ಕರಾವೇ ಜಿಲ್ಲಾಧ್ಯಕ್ಷರ ಮನೆಯಿಂದ ರೂ 5.73 ಲಕ್ಷ ಮೌಲ್ಯದ ಅಕ್ರಮ ಮರಳು ಮುಟ್ಟುಗೋಲು

Spread the love

ಕರಾವೇ ಜಿಲ್ಲಾಧ್ಯಕ್ಷರ ಮನೆಯಿಂದ ರೂ 5.73 ಲಕ್ಷ ಮೌಲ್ಯದ ಅಕ್ರಮ ಮರಳು ಮುಟ್ಟುಗೋಲು

ಉಡುಪಿ:   ಪರವಾನಿಗೆ ಇಲ್ಲದೇ ಅಕ್ರಮವಾಗಿ ಮನೆಯ ಕಂಪೌಂಡಿನಲ್ಲಿ ಲಕ್ಷಾಂತರ ರು. ಮೌಲ್ಯದ ಮರಳನ್ನು ಸಂಗ್ರಹ ಮಾಡಿದ್ದ 3 ಪ್ರಕರಣಗಳನ್ನು ಉಡುಪಿ ಜಿಲ್ಲಾ ಪೋಲೀಸರು ಮತ್ತು ಕಂದಾಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆಯಲ್ಲಿ ಬೇಧಿಸಿದ್ದಾರೆ.

ಅನಂದ ಮರಕಲ ಅವರು ತಮ್ಮ ಮನೆಯ ಕಂಪೌಂಡಿನಲ್ಲಿ 50,220 ರು. ಮೌಲ್ಯದ 90 ಮೆಟ್ರಿಕ್ ಟನ್, ಅನ್ಸಾರ್ ಅಹ್ಮದ್ ಅವರು 3,59,910 ಲಕ್ಷ ರು. ಮೌಲ್ಯದ 645 ಮೆಟ್ರಿಕ್ ಟನ್ ಮತ್ತು ಮೈಮೂನ್ ಮತ್ತು ಅನ್ಸಾರ್ ಅಹ್ಮದ್ ಅವರು ಒಟ್ಟಾಗಿ 1,62,936 ರು. ಮೌಲ್ಯದ 292 ಮೆಟ್ರಿಕ್ ಟನ್ ಮರಳನ್ನು ಯಾವುದೇ ಪರವಾನಿಗೆ ಇಲ್ಲದೇ ಸಂಗ್ರಹಿಸಿಟ್ಟಿದ್ದರು ಎಂದು ಜಿಲ್ಲಾ ಪೋಲಿಸ್ ಇಲಾಖೆ ತಿಳಿಸದೆ. ಅಕ್ರಮವಾಗಿ ಮರಳು ಸಂಗ್ರಹಿಸಿದ   ಯಾರಿಗೂ ಮರಳು ತೆಗೆಯುವ ಅಥವಾ ಸಂಗ್ರಹಿಸುವ ಪರವಾನಿಗೆ ಇಲ್ಲ. ಆದ್ದರಿಂದ ಅವರು ಈ ಮರಳನ್ನು ಎಲ್ಲಿಂದ   ತಂದಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಮರಳನ್ನು ಮನೆಯ ಕಂಪೌಂಡಿನಲ್ಲಿ ಮುಚ್ಚಿಡಲಾಗಿತ್ತು.

ಈ ದಾಳಿಯನ್ನು ಬ್ರಹ್ಮಾವರ ಪ್ರಭಾರಿ ತಹಶೀಲ್ದಾರ್ ಪೂವಿತಾ, ಬ್ರಹ್ಮಾವರ ಇನ್ಸ್ ಪೆಕ್ಟರ್ ಸಂಪತ್, ಮೀಸಲು ಪೋಲೀಸ್ ಇನ್ಸ್ ಪೆಕ್ಟರ್ ರಾಘವೇಂದ್ರ ಮತ್ತು ಸಿಬ್ಬಂದಿಗಳು ನಡೆಸಿದ್ದರು. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ಪೈಕಿ ಅನ್ಸಾರ್ ಅಹ್ಮದ್ ಅವರು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾಗಿದ್ದು, ಜಿಲ್ಲಾಡಳಿತ ವಿರುದ್ಧ ಮರಳು ಸಮಸ್ಯೆಯೂ ಸೇರಿದಂತೆ ಹತ್ತಾರು ಬಗೆಯ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದರು ಆದರೆ ಅವರದ್ದೇ ಮನೆಯಲ್ಲಿ ಅಕ್ರಮ ಮರಳು ಪತ್ತೆಯಾಗಿರುವುದು ವಿಪರ್ಯಾಸವೇ ಸರಿ.

 


Spread the love