ಕನ್ನಡ ಪತ್ರಿಕೆ ಪ್ರಸಾರ ಗಣನೀಯ ಹೆಚ್ಚಳ: ಆರಿಫ್ ಪಡುಬಿದ್ರಿ
ದುಬಾಯಿ: ಕನ್ನಡ ಪತ್ರಿಕೆಗಳು 20 ವರ್ಷಗಳಲ್ಲಿ 20 ಲಕ್ಷದಷ್ಟು ಪ್ರಸಾರ ಸಂಖ್ಯೆ ಹೆಚ್ಚಿಸುವ ಮೂಲಕ ಹೊಸ ಓದುಗರನ್ನು ಸೃಷ್ಟಿಸಿವೆ. ಜಗತ್ತಿನಾದ್ಯಂತ ಮುದ್ರಣ ಮಾಧ್ಯಮಕ್ಕಿರುವ ಸವಾಲನ್ನು ಇವು ಮೆಟ್ಟಿ ನಿಂತಿವೆ ಎಂದು ವಿಜಯ ಕರ್ನಾಟಕ ಪತ್ರಿಕೆಯ ಮಂಗಳೂರಿನ ಪ್ರಧಾನ ವರದಿಗಾರ ಮುಹಮ್ಮದ್ ಆರಿಫ್ ಪಡುಬಿದ್ರಿ ಹೇಳಿದರು.
ದುಬಾಯಿ ದೇರಾದ ಅಲ್ ಖಲೀಜ್ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು, ಸ್ಪರ್ಧೆ, ಸವಾಲುಗಳನ್ನು ಎದುರಿಸಿಕೊಂಡು ಮುನ್ನಡೆಯುತ್ತಿವೆ.
ಇಂದಿನ ಮಾಧ್ಯಮಗಳು ಟೀಕೆ, ಟಿಪ್ಪಣಿಗಳ ಮಧ್ಯೆಯೂ ಪ್ರತಿನಿತ್ಯ ಮಾನವೀಯ ಕಳಕಳಿಯ, ಸಾಮಾಜಿಕ ಬದ್ಧತೆಯ, ಜನಸಾಮಾನ್ಯರ ಕಷ್ಟ ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿವೆ. ಮಾಧ್ಯಮಗಳ ಉಳಿವಿಗೆ ಜಾಹಿರಾತು, ಗಮನ ಸೆಳೆಯುವ ಸುದ್ದಿ ಪ್ರಸಾರ ಅನಿವಾರ್ಯ ವಾಗಿದೆ ಎಂದು ಅವರು ಹೇಳಿದರು.
ಒಳ್ಳೆಯ ಪತ್ರಕರ್ತನಿಗೆ ಜಾತಿ, ಧರ್ಮ, ಪಕ್ಷ ಮುಖ್ಯವಲ್ಲ. ಸತ್ಯವನ್ನು ಜನರ ಮುಂದಿಡುವುದೇ ಪತ್ರಿಕಾ ಧರ್ಮ. ಸತ್ಯ- ಸುಳ್ಳನ್ನು ಓದುಗರು ನಿರ್ಧರಿಸುತ್ತಾರೆ. ನ್ಯಾಯಾಲಯ ತೀರ್ಪು ಕೊಡುವ ತನಕ ಒಬ್ಬನನ್ನು ಅಪರಾಧಿ ಸ್ಥಾನ ನೀಡುವ ಹಕ್ಕು ಮಾಧ್ಯಮಗಳಿಗೆ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ದ ಹೆಸರಿನಲ್ಲಿ ಸುದ್ದಿಯನ್ನು ವಿಜೃಂಭಿಸಿ ತೇಜೋವಧೆ ಮಾಡುವುದು ವಿಷಾದನೀಯ ಎಂದರು.
ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ, ಲೇಖನ, ಅಂಕಣಗಳ ಬಗ್ಗೆ ನಿಮಗೆ ಆಕ್ಷೇಪಗಳಿದ್ದರೆ ಸಂಪಾದಕರ ಗಮನ ಸೆಳೆದು ಸರಿಯಾದ ಮಾಹಿತಿ ನೀಡಬಹುದು. ಅಗತ್ಯ ಬಿದ್ದರೆ ಪೊಲೀಸ್ ಇಲಾಖೆಗೆ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ದೂರು ನೀಡಲು ಅವಕಾಶವಿದೆ. ಅದನ್ನು ಬಿಟ್ಟು, ಪತ್ರಿಕಾ ಕಚೇರಿಗೆ ಫೋನ್ ಮಾಡಿ ಬೆದರಿಕೆ ಹಾಕಿ, ಅದನ್ನು ರೆಕಾರ್ಡ್ ಮಾಡಿ ಇತರರಿಗೆ ಕಳುಹಿಸಿ ಆನಂದಪಡುವುದು ಒಳ್ಳೆಯ ಕ್ರಮವಲ್ಲ ಎಂದು ಅವರು ಪ್ರಶ್ನೆಗೆ ಉತ್ತರವಾಗಿ ಹೇಳಿದರು.
ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಜಾಗ ಸಿಗದವರಿಗೆ ಸಾಮಾಜಿಕ ಜಾಲತಾಣಗಳಾದ ವೆಬ್ಸೈಟ್ಗಳು ಒಳ್ಳೆಯ ಅವಕಾಶ ಕಲ್ಪಿಸಿವೆ. ಇತ್ತೀಚೆಗೆ ಟ್ವಿಟರ್, ಫೇಸ್ಬುಕ್, ವಾಟ್ಸ್ಆ್ಯಪ್ ಈಗ ಪ್ರಭಾವಶಾಲಿ ಮಾಧ್ಯಮಗಳಾಗಿ ಅತ್ಯಂತ ವೇಗವಾಗಿ ಜನರನ್ನು ತಲುಪುತ್ತಿವೆ. ಇಲ್ಲೂ ಕೆಲವೊಮ್ಮೆ ತಪ್ಪು, ಹಳೆ ಮಾಹಿತಿ, ವಿಕೃತಿ ವಿಜೃಂಭಿಸುವ ಅಪಾಯ ಇರುವುದರಿಂದ ಜಾಗ್ರತೆ ವಹಿಸಬೇಕು ಎಂದರು.
ದೇರಾ ಘಟಕದ ಅಧ್ಯಕ್ಷ ಶಂಸುದ್ದೀನ್ ಉಡುಪಿ ಉಪಸ್ಥಿತರಿದ್ದರು. ಮುಹಮ್ಮದ್ ಆರಿಫ್ ಅವರನ್ನು ಸಂಘಟಕರು ಸನ್ಮಾನಿಸಿದರು.
ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ನ ಕಾರ್ಯಕಾರಿ ಸಮಿತಿ ಸದಸ್ಯ ನಾಸಿರ್ ಅಬ್ದುಲ್ ಖಾದರ್ ಸ್ವಾಗತಿಸಿದರು. ಅಧ್ಯಕ್ಷ ಆಸಿರ್ ಚೊಕ್ಕಬೆಟ್ಟು ವಂದಿಸಿದರು. ಸಿದ್ದೀಕ್ ಬೆಳಪು ಕಾರ್ಯಕ್ರಮ ನಿರೂಪಿಸಿದರು.