ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧಿಕಾರದ ನೊಗ ಸ್ವೀಕರಿಸಿ ಸ್ಟ್ಯಾನಿ ಆಲ್ವಾರಿಸ್
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಹನ್ನೊಂದನೇ ಅಧ್ಯಕ್ಷರಾಗಿ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಅವರ ಪದಗ್ರಹಣ ಸಮಾರಂಭ ಅಕಾಡೆಮಿ ಹೊರಾಂಗಣದಲ್ಲಿ ಮಂಗಳವಾರ ನಡೆಯಿತು.
ಮುಖ್ಯ ಅತಿಥಿಗಳಾದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹಾಗೂ ಅಕಾಡೆಮಿ ಮಾಜಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಕೃಷಿ ಉಪಕರಣ ನೊಗವನ್ನು ನೀಡಿ ಸಾಂಕೇತಿಕವಾಗಿ ಅಧ್ಯಕ್ಷ – ಸದಸ್ಯರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.
ಸಂದೇಶ ನೀಡಿದ ಐವನ್ ಡಿಸೋಜ ಕೊಂಕಣಿ ಅಕಾಡೆಮಿ ಸ್ಥಾಪನೆಯಾದ ಬಳಿಕ ಕಳೆದ 30 ವರ್ಷಗಳಿಂದ ಭಾಷಾ ಪ್ರಗತಿಯಲ್ಲಿ ಸಾಕಷ್ಟು ಕೆಲಸಗಳಾಗಿವೆ. ಕೊಂಕಣಿ ಅಕಾಡೆಮಿ ರಾಜಕೀಯ ಸಂಸ್ಥೆಯಲ್ಲ. ಭಾಷೆಯಲ್ಲಿ ಗುಣಮಟ್ಟದ ಕೆಲಸ ಮಾಡಿ ಆ ಮೂಲಕ ಸಮಾಜದಲ್ಲಿ ಸೌಹಾರ್ದ ಒಗ್ಗಟ್ಟು ಮೂಡಿಸಲು ಇರುವಂತಾದ್ದು. ಕೊಂಕಣಿ ಭಾಷೆಯನ್ನು ಕಲಿತರೆ ಮಾತ್ರ ಭಾಷೆ ಬೆಳೆಯುತ್ತದೆ. ಈ ಬಗ್ಗೆ ನಿಮ್ಮ ಸಮಿತಿ ಗಮನ ಹರಿಸಲಿ. ಕೊಂಕಣಿ ಭವನವನ್ನು ಶೀಘ್ರವಾಗಿ ಸಂಪೂರ್ಣಗೊಳಿಸಲು ನನ್ನ ಸಹಕಾರ ಇರಲಿದೆ.’’ ಎಂದು ಹೇಳಿದರು.
ಅಧಿಕಾರ ಸ್ವೀಕರಿಸಿ ತನ್ನ ಭಾವನೆಗಳನ್ನು ಹಂಚಿಕೊಂಡ ಆಲ್ವಾರಿಸ್ “ಕಳೆದ 35 ವರ್ಷಗಳ ಕೊಂಕಣಿ ಸೇವೆಯನ್ನು ಗುರುತಿಸಿ ಸರಕಾರ ಜವಾಬ್ದಾರಿ ನೀಡಿದೆ. ಹಿಂದಿನ ಅಧ್ಯಕ್ಷರುಗಳ ಅವಧಿಯಲ್ಲಿ ಹಲವು ಕೆಲಸಗಳಾಗಿವೆ. ನಮ್ಮ ಸಮಿತಿ ಮುಂದೆ ಅರ್ಧದಲ್ಲಿ ನಿಂತ ಕೊಂಕಣಿ ಭವನ ಸಂಪೂರ್ಣಗೊಳಿಸುವ ಜವಾಬ್ದಾರಿಯಿದೆ. ಇನ್ನೂ ಮೂರು ಕೋಟಿ ಅನುದಾನದ ಅಗತ್ಯವಿದೆ. ವರ್ಷಾಂತ್ಯದೊಳಗೆ ಸಂಪೂರ್ಣಗೊಳಿಸಿ ಕೊಂಕಣಿ ಜನರಿಗೆ ಸಮರ್ಪಿಸಲಾಗುವುದು. ಇನ್ನುಳಿದಂತೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರಕಾರಗಳಲ್ಲಿ ಸಂಶೋಧನೆಗಳಿಗೆ ಪ್ರಾತಿನಿಧ್ಯ ನೀಡಿ, ಭಾಷಾ ಸಂಬಂಧಿ ಕಾರ್ಯಾಗಾರಗಳನ್ನು ಆಯೋಜಿಸಲಾಗುವುದು. ಎಲ್ಲರೂ ಸಹಕರಿಸಬೇಕು’’ ಎಂದು ಕೋರಿದರು.
ಸದಸ್ಯರಾದ ವಂ. ಡಾ. ಪ್ರಶಾಂತ್ ಮಾಡ್ತಾ ಬೆಂಗಳೂರು, ರೊನಾಲ್ಡ್ ಕ್ರಾಸ್ತಾ, ನವೀನ್ ಲೋಬೊ, ಸಪ್ನಾ ಮೇ ಕ್ರಾಸ್ತಾ, ಸಮರ್ಥ ಭಟ್, ಸುನೀಲ್ ಸಿದ್ದಿ ಯಲ್ಲಾಪುರ, ಜೇಮ್ಸ್ ಲೋಪಿಸ್ ಹೊನ್ನಾವರ, ದಯಾನಂದ ಮಡ್ಕೇಕರ್ ಕಾರ್ಕಳ ಹಾಗೂ ಪ್ರಮೋದ್ ಪಿಂಟೊ ಚಿಕ್ಕಮಗಳೂರು ಇವರನ್ನು ಅಕಾಡೆಮಿಯ ಪ್ರಭಾರ ರಿಜಿಸ್ಟ್ರಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ. ಇವರು ಹೂಗುಚ್ಛದ ಗೌರವ ನೀಡಿ ಅಭಿನಂದಿಸಿದರು. ಹಾಗೂ ಕೊನೆಗೆ ಧನ್ಯವಾದವನ್ನಿತ್ತರು. ವಿಕ್ಟರ್ ಮತಾಯಸ್ ಕಾರ್ಯಕ್ರಮ ನಿರೂಪಿಸಿದರು.
ಮಾಜಿ ಸಚಿವ ರಮಾನಾಥ ರೈ, ಮನಪಾ ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವಾ, ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ ಪಿಂಟೊ, ಕೊಂಕಣಿ ಭಾಷಾ ಮಂಡಳ್, ಕರ್ನಾಟಕ ಅಧ್ಯಕ್ಷ ವಸಂತರಾವ್ ಹಾಗೂ ಸಾಹಿತಿ ಲೇಖಕರು, ರಾಜಕೀಯ ಮುಖಂಡರು ಉಪಸ್ಥಿತರಿದ್ದರು.