ಕನ್ನಡ ಕಂಪು ಪಸರಿಸಲು ಇಚ್ಛಾಶಕ್ತಿ ಅಗತ್ಯ; ಪಿ. ವಿ. ಮೋಹನ್
ಮಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮತ್ತು ಮಂಜುನಾಥ್ ಎಜುಕೇಷನ್ ಟ್ರಸ್ಟ್ (ರಿ), ಮಂಗಳೂರು ಇವರ ಸಂಯುಕ್ತ ಆಶ್ರಯ ದಲ್ಲಿ ಸಪ್ಟೆಂಬರ್ 29ರಂದು ನಗರದ ಕೊಟ್ಟಾರ ಶ್ರೀಯಾನ್ ಮಹಲ್ ನಲ್ಲಿ ಕನ್ನಡ ಚಿಂತನ, ಸಾಂಸ್ಕೃತಿಕ ಸೌರಭ ಕಾರ್ಯ ಕ್ರಮ ನಡೆಯಿತು.
ಹೃದಯ ವಾಹಿನಿ ಕರ್ನಾಟಕದ ಅಧ್ಯಕ್ಷ ಇಂ. ಕೆ.ಪಿ.ಮಂಜುನಾಥ ಸಾಗರ್ ರವರು ಪ್ರಾಸ್ತಾವಿಕ ಭಾಷಣ ಮಾಡಿ ದರು.ಪ್ರತಿ ತಿಂಗಳು ಇಂತಹ ಕಾರ್ಯ ಕ್ರಮ ವನ್ನು ಅಲ್ಲಲ್ಲಿ ಹಮ್ಮಿಕೊಂಡು ಕನ್ನಡ ಭಾಷೆ, ಸಂಸ್ಕೃತಿ ಉಳಿಸುವ, ಬೆಳೆಸುವ ಕೆಲಸವನ್ನು ಮಾಡುತ್ತಿದ್ದೇವೆ. ಕೇವಲ ಮಂಗಳೂರಿನಲ್ಲಿ ಮಾತ್ರವಲ್ಲ ವಿದೇಶಗಳಲ್ಲಿ ಕೂಡ ಕನ್ನಡದ ಕಂಪನ್ನು ಪಸರಿಸುತ್ತಿದ್ದೇವೆ ಎಂದರು.
ಕನ್ನಡ ಚಿಂತನ ಸಭಾಕಾರ್ಯಕ್ರಮ ವನ್ನು ಮಂಗಳೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ನ ಮಾಜಿ ಸದಸ್ಯ ಪಿ.ವಿ.ಮೋಹನ್ ಉದ್ಘಾಟಿಸಿದರು. ತಮ್ಮ ಭಾಷಣ ದಲ್ಲಿ ಅವರು ಕನ್ನಡದ ಕಂಪು ಪಸರಿಸುವ ಕೆಲಸ ಸುಲಭವಲ್ಲ. ಅದಕ್ಕೆ ನಮ್ಮಲ್ಲಿ ಇಚ್ಛಾಶಕ್ತಿ ಇರಬೇಕು. ತಮಿಳು ನಾಡಿನಲ್ಲಿ ಜಾತಿ ಮತ ಭೇದವಿಲ್ಲದೆ ಎಲ್ಲರೂ ತಮಿಳು ಮಾತನಾಡುತ್ತಾರೆ.ಕೇರಳದಲ್ಲಿ ಎಲ್ಲರೂ ಮಲೆಯಾಳಂ ಮಾತನಾಡುತ್ತಾರೆ.ಆದರೆ ಕರ್ನಾಟಕದಲ್ಲಿ ವಿಶೇಷವಾಗಿ ಕರಾವಳಿಯಲ್ಲಿ ಹೀಗಿಲ್ಲ.ಇಲ್ಲಿ ತುಳು ಕೊಂಕಣಿ ಬ್ಯಾರಿ ಕೊಡವ ಮೊದಲಾದ ಅನೇಕ ಭಾಷೆಗಳು ಮನೆಮಾತಾಗಿವೆ.