ಯಾರು ಹೇಳಿದ್ದು ಕರಾವಳಿ ಹಿಂದುತ್ವದ ಭದ್ರ ಕೋಟೆ ಅಂತ…? ಕರಾವಳಿ ಎಲ್ಲ ಧರ್ಮಕ್ಕೂ ಭದ್ರಕೋಟೆ: ಡಿಕೆಶಿ
ಮಂಗಳೂರು: ಕರಾವಳಿ ಎಲ್ಲ ಧರ್ಮಕ್ಕೂ ಭದ್ರಕೋಟೆಯಾಗಿದೆ. ಇಲ್ಲಿರುವ ದೇವಸ್ಥಾನ, ದರ್ಗಾ, ನೀರು, ಪರಿಸರ, ವಾತಾವರಣ ಸಮುದ್ರ ಎಲ್ಲವೂ ನೀತಿ ಮೇಲೆ ಇದೆ. ಜಾತಿ ಮೇಲೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿ ದೇವಾಲಯಕ್ಕೆ ರವಿವಾರ ಭೇಟಿ ಮಾಡಿದ ಬಳಿಕ ಶಿವಕುಮಾರ್ ಮಾಧ್ಯಮದವರ ಜೊತೆ ಮಾತನಾಡುತ್ತಿದ್ದರು.
‘ಕರಾವಳಿ ಹಿಂದುತ್ವದ ಭದ್ರ ಕೋಟೆ. ಇಲ್ಲಿ ಕಾಂಗ್ರೆಸ್ ಮೃದು ಹಿಂದುತ್ವದ ಧೋರಣೆ ಅನುಸರಿಸುತ್ತಿದೆ’ ಎಂಬುದಾಗಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, ‘ಯಾರು ಹೇಳಿದ್ರು .. ಕರಾವಳಿ ಹಿಂದುತ್ವದ ಭದ್ರ ಕೋಟೆ ಅಂತ ? ಕರಾವಳಿಯ ಶೈಕ್ಷಣಿಕ ರಂಗ, ಧಾರ್ಮಿಕ ಕ್ಷೇತ್ರ, ಬ್ಯಾಂಕ್ ಗಳಲ್ಲಿ ಎಲ್ಲರೂ ಇದ್ದಾರೆ. ಬರೀ ಹಿಂದೂ ಮಾತ್ರ ಇರುವುದಲ್ಲ. ಆದರೆ ಬಿಜೆಪಿಯವರು ಮಾತ್ರ ಹಿಂದು ನಾವು ಮುಂದೆ ಹೇಳಿಕೊಳ್ಳುತ್ತಿದ್ದಾರೆ. ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಜೈನರು, ಬಿಲ್ಲವರು, ಒಕ್ಕಲಿಗರು, ಲಿಂಗಾಯತರು ಸೇರಿದಂತೆ ಎಲ್ಲ ಜನಾಂಗವನ್ನು ಒಂದೇ ಎಂದು ಕಾಂಗ್ರೆಸ್ ಹೇಳುತ್ತಿದೆ. ಬಿಜೆಪಿ ಹೇಳುತ್ತಿರುವ ವಿಚಾರದ ಬಗ್ಗೆ ನಾನ್ಯಾಕೆ ಟೀಕೆ ಮಾಡಬೇಕು.ಕಾಂಗ್ರೆಸ್ ಗೆ ರಾಜ್ಯದ ಜನತೆ ಆಶೀರ್ವಾದ ಮಾಡಿದ್ದಾರೆ. ನಮ್ಮ ಉದ್ದೇಶ ಎಲ್ಲ ಜನರಿಗೂ ರಕ್ಷಣೆ ಮಾಡುವುದಾಗಿದೆ ಎಂದರು.
ಜಾತಿ ಜನ ಗಣತಿ ಬಗ್ಗೆ ರಾಹುಲ್ ಗಾಂಧಿ ಪತ್ರದ ಬಗ್ಗೆ ಕೇಳಿದ ಪ್ರಶ್ನೆಗೆ ಡಿಕೆಶಿ, ರಾಹುಲ್ ಗಾಂಧಿ ಪತ್ರವನ್ನು ನಾನು ನೋಡಿಲ್ಲ. ಕಾಂಗ್ರೆಸ್ ಪಕ್ಷ ಎಲ್ಲರನ್ನು ಸರಿಸಮಾನವಾಗಿ ಕೊಂಡೊಯ್ಯುತ್ತದೆ. ನ್ಯಾಯ ಒದಗಿಸುತ್ತದೆ. ರಾಹುಲ್ ಗಾಂಧಿ ಅವರಿಗೆ ಯಾರಿಗೂ ಅನ್ಯಾಯ ಮಾಡಬೇಕೆಂದು ಎಲ್ಲೂ ಹೇಳಿಲ್ಲ. ತುಳಿತಕ್ಕೊಳಕ್ಕಾದ ಸಮಾಜಕ್ಕೆ ನ್ಯಾಯ ಒದಗಿಸುವುದು ಕಾಂಗ್ರೆಸ್ ಆಶಯವಾಗಿದೆ. ಎಲ್ಲ ಸಮುದಾಯಗಳಲ್ಲೂ ಬಡವರಿದ್ದಾರೆ ಅವರಿಗೆ ನಾವು ನ್ಯಾಯ ಒದಗಿಸಬೇಕಾಗಿದೆ ಎಂದು ಸ್ಪಷ್ಟಪಡಿಸಿದರು.
