ಕರ್ನಾಟಕ ಕ್ರೈಸ್ತ ಶಿಕ್ಷಣ ಸಂಸ್ಥೆ ಸುವರ್ಣ ಮಹೋತ್ಸವ
ಕರ್ನಾಟಕ ಕ್ರಿಶ್ಚಿಯನ್ ಎಜ್ಯುಕೇಷನಲ್ ಸೊಸೈಟಿಗೆ 50 ವರ್ಷಗಳಾದವು. ಈ ಸಂಸ್ಥೆಯನ್ನು (ಕೆಎಸಿಇಎಸ್-ಕಾಸೆಸ್) ಯನ್ನು ಡಿಸೆಂಬರ್, 1969 ರಲ್ಲಿ ಸ್ಥಾಪಿಸಲಾಯಿತು. ಈ ಸಂಸ್ಥೆಯು ವಿವಿಧ ಶೈಕ್ಷಣಿಕ ಮತ್ತು ವೃತ್ತಿಪರ ತರಬೇತಿ ಸಂಸ್ಥೆಗಳಿಗೆ ಒಂದು ಮೂಲಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಅದರಲ್ಲಿಯೂ ಕರ್ನಾಟಕ ಭಾಗದ ಕ್ರೈಸ್ತ ಮತ್ತು ಸಮಾಜದ ಸೇವೆಗೆ ಕ್ರೈಸ್ತ ಸೇವಕ ಸೇವಕಿಯರನ್ನು ತರಬೇತಿಗೊಳಿಸುವ ಸೇವಾಕಾರ್ಯದಲ್ಲಿ ಕರ್ನಾಟಕ ದೈವಜ್ಞಾನಶಾಸ್ತ್ರೀಯ ಮಹಾವಿದ್ಯಾಲಯ ಮುಖ್ಯ ಸಂಸ್ಥೆಯಾಗಿದೆ.
• ಕಾಸೆಸ್ ಸಂಸ್ಥೆಯ ಸುವರ್ಣ ಮಹೋತ್ಸವದ ಆಚರಣೆಯ ಈ ಸಮಯದಲ್ಲಿ, 1834 ರಲ್ಲಿ ಭಾರತಕ್ಕೆ ಆಗಮಿಸಿ ಶೈಕ್ಷಣಿಕ, ಅಧ್ಯಾತ್ಮಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ ಬಾಸೆಲ್ ಮಿಷನರಿಗಳ ಕೊಡುಗೆಗಳು ನೆನಪಿಸಿಕೊಳ್ಳುತ್ತೇವೆ. ಮ್ಯೊಗ್ಲಿಂಗ್ ಮತ್ತು ಕಿಟ್ಟೆಲರ ಕೊಡುಗೆಗಳು ಕನ್ನಡ ನಾಡಿಗೆ ಚಿರಸ್ಮರಣೀಯ. ಅದೇ ರೀತಿಯಲ್ಲಿ ಮೆನ್ನರ್ ಮತ್ತು ಬ್ರಿಗೆಲ್ ಮಿಷನರಿಗಳ ಕೊಡುಗೆಗಳು ತುಳು ಭಾಷೆಗೆ ವಿಶೇಷ.
• 1847ರಲ್ಲಿ ಬಾಸೆಲ್ ಇವಾಂಜೆಲಿಕಲ್ ಮಿಷನ್ ಸೆಮಿನರಿಯನ್ನು ಸ್ಥಾಪಿಸಲಾಯಿತು. ಅದುವೇ ಮುಂದೆ ಕರ್ನಾಟಕ ಥಿಯೋಲಾಜಿಕಲ್ ಕಾಲೇಜು ಎಂದು 1965 ರಿಂದ ನಾಮಾಂಕಿತಗೊಂಡಿತು.
• ಈಗಾಗಲೇ 50 ವರ್ಷ ಪೂರೈಸಿರುವ ಕಾಸೆಸ್ ನ ಅಂಗಸಂಸ್ಥೆಯಾದ ಹೆಬಿಕ್ ತಾಂತ್ರಿಕ ತರಬೇತಿ ಸಂಸ್ಥೆಯು ಸಹ ತಾಂತ್ರಿಕ ಶಿಕ್ಷಣದಲ್ಲಿ ತನ್ನ ಅಮೂಲ್ಯ ಸೇವೆಯನ್ನು ಸಲ್ಲಿಸಿದೆ. ಆರಂಭದಲ್ಲಿದ್ದ 2 ಸಂಸ್ಥೆಗಳು ಇಂದು 17 ಸಂಸ್ಥೆಗಳಾಗಿವೆ.