ಹಾಗಾಗಿ ಕನ್ನಡವನ್ನು ಮುನ್ನಡೆಸುವಾಗ ಈ ಬಹುರೂಪಿ ಸಂಸ್ಕೃತಿಯನ್ನು ಕೂಡ ಮುನ್ನಡೆಸುವ ಎಚ್ಚರಿಕೆ ಇರಬೇಕಾಗುತ್ತದೆ. ಕರಾವಳಿ ಹಿಂದಿನಿಂದಲೂ ಸಾಮರಸ್ಯಕ್ಕೆ ಹೆಸರಾದ ಪ್ರದೇಶ. ಇಲ್ಲಿನ ದೈವಗಳಲ್ಲಿ ಮುಸ್ಲಿಂ ದೈವಗಳನ್ನು ಕೂಡ ಕಾಣಬಹುದು. ಈಗ ನಮ್ಮ ಸಾಮರಸ್ಯಕ್ಕೆ ಧಕ್ಕೆ ಒದಗಿದಂತೆ ಕೆಲವೊಮ್ಮೆ ಕಂಡುಬರುತ್ತದೆ.ಅದು ಮಾಯವಾಗಬೇಕು.ಹಿಂದಿನ ಕಾಲದಲ್ಲಿದ್ದ ಸೌಹಾರ್ದತೆಯನ್ನು ಪುನರುಜ್ಜೀವನ ಗೊಳಿಸುವ ಕಾರ್ಯವಾಗಬೇಕು ಎಂದರು.
ದ.ಕ.ಮತ್ತು ಉಡುಪಿ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಸ್ಥಾಪಕಾಧ್ಯಕ್ಷ ಸದಾಶಿವ ದಾಸ್ ಪಾಂಡೇಶ್ವರ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಸ್ಯಾಕ್ಸೋಫೋನ್ ಕಲಾವಿದ ಜಯರಾಂ. ಜಿ.ಕೆ.ಎಕ್ಕೂರು ಅವರನ್ನು ಕರ್ನಾಟಕ ಸೌರಭ ಪ್ರಶಸ್ತಿ ಯಿತ್ತು ಗೌರವಿಸಲಾಯಿತು. ಅಶಕ್ತ ಕಲಾವಿದರಿಗೆ ಸಹಾಯ ಮಾಡಲು,ಪ್ರತಿಭೆಗಳನ್ನು ಬೆಳೆಸಲು ತಾನು ಕಲಾವಿದರ ಒಕ್ಕೂಟ ಪ್ರಾರಂಭಿಸಿದ್ದಾಗಿ ನೆನಪಿಸಿಕೊಂಡ ಸದಾಶಿವ ದಾಸ್ ದುಬಾಯಿಯಲ್ಲಿ ಕನ್ನಡದ ಕಾರ್ಯ ಕ್ರಮ ನಡೆಸುವುದಿದ್ದರೆ ತನ್ನೆಲ್ಲ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.
ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಕನ್ನಡ ಚಿಂತನ ಉಪನ್ಯಾಸ ವಿತ್ತರು. ತನಗೆ ಇದೊಂದು ಮನೆಯ ಕಾರ್ಯ ಕ್ರಮದಂತೆ ಆತ್ಮೀಯ ಕಾರ್ಯ ಕ್ರಮ ವೆಂದ ಬೈಕಂಪಾಡಿ ತುಳು ನಾಡಲ್ಲಿ ಕನ್ನಡ ಬೆಳೆಸುವುದು ಸಮಸ್ಯೆಯೇನಲ್ಲ.