Home Mangalorean News Kannada News ಕರಾವಳಿಯನ್ನು ನಿರ್ಲಕ್ಷ್ಯ ಮಾಡಿದರೆ ಸಿಎಂ ಮನೆ ಮುಂದೆ ಧರಣಿ – ಬಿಜೆಪಿ ಶಾಸಕರ ಎಚ್ಚರಿಕೆ

ಕರಾವಳಿಯನ್ನು ನಿರ್ಲಕ್ಷ್ಯ ಮಾಡಿದರೆ ಸಿಎಂ ಮನೆ ಮುಂದೆ ಧರಣಿ – ಬಿಜೆಪಿ ಶಾಸಕರ ಎಚ್ಚರಿಕೆ

Spread the love

ಕರಾವಳಿಯನ್ನು ನಿರ್ಲಕ್ಷ್ಯ ಮಾಡಿದರೆ ಸಿಎಂ ಮನೆ ಮುಂದೆ ಧರಣಿ – ಬಿಜೆಪಿ ಶಾಸಕರ ಎಚ್ಚರಿಕೆ

ಉಡುಪಿ: ಜಿಲ್ಲೆಯ ಐದು ಕ್ಷೇತ್ರಗಳಿಗೆ ಕಾಂಗ್ರೆಸ್ ಸರಕಾರ ಅನುದಾನ ನೀಡದೆ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದೆ. ಕರಾವಳಿಯ ನಿರ್ಲಕ್ಷ 10 ದಿನದೊಳಗೆ ಸರಿಪಡಿಸದಿದ್ದರೆ, ಅನುದಾನಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ಕೂರುವುದಾಗಿ ಬಿಜೆಪಿಯ ಐದು ಶಾಸಕರು ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಐದು ಶಾಸಕರು ಹಾಗೂ ಸಂಸದರು ಜಂಟಿಯಾಗಿ ಸುದ್ದಿಗೋಷ್ಟಿ ನಡೆಸಿದ್ದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಕಳ ಶಾಸಕ ಸುನೀಲ್ ಕುಮಾರ್ ಕರಾವಳಿಯ ಮೂರು ಜಿಲ್ಲೆಗಳನ್ನು ರಾಜ್ಯ ಕಾಂಗ್ರೆಸ್ ಸರಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದು ಒಂದು ರೂಪಾಯಿ ಅನುದಾನ ಬಿಡುಗಡೆ ಮಾಡಿಲ್ಲ. ಬಿಜೆಪಿ ಶಾಸಕರು ಎಂಬ ಕಾರಣಕ್ಕೆ ಜಿಲ್ಲಾಡಳಿತ ನಿರಂತರ ಅಸಹಕಾರ ನೀಡುತ್ತಿದೆ ಎಂದರು

ಸದಾ ಜನಪ್ರತಿನಿಧಿಗಳು ಕಾರ್ಯಕರ್ತರ ಟಾರ್ಗೆಟ್ ಮಾಡಲಾಗುತ್ತಿದ್ದು, ಶಾಸಕರ ಅನುದಾನದಲ್ಲಿ ತಾರತಮ್ಯ ಮಾಡಲಾಗುತ್ತಿದೆ.ಕಳೆದ ಮಳೆಗಾಲದಲ್ಲಿ ಸಿಎಂ ಸಿದ್ದರಾಮಯ್ಯ ಕೆಡಿಪಿ ಸಭೆ ಮಾಡಿದ್ದರು ಆದರೆ ಸಭೆಯ ಯಾವ ನಿರ್ಣಯ ಕೂಡ ಅನುಷ್ಠಾನಕ್ಕೆ ತಂದಿಲ್ಲ. ಕಾಲುಸಂಕಕ್ಕೆ 50 ಕೋಟಿ ಕೊಡುತ್ತೇವೆ ಎಂದಿದ್ದರು ಆದನ್ನು ನೀಡಲ್ಲ. 2023ರ ಮಳೆ ಹಾನಿಯಿಂದಾದ ರಸ್ತೆ ರಿಪೇರಿಗೆ, ಬೆಳೆ ಹಾನಿ, ಶಾಲಾ ಕಟ್ಟಡ ರಿಪೇರಿ ಹಣ ನೀಡಿಲ್ಲ ಅಲ್ಲದೆ ಎರಡು ಬಜೆಟ್ ನಲ್ಲಿ ಉಡುಪಿಗೆ ಯಾವುದೇ ಯೋಜನೆ ನೀಡಿಲ್ಲ ಎಂದರು.