• ಈ ಸಂಸ್ಥೆಯ ಇತರ ಅಂಗಸಂಸ್ಥೆಗಳು ವಾಣಿಜ್ಯ-ಕಾಮರ್ಸ್ ಮತ್ತು ಕಂಪ್ಯೂಟರ್ ಶಿಕ್ಷಣ, ಮುದ್ರಣ, ಹೊಲಿಗೆ, ಫ್ಯಾಷನ್ ಡಿಸೈನ್ ಮತ್ತಿತರ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮುದಾಯದ ಎಲ್ಲ ಧರ್ಮದವರ ಏಳ್ಗೆಗಾಗಿ ನಿರಂತರವಾಗಿ ಶ್ರಮಿಸಿವೆ. ಹೀಗೆ ಕಳೆದ 50 ವರ್ಷಗಳಲ್ಲಿ ಕಾಸೆಸ್ ತನ್ನ ವಿವಿಧ ಸಂಸ್ಥೆಗಳ ಮೂಲಕ ಸಭೆ ಮತ್ತು ಸಮಾಜದ ಉದ್ಧಾರಕ್ಕಾಗಿ ಅತ್ಯಮೂಲ್ಯ ಸೇವೆ ಸಲ್ಲಿಸಿದೆ. ಕಾಸೆಸ್ ಸಂಸ್ಥೆಯು ಕಳೆದ ಐವತ್ತು ವರ್ಷಗಳಿಂದ, ಬಾಸೆಲ್ ಮಿಷನ್ನ ಪರಂಪರೆಯನ್ನು ಮುಂದೆ ಕೊಂಡೊಯ್ಯುವದಲ್ಲದೇ ಸ್ಥಳೀಯ ಸನ್ನಿವೇಶದಲ್ಲಿ ಜೀವನವನ್ನು ಸದೃಢಗೊಳಿಸುವ ಮತ್ತು ಸಮುದಾಯದ ಶ್ರೇಯೋಭಿವೃದ್ಧಿಗಾಗಿ ತನ್ನನ್ನು ತೊಡಗಿಸಿಕೊಂಡಿದೆ. ಇದಕ್ಕಾಗಿಯೇ ನಿರಂತರವಾಗಿ ಸಬಲೀಕರಣ ಮತ್ತು ಜಾಗೃತಗೊಳಿಸುವ ಕಾರ್ಯಯೋಜನೆಗಳನ್ನು ರೂಪಿಸುತ್ತದೆ.
• ನಮ್ಮ ಎಲ್ಲ ಕಾರ್ಯದರ್ಶಿಗಳು, ಅಧ್ಯಕ್ಷರು, ಕಾರ್ಯಕಾರೀ ಸಮಿತಿಯ ಸದಸ್ಯರು ಮತ್ತು ಸಿಬ್ಬಂದಿಗಳು ತಮ್ಮ ನಿರಂತರ ಬೆಂಬಲ ಮತ್ತು ಕಠಿಣ ಪರಿಶ್ರಮದ ಮೂಲಕ ಕಾಸೆಸ್ ನ ದೂರದೃಷ್ಟಿ ಮತ್ತು ಧ್ಯೇಯವನ್ನು ಪೂರೈಸಲು ಅಪಾರ ಕೊಡುಗೆ ನೀಡಿದ್ದಾರೆ. ಈ ಸಮಯದಲ್ಲಿ ನಾವು ತಮ್ಮ ಕ್ರಿಯಾತ್ಮಕ ನಾಯಕತ್ವದ ಮೂಲಕ ಕಾಸೆಸ್ ಸಂಸ್ಥೆಯನ್ನು ಕಟ್ಟಿ ಅದನ್ನು ಬೆಳೆಸಿದ ನಮ್ಮ ಸಂಸ್ಥೆಯ ಹಿಂದಿನ ಕಾರ್ಯದರ್ಶಿಗಳಾದ ದಿವಂಗತ. ರೈಟ್ ರೆವೆ. ಸಿ. ಡಿ. ಜತನ್ನಾ, ರೈಟ್ ರೆವೆ. ಡಾ. ಸಿ. ಎಲ್. ಫುರ್ಟಾಡೊ ಮತ್ತು ರೈಟ್ ರೆವೆ. ಡಾ. ಜಾನ್ ಎಸ್. ಸದಾನಂದ ಇವರ ಅಪಾರ ಕೊಡುಗೆಗಳನ್ನು ಸ್ಮರಿಸುತ್ತೇವೆ ಮತ್ತು ಅವರನ್ನು ಗೌರವಿಸಲಿದ್ದೇವೆ.
