ಕರಾವಳಿಯ ಪ್ರವಾಸೋದ್ಯಮ ಹಿನ್ನಡೆಗೆ ಬಿಜೆಪಿ ಜನಪ್ರತಿನಿಧಿಗಳೇ ಕಾರಣ – ಕೆ ವಿಕಾಸ್ ಹೆಗ್ಡೆ
ಮಂಗಳೂರು: ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ನೈರ್ಮಲ್ಯ, ಬ್ಯಾಂಕಿಂಗ್ ಇತ್ಯಾದಿ ಎಲ್ಲಾ ರಂಗಗಳಲ್ಲಿ ಅತ್ಯಂತ ಮುಂಚೂಣಿಯಲ್ಲಿದ್ದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಇವತ್ತು ಹಿನ್ನಡೆಯನ್ನು ಕಾಣಲು ಇಲ್ಲಿನ ಬಿಜೆಪಿ ಜನಪ್ರತಿನಿದಿನಗಳು ಕೊಡುಗೆ ದೊಡ್ಡದು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ
ಚುನಾವಣೆಯ ಗೆಲುವಿಗಾಗಿ ಭಾವನಾತ್ಮಕ ವಿಚಾರಗಳನ್ನು ಮುಂದೆ ಇಟ್ಟು ಧರ್ಮ ಧರ್ಮದ ನಡುವೆ, ಜಾತಿ ಜಾತಿಯ ನಡುವೆ ವಿಷ ಬೀಜ ಬಿತ್ತಿ ಕೋಮು ಸೌಹಾರ್ದತೆ ಹಾಳಾದ ಕಾರಣ ಪ್ರವಾಸೋದ್ಯಮ, ಇನ್ನಿತರ ಹೂಡಿಕೆಗೆ ಜನ ಹಿಂಜರಿಯುತ್ತಿರುವ ಕಾರಣ ಕರಾವಳಿ ಜಿಲ್ಲೆಗಳು ಉದ್ಯಮ, ಉದ್ದಿಮೆಗಳಲ್ಲಿ ಹಿನ್ನಡೆ ಅನುಭವಿಸುತ್ತಿವೆ. ಇವತ್ತು ಪ್ರವಾಸೋದ್ಯಮದಲ್ಲಿ ಕರ್ನಾಟಕ ಕರಾವಳಿಗಿಂತ ಗೋವಾ ಮತ್ತು ಕೇರಳ ಅಭಿವೃದ್ಧಿಯನ್ನು ಹೊಂದಿವೆ. ಆದರೆ ಕೇರಳ ಮತ್ತು ಗೋವಾದಷ್ಟೇ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಕರ್ನಾಟಕ ಕರಾವಳಿಯಲ್ಲಿ ಇದೆ, ಆದರೆ ಇಲ್ಲಿನ ಜನಪ್ರತಿನಿದಿನಗಳ ಇಚ್ಛಾಶಕ್ತಿಯ ಕೊರತೆಯಿಂದ ನಾವು ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಇತ್ಯಾದಿಗಳ ಪ್ರಗತಿಯಲ್ಲಿ ಹಿನ್ನಡೆಯನ್ನು ಕಾಣುತ್ತಿದ್ದೇವೆ. ಇವತ್ತು ರಾಜ್ಯದ ಉಪಮುಖ್ಯಮಂತ್ರಿಗಳು ಕರಾವಳಿ ಜಿಲ್ಲೆಗಳ ಪ್ರವಾಸೋದ್ಯಮ ಹಾಗೂ ಇತರೆ ಅಭಿವೃದ್ಧಿ ವಿಚಾರಗಳ ಬಗ್ಗೆ ವಿಶೇಷ ಚರ್ಚೆಗೆ ಅವಕಾಶ ನೀಡುವ ವಿಚಾರ ಪ್ರಸ್ತಾಪ ಮಾಡಿದ್ದು ಕರಾವಳಿ ಜಿಲ್ಲೆಗಳ ಆರ್ಥಿಕ, ಔದ್ಯೋಗಿಕ ಅಭಿವೃದ್ಧಿಗೆ ಒಂದು ಉತ್ತಮ ಕೊಡುಗೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.