ಕರಾವಳಿಯಲ್ಲಿ ಆಷಾಢ ಅಮಾವಾಸ್ಯೆ ಆಚರಣೆ

Spread the love

ಕರಾವಳಿಯಲ್ಲಿ ಆಷಾಢ ಅಮಾವಾಸ್ಯೆ ಆಚರಣೆ

ಉಡುಪಿ: ರಾಜ್ಯದಲ್ಲಿ ಹಲವೆಡೆ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಮಹಾಮಾರಿಯ ನಡುವೆಯೇ ಕರಾವಳಿಯಲ್ಲಿ ಇಂದು ಆಷಾಢ ಅಮಾವಾಸ್ಯೆಯನ್ನು ಆಚರಿಸಲಾಗುತ್ತಿದೆ. ಕರಾವಳಿಯಾದ್ಯಂತ ಆಟಿ ಅಮಾವಾಸ್ಯೆ ಎಂದು ಕರೆಯಲ್ಪಡುವ ಈ ಆಚರಣೆಯ ಪ್ರಮುಖ ಕೇಂದ್ರಬಿಂದು ಆಟಿ ಕಷಾಯ.

ಹಲವಾರು ಕೌತುಕಗಳ ಕಣಜವಾಗಿರುವ ತುಳುನಾಡಿನ ಆಚರಣೆಗಳ ಬಗ್ಗೆ ಆಟಿ ಅಮಾವಾಸ್ಯೆಗೆ ಬಹಳ ವಿಶಿಷ್ಟವಾದ ಮಹತ್ವವಿದೆ ಕೋರೋಣ ಕಾಯಿಲೆ ಬಂದ ಬಳಿಕ ನಗರ ಭಾಗದ ಜನರು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರ ಕಡೆಗೆ ಗಮನ ಹರಿಸಿದರೆ ತುಳುವರು ಮಾತ್ರ ಅನಾದಿಕಾಲದಿಂದ ಪ್ರತಿವರ್ಷವೂ ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನೈಸರ್ಗಿಕವಾದ ಒಂದಷ್ಟು ವಸ್ತುಗಳನ್ನು ಬಳಸಿ ಕಷಾಯ ತಯಾರಿಸಿ ಕೊಡುತ್ತ ಬಂದಿದ್ದಾರೆ. ಈ ಕಷಾಯ ದೊಳಗೆ ಅದ್ಭುತವಾದ ಶಕ್ತಿ ಇದೆ ಎನ್ನುತ್ತದೆ ಆಯುರ್ವೇದ.

ತುಳುವ ರದ್ದು ಕೃಷಿ-ಬದುಕು. ಆಟಿ ತಿಂಗಳ ಒಳಗೆ ಕೃಷಿಯನ್ನು ಮುಗಿಸಿದ ಬಳಿಕ ಇಲ್ಲಿನ ಜನರು ತಮ್ಮ ಆರೋಗ್ಯದ ಕಡೆಗೆ ಕೊಂಚ ಗಮನ ಹರಿಸುತ್ತಾರೆ. ಈ ಅವಧಿಯಲ್ಲಿ ಅವರು ತಮ್ಮ ಆಹಾರಕ್ರಮವನ್ನು ಬದಲಾಯಿಸುತ್ತಾರೆ. ಪ್ರಕೃತಿಯಲ್ಲಿ ಸಿಕ್ಕುವ ಅನೇಕ ವಸ್ತುಗಳನ್ನು ಬಳಸಿ ಔಷಧೀಯ ಆಹಾರವನ್ನು ಸೇವಿಸುವ ಇಲ್ಲಿನ ಜನರು ಆಟಿ ಅಮಾವಾಸ್ಯೆಯ ದಿನ ಹಾಳೆ ಮರದ ತೊಗಟೆಯಿಂದ ತಯಾರಿಸಲಾದ ಕಷಾಯವನ್ನು ಕುಡಿಯುತ್ತಾರೆ. ಮರದಿಂದ ಈ ತೊಗಟೆಯನ್ನು ಬೇರ್ಪಡಿಸಲು ಲೋಹವನ್ನು ಬಳಸದೆ ಕಲ್ಲನ್ನು ಬಳಸುವುದು ಒಂದು ವಿಶೇಷ. ಇದೇ ವೇಳೆ ತುಳುವರು ತಮ್ಮ ಗದ್ದೆಗೆ ಕಾಸರಕನ ಕೋಲನ್ನು ಊರಿ ಬರುತ್ತಾರೆ ಇದು ಗದ್ದೆಗೆ ಬರುವ ಕ್ರಿಮಿ ಕೀಟಗಳ ಬಾಧೆಯನ್ನು ದೂರಮಾಡುತ್ತದೆ ಎಂಬ ನಂಬಿಕೆ ಜನರಲ್ಲಿದೆ.