ಜಿಲ್ಲಾಡಳಿತ 240 ಕೋಟಿ ಮಳೆಹಾನಿ ಲೆಕ್ಕ ನೀಡಿದ್ದು, ಸರ್ಕಾರ ದಿವಾಳಿಯಾಗಿದೆ ಒಂದು ಪೈಸೆ ಬಿಡುಗಡೆ ಮಾಡಿಲ್ಲ. ಇದು ಕರಾವಳಿಯ ನಿರ್ಲಕ್ಷ್ಯವಲ್ಲದೆ ಮತ್ತಿನ್ನೇನು ಎಂದು ಪ್ರಶ್ನಿಸಿದ ಸುನೀಲ್ ಕುಮಾರ್ ಐದು ಜನ ಬಿಜೆಪಿ ಶಾಸಕರು ಇದ್ದಾರೆ ಎನ್ನುವ ಕಾರಣಕ್ಕೆ ಅನುದಾನ ನೀಡುತ್ತಿಲ್ಲ ಎಂದರು.

ತಾಲೂಕು ಮಟ್ಟದ ಅಧಿಕಾರಿಗಳ ನಿರಂತರ ವರ್ಗಾವಣೆ ದಂಧೆ ನಡೆಯುತ್ತಿದ್ದು, ಶಾಸಕರಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಅಸಹಕಾರ ತೋರುತ್ತಾರೆ. ಕರಾವಳಿಯ ಎಲ್ಲಾ ಬಿಜೆಪಿ ಶಾಸಕರು ನಮ್ಮ ಬೇಡಿಕೆ ನೀಡಿದ್ದು, ಈ ಅನುದಾನವನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು. ಕರಾವಳಿಯ ನಿರ್ಲಕ್ಷ 10 ದಿನದೊಳಗೆ ಸರಿಪಡಿಸದಿದ್ದರೆ, ಅನುದಾನಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ಕೂರಲಿದ್ದೇವೆ. ಈ ಧರಣಿಗೆ ಸರಕಾರ ಅವಕಾಶ ನೀಡಬಾರದು ಎಂದರು.

ರಸ್ತೆಗಳ ಪ್ಯಾಚ್ ವರ್ಕ್ ಗೂ ಹಣ ನೀಡಿಲ್ಲ ಇದರಿಂದಾಗಿ ಗ್ರಾಮೀಣ ರಸ್ತೆಗಳಲ್ಲಿ ಓಡಾಡುವ ಸ್ಥಿತಿ ಇಲ್ಲ. ಇದಕ್ಕೆಲ್ಲಾ ಹತ್ತು ದಿನದಲ್ಲಿ ಮುಖ್ಯಮಂತ್ರಿಗಳು ಉತ್ತರ ಕೊಡಬೇಕು. ಮೊದಲ ಹಂತದಲ್ಲಿ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ಕೂರಲಾಗುವುದು ಎರಡನೇ ಹಂತದಲ್ಲಿ ಎರಡು ಜಿಲ್ಲೆಗಳಲ್ಲಿ ಜನಾಂದೋಲನ ನಡೆಸಲಾಗುವುದು ಎಂದರು.

ಯಶ್ಪಾಲ್ ಸುವರ್ಣ ಮತ್ತು ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆಯಿರಿ
ಯಶ್ಪಾಲ್ ಸುವರ್ಣ ಮತ್ತು ಕಾರ್ಯಕರ್ತರ ಮೇಲಿನ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಸುನೀಲ್ ಕುಮಾರ್ ಅವರು ನ್ಯಾಯಕ್ಕಾಗಿ ಪ್ರತಿಭಟನೆ ಮಾಡಿದ ಉಡುಪಿ ಶಾಸಕರ ಹಾಗೂ ಕಾರ್ಯಕರ್ತರ ಮೇಲೆ ಮೊಕದ್ದಮೆ ಹಾಕಿದ್ದಾರೆ. ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಉಡುಪಿಯಲ್ಲಿ ಪ್ರಜಾಪ್ರಭುತ್ವ ನೆಲೆಯ ಹೋರಾಟಕ್ಕೆ ಅವಕಾಶವಿಲ್ಲ ಎಂದರೆ ಇದು ವ್ಯವಸ್ಥೆಗೆ ಮಾರಕವಾದ ವಿಚಾರ ಎಂದರು

