ಕಪಾಲ ಬೆಟ್ಟದಲ್ಲಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸುವುದು ನಮ್ಮ ಹಕ್ಕು; ಐವಾನ್ ಡಿಸೋಜಾ
ಬೆಂಗಳೂರು: ಕನಕಪುರ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪನೆ ವಿಚಾರ ವಿವಾದಕ್ಕೀಡಾಗಿದೆ. ಈ ಹಿನ್ನೆಲೆಯಲ್ಲಿ ವಸ್ತು ಸ್ಥಿತಿ ಅರಿಯುವುದಕ್ಕಾಗಿ ಕ್ರಿಶ್ಚಿಯನ್ ಸಮುದಾಯದ ಮುಖಂಡರ ಸತ್ಯಶೋಧನಾ ಸಮಿತಿಯೊಂದನ್ನು ರಚಿಸಲಾಗಿತ್ತು. ಅದರ ವರದಿ ಪ್ರಕಾರ ಅಲ್ಲಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸುವುದು ನಮ್ಮ ಹಕ್ಕು ಎಂದು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಹೇಳಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಡಿಸೋಜಾ, ಸತ್ಯಶೋಧನಾ ಸಮಿತಿ ಸಿದ್ಧಪಡಿಸಿರುವ ವರದಿಯನ್ನು ನಾವು ಸಿಎಂ ಯಡಿಯೂರಪ್ಪ ಮತ್ತು ಕಂದಾಯ ಸಚಿವ ಆರ್ ಅಶೋಕ್ ಗೆ ಸಲ್ಲಿಸುತ್ತೇವೆ. ಏಸು ಪ್ರತಿಮೆಯನ್ನು ಸರ್ಕಾರವೇ ಮುಂದೆ ನಿಂತು ನಿರ್ಮಿಸಲಿ ಎಂದು ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ.
ಕಲ್ಲಡ್ಕ ಪ್ರಭಾಕರ ಭಟ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸೋಜಾ, ಸ್ಥಳೀಯ ಶಾಸಕರಾಗಿ ಕ್ರೈಸ್ತರಿಗೆ ಡಿಕೆಶಿ ಸಹಾಯ ಮಾಡಿದ್ದು ತಪ್ಪಲ್ಲ. ಪ್ರತಿಯೊಬ್ಬರೂ ತಮ್ಮತಮ್ಮ ಧಾರ್ಮಿಕ ನಾಯಕರ ಪ್ರತಿಮೆ ನಿರ್ಮಿಸಲು ಹಕ್ಕಿದೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರು ಕೃಷ್ಣನ ಪ್ರತಿಮೆಯನ್ನು ಕಲ್ಲಡ್ಕದಲ್ಲಿ ನಿರ್ಮಿಸಲಿ. ಆಗ ನಾವೆಲ್ಲ ಅವರಿಗೆ ನೆರವು ಕೊಡ್ತೇವೆ ಎಂದು ಹೇಳಿದರು.
ಕಪಾಲ ಬೆಟ್ಟದಲ್ಲಿ 10 ಎಕರೆ ಭೂಮಿಯನ್ನು ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ಅಧಿಕೃತವಾಗಿ ಸರ್ಕಾರವೇ ಮಂಜೂರು ಮಾಡಿತ್ತು. ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಗಳಿಗಾಗಿಯೇ ಇದನ್ನು ಬಳಸುವ ನಿರ್ಧಾರವೂ ಆಗಿದೆ. ಇತಿಹಾಸವನ್ನು ಗಮನಿಸಿದರೆ, 1670 ರಿಂದಲೇ ಕಪಾಲ ಬೆಟ್ಟದಲ್ಲಿ ಕ್ರೈಸ್ತರು ವಾಸ ಮಾಡಲಾರಂಭಿಸಿದ್ದಾರೆ. ಆ ಭಾಗದ ಕ್ರೈಸ್ತರು ರೇಷಿಮೆ ಬೆಳೆಯುತ್ತಿದ್ದರು. ಬೇರೆ ಸಮುದಾಯಗಳ ಜೊತೆಗೆ ಕ್ರೈಸ್ತರ ಉತ್ತಮ ಸಂಬಂಧ, ಒಡನಾಟ ಇತ್ತು. 1661 ರಲ್ಲಿ ಹಾರೋಬೆಲೆಯಲ್ಲಿ ಪ್ರಥಮ ಚರ್ಚ್ ನಿರ್ಮಿಸಲಾಗಿದೆ. ಆಗಲೇ 160 ಕ್ರೈಸ್ತ ಕುಟುಂಬಗಳು ಅಲ್ಲಿ ವಾಸವಾಗಿದ್ದವು ಎಂದು ಡಿಸೋಜಾ ಸತ್ಯಶೋಧನಾ ಸಮಿತಿಯ ವರದಿ ಅಂಶಗಳನ್ನು ಉಲ್ಲೇಖಿಸಿದರು.
ರಾಜಕೀಯ ದುರುದ್ದೇಶಕ್ಕಾಗಿ ಪ್ರಕರಣಕ್ಕೆ ವಿವಾದ ಬಳಿಯಲಾಗಿದೆ. ಗೋಮಾಳ ಭೂಮಿಯನ್ನು ಹಿಂದೂ, ಮುಸ್ಲಿಂ, ಕ್ರೈಸ್ತ ಇತರೇ ಸಮುದಾಯಗಳಿಗೆ ಸರ್ಕಾರ ಮೊದಲಿಂದಲೂ ಮಂಜೂರು ಮಾಡುತ್ತಾ ಬಂದಿದೆ. ಹಾಗೆಯೇ ಕಪಾಲ ಬೆಟ್ಟದಲ್ಲಿ ಕ್ರೈಸ್ತರಿಗೂ ಭೂಮಿ ಮಂಜೂರು ಮಾಡಲಾಗಿದೆ. ಇಲ್ಲಿ ವಿಷಬೀಜ ಬಿತ್ತುವ ಪ್ರಯತ್ನಗಳು ನಡೆದಿವೆ ಎಂದು ಡಿಸೋಜಾ ಆರೋಪಿಸಿದರು.
ಏಸುಪ್ರತಿಮೆ ನಿರ್ಮಾಣ ರಿಜೆಕ್ಟ್ ಮಾಡಲು ಹೇಗೆ ಬೇಕೋ ಹಾಗೆ ವರದಿ ರೂಪಿಸುವಂತೆ ಸರ್ಕಾರ ನಿರ್ದೇಶಿಸಿತ್ತು. ಕನಕಪುರ ತಹಸೀಲ್ದಾರ್ ರಿಗೆ ಸರ್ಕಾರ ನಿರ್ದೇಶನ ನೀಡಿತ್ತು. ಸರ್ಕಾರ ಹೇಳಿದಂತೆ ಜಿಲ್ಲಾಡಳಿತ ವರದಿ ತಯಾರಿಸಿದೆ ಎಂದೂ ಅವರು ಸರ್ಕಾರದ ವಿರುದ್ಧ ಆರೋಪಿಸಿದರು.