ಕರ್ತವ್ಯ ಮಾನವೀಯವಾಗಿರಲಿ-ಪಿಡಿಒಗಳಿಗೆ ರಘುಪತಿ ಭಟ್ ಕರೆ
ಉಡುಪಿ: ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆ ಸಮಯದಲ್ಲಿ ಅಧಿಕಾರ ನಿರ್ವಹಣೆಯ ಜೊತೆಗೆಜೊತೆಗೆ ಮಾನವೀಯ ಗುಣ ಬೆಳೆಸಿಕೊಂಡು ಕಾರ್ಯ ನಿರ್ವಹಿಸುವಂತೆ ಶಾಸಕ ರಘುಪತಿ ಭಟ್ ಕರೆ ನೀಡಿದರು.
ಅವರು ಸೋಮವಾರ, ಅಂಬಲಪಾಡಿಯ ಪ್ರಗತಿಸೌಧದಲ್ಲಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು ಹಾಗೂ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ, ಹೊಸದಾಗಿ ನೇಮಕಗೊಂಡ 50 ಮಂದಿ ಪಿಡಿಓಗಳಿಗೆ ಏರ್ಪಡಿಸಿದ್ದ ವೃತ್ತಿ ಬುನಾದಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಿಡಿಓ ಹುದ್ದೆ ಜನ ಸೇವೆ ಮಾಡಲು ಅತ್ಯಂತ ಉತ್ತಮ ಹುದ್ದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರುವ ಯೋಜನೆಗಳನ್ನು ಗ್ರಾಮೀಣ ಜನತೆಗೆ ತಲುಪಿಸುವಂತಹ ಜವಾಬ್ದಾರಿಯುತ ಹುದ್ದೆಯಾಗಿದ್ದು, ನಿರಂತರವಾಗಿ ಜನರ ಸಂಪರ್ಕ ಹೊಂದಿರಬೇಕಾಗಿದ್ದು, ಸರ್ಕಾರ ತಮಗೆ ನೀಡಿರುವ ಅಧಿಕಾರ ದುರುಪಯೋಗವಾಗಂತೆ, ಯಾವುದೇ ಆಮಿಷಗಳಿಗೆ ಒಳಗಾಗದೇ, ವ್ಯಕ್ತಿಗತವಾಗಿ ಕೆಲಸ ಮಾಡದೇ ಸಮಾಜಮುಖಿಯಾಗಿ, ಜನರಿಗೆ ಅನುಕೂಲವಾಗುವಂತೆ ಕಾರ್ಯ ನಿರ್ವಹಿಸಿ, ನಿಯಮಗಳ ಪಾಲನೆ ಜೊತೆಗೆ ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಿ ಎಂದು ಶಾಸಕರು ಹೇಳಿದರು.
ಪಂಚಾಯತ್ ಮಟ್ಟದಲ್ಲಿ ಕಾರ್ಯನಿರ್ವಹಣೆ ಸವಾಲಿನ ಕೆಲಸವಾಗಿದ್ದು, ಸ್ಥಳೀಯಾಡಳಿತ ಪ್ರÀ್ರತಿನಿಧಿಗಳ ವಿಶ್ವಾಸದೊಂದಿಗೆ , ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಜನಾನುರಾಗಿಯಾಗಿ ಕೆಲಸ ನಿರ್ವಹಿಸಿ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಸಿಇಓ ಶಿವಾನಂದ ಕಾಪಶಿ ಮಾತನಾಡಿ, ಗ್ರಾಮಗಳ ಅಭಿವೃದ್ದಿಯ ದಿಕ್ಕು ಬದಲಿಸುವ ಅವಕಾಶ ಪಿಡಿಓ ಗಳಿಗಿದೆ, ಕಾನೂನು ನಿಯಮಗಳನ್ನು ಅರ್ಥೈಸಿಕೊಂಡು, ಜನಪ್ರತಿನಿಧಿಗಳ ಸಹಕಾರ ಪಡೆದು ಕಾರ್ಯ ನಿರ್ವಹಿಸಿ, ಸರ್ಕಾರದ 29 ಇಲಾಖೆಗಳ ಹಲವು ಅಭಿವೃದ್ದಿ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುವ ನೇರ ಜವಾಬ್ದಾರಿ ಪಿಡಿಓ ಗಳಿಗಿದ್ದು, ಸಾರ್ವಜನಿಕರೊಂದಿಗೆ ಉತ್ತಮ ಮನೋಭಾವ ಬೆಳೆಸಿಕೊಂಡು ಮಾದರಿ ಪಿಡಿಓಗಳಾಗಿ ಎಂದು ಹೇಳಿದರು.
ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು ನ ಭೋದಕ ಸುದರ್ಶನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಕಾಯಕ್ರಮದಲ್ಲಿ ಉಡುಪಿ ತಾ.ಪಂ. ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು,ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಉಡುಪಿ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಮೋಹನ್ ರಾಜ್, ಪ್ರಾದ್ಯಾಪಕ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ , ಜಯವಂತ ರಾವ್ ಹಿರಿಯಡ್ಕ, ಡಿಮೆಲ್ಲೋ , ಮಮತಾ ಮತ್ತಿತರರು ಉಪಸ್ಥಿತರಿದ್ದರು.
ಎಸ್.ಕೆ.ಡಿ.ಅರ್.ಪಿ ಯ ಪ್ರಾಂಶುಪಾಲ ಅಶೋಕ್ ಸ್ವಾಗತಿಸಿದರು, ಉಡುಪಿ ತಾ.ಪಂ. ಸಹಾಯಕ ನಿರ್ದೇಶಕ ಹಿರಿಕೃಷ್ಣ ಶಿವತ್ತಾಯ ನಿರೂಪಿಸಿದರು.