ಸರಕಾರ ಕೂಡಲೇ ಶಾಸಕ ಯಶ್ಪಾಲ್ ಸುವರ್ಣ ಮತ್ತು ಕಾರ್ಯಕರ್ತರ ಮೇಲೆ ಹಾಕಿದ ಪ್ರಕರಣಗಳನ್ನು ವಾಪಾಸು ಪಡೆಯಬೇಕು ಇಲ್ಲವಾದರೆ ಮುಂದೆಅನಗತ್ಯ ಅನಾಹುತಗಳಿಗೆ ಅವಕಾಶ ಮಾಡಿಕೊಡಬೇಡಿ ಎಂದು ಎಚ್ಚರಿಕೆ ನೀಡಿದರು.

ಕರಾವಳಿಯ ಮೂರು ಜಿಲ್ಲೆಯ ಉಸ್ತುವಾರಿ ಸಚಿವರು ಶಾಸಕರ ಅಹವಾಲು ಕೇಳಬೇಕು. ಆದರೆ ಜನಪ್ರತಿನಿಧಿಗಳಿಗಿಂತ ಹೆಚ್ಚು ಆದ್ಯತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯದ ಸಂಕೇತ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆಯ ವರಿಷ್ಠರನ್ನು ಭೇಟಿ ಮಾಡಿ ದೂರು ಕೊಡುತ್ತೇವೆ. ಶಾಸಕರು ರಸ್ತೆಗೆ ಇಳಿಯುವ ಮುಂಚೆ ಸರ್ಕಾರ ಎಚ್ಚೆತ್ತುಕೊಂಡು ಕರಾವಳಿಗೆ ನ್ಯಾಯ ಕೊಡಬೇಕು ಎಂದರು.

ಮುಸ್ಲಿಂ ಮುಖಂಡರು ತಮ್ಮ ಸಮುದಾಯದ ಯುವಕರನ್ನು ಹದ್ದುಬಸ್ತಿಲ್ಲಿಡುವ ಕಾರ್ಯ ಮಾಡಿ
ಬಿಸಿರೋಡ್ ಘಟನೆಯ ಕುರಿತು ಮಾತನಾಡಿದ ಸುನೀಲ್ ಕುಮಾರ್ ಕೆಲವು ವ್ಯಕ್ತಿಗಳು ಬಿಸಿ ರೋಡ್ ನಲ್ಲಿ ಅತಿರೇಕದ ವರ್ತನೆಯ ಹೇಳಿಕೆಗಳನ್ನು ನೀಡಿದ್ದರು. ಇದು ಹಿಂದೂ ಕಾರ್ಯಕರ್ತರಿಗೆ ಆಕ್ರೋಶಕ್ಕೆ ಕಾರಣವಾಯಿತು. ಯಾರೂ ಕೂಡ ಪ್ರಚೋದನೆಯನ್ನು ಕೊಡುವುದು ಸರಿಯಲ್ಲ. ಇಂದು ಬಿಸಿ ರೋಡ್ ಚಲೋ ಕಾರ್ಯಕ್ರಮ ನಡೆದಿದೆ

ಮುಸ್ಲಿಂ ಮುಖಂಡರು ತಮ್ಮ ಯುವಕರನ್ನು ಹದ್ದುಬಸ್ತಿಲ್ಲಿಡುವ ಕಾರ್ಯ ಮಾಡಬೇಕು. ಒಂದು ವೇಳೆ ನಿಮ್ಮ ಯುವಕರನ್ನ ನಿಯಂತ್ರಣದಲ್ಲಿ ಇಟ್ಟಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಮುಸಲ್ಮಾನರಿಗೆ ಯಾವ ಮೆರವಣಿಗೆ ನಡೆಸಲು ಸಾಧ್ಯವಾಗಲಿಕ್ಕಿಲ್ಲ. ಮೊದಲು ಬಹಿರಂಗವಾಗಿ ಸವಾಲು ಹಾಕುವುದು ನಿಲ್ಲಿಸಿ ಇದನ್ನು ಎಚ್ಚರಿಕೆ ಎಂದು ಪರಿಗಣಿಸಿ ಎಂದರು.