ಆದರೆ ಎಚ್ಚರವಹಿಸಿ ಬೆಳೆಸಬೇಕು. ನಮ್ಮಲ್ಲಿ ಮನೆ ಭಾಷೆ ಬೇರೆ. ಸಾರ್ವಜನಿಕ ಭಾಷೆ ಕನ್ನಡ. ಹೀಗಾಗಿ ಕನ್ನಡವನ್ನು ಬೆಳೆಸುವಾಗ ನಮ್ಮ ಸಂಸ್ಕೃತಿಗಳನ್ನು ಕೂಡ ಜತೆ ಜತೆಯಾಗಿ ಬೆಳೆಸುವ ಕಾರ್ಯ ವಾಗಬೇಕು.ಸಂವಹನ ಬಹಳ ಮುಖ್ಯವಾಗಿದ್ದು ಅದಕ್ಕೆ ಕೆಲವೊಂದು ಬಾರಿ ಆಂಗ್ಲಪದ ಬಳಸಿದರೂ ತಪ್ಪಲ್ಲ. ಉದಾಹರಣೆಗೆ ಬ್ಯಾಂಕ್ ನ ಚಕ್ ಅನ್ನುವುದನ್ನು ಕನ್ನಡದಲ್ಲಿ ತರ್ಜುಮೆಮಾಡಿ ಹೇಳುವುದಕ್ಕಿಂತಲೂ ಹಾಗೇ ಇಂಗ್ಲೀಷ್ ನಲ್ಲಿ ಹೇಳಿದರೆ ಹೆಚ್ಚಿನ ಜನರಿಗೆ ಅರ್ಥ ವಾಗುತ್ತದೆ ಎಂದರು. ಕರಾವಳಿಯಲ್ಲಿ ಕನ್ನಡಕ್ಕೇನೂ ಸಮಸ್ಯೆ ಇಲ್ಲ. ಕನ್ನಡ ಅನುಷ್ಠಾನ ಸರಿಯಾಗಿ ನಡೀತಾ ಇದೆ.ಆದರೆ ಇಲ್ಲಿನ ಬಹುರೂಪಿ ಸಂಸ್ಕೃತಿಯನ್ನು ಜತೆಯಲ್ಲಿ ಬೆಳೆಸುತ್ತ ಕನ್ನಡ ಭಾಷೆ ಮುಂದುವರಿಯಬೇಕಾಗಿದೆ ಎಂದರು.
ಮುಖ್ಯ ಅತಿಥಿ ಕೊಟ್ಟಾರ ವಿದ್ಯಾಸರಸ್ವತಿ ಕ್ಷೇತ್ರದ ಆನುವಂಶಿಕ ಮೊಕ್ತೇಸರ ನವೀನ್ ಚಂದ್ರ ಶ್ರೀಯಾನ್ ಮಾತನಾಡುತ್ತ, ಪೋಷಕರು ಮಕ್ಕಳಮೇಲೆ ಹೆಚ್ಚಿನ ಅಂಕಗಳಿಸುವಂತೆ ಒತ್ತಡ ಹಾಕಬಾರದು. ಅವರಿಗೆ ಆಸಕ್ತಿ ಇರುವ ಸಾಹಿತ್ಯ ,ಕಲೆಗಳ ಕಡೆಗೆ ಪ್ರೋತ್ಸಾಹ ನೀಡಬೇಕು. ಕಲೆಯ ಅಭ್ಯಾಸದಿಂದ ಅವರ ಭವಿಷ್ಯ ಒಳ್ಳೆಯದಾಗುತ್ತದೆ ಎಂದರು. ಮಕ್ಕಳಿಗಾಗಿ ಚಿತ್ರ ಕಲಾ ಸ್ಫರ್ಧೆ ಏರ್ಪಡಿಸಿದ ಮಂಜುನಾಥ್ ಸಾಗರ್ ರನ್ನು ಅಭಿನಂದಿಸಿದರು.
ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ಮಾತನಾಡಿ, ನಮ್ಮ ರಾಜ್ಯದ ಆಡಳಿತ ಭಾಷೆ ಕನ್ನಡದವನ್ನು ನವಿರಾಗಿಸುವ ಕೆಲಸ ಇನ್ನಷ್ಟು ನಡೆಯಲಿ.ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಒಳ್ಳೆಯ ಕೆಲಸ ಎಂದರು.
