Home Mangalorean News Kannada News ಕರ್ನಾಟಕದ ಮೀನಿಗೆ ಗೋವಾದಲ್ಲಿ ನಿಷೇಧ: ತೆರವಿಗೆ ಮೀನುಗಾರ ಕಾಂಗ್ರೆಸ್ ಆಗ್ರಹ

ಕರ್ನಾಟಕದ ಮೀನಿಗೆ ಗೋವಾದಲ್ಲಿ ನಿಷೇಧ: ತೆರವಿಗೆ ಮೀನುಗಾರ ಕಾಂಗ್ರೆಸ್ ಆಗ್ರಹ

Spread the love

ಕರ್ನಾಟಕದ ಮೀನಿಗೆ ಗೋವಾದಲ್ಲಿ ನಿಷೇಧ: ತೆರವಿಗೆ ಮೀನುಗಾರ ಕಾಂಗ್ರೆಸ್ ಆಗ್ರಹ

ಉಡುಪಿ: ಕರ್ನಾಟಕದ ಮೀನು ಕೊಂಡು ಕೊಳ್ಳುವುದಕ್ಕೆ ನಿಷೇಧ ಹೇರಿ ಮಾಡಿದ ಆದೇಶವನ್ನು ಹಿಂತೆಗೆಯಲು ಗೋವ ಸರಕಾರಕ್ಕೆ ಅಖಿಲ ಭಾರತ ಮೀನುಗಾರ ಕಾಂಗ್ರೆಸ್ ಸಮಿತಿಯ ನಿಯೋಗ ಮನವಿ ಮಾಡಿದೆ ಎಂದು ಸಮಿತಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಮಾಜಿ ಶಾಸಕ ಯು. ಆರ್. ಸಭಾಪತಿ ತಿಳಿಸಿದ್ದಾರೆ.

ಅವರು ಮಂಗಳವಾರ ಉಡುಪಿಯಲ್ಲಿ ಸುದ್ದಿಗೋಷ್ಠೀಯಲ್ಲಿ ಮಾತನಾಡಿ, ಕರ್ನಾಟಕದ ಮೀನಿಗೆ, ಮೀನು ಹಾಳಾಗದಂತೆ ಹಾನಿಕಾರಕ ರಾಸಾಯನಿಕ ಮಿಶ್ರಣಗೊಳಿಸುತ್ತಿದ್ದಾರೆ ಎನ್ನುವ ಅನುಮಾನದ ಆಧಾರದ ಮೇಲೆ ಗೋವಾ ಸರಕಾರವು ಕರ್ನಾಟಕದ ಮೀನು ಕೊಂಡುಕೊಳ್ಳುವಿಕೆಗೆ ಸಂಪೂರ್ಣವಾಗಿ ನಿಷೇಧ ಹೇರಿದೆ. ಇದರಿಂದಾಗಿ ಕರ್ನಾಟಕದ ಮೀನುಗಾರರು ಸಂಕಷ್ಟಕ್ಕೆ ಈಡಾಗಿದ್ದಾರೆ. ಇದೊಂದು ತಪ್ಪು ಪ್ರಚಾರವಾಗಿದ್ದು, ಕರ್ನಾಟಕದ ಮೀನುಗಾರರು ಸುಮಾರು ಮುನ್ನೂರು ಕಿಮಿ ದೂರದ ಗೋವಾಕ್ಕೆ ಕಳುಹಿಸುವ ಮೀನನ್ನು ಮಂಜುಗಡ್ಡೆಯೊಟ್ಟಿಗೆ ಮೀನನ್ನು ತುಂಬಿ ಸಣ್ಣ ಸಣ್ಣ ಲಾರಿಗಳಲ್ಲಿ ಕಳುಹಿಸುತ್ತಿದ್ದು ಅದಕ್ಕೆ ಯಾವುದೇ ಕಾರಣಕ್ಕೆ ರಾಸಾಯನಿಕ ಮಿಶ್ರಣಗೊಳಿಸಿ ಕಳುಹಿಸುವ ಅಗತ್ಯ ಇರುವುದಿಲ್ಲ. ಆದುದರಿಂದ ಗೋವಾ ಸರಕಾರ ಮಾಡಿರುವ ಆದೇಶದಿಂದ ಎರಡು ರಾಜ್ಯದ ಮೀನುಗಾರರಿಗೆ ತೊಂದರೆಯುಂಟಾಗುವುದರಿಂದ ಗೋವಾ ಸರಕಾರ ತಕ್ಷಣದಿಂದ ಈ ಆದೇಶವನ್ನು ಹಿಂತೆಗೆಯಬೇಕೆಂದು ನಿಯೋಗ ಗೋವಾ ಸರಕಾರದ ಮೀನುಗಾರಿಕ ಸಚಿವ ವಿನೋದ್ ದತ್ತಾರಮ ಪಾಲ್ಯಂಕರ್ ಮತ್ತು ಆಹಾರ ಪೊರೈಕೆ ಸಚಿವ ಬಿಸ್ವಜಿತ್ ರಾಣೆಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ ಎಂದರು.

ಮನವಿಯನ್ನು ಸ್ವೀಕರಿಸಿದ ಸಚಿವರು ತಮ್ಮ ಸರಕಾರವು ಕರ್ನಾಟಕದ ಮೀನು ಕೊಂಡು ಕೊಳ್ಳುವಿಕೆಗೆ ನಿಷೇಧವನ್ನು ಹೇರಿಲ್ಲ ಆದರೆ ಮೀನು ಸರಬರಾಜು ಮಾಂಡಲು ಕೆಲವು ನಿರ್ದಿಷ್ಠವಾದ ನಿಯಮಗಳನ್ನು ಪಾಲಿಸುವ ಆದೇಶವನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ. ಆ ನಿಯಮಗಳಂತೆ ಬರುವ ಮೀನುಗಳನ್ನು ಕೊಂಡುಕೊಳ್ಳುವ ಬಗ್ಗೆ ಸರಕಾರ ಯಾವುದೇ ತಕರಾರು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಗೋವಾ ಗಡಿಯಲ್ಲಿರುವ ಅಧಿಕಾರಿಗಳಿಗೆ ಸರಕಾರದ ಆದೇಶದ ಬಗ್ಗೆ ಪೂರ್ಣ ತಿಳುವಳಿಕೆ ಇಲ್ಲದೆ ಕರ್ನಾಟಕದಿಂದ ಬರುವ ಯಾವುದೇ ಮೀನಿನ ಲಾರಿಗಳನ್ನು ಸರಿಯಾಗಿ ತಪಾಸಣೆ ಮಾಡದೆ ಸಾರಾಸಗಟಾಗಿ ಹಿಂದಕ್ಕೆ ಕಳುಹಿಸುವುದರಿಂದ ಮೀನುಗಾರರಿಗೆ ಬಹಳಷ್ಟು ನಷ್ಟ ಸಂಭವಿಸುತ್ತದೆ ಎಂದು ಸಭಾಪತಿ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪೀರು ಎಮ್ ಸಾಬ್, ರಾಷ್ಟ್ರಿಯ ಕಾರ್ಯದರ್ಶಿ ಕಿರಣ್ ಕುಮಾರ್ ಉದ್ಯಾವರ ಹಾಗೂ ಇತರರು ಉಪಸ್ಥಿತರಿದ್ದರು.


Spread the love

Exit mobile version