ಕನ್ನಡಿಗರ ಪ್ರತ್ಯೇಕತೆಯನ್ನು ನಾವು ಉಳಿಸಿಕೊಳ್ಳಬೇಕಾಗಿದೆ-ಡಾ. ವೀರೇಂದ್ರ ಹೆಗ್ಗಡೆ

Spread the love

ಕನ್ನಡಿಗರ ಪ್ರತ್ಯೇಕತೆಯನ್ನು ನಾವು ಉಳಿಸಿಕೊಳ್ಳಬೇಕಾಗಿದೆ-ಡಾ. ವೀರೇಂದ್ರ ಹೆಗ್ಗಡೆ

ದೆಹಲಿ: ಕನ್ನಡ ಭಾಷೆ ಮತ್ತೆ ನಾಡಿಗೆ ನಮ್ಮ ದೇಶದಲ್ಲಿ ವಿಶಿಷ್ಟವಾದಂತಹ ಒಂದು ಸ್ಥಾನಮಾನ ಇದೆ. ಕನ್ನಡಿಗರು ಯಾವಾಗಲೂ ಶಾಂತಿಪ್ರಿಯರು, ಸಹಜೀವಿಗಳು ಮತ್ತು ಇತರರೊಂದಿಗೆ ಸ್ನೇಹಪೂರ್ಣವಾಗಿ ಇರುವಂತಹವರು. ಇಂತಹ ಕನ್ನಡಿಗರ ಸಂಸ್ಕøತಿ, ಸೌಜನ್ಯ ಮತ್ತು ವಿಶೇಷತೆಗಳನ್ನು ನಾವು ಉಳಿಸಿಕೊಳ್ಳಬೇಕಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮದರ್ಶಿ ಡಾ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.

delhi-karnataka-veerendra-hegde

ಅವರು ದೆಹಲಿ ಕರ್ನಾಟಕ ಸಂಘದಲ್ಲಿ ಪರಸ್ಪರ ಕಾರ್ಯಕ್ರಮದಲ್ಲಿ ಇದೇ ಆಗಸ್ಟ್ 31ರಂದು ಸಭಿಕರನ್ನು ಉದ್ದೇಶಿಸಿ ಮಾತಾಡುತ್ತಿದ್ದರು. ಕನ್ನಡಿಗರ ಪ್ರತ್ಯೇಕತೆಯನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ನಾವು ಪ್ರತ್ಯೇಕತೆಯನ್ನು ಉಳಿಸಿಕೊಳ್ಳಲು ಸ್ನೇಹಪರರಾಗಿ ಇತರರ ಜೊತೆ ಹೊಂದಿಕೊಂಡು ಹೋಗುತ್ತೇವೆ. ನಮ್ಮಲ್ಲಿ ಯಾವುದೇ ಕಾರಣಕ್ಕೆ ಹಿಂದುಳಿದವರು, ಹೇಡಿಗಳು ಎಂಬ ಕೀಳರಿಮೆ ಎಂಬ ಭಾವನೆ ಇಲ್ಲ. ಅರ್ಹತೆ, ಯೋಗ್ಯತೆ ಮತ್ತು ಹಿರಿಮೆಯ ನಮ್ಮ ವ್ಯಕ್ತಿತ್ವದಿಂದ ನಾವು ಇತರರಿಗಿಂತ ಮುಂದೆ ಎನ್ನುವ ಭಾವನೆಯನ್ನು ತೋರಿಸುತ್ತೇವೆ. ಹಾಗಾಗಿ ಕನ್ನಡಿಗರು ಯಾವುದೇ ರಾಜ್ಯಕ್ಕೆ ಹೋದರೂ ತಮ್ಮ ವಿಶೇಷ ವ್ಯಕ್ತಿತ್ವದಿಂದ ತಮ್ಮ ಅನನ್ಯತೆಯನ್ನು ತೋರಿಸಿಕೊಳ್ಳುತ್ತಾರೆ ಎಂದು ಅವರು ವಿವರಿಸಿದರು.

ಕರ್ನಾಟಕ ಇವತ್ತು ಇಡೀ ವಿಶ್ವದ ಆಕರ್ಷಣೆಯ ಕೇಂದ್ರ ಆಗಿದೆ. ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಗಳು ನೆಲೆ ನಿಂತುದರಿಂದ ಅದು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಹೆಸರುವಾಸಿಯಾಗಿದೆ. ಉತ್ತರಭಾರತೀಯರು ಬೆಂಗಳೂರಿಗೆ ಬರುವ ಮಾತಾಡುತ್ತಾರೆ. ಚೀನಾ ದೇಶದ ಅಧ್ಯಕ್ಷರೂ ಭಾರತಕ್ಕೆ ಭೇಟಿ ನೀಡಿದಾಗ ಬೆಂಗಳೂರಿಗೇ ಮೊದಲು ಬಂದಿಳಿದಿರುವುದು ಕೂಡಾ ಗಮನಾರ್ಹವಾಗಿದೆ ಎಂದು ಡಾ. ಹೆಗ್ಗಡೆ ಅವರು ಹೇಳಿದರು. ಬ್ಯಾಂಕುಗಳು ರಾಷ್ಟ್ರೀಕರಣ ಆಗುವಾಗ, ನಾಲ್ಕು ನಮ್ಮ ರಾಜ್ಯದಲ್ಲಿ ಹುಟ್ಟಿ ಬೆಳೆದಂತಹ ಬ್ಯಾಂಕುಗಳಾಗಿದ್ದವು. ಇಂತಹ ಪ್ರಾಮುಖ್ಯತೆಯ ಜತೆಗೆ ಸಾಹಿತ್ಯ ಸಂಸ್ಕøತಿ ಮತ್ತು ಶಿಕ್ಷಣ, ವೈದ್ಯಕೀಯ ಅದೇ ರೀತಿಯಲಿ ಐಟಿ, ಬಿಟಿ, ಎಲ್ಲದರಲ್ಲೂ ಕೂಡಾ ನಾವು ಮುಂದಿದ್ದೇವೆ. ಹಾಗಾಗಿ ಎಲ್ಲರೂ ಕರ್ನಾಟಕದತ್ತ ನೋಡುತ್ತಿದ್ದಾರೆ ಎಂದರು.

ತುಳುಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಪ್ರಧಾನ ಮಂತ್ರಿ ಮತ್ತು ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಲು ಬಂದ ನಿಯೋಗದ ಮುಂದಾಳತ್ವವನ್ನು ವಹಿಸಿ ಶ್ರೀ ನರೇಂದ್ರ ಮೋದಿ ಮತ್ತು ಶ್ರೀ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ ಡಾ. ಹೆಗ್ಗಡೆಯವರು ತುಳು ಭಾಷೆಯ ಅರ್ಹತೆ ಮತ್ತು ಅಗತ್ಯದ ಬಗ್ಗೆ ಮನವರಿಕೆ ಮಾಡಿ ಈ ಬಗ್ಗೆ ಖಂಡಿತವಾಗಿ ಗಮನಹರಿಸಬೇಕು ಎಂದು ಒತ್ತಾಯ ಮಾಡಿದ್ದೇನೆ ಎಂದರು. ದೆಹಲಿಗೆ ಬಂದು ಮನವಿ ಸಲ್ಲಿಸಿ ನಮ್ಮ ಕೆಲಸ ಮುಗಿಯಿತು ಎನ್ನುವ ಭಾವನೆ ನಮಗಿಲ್ಲ. ಬದಲಾಗಿ ಇದರ ಹಿಂದೆ ಮತ್ತು ಮುಂದೆ ಪ್ರಯತ್ನಕ್ಕಾಗಿ ನಮ್ಮ ರಾಜ್ಯದ ಸಚಿವರನ್ನು, ರಾಜ್ಯದ ಸಂಸದರು ಮತ್ತು ಕೇಂದ್ರದ ಮಂತ್ರಿಗಳನ್ನು ಕೇಳಿದ್ದೇವೆ. ಇನ್ನು ಮುಂದಿನ ದಿನಗಳಲ್ಲಿ ಈ ಮಾನ್ಯತೆ ಬರುತ್ತದೆ ಎಂದು ತಿಳಿದುಕೊಂಡಿದ್ದೇವೆ ಎಂದು ಡಾ. ಹೆಗ್ಗಡೆ ಅವರು ವಿವರಿಸಿದರು. ದೆಹಲಿ ಕರ್ನಾಟಕ ಸಂಘವು ಸಾಂಸ್ಕøತಿಕವಾಗಿ ಮತ್ತು ಸಾಹಿತ್ಯಿಕವಾಗಿ ಬಹಳ ಮುತುವರ್ಜಿಯಿಂದ ಕೆಲಸ ಮಾಡುತ್ತಿದೆ ಹಾಗೂ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಬಹಳ ಸಹಾಯ ಮಾಡಿದೆ ಎಂದರು.

ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ ಅವರು ಮಾತಾನಾಡಿ ದೆಹಲಿ ಕರ್ನಾಟಕ ಸಂಘದ ಸಾಂಸ್ಕøತಿಕ ಸಮುಚ್ಚಯದ ಕಟ್ಟಡಕ್ಕೆ ಮೊಟ್ಟಮೊದಲಿಗೆ ಧನಸಹಾಯ ನೀಡಿದ್ದು ಶ್ರೀಕ್ಷೇತ್ರ ಧರ್ಮಸ್ಥಳದಿಂದ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳವು ಮದ್ಯಪಾನ ಬಿಡಿಸುಂತಹ 990 ಕ್ಯಾಂಪ್‍ಗಳನ್ನು ಮಾಡಿ 70,000 ಜನರ ಮದ್ಯಪಾನ ಬಿಡಿಸುವಂತಹ ಮಹತ್ಕಾರ್ಯವನ್ನು ಮಾಡಿದೆ ಎಂದು ಹೇಳಿದರು. ಡಾ. ಹೆಗ್ಗಡೆಯವರ ಆಶೀರ್ವಾದ, ಧರ್ಮಸ್ಥಳದ ಶ್ರೀ ಮಂಜುನಾಥನ ಆಶೀರ್ವಾದ ಮತ್ತು ಕನ್ನಡದ ಎಲ್ಲಾ ಜನತೆಯ ಆಶೀರ್ವಾದದಿಂದ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸುವ ಕಾರ್ಯ ಸಾಧ್ಯವಾಗುವುದು ಎಂದು ಭರವಸೆ ವ್ಯಕ್ತ ಪಡಿಸಿದರು. ನಿಯೋಗವು ಪ್ರಧಾನಿ ಮತ್ತು ಗೃಹಸಚಿವರನ್ನು ಭೇಟಿ ಮಾಡಲು ವ್ಯವಸ್ಥೆಯನ್ನು ಮಾಡಿದ ಕೇಂದ್ರ ಸಚಿವ ಶ್ರೀ ಅನಂತ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ನವದೆಹಲಿಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಡಾ, ವೀರೇಂದ್ರ ಹೆಗ್ಗಡೆಯವರಿಗೆ ಪುಷ್ಪಗುಚ್ಛಗಳನ್ನಿತ್ತು ಗೌರವ ಸಲ್ಲಿಸಿದರು. ನಿಯೋಗದಲ್ಲಿದ್ದ ತುಳುವಿನ ಗಣ್ಯರೂ ಸಭೆಯಲ್ಲಿದ್ದರು.


Spread the love