ಕವಿಗೋಷ್ಠಿ : ದಕ್ಷಿಣಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಾಹಿತಿ,ನಟ ಕಾಸರಗೋಡು ಅಶೋಕ್ ಕುಮಾರ್ ಅಧ್ಯಕ್ಷತೆ ಯಲ್ಲಿ ಕವಿಗೋಷ್ಠಿ ನಡೆಯಿತು. ತಮ್ಮ ಭಾಷಣ ದಲ್ಲಿ ಅವರು ಕವಿ ಗೋಷ್ಠಿ ಯಿಂದ ಕವಿಗಳು ಬೆಳೆಯುತ್ತಾರೆ,ಹೊಸ ಕವಿಗಳು ಹುಟ್ಟುತ್ತಾರೆ.ಕವನಗಳಲ್ಲಿ ಸಮಾಜಮುಖಿ ಚಿಂತನೆಗಳು ಇರಬೇಕು. ಜನರ ಸಮಸ್ಯೆ ಗಳಿಗೆ ಕವಿಗಳು ಧ್ವನಿಯಾಗಬೇಕು ಎಂದರು.ಕವಿಗಳು ತುಂಬಾ ಓದಬೇಕು. ಅನುಭವ ಪಡೆದುಕೊಳ್ಳಬೇಕು. ಆಮೇಲೆ ಬರೀಬೇಕು.ಇಲ್ಲದಿದ್ದರೆ ನಮ್ಮ ಕವನಗಳಲ್ಲಿ ಕಾಳಿಗಿಂತ ಜೊಳ್ಳೇ ಜಾಸ್ತಿ ಆಗುವ ಪ್ರಮೇಯವಿದೆ ಎಂದರು.ಬರೀ ಆಕ್ರೋಶ, ನಿಂದನೆಗಳು ಕಾವ್ಯ ವಾಗುವುದಿಲ್ಲ. ಹೇಳುವುದು ನಿಷ್ಠುರ ಸತ್ಯವಾದರೂ ಹೇಳುವ ನಮೂನೆ ಆಪ್ಯಾಯಮಾನವಾಗಿರಬೇಕು,ಸಹ್ಯವಾಗಿರಬೇಕು ಎಂದರು.
ಕವಿಗಳಾದ ಎನ್.ಸುಬ್ರಾಯ ಭಟ್, ಮಾಲತಿ ಶೆಟ್ಟಿ ಮಾಣೂರು, ಹರೀಶ್ ಸುಲಾಯ ಒಡ್ಡಂಬೆಟ್ಟು, ನಿರ್ಮಲ.ಪಿ.ಆರ್, ವಾಣಿ ಲೋಕಯ್ಯ ಕೊಂಡಾಣ ಸ್ವರಚಿತ ಕವನ ವಾಚಿಸಿದರು.
ಕಲಾರತ್ನ ಜಯರಾಂ. ಜಿ.ಕೆ.,ದಿವ್ಯ ಜಯರಾಂ ಬಳಗದವರಿಂದ ಸ್ವರ ಸಿಂಚನ ಸ್ಯಾಕ್ಸೋಫೋನ್ ವಾದನ ನಡೆಯಿತು. ಶಾಲಾ ವಿದ್ಯಾರ್ಥಿ ಗಳಿಗಾಗಿ ನಮ್ಮ ನಾಡಿನ ದಸರಾ ವೈಭವ ವಿಷಯದ ಬಗ್ಗೆ ಏರ್ಪಡಿಸಿದ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜಯಿಗಳಾದವರಿಗೆ ಬಹುಮಾನ ವಿತರಿಸಲಾಯಿತು. ಕರಣ್ ಆಳ್ವ (ಪ್ರಥಮ), ಧನ್ಯಶ್ರೀ(ದ್ವಿತೀಯ )ಆಶಿಶ್.ಎಂ.ರಾವ್ (ತೃತೀಯ )ಸಂದೇಶ್ (ಮೆಚ್ಚುಗೆ ) ಬಹುಮಾನ ಪಡೆದರು. ಸಭಿಕರಿಗಾಗಿ ಏರ್ಪಡಿಸಿದ 5 ಲೀಟರ್ ಕುಕ್ಕರ್ ನ ಲಕ್ಕಿ ಡ್ರಾ ದಲ್ಲಿ ಗಾಯತ್ರಿ ಕಾಮತ್ ಬಹುಮಾನ ಪಡೆದರು.
ವಾಣಿ ಲೋಕಯ್ಯ ಪ್ರಾರ್ಥಿಸಿದರು. ರವಿ. ಎಂ.ಕುಲಶೇಖರ ನಿರೂಪಿಸಿ,ಸ್ವಾಗತಿಸಿದರು. ಸಾಹಿತಿ ಕಾಸರಗೋಡು ಅಶೋಕ್ ಕುಮಾರ್ ವಂದಿಸಿದರು