ಕನ್ನಡ ಸಾಹಿತ್ಯ ಸಮ್ಮೇಳನ: ಸಿದ್ದೀಖ್ ಮೊಂಟುಗೋಳಿಗೆ ಸನ್ಮಾನ

Spread the love

ಕನ್ನಡ ಸಾಹಿತ್ಯ ಸಮ್ಮೇಳನ: ಸಿದ್ದೀಖ್ ಮೊಂಟುಗೋಳಿಗೆ ಸನ್ಮಾನ

ಮಂಗಳೂರು: ಕಲಬುರ್ಗಿಯಲ್ಲಿ ನಡೆಯುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲ್ಪಡುವವರ ಸಾಧಕರ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಮುಸ್ಲಿಂ ಬರಹಗಾರ ಕೆಎಂ ಅಬೂಬಕರ್ ಸಿದ್ದೀಖ್ ಮೊಂಟುಗೋಳಿ ಸ್ಥಾನ ಪಡೆದಿದ್ದಾರೆ. ಫೆಬ್ರವರಿ 6 ಗುರುವಾರ ಅಪರಾಹ್ನ 2.30ಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯುವ ಸನ್ಮಾನ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಕೇಂದ್ರ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಶ್ರೀ ಜಗದೀಶ್ ಶೆಟ್ಟರ್ ಅವರು ಸನ್ಮಾನ ನೆರವೇರಿಸಲಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದು ನಾಡು ನುಡಿಗೆ ಸೇವೆ ಸಲ್ಲಿಸಿದ ಹಲವು ಸಾಧಕರನ್ನು ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಗುತ್ತದೆ. ಬಾ. ಶಾಮನೂರ ಶಿವಶಂಕರಪ್ಪ, ಡಾ. ತೇಜಸ್ವಿನಿ ಅನಂತಕುಮಾರ್, ಸಾಹಿತಿ ರವಿಬೆಳಗೆರೆ, ಪತ್ರಕರ್ತ ಡಾ. ಕೂಡ್ಲಿ ಗುರುರಾಜ ಸೇರಿದಂತೆ ಹಲವು ಪ್ರಮುಖರು ಸನ್ಮಾನ ಪಡೆಯಲಿದ್ದಾರೆ.
ಫೆ. 5ರಂದು ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪನವರು ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಡಾ. ಎಚ್ಎಸ್ ವೆಂಕಟೇಶ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಫೆಬ್ರವರಿ 7ರಂದು ತ್ರಿದಿನ ಸಮ್ಮೇಳನ ಸಮಾಪ್ತಿಗೊಳ್ಳುವುದು.

ಸಂಘಟನೆ, ಭಾಷಣ ಮತ್ತು ಬರಹ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕೆಎಂ ಸಿದ್ದೀಕ್ ರವರು ಕರಾವಳಿಯ ಜನಪ್ರಿಯ ಇಸ್ಲಾಮಿ ಪತ್ರಿಕೆಗಳಾದ ಅಲ್ ಅನ್ಸಾರ್ ವಾರ ಪತ್ರಿಕೆ ಮತ್ತು ಮೈಲಾಂಜಿ ಮಾಸಿಕದ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಕೃತಿಗಳನ್ನು ಹೊರತಂದಿರುವ ಇವರು ಕನ್ನಡ ವಾಗ್ಮಿಯಾಗಿಯೂ ಪ್ರಸಿದ್ಧರು. ಪತ್ರಿಕೋದ್ಯಮ ಮತ್ತು ಕನ್ನಡ ಸಾಹಿತ್ಯದಲ್ಲಿ ಪದವಿ ಸ್ನಾತಕೋತ್ತರ ಪದವಿಗಳನ್ನು ಗಳಿಸಿದ್ದಾರೆ. ಸುನ್ನಿ ಸಾಹಿತ್ಯ ಪ್ರಶಸ್ತಿ, ದಾರುಲ್ ಇರ್ಶಾದ್ ಬೆಳ್ಳಿಹಬ್ಬ ಪುರಸ್ಕಾರ ಹಾಗೂ ನೂರುಲ್ ಉಲಮಾ ಸಾಹಿತ್ಯ ಪ್ರಶಸ್ತಿಗಳನ್ನು ಪಡೆದಿರುವ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಸೋಮವಾರಪೇಟೆ ತಾಲೂಕು ಸಮ್ಮೇಳನದಲ್ಲಿ ಸನ್ಮಾನಿತರಾಗಿದ್ದಾರೆ.

ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ರಾಜ್ಯ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ಇವರು, ಪ್ರಸ್ತುತ ಚಿಕ್ಕಮಗಳೂರು ಜಯಪುರ ಮಸೀದಿಯ ಧರ್ಮಗುರುಗಳು, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ, ಸುನ್ನಿ ಕೋರ್ಡಿನೇಶನ್ ಕಮಿಟಿ ರಾಜ್ಯ ಕಾರ್ಯದರ್ಶಿ, ಸುನ್ನೀ ಯುವಜನ ಸಂಘ ಚಿಕ್ಕಮಗಳೂರು ಜಿಲ್ಲಾ ಉಪಾಧ್ಯಕ್ಷ, ಹಾವೇರಿ ಮುಈನುಸ್ಸುನ್ನ ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷ, ಪೆನ್ ಫ್ರೆಂಡ್ಸ್ ಬರಹಗಾರರ ವೇದಿಕೆಯ ಅಧ್ಯಕ್ಷ ಮೊದಲಾದ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ.


Spread the love