳಿಸಿತು.

ಕಲಾವಿದೆ ಮಮತಾ ಕಾರಂತ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮವನ್ನು ಕಾರ್ಯಕಾರಿ ಸಮಿತಿಯ ಸದಸ್ಯೆ ಪೂಜಾ ಪಿ.ರಾವ್‍ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು ಮತ್ತು ಕಾರ್ಯದರ್ಶಿ ಸಿ.ಎಂ.ನಾಗರಾಜ ಅವರು ವಂದಿಸಿದರು.


Spread the love

Exit mobile version