ಈ ಹಾಳೆ ಮರದ ವಿಶೇಷತೆ ಏನು?
ಈ ಮರದ ಎಲೆಗಳಲ್ಲಿ ಏಳು ಎಳೆಗಳಿರುವ ಕಾರಣ ಸಪ್ತ ಪರ್ಣ ಎಂದು ಹೆಸರು ಬಂದಿದೆ. ಹಾಲೆ ಮರದಲ್ಲಿ ಜ್ವರ, ಕ್ಯಾನ್ಸರ್ನಂತಹ ಕಾಯಿಲೆಗಳನ್ನು ಗುಣಪಡಿಸುವ ಹಲವು ಬಗೆಯ ಔಷಧೀಯ ಗುಣವಿದೆ. ಆಯುರ್ವೇದ ಔಷಧಿಗಳಲ್ಲಿ ಇದು ಧಾರಾಳವಾಗಿ ಬಳಕೆಯಾಗುತ್ತಿದೆ. ಈ ಔಷಧಿಗಳನ್ನು ಸೇವಿಸುವವರಿಗೆ ಅದರಲ್ಲಿ ಹಾಲೆ ಮರದ ಅಂಶಗಳಿವೆ ಎನ್ನುವುದೂ ಗೊತ್ತಿರುವುದಿಲ್ಲ. ವಿಶೇಷವೆಂದರೆ ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವ ಈ ವಿಚಾರವನ್ನು ಆಯುರ್ವೇದ ತಿಳಿವಳಿಕೆ ಇಲ್ಲದ ಸಾಮಾನ್ಯ ವ್ಯಕ್ತಿಗಳೂ ಪಾಲಿಸುವ ಸಂಸ್ಕೃತಿ ಕಾಣಬಹುದಾಗಿದೆ. ಮಳೆ ಜೊತೆಗೆ ಬಿಸಿಲೂ ಬರುತ್ತದೆ. ವೈರಾಣುಗಳಿಂದಾಗಿ ಡೆಂಗ್ಯು, ಇಲಿ ಜ್ವರ, ಮಲೇರಿಯಾದಂತಹ ಜ್ವರ ಬರುವ ಸಾಧ್ಯತೆ ಇರುತ್ತೆ. ಆಯುರ್ವೇದದಲ್ಲಿ ಇಂತಹ ಜ್ವರಗಳನ್ನು ವಿಷಮ ಜ್ವರ ಎಂದು ಕರೆಯುತ್ತಾರೆ ಹಾಲೆ ಮರದ ಕೆತ್ತೆಯಲ್ಲಿ ಬ್ಯಾಕ್ಟೀರಿಯಾ ನಿರೋಧಕ ಶಕ್ತಿ ಇದೆ. ಇದಕ್ಕೆ ಕಿಡ್ನಿ ಸಮಸ್ಯೆ, ಕ್ರಿಮಿ ನಿವಾರಕ, ಚರ್ಮ ರೋಗ ಪರಿಹರಿಸುವ ಶಕ್ತಿಯೂ ಇದೆ. ಹೀಗಾಗಿ ಹವಾಮಾನ ವೈಪರೀತ್ಯದ ಈ ವೇಳೆ ಕಷಾಯ ಕುಡಿಯುವ ಕ್ರಮ ಬಂದಿದೆ ಎನ್ನಲಾಗಿದೆ

