ಕರಾಟೆ: ಮಂಗಳೂರು ಮೇಯರ್‍ಗೆ ನಿರೀಕ್ಷಿತ ಚಿನ್ನ ; ಟೋಕಿಯೋದತ್ತ ಕವಿತಾ ಚಿತ್ತ

Spread the love

ಕರಾಟೆ: ಮಂಗಳೂರು ಮೇಯರ್‍ಗೆ ನಿರೀಕ್ಷಿತ ಚಿನ್ನ; ಟೋಕಿಯೋದತ್ತ ಕವಿತಾ ಚಿತ್ತ

ಮಂಗಳೂರು: ಒಂಬತ್ತು ವರ್ಷಗಳ ಬಳಿಕ ಕರಾಟೆ ಕಣಕ್ಕೆ ಧುಮುಕಿದ ಮಂಗಳೂರು ಮೇಯರ್ ಕವಿತಾ ಸನಿಲ್ ಮತ್ತೆ ಎದುರಾಳಿಯನ್ನು ಸದೆಬಡಿದು ಇಲ್ಲಿ ನಡೆಯುತ್ತಿರುವ ಇಂಡಿಯನ್ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದರು. ಈ ಮೂಲಕ 2020ರ ಟೋಕಿಯೊ ಒಲಿಂಪಿಕ್ಸ್‍ಗೆ ತಾನೂ ಅರ್ಹತೆ ಪಡೆಯುವ ವಿಶ್ವಾಸವಿದೆ ಎನ್ನುವುದನ್ನು ಸಾಬೀತುಪಡಿಸಿದರು.

ಫೈನಲ್‍ನಲ್ಲಿ ಉದಯೋನ್ಮುಖ ಕರಾಟೆ ಪಟು ನಿಶಾ ನಾಯಕ್ ವಿರುದ್ಧ 7-3 ಅಂಕಗಳಿಂದ ಸೋಲಿಸಿದರು. ಆರಂಭದಲ್ಲಿ ನಿಶಾ ತೀವ್ರ ಪೈಪೋಟಿ ನೀಡಿ 3-3 ಅಂಕ ಸಮಗೊಳಿಸಿದರೂ ಅಂತಿಮವಾಗಿ ಬೆಳ್ಳಿಗೆ ತೃಪ್ತಿಪಡಬೇಕಾಯಿತು. ದ್ವಿತೀಯಾರ್ಧದಲ್ಲಿ ಸನಿಲ್ ಅವರ ಅನುಭವ ಅವರಿಗೆ ಸುಲಭ ಮುನ್ನಡೆ ದೊರಕಿಸಿಕೊಟ್ಟಿತು. ಪೃಥ್ವಿ ಹಾಗು ಕಾವ್ಯ ಕಂಚಿನ ಪದಕ ಗೆದ್ದರು.

ಇದಕ್ಕೂ ಮುನ್ನ ಸೆಮಿಫೈನಲ್‍ನಲ್ಲಿ ಕವಿತಾ ಸನಿಲ್ ತಮ್ಮ ಎದುರಾಳಿ ಕಾವ್ಯ ಅವರನ್ನು 8-0 ಅಂಕಗಳಿಂದ ಬಗ್ಗುಬಡಿದರು. ಶಕ್ತಿಶಾಲಿ ಪಂಚ್ ಮೂಲಕ ಎದುರಾಳಿ ವಿರುದ್ಧ ಆರಂಭದಿಂದಲೇ ಪ್ರಹಾರ ನಡೆಸಿದ ಸನಿಲ್ ಎದುರಾಳಿಗೆ ಒಂದು ಅಂಕವನ್ನೂ ಬಿಟ್ಟುಕೊಡಲಿಲ್ಲ.

65 ಕೆ.ಜಿ.ಗಿಂತ ಮೇಲ್ಪಟ್ಟ ತೂಕದ ಬ್ಲ್ಯಾಕ್‍ಬೆಲ್ಟ್ ವಿಭಾಗದಲ್ಲಿ ಸ್ಪರ್ಧಿಸಿದ ಕವಿತಾ ಸನಿಲ್ ಮೂರು ಬಾರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದವರು. 1996ರಿಂದ 2008ರವರೆಗೆ ಸತತ ರಾಷ್ಟ್ರೀಯ ಚಾಂಪಿಯನ್ ಆಗಿದ್ದ ಇವರು, ಒಂಬತ್ತು ವರ್ಷದ ಬಳಿಕ ಕಣಕ್ಕೆ ಧುಮುಕಿದ್ದರು. ಹುಟ್ಟೂರಿನಲ್ಲಿ ನಡೆಯುವ ಈ ಚಾಂಪಿಯನ್‍ಶಿಪ್‍ಗಾಗಿ ನಗರದ ಮೇಯರ್ ಆಗಿ ಕಾರ್ಯಭಾರಗಳ ಒತ್ತಡದ ನಡುವೆಯೂ ಸತತ ಎರಡು ತಿಂಗಳಿಂದ ಅಭ್ಯಾಸ ನಡೆಸಿದ್ದರು. ಕಟಾ ವಿಭಾಗದಲ್ಲಿ ಕವಿತಾ ಸ್ಪರ್ಧಿಸಲಿಲ್ಲ.


Spread the love