ಕರಾವಳಿಯನ್ನು ಅವಮಾನಿಸಿದ ಮುಖ್ಯಮಂತ್ರಿ ಕುಟುಂಬ :- ಕ್ಷಮೆಯಾಚನೆಗೆ ಕಾರ್ಣಿಕ್ ಆಗ್ರಹ
ಮಂಗಳೂರು: ಕೈಯಲ್ಲಿ ಸದಾ ನಿಂಬೆಹಣ್ಣು ಇಡಿದುಕೊಂಡು ಚುನಾವಣೆಯ ಸೋಲಿನ ಭೀತಿಯಲ್ಲಿರುವ, ರಾಜಕೀಯ ಚದುರಂಗದಾಟದಲ್ಲಿ ಆಕಸ್ಮತ್ ಪ್ರಧಾನಮಂತ್ರಿ ಹಾಗೂ ಸಾಂದರ್ಭಿಕ ಮುಖ್ಯಮಂತ್ರಿಯಾಗುವ ಅವಕಾಶಗಿಟ್ಟಿಸಿಕೊಂಡಿದ್ದರು ಕರಾವಳಿ ಜಿಲ್ಲೆಯ ಜನತೆಯಿಂದ ತಿರಸ್ಕೃತರಾಗಿರುವ ಈ ಕುಟುಂಬದ ಸದಸ್ಯರು ಕರಾವಳಿಗರ ಬಗ್ಗೆ ಕೀಳಾಗಿ ಮಾತನಾಡುವುತ್ತಿರುವುದು ಅಸಹ್ಯಕರ ವರ್ತನೆಯಾಗಿದ್ದು ಈ ರೀತಿಯ ಬೇಜವಾಬ್ದಾರಿ ಹೇಳಿಕೆಗಳನ್ನು ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾ|ಗಣೇಶ್ ಕಾರ್ಣಿಕ್ ತೀವ್ರವಾಗಿ ಖಂಡಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆಯಿಂದ ತಿರಸ್ಕಾರ ಆಗಿದ್ದರೂ ಮುಖ್ಯಮಂತ್ರಿಯಾಗುವ ಲಾಟರಿ ಪಡೆದ ನಂತರ ಆಂತರಿಕ ಸಮಸ್ಯೆಗಳಲ್ಲಿ ಮುಳುಗಿರುವ ಮುಖ್ಯಮಂತ್ರಿ ರಾಜ್ಯದ ಅಭಿವೃದ್ಧಿಯ ಬಗ್ಗೆ ಗಮನ ಕೊಡದೆ ತನ್ನ ಪಕ್ಷಕ್ಕೆ ಕರಾವಳಿಯಲ್ಲಿ ನೆಲೆಯಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕಾಗಿ ಕರಾವಳಿ ಜನರಿಗೆ ತಿಳುವಳಿಕೆ ಕಡಿಮೆ ಎನ್ನುವ ಅತ್ಯಂತ ಕೀಳುಮಟ್ಟದ ಅವಮಾನಕಾರಿ ಹೇಳಿಕೆ ನೀಡಿರುವುದು ಕರಾವಳಿ ಜನತೆಗೆ ಮಾಡಿರುವ ಅಪಮಾನ.
ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾದ ಬಳಿಕ ಅಪವಿತ್ರ ಮೈತ್ರಿಯ ಅಭ್ಯರ್ಥಿಗಳಿಗೆ ಕರಾವಳಿ ಜನತೆ ಮತ ನೀಡದಿರುವುದರಿಂದ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಹಿನ್ನಡೆ ಅನುಭವಿಸಲು ಕಾರಣ ಎನ್ನುವ ಲೋಕೋಪಯೋಗಿ ಸಚಿವ ರೇವಣ್ಣ ಅವರ ಅತ್ಯಂತ ಅಪ್ರಭುದ್ಧ ಹಾಗೂ ಬೇಜವಾಬ್ದಾರಿ ಹೇಳಿಕೆ ಕಳೆದ ಎರಡು ಮೂರು ದಶಕಗಳಿಂದ ನಿರಂತರವಾಗಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಫಲಿತಾಂಶಗಳಲ್ಲಿ ಪ್ರಥಮ ಹಾಗೂ ದ್ವೀತಿಯ ಸ್ಥಾನಗಳಿಸುತ್ತಿದ್ದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಶಿಕ್ಷಣ ವ್ಯವಸ್ಥೆಗೆ ಹಾಗೂ ಈ ಭಾಗದ ವಿದ್ಯಾರ್ಥಿಗಳಿಗೆ ಮಾಡಿರುವ ಅವಮಾನ.
ಹಾಸನ ಜಿಲ್ಲೆಯ ಉತ್ತಮ ಫಲಿತಾಂಶಕ್ಕಾಗಿ ತಮ್ಮ ಪತ್ನಿಯನ್ನ ಅಭಿನಂದಿಸಿರುವ ಮಾನ್ಯ ಲೋಕೋಪಯೋಗಿ ಸಚಿವರು ಕಳೆದ ಹತ್ತಾರು ವರ್ಷಗಳ ಹಿನ್ನಡೆಯ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವರೆಂದು ಭಾವಿಸುತ್ತೇನೆ ಜೊತೆಗೆ ಕರಾವಳಿ ಕರ್ನಾಟಕದಲ್ಲಿ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಅವರ ಅಭ್ಯರ್ಥಿಗಳ ಸೋಲನ್ನು ಒಪ್ಪಿಕೊಂಡಿರುವುದಕ್ಕಾಗಿ ಅಭಿನಂದಿಸುತ್ತೇನೆ.
ರಾಜ್ಯದ ಬೆರಳೆಣಿಕೆಯ ಜಿಲ್ಲೆಗಳಿಗೆ ಸೀಮಿತವಾಗಿರುವ ಮುಖ್ಯಮಂತ್ರಿಗಳ ಕುಟುಂಬ ಇನ್ನಾದರೂ ಎಚ್ಚೆತ್ತುಕೊಂಡು ಕರ್ನಾಟಕದ ರಾಜಕಾರಣದಲ್ಲಿ ಅವರ ಅಲ್ಪ ಪ್ರಮಾಣದ ಇರುವಿಕೆ, ಕೊಡುಗೆ ಹಾಗೂ ವ್ಯಾಪ್ತಿಯನ್ನು ಮನಗಂಡು ಈ ರೀತಿಯ ಬೇಜವಾಬ್ದಾರಿ ಹೇಳಿಕೆಗಳನ್ನು ನಿಲ್ಲಿಸಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳ, ಹೆತ್ತವರ, ಶಿಕ್ಷಕರ ಹಾಗೂ ಮಹಾ ಜನತೆಯ ಬೇಷರತ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸುತ್ತೇನೆ. ನಿಮ್ಮ ಈ ರೀತಿಯ ಹೇಳಿಕೆಗಳು ನೀವು ಸಾಂದರ್ಭಿಕವಾಗಿ ಅಲಂಕರಿಸಿರುವ ಶಾಸನ ಬದ್ದ ಸ್ಥಾನಗಳಿಗೆ ಶೋಭೆ ತರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.