ಮನೆಗೆ ತಂದ ತೊಗಟೆಯನ್ನು ಚೆನ್ನಾಗಿ ಅರೆದು ಅದಕ್ಕೆ ಮತ್ತೊಂದಿಷ್ಟು ಔಷಧೀಯ ಪದಾರ್ಥಗಳನ್ನು ಸೇರಿಸಿ ಕಷಾಯ ತಯಾರಿಸುತ್ತಾರೆ. ಬಳಿಕ ಇದಕ್ಕೆ ಬೆಣಚುಕಲ್ಲಿನ ಒಗ್ಗರಣೆಯನ್ನು ಬೆಣ್ಣೆಯ ಜೊತೆಗೆ ಹಾಕಲಾಗುತ್ತದೆ.
ತುಳುನಾಡಿನಾದ್ಯಂತ ಜನರು ಜಾತಿ ಭೇದ ಮರೆತು ಮುಂಜಾನೆಯ ಸೂರ್ಯೋದಯಕ್ಕೂ ಮೊದಲು ಇದರ ಕಷಾಯವನ್ನು ತಯಾರಿಸಿ ಕುಡಿಯುತ್ತಾರೆ. ಮಂಜು ನಿರೋಧಕ ಅಂಶವನ್ನು ಹೊಂದಿರುವ ಈ ಕಷಾಯ ಅತ್ಯಂತ ಕಹಿಯಾಗಿರುವ ಕಾರಣ ಇದರ ಜೊತೆಗೆ ಬೆಲ್ಲ ಅಥವಾ ಗೋಡಂಬಿ ಬೀಜವನ್ನ ಸೇವಿಸುವುದು ರೂಢಿ. ಹಳೆ ಮರಕ್ಕೆ ಆಯುರ್ವೇದದಲ್ಲಿ ಸಪ್ತಪರ್ಣಿ ಎಂಬ ಹೆಸರು ಇದ್ದು ಇದು ಅತ್ಯಂತ ಔಷಧೀಯ ಗುಣವನ್ನು ಹೊಂದಿದ ಮರವಾಗಿದೆ.

ಎಚ್ಚರ ಅಗತ್ಯ
ಸಾರ್ವಜನಿಕರು ಅದೇ ದಿನ ಮುಂಜಾವ ತೊಗಟೆ ತೆಗೆಯಲು ಹೋಗುತ್ತಾರೆ. ನಸುಕಿನಲ್ಲಿ ಸರಿಯಾಗಿ ತೋರದೆ ಹಾಲೆ ಮರದ ಬದಲು ಬೇರೊಂದು ಮರದ ಕೆತ್ತೆ ತಂದು ಜೀವಕ್ಕೆ ಅಪಾಯ ಆಗುವ ಸಾಧ್ಯತೆಯೂ ಇರುವುದರಿಂದ ಜಾಗರೂಕತೆ ವಹಿಸಬೇಕು. ಹಿಂದಿನ ದಿನವೇ ಗುರುತಿಸಿ ಮರುದಿನ ಸಂಗ್ರಹಿಸುವುದು ಉತ್ತಮ. ಇಲ್ಲವಾದರೆ ಹಾಲೆ ಮರದ ಎಲೆಯನ್ನು ಸ್ಪಷ್ಟವಾಗಿ ಗುರುತಿಸಿ ಅದರ ತೊಗಟೆಯನ್ನು ತೆಗೆಯಬೇಕು. ಬ್ರಾಹ್ಮೀ ಮುಹೂರ್ತದಲ್ಲಿ ಮರಗಳಲ್ಲಿ ಉದ್ದೇಶಿತ ಗುಣಗಳು ಹೆಚ್ಚಿಗೆ ಇರುವುದರಿಂದ ಮುಂಜಾವವೇ ತೊಗಟೆ ಸಂಗ್ರಹಿಸುವ ಕ್ರಮ ಚಾಲ್ತಿಗೆ ಬಂದಿರಬಹುದು.

ಒಟ್ಟಾರೆಯಾಗಿ ಆಟಿ ಕಷಾಯ ಕೇವಲ ಆಚರಣೆಯಾಗಿರದೆ ವೈಜ್ನಾನಿಕ ಮತ್ತು ಆರೋಗ್ಯದ ಸತ್ಯವನ್ನು ಒಳಗೊಂಡಿದೆ. ಆಟದ ಮೂಲಕ ಪಾಠ ಹೇಳುವಂತೆ ಆಚರಣೆಯ ಮೂಲಕ ಆರೋಗ್ಯ ಕಾಪಾಡುವ ಯೋಚನೆ ನಿಜಕ್ಕೂ ಗ್ರೇಟ್

ಒಟ್ಟಿನಲ್ಲಿ ಕರೋನಾ ಮಹಾಮಾರಿ ವ್ಯಾಪಕವಾಗಿ ಹಬ್ಬುತ್ತಿರುವ ಈ ಸಮಯದಲ್ಲಿ ತುಳುವರ ಪಾರಂಪರಿಕ ಕಷಾಯ ಈಗ ಮತ್ತಷ್ಟು ಮಹತ್ವ ಪಡೆದಿದೆ.


Spread the love