ಕರಾವಳಿ ಕನ್ನಡಿಗರ ರಕ್ಷಣೆಗೆ ಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ 

Spread the love

ಕರಾವಳಿ ಕನ್ನಡಿಗರ ರಕ್ಷಣೆಗೆ ಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ 

ಮಂಗಳೂರು : ಕೋವಿಡ್ 19 ಹಿನ್ನೆಲೆಯಲ್ಲಿ ಅತಂತ್ರರಾಗಿರುವ ಕರಾವಳಿ ಸೇರಿದಂತೆ ಕನ್ನಡಿಗರ ರಕ್ಷಣೆಗೆ ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಅವರು ಬುಧವಾರ ತಮ್ಮ ಕಚೇರಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಮುಂಬೈ ಸೇರಿದಂತೆ ಹೊರರಾಜ್ಯಗಳಲ್ಲಿ ಕರೋನಾ ಲಾಕ್‍ಡೌನ್‍ನಿಂದ ಕನ್ನಡಿಗರು ಸಂಕಷ್ಟಕ್ಕೀಡಾಗಿರುವ ಮಾಹಿತಿ ಇದೆ. ಅವರಿಗೆ ಅಗತ್ಯ ಸೌಲಭ್ಯ, ರಕ್ಷಣೆ ಸೇರಿದಂತೆ ಅವರ ಕ್ಷೇಮ ವಿಚಾರಿಸಲು ಮತ್ತು ಅಗತ್ಯ ನೆರವು ನೀಡಲು ರಾಜ್ಯ ಮಟ್ಟದ ವಾರ್ ರೂಂನಲ್ಲಿ ಪ್ರತ್ಯೇಕ ಹೆಲ್ಪ್ ಲೈನ್ ಸ್ಥಾಪಿಸಲು ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಯವರೊಂದಿಗೆ ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1848 ವಾರ್ಡ್‍ಗಳಲ್ಲಿ ಆಶಾ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ, ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಗೃಹರಕ್ಷಕರು ಹಾಗೂ ಅಗತ್ಯಬಿದ್ದರೆ ಶಿಕ್ಷಣ ಇಲಾಖೆ ಸಿಬ್ಬಂದಿಗಳನ್ನು ಇವರೊಂದಿಗೆ ಕಾರ್ಯನಿಯೋಜಿಸಲಾಗುವುದು ಎಂದರು.

ಬಂಟ್ವಾಳ ಪೇಟೆಯಲ್ಲಿ ಇತ್ತೀಚೆಗೆ 50 ವರ್ಷದ ಮಹಿಳೆಯೊಬ್ಬರು ಕೋವಿಡ್ ಸೋಂಕಿತರಾಗಿ ನಿಧನಹೊಂದಿದ ಹಿನ್ನೆಲೆಯಲ್ಲಿ ಬಂಟ್ವಾಳ ಪೇಟೆಯನ್ನು ಸೀಲ್ ಡೌನ್ ಮಾಡಲಾಗಿದ್ದು, ಮೃತರ ಮನೆಯ 1 ಕಿ.ಮೀ. ವ್ಯಾಪ್ತಿಯಲ್ಲಿ 603 ಮನೆಗಳು ಹಾಗೂ 5 ಕಿ.ಮೀ. ವ್ಯಾಪಿಯಲ್ಲಿ 22106 ಕುಟುಂಬಗಳಿವೆ. ಆಶಾ ಕಾರ್ಯಕರ್ತೆಯರು ಪ್ರತೀ ಮನೆಮನೆಗೆ ತೆರಳಿ ಪ್ರತೀ ವ್ಯಕ್ತಿಯ ತಪಾಸಣೆ ಕೈಗೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು. ಬಂಟ್ವಾಳ ಘಟನೆಯಿಂದಾಗಿ ಜಿಲ್ಲಾಡಳಿತವು ಮತ್ತಷ್ಟು ಕಠಿಣ ಕ್ರಮ ಜಾರಿಗೆ ತರಲಿದೆ ಎಂದರು.

