ಕರಾವಳಿ, ಮೀನುಗಾರರು ಹಾಗೂ ಮೀನುಗಾರಿಕೆಯನ್ನು ಸಂಪೂರ್ಣ ಕಡೆಗಣಿಸಿದ ಬಜೆಟ್:ಶಾಸಕ ಗುರುರಾಜ್ ಗಂಟಿಹೊಳೆ

Spread the love

ಕರಾವಳಿ, ಮೀನುಗಾರರು ಹಾಗೂ ಮೀನುಗಾರಿಕೆಯನ್ನು ಸಂಪೂರ್ಣ ಕಡೆಗಣಿಸಿದ ಬಜೆಟ್:ಶಾಸಕ ಗುರುರಾಜ್ ಗಂಟಿಹೊಳೆ

ಬೈಂದೂರು : ಮೀನುಗಾರಿಕೆ, ಮೀನುಗಾರರನ್ನು ಮತ್ತು ಕರಾವಳಿಯನ್ನು ದ್ವೇಷಿಸುವ ಬಜೆಟ್ ಇದಾಗಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಪ್ರತಿಕ್ರಿಯಿಸಿದ್ದಾರೆ

ರಾಜ್ಯದ ಆರ್ಥಿಕತೆಗೆ ತನ್ನದೆ ಕೊಡುಗೆ ನೀಡುತ್ತಾ ಬರುತ್ತಿರುವ ಮೀನುಗಾರಿಕೆ ವಲಯದ ಉತ್ತೇಜನಕ್ಕೆ ಯಾವುದೇ ಯೋಜನೆಯನ್ನು ಘೋಷಣೆ ಮಾಡಿಲ್ಲ. ಅಲ್ಲದೆ, ಮೀನುಗಾರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇವು. ಕರಾವಳಿಯ ಅಭಿವೃದ್ಧಿ ದೃಷ್ಟಿಯಿಂದ ಯಾವುದೇ ಕ್ಷೇತ್ರಕ್ಕೂ ಸರಿಯಾಗಿ ಹಂಚಿಕೆಯೂ ಮಾಡಿಲ್ಲ. ಕರಾವಳಿಯ ಕಡಲ್ಕೊರತೆ ಸಹಿತ ಹಲವು ಸಮಸ್ಯೆಗಳ ಬಗ್ಗೆ ಈಗಾಗಲೇ ಸರ್ಕಾರದ ಗಮನವನ್ನು ಸೆಳೆಯಲಾಗಿತ್ತು. ವಿಶೇಷವಾಗಿ ಕಿಂಡಿ ಅಣೆಕಟ್ಟು ಮತ್ತು ಕಾಲುಸಂಕ ನಿರ್ಮಾಣಕ್ಕೆ ವಿಶೇಷ ಅನುದಾನ ಮೀಸಲಿಡಬಹುದು ಎಂಬ ನಿರೀಕ್ಷೆ ಇತ್ತು. ಅದನ್ನು ಬಜೆಟ್ ಹುಸಿ ಗೊಳಿಸಿದೆ, ಭತ್ತದ ಕೃಷಿ, ನೀರಾವರಿ ಯೋಜನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಲಾಗಿದೆ.

ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಸಿಗಬಹುದು ಎಂದು ಅಂದಾಜಿಸಿದ್ದೇವು. ತ್ರಾಸಿ ಮರವಂತೆ ಬೀಚ್ ಅಭಿವೃದ್ಧಿ ಸಹಿತ ಯಾವುದೇ ಬೀಚ್ಗಳ ಅಭಿವೃದ್ಧಿಗೂ ಅನುದಾನ ನೀಡಲಿಲ್ಲ. ಅಲ್ಲದೆ, ಕರಾವಳಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಯಾವ ಕ್ರಮವೂ ಆಗಿಲ್ಲ. ಕರಾವಳಿ ಹಾಗೂ ಇಲ್ಲಿನ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಬಜೆಟ್ ಇದಾಗಿದೆ ಎಂದು ತಿಳಿಸಿದ್ದಾರೆ.


Spread the love