ನಿಮ್ಮ ಹತ್ತಾರು ಸವಾಲುಗಳನ್ನು ಎದುರಿಸಲು ನಾವು ನಮ್ಮ ಯುವಕರು ತಯಾರಿದ್ದೇವೆ. ಅನಾಹುತಗಳು ಆಗಬಾರದು ಎಂಬ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಕರಾವಳಿಯ ಸೌಹಾರ್ದತೆ ಹಾಳು ಮಾಡುವ ಕೆಲಸ ಮಾಡಬೇಡಿ. ಹಿಂದುಗಳಿಗೆ ಗೌರವ ಕೊಟ್ಟು ಜೀವನ ನಡೆಸುವುದು ಕಲಿಯಿರಿ ಎಂದು ಮುಸಲ್ಮಾನ ಯುವಕರಿಗೆ ಧಾರ್ಮಿಕ ಮುಖಂಡರಿಗೆ ಆಗ್ರಹಿಸಿದರು.

ಮಂಡ್ಯ ಕಲ್ಲು ಹೋರಾಟ ಪ್ರಕರಣದಲ್ಲಿ ಕೇರಳದ ಆರೋಪಿಗಳು ಇದ್ದು ಇಂತಹ ದಾಳಿ ನಡೆದಾಗ ಪಿಎಫ್ ಐ ಪಾತ್ರ ಮತ್ತೆ ಮತ್ತೆ ಸಾಬೀತಾಗಿದೆ. ಕೇರಳದ ನಂಟು ಕೂಡ ತುಂಬಾ ಸಲ ಕೇಳಿ ಬಂದಿದ್ದು, ಸರಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಅಂತರಾಷ್ಟ್ರೀಯ ಷಡ್ಯಂತ್ರ ಎಂಬುದನ್ನು ಒಪ್ಪಿಕೊಳ್ಳಲು ಸರಕಾರ ತಯಾರಿಲ್ಲ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದಾಗಲೂ ಒಪ್ಪಿಕೊಂಡಿಲ್ಲ. ಓಲೈಕೆ ರಾಜಕಾರಣದಿಂದ ಹೊರಬಂದು ಆಂತರಿಕ ಭದ್ರತೆಯ ಸವಾಲು ಎಂದು ಪರಿಗಣಿಸಿ. ಮೆರವಣಿಗೆಗಳು ನಡೆದಾಗ ಈ ರೀತಿಯ ಘಟನೆಗಳು ಆಗಬಾರದು ಎಚ್ಚರಿಕೆವಹಿಸಿ ಎಂದರು

ಮುನಿರತ್ನ ಬಂಧನ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು ಜನಪ್ರತಿನಿಧಿಗಳಾದವರು ಎಚ್ಚರಿಕೆಯಿಂದ ನಡೆಯಬೇಕು. ಪಕ್ಷದ ಕಡೆಯಿಂದ ನಾವು ಸ್ಪಷ್ಟನೆ ಕೇಳಿದ್ದೇವೆ, ನಾನು ಮುನಿರತ್ನ ಪ್ರಕರಣವನ್ನು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಆದರೆ ಸರ್ಕಾರ ದ್ವೇಷದ ರೂಪದಲ್ಲಿ ನಡೆದುಕೊಳ್ಳುತ್ತಿದೆ. ದ್ವೇಷದ ಭಾವನೆ ಬಿಟ್ಟು ಜನಪ್ರತಿನಿಧಿಗಳ ಗೌರವ ಕಾಪಾಡಿ. ಈ ಪ್ರಕರಣದ ಹಿನ್ನೆಲೆ ಏನು ಅನ್ನೋದು ತನಿಖೆಯ ಮೂಲಕ ಹೊರ ಬರಬೇಕು ಎಂದರು.


Spread the love

Exit mobile version