ಖಾಸಗೀ ಆಸ್ಪತ್ರೆಗಳಿಗೆ ಬರುವ ಶಂಕಿತ ಕರೋನಾ ಪ್ರಕರಣಗಳಿಗೆ ವಿಳಂಭ ಮಾಡದೇ, ತಕ್ಷಣವೇ ಅನಾರೋಗ್ಯ ಪೀಡಿತರನ್ನು ಕೋವಿಡ್ ಆಸ್ಪತ್ರೆಗೆ ಶಿಫಾರಸು ಮಾಡಲು ಆದೇಶಿಸಲಾಗಿದೆ. ಈಗಾಗಲೇ ಜಿಲ್ಲೆಯಾದ್ಯಂತ ಗರ್ಭಿಣಿಯರು, ವೃದ್ಧರು, ಟಿ.ಬಿ. ಎಚ್.ಐ.ವಿ. ಪೀಡಿತರು, ಅಸ್ತಮಾ ರೋಗಿಗಳು ಸೇರಿದಂತೆ ವಿಶೇಷ ರೋಗಿಗಳತ್ತ ಗಮನಹರಿಸಿ, ಕಾಲಕಾಲಕ್ಕೆ ಅವರಿಗೆ ಸೂಕ್ತ ವೈದ್ಯಕೀಯ ತಪಾಸಣೆ ಸೇರಿದಂತೆ ಆರೋಗ್ಯ ನೆರವು ಒದಗಿಸಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ವೆನ್‍ಲಾಕ್ ಕೋವಿಡ್ ಆಸ್ಪತ್ರೆಯನ್ನು ಸುಸಜ್ಜಿತಗೊಳಿಸಲು 10 ವೈದ್ಯರು, 21 ನರ್ಸ್‍ಗಳು, 5 ಪ್ರಯೋಗಶಾಲಾ ತಂತ್ರಜ್ಞರು, ಡಿ ಗ್ರೂಪ್ ಸಿಬ್ಬಂದಿಗಳನ್ನು ನೇಮಕಾತಿ ಮಾಡಲು ಸರಕಾರ ಅನುಮತಿ ನೀಡಿದೆ ಎಂದು ಅವರು ಹೇಳಿದರು.

ದ.ಕ. ಜಿಲ್ಲೆಯಲ್ಲಿ 2.71 ಲಕ್ಷ ಬಿಪಿಎಲ್ ಕಾರ್ಡುದಾರರಿದ್ದು, ಈ ಪೈಕಿ 2.60 ಲಕ್ಷ ಕಾರ್ಡುಗಳಿಗೆ ಪ್ರತೀ ವ್ಯಕ್ತಿಗೆ ತಲಾ 10 ಕೆ.ಜಿ.ಯಂತೆ ಅಕ್ಕಿ ವಿತರಿಸಲಾಗಿದೆ. ಎಪಿಎಲ್ ಕಾರ್ಡುಗಳಿಗೆ ಆಸಕ್ತಿ ವ್ಯಕ್ತಪಡಿಸಿದವರಿಗೆ ತಲಾ 10 ಕೆ.ಜಿ. ಅಕ್ಕಿ ವಿತರಿಸಲಾಗಿದೆ. ಮೇ-ಜೂನ್ ತಿಂಗಳಲ್ಲಿ ಎಲ್ಲಾ ಎಪಿಎಲ್ ಕಾರ್ಡುದಾರರಿಗೆ ಅಗತ್ಯವೆನಿಸಿದರೆ ಕೆ.ಜಿ.ಗೆ ರೂ. 15ರ ದರದಲ್ಲಿ 10 ಕೆ.ಜಿ.ಯಂತೆ ಅಕ್ಕಿ ವಿತರಿಸಲಾಗುವುದು. ಮುಂದಿನ ತಿಂಗಳಿಂದ ಪ್ರತೀ ಬಿಪಿಎಲ್ ಕಾರ್ಡಿಗೆ 4 ಕೆ.ಜಿ. ಗೋಧಿ, 1 ಕೆ.ಜಿ. ತೊಗರಿ ಬೇಳೆ, ಕುಚ್ಚಲಕ್ಕಿ ಸೇರಿದಂತೆ ವ್ಯಕ್ತಿಗೆ ತಲಾ 10 ಕೆ.ಜಿ. ಅಕ್ಕಿ ವಿತರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಗಂಜೀಮಠ ಬಿಗ್ ಬ್ಯಾಗ್ ಸಂಸ್ಥೆಯ ಕಾರ್ಯಾಚರಣೆಗೆ ಸಂಭಂಧಿಸಿದಂತೆ ಈಗಾಗಲೇ ಅಲ್ಲಿನ ಸ್ಥಳೀಯ ನಿವಾಸಿಗಳು, ಜನಪ್ರತಿನಿಧಿಗಳು ಒಪ್ಪಿದರೆ ಮಾತ್ರ ಕಾರ್ಖಾನೆ ತೆರೆಯಬಹುದು. ಈ ಬಗ್ಗೆ ಮಾಲೀಕರು ಹಾಗೂ ಸಾರ್ವಜನಿಕರು ಮುಕ್ತ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಬಹುದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಮಾಡದಂತೆ ಹಾಗೂ ಯಾವುದೇ ಗೊಂದಲ ಉಂಟು ಮಾಡದಂತೆ ಕಾರ್ಖಾನೆಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.


Spread the love