ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವರಿಗೆ ಬೀಳ್ಕೊಡುಗೆ

Spread the love

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವರಿಗೆ ಬೀಳ್ಕೊಡುಗೆ

ಕಳೆದ 21 ತಿಂಗಳುಗಳಿಂದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ನಿವೇದಿತ್ ಆಳ್ವರವರ ಕಾರ್ಯಾವಧಿ ದಿನಾಂಕ: 24.08.2016ಕ್ಕೆ ಮುಕ್ತಾಯಗೊಂಡಿರುವುದರಿಂದ ಪ್ರಾಧಿಕಾರದ ಪರವಾಗಿ ಕಾರ್ಯದರ್ಶಿಗಳಾದ ಪ್ರದೀಪ್ ಡಿಸೋಜಾರವರು ಅಧ್ಯಕ್ಷರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

costal-development-board

ನವೆಂಬರ್ 2014ರಿಂದ ಅನ್ವಯಿಸಿ ನಿವೇದಿತ್ ಆಳ್ವರವರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಪಕ್ಷವು ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಪ್ರಯತ್ನವನ್ನು ಮಾಡಿರುತ್ತಾರೆ. ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ಮಾಡಿರುವ ಒಂದು ಗುರುತರವಾದ ಸಾಧನೆಯೆಂದರೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಪಾತ್ರ ಮತ್ತು ಪ್ರಕಾರ್ಯಗಳನ್ನು ಪರಿಷ್ಕರಿಸಿ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದ್ದು. ಈ ಹಿಂದೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ಕೇವಲ ಹೊಸ ಯೋಜನೆಗಳನ್ನು ಗುರುತಿಸಿ ಪ್ರಾಥಮಿಕ ಸರ್ವೇ ವರದಿ/ಸಮಗ್ರ ಯೋಜನಾ ವರದಿಗಳನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವ ಮೂಲಕ ಮಾರ್ಗದರ್ಶನ ನೀಡುವ ಸಂಸ್ಥೆ ಮಾತ್ರವಾಗಿತ್ತು. ಶ್ರೀ ನಿವೇದಿತ್ ಆಳ್ವರವರು ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯಭಾರ ವಹಿಸಿಕೊಂಡ ತಕ್ಷಣ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಪ್ರಾಧಿಕಾರಕ್ಕೆ ಒದಗಿಸುವ ಅನುದಾನವನ್ನು ಬಳಸಿಕೊಂಡು ಹೊಸ ಹೊಸ ಯೋಜನೆಗಳನ್ನು ಗುರುತಿಸುವುದರ ಜೊತೆಗೆ ಅವುಗಳನ್ನು ವಿವಿಧ ಸರ್ಕಾರಿ ಇಲಾಖೆ/ಸರ್ಕಾರದಿಂದ ಅಂಗೀಕೃತ ಸಂಸ್ಥೆಗಳ ಮೂಲಕ ಕಾಮಗಾರಿಗಳನ್ನು ಅನುಷ್ಠಾನಿಸುವ ಅವಕಾಶವನ್ನು ಪಡೆದುಕೊಂಡಿರುವುದು. ಇದರಿಂದಾಗಿ ಸರ್ಕಾರವು ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಒದಗಿಸುವ ಅನುದಾನದ ಪ್ರಯೋಜನವು ಕರಾವಳಿ ಜಿಲ್ಲೆಗಳ ಜನಸಾಮಾನ್ಯರಿಗೆ ನೇರವಾಗಿ ಮತ್ತು ಶೀಘ್ರವಾಗಿ ದೊರೆಯುವಂತಾಗಿದೆ.

2015-16ನೇ ಸಾಲಿನಲ್ಲಿ ಹಳ್ಳಿ-ಹಳ್ಳಿಗಳ ನಡುವೆ, ತಾಲೂಕು ಕೇಂದ್ರಗಳ ನಡುವೆ ಸಂಪರ್ಕ ಕೊಂಡಿಯಾಗಿ ಕಾಲುಸಂಕಗಳ ರಚನೆ, ತೂಗುಸೇತುವೆಗಳ ನಿರ್ಮಾಣ, ಕರ್ನಾಟಕ ಕರಾವಳಿ ಜಿಲ್ಲೆಗಳ ಪ್ರಮುಖ ಕಸುಬಾದ ಮೀನುಗಾರಿಕೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆಗಳ ನಿರ್ಮಾಣ, ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಉದ್ಯಾನವನಗಳ ನಿರ್ಮಾಣ ಹಾಗೂ ಕೌಶಾಲ್ಯಭಿವೃದ್ಧಿ ತರಬೇತಿ, ವಿಚಾರ ಸಂಕಿರಣ ಇತ್ಯಾದಿ ಕಾರ್ಯಕ್ರಮಗಳನ್ನು ಪ್ರಾಧಿಕಾರದ ವತಿಯಿಂದ ಕೈಗೆತ್ತಿಕೊಳ್ಳಲಾಗಿದೆ.

ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ಪ್ರಾರಂಭವಾದಗಿನಿಂದ ಈ ಹಿಂದಿನ ವಾರ್ಷಿಕ ಸಾಲುಗಳಲ್ಲಿ ಕನಿಷ್ಠ 1 ಕೋಟಿ ಹಾಗೂ ಗರಿಷ್ಠ 3 ಕೋಟಿ ಅನುದಾನವನ್ನು ಸರ್ಕಾರವು ಒದಗಿಸಿರುತ್ತದೆ. ಶ್ರೀ ನಿವೇದಿತ್ ಆಳ್ವರವರು ಪ್ರಾಧಿಕಾರದ ಅಧ್ಯಕ್ಷ ಹುದ್ದೆಯಲ್ಲಿ ಕಾರ್ಯಭಾರವಹಿಸಿಕೊಂಡ ನಂತರ ಕಳೆದ ವಾರ್ಷಿಕ ಸಾಲಿನಲ್ಲಿ 10 ಕೋಟಿ (2015-16) ಹಾಗೂ ಈ ಸಾಲಿನಲ್ಲಿ ರೂ 15 ಕೋಟಿ (2016-17) ಅನುದಾನವನ್ನು ಒದಗಿಸಲಾಗಿದೆ. 2015-16ನೇ ಸಾಲಿನಲ್ಲಿ ಒದಗಿಸಲಾದ ಅನುದಾನದಲ್ಲಿ ಶೇಕಡ 95ರಷ್ಟನ್ನು ವಿನಿಯೋಗಿಸಿ ಕಾಮಗಾರಿಗಳನ್ನು ಅನುಷ್ಠಾನಿಸಲಾಗಿದೆ ಹಾಗೂ ಈ ವಾರ್ಷಿಕ ಸಾಲಿನಲ್ಲಿ ಹಲವಾರು ಜನಪರ ಯೋಜನಾ ಕಾಮಗಾರಿಗಳನ್ನು ಅನುಷ್ಠಾನಿಸಲು ಉದ್ದೇಶಿಸಲಾಗಿದೆ.

ಜನಪ್ರತಿನಿಧಿಗಳಿಂದ ಅಥವಾ ಸಾರ್ವಜನಿಕರಿಂದ ಬರುವ ಯಾವುದೇ ಮನವಿ ಅಥವಾ ಪ್ರಸ್ತಾವನೆಗಳಿಗೆ ಸ್ಪಂದಿಸಿ, ತಾವೇ ಖುದ್ದಾಗಿ ಪ್ರಸ್ತಾಪಿತ ಕಾಮಗಾರಿಗಳ ಸ್ಥಳಸಮೀಕ್ಷೆಯನ್ನು ನಡೆಸಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಪ್ರಾಧಿಕಾರದ ವತಿಯಿಂದ ಅಥವಾ ಇತರ ಇಲಾಖೆಗಳ ವತಿಯಿಂದ ಅನುದಾನದ ನೆರವನ್ನು ಒದಗಿಸಿಕೊಡುವ ಪ್ರಾಮಾಣಿಕ ಯತ್ನವನ್ನು ಮಾಡಿದ್ದು, ತನಗೆ ನೀಡಿರುವ ಹುದ್ದೆಗೆ ಶಕ್ತ್ಯಾನುಸಾರ ನ್ಯಾಯ ಸಲ್ಲಿಸುವ ಪ್ರಯತ್ನವನ್ನು ಮಾಡಿರುತ್ತಾರೆ.

ಈ ಸಂದರ್ಭದಲ್ಲಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ನಿಂಗಸೆಟ್ಟಿ, ವ್ಯವಸ್ಥಾಪಕರಾದ  ಮಂಜುನಾಥ ಶೆಟ್ಟಿ, ಲೆಕ್ಕಪರಿಶೋಧಾನಾಧಿಕಾರಿಯಾದ ಸುಲೋಚನಾ, ವಲಯಾಧಿಕಾರಿಗಳಾದ ರಘುರಾಮ ರಾವ್, ಹರಿಹರ ವಿ ಹರಿಕಾಂತ್ ಹಾಗೂ ಕಛೇರಿ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love