ಜಾತಿ ಗಣತಿ ಅವೈಜ್ಞಾನಿಕ ಎಂಬ ಆರೋಪದ ಬಗ್ಗೆ ನಾನೇನು ಆ ಬಗ್ಗೆ ಹೇಳುವುದಿಲ್ಲ. ಕೇವಲ ವರದಿ ಕೈಗೆ ಬಂದಿದೆ ನಾವು ವರದಿಯ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ವರದಿಯನ್ನು ಅಧ್ಯಯನ ಮಾಡದೆ, ಚರ್ಚಿಸದೆ ಆತುರವಾಗಿ ನಾವೇನು ನಿರ್ಧಾರದ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾವು ಧರ್ಮವನ್ನು ಕಾಪಾಡಬೇಕು: ನಮಗೆ ಧರ್ಮ ಬೇಕು, ಧರ್ಮಕ್ಕೆ ನಾವಲ್ಲ. ನಾವು ಧರ್ಮವನ್ನು ಕಾಪಾಡಬೇಕು ಎಂದು ಈ ಧರ್ಮಕ್ಷೇತ್ರ ಜನಸೇವೆ, ಸಾಮಾಜಿಕ, ಶೈಕ್ಷಣಿಕ ಸೇವೆ ಮಾಡಿಕೊಂಡು ಬಂದಿದೆ. ಇದಕ್ಕೆ ಸಹಕಾರ ನೀಡಬೇಕಾಗಿರುವುದು ನಮ್ಮ ಕರ್ತವ್ಯ ಎಂದರು.
ಕರಾವಳಿ ನಮ್ಮ ರಾಜ್ಯದ ಮುಖ್ಯವಾದ ಅಂಗ. ಮನುಷ್ಯನಿಗೆ ದೇಹದ ಅಂಗಗಳು ಎಷ್ಟು ಮುಖ್ಯವೋ, ಕರಾವಳಿ ಭಾಗವೂ ಅಷ್ಟೇ ಮುಖ್ಯ ಎಂದು ತಿಳಿಸಿದರು.
ಕರಾವಳಿಯಲ್ಲಿ ಭಾವನೆಯ ಮೇಲೆ ರಾಜಕಾರಣ ನಡೆಯುತ್ತಿರುವ ವಿಚಾರದ ಬಗ್ಗೆ ಕೇಳಿದಾಗ ಭಾವನೆಗಿಂತ ಬದುಕು ಮುಖ್ಯ. ಬದುಕಿನಲ್ಲಿ ರಾಜಕಾರಣ ಮಾಡಬೇಕು ಭಾವನೆಯಲ್ಲಿ ರಾಜಕಾರಣ ಮಾಡಬಾರದು. ಬದುಕು ಇದ್ದರೆ ರಾಜಕಾರಣ ಎಂದರು.
ಕರಾವಳಿಯಲ್ಲಿ ಕಾಂಗ್ರೆಸ್ ನಿಂದ ಇಬ್ಬರು ಮಾತ್ರ ಜಯಿಸಿದ್ದಾರೆ. ಬಿಜೆಪಿಗೆ ಜನರು ವೋಟು ಹಾಕಿ ಗೆಲ್ಲಿಸಿದರೂ, ರಾಜ್ಯದಲ್ಲಿರುವ ಬಲಿಷ್ಠ ಕಾಂಗ್ರೆಸ್ ಸರಕಾರದ ಮೂಲಕ ಪ್ರತಿಯೊಂದು ಕುಟುಂಬಕ್ಕೂ ಪ್ರಯೋಜನವಾಗುತ್ತಿದೆ. ಬಿಜೆಪಿಯಿಂದ ಏನು ಸಿಗುತಿಲ್ಲ. ಇದನ್ನು ಜನರಿಗೆ ಮನದಟ್ಟು ಮಾಡಬೇಕು. ಮುಂದಕ್ಕೂ ಕಾಂಗ್ರೆಸ್ ಸರಕಾರ ಬರುತ್ತದೆ ಎಂದರು.