• ಕಾಸೆಸ್ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರೋಪ ಆಚರಣೆಯನ್ನು ದಿನಾಂಕ 10-02-2020 ರಂದು ಸಂಜೆ 5.00 ಗಂಟೆಗೆ ಬಿಷಪ್ ಜತ್ತನ್ನ ಸಭಾಂಗಣ, ಬಲ್ಮಠ, ಮಂಗಳೂರಿನಲ್ಲಿ ಕೃತಜ್ಞತಾ ಆರಾಧನೆಯ ಮೂಲಕ ಕೊನೆಗೊಳಿಸುತ್ತಿದ್ದೇವೆ. ಇದರಲ್ಲಿ ರೈಟ್ ರೆವೆ. ಡಾ. ಪ್ರಸನ್ನ ಕುಮಾರ್ ಸ್ಯಾಮ್ಯುಯೆಲ್, ಬಿಷಪ್, ಕರ್ನಾಟಕ ಮಧ್ಯ ಸಭಾಪ್ರಾಂತ ಮತ್ತು ಅಧ್ಯಕ್ಷರು ಕಾಸೆಸ್ ದೇವರವಾಕ್ಯದ ಸಂದೇಶವನ್ನು ನೀಡಲಿದ್ದು, ಇತರ ಬಿಷಪರುಗಳು ಮತ್ತು ಈ ಸಂಸ್ಥೆಯಲ್ಲಿ ದುಡಿದ ಹಿಂದಿನ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ.
• ಪ್ರಾರ್ಥನಾವಿಧಿ ವಿಧಾನದ ನಂತರದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣದ ಶಾಸಕರಾದ ಶ್ರೀ.ವೇದವ್ಯಾಸ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಮತ್ತು ಬಿಷಪ್ ರವಿಕುಮಾರ್ ನಿರಂಜನ್, ಸಿಎಸ್ಐ- ಕರ್ನಾಟಕ ಉತ್ತರ ಸಭಾಪ್ರಾಂತ, ಬಿಷಪ್ ಮೋಹನ್ ಮನೋರಾಜ್, ಸಿಎಸ್ಐ- ಕರ್ನಾಟಕ ದಕ್ಷಿಣ ಸಭಾಪ್ರಾಂತ, ಬಿಷಪ್ ಡಾ. ಸಿ. ಎಲ್. ಫುರ್ಟಾಡೊ, ಬಿಷಪ್ ಡಾ. ಜೆ.ಎಸ್. ಸದಾನಂದ ಅವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸೆಸ್ ಸಂಸ್ಥೆಯ ಕಾರ್ಯದರ್ಶಿಗಳಾದ ರೆ.ಡಾ.ಹೆಚ್. ಆರ್. ಕಬ್ರಾಲ್ ವಹಿಸಲಿದ್ದಾರೆ. ಈ ಸಾರ್ವಜನಿಕ ಸ್ವಾಗತ ಕಾರ್ಯಕ್ರಮದ ಸಂದರ್ಭದಲ್ಲಿ “ಕ್ರೈಸ್ತ ಶಿಕ್ಷಣ” ಕುರಿತ ಪ್ರಕಟಣೆಯನ್ನು ಲೋಕಾರ್ಪಣೆಗೊಳಿಸಲಾಗುತ್ತದೆ.
• ಅಂತಿಮವಾಗಿ, ಸೊಸೈಟಿಯ ವಿವಿಧ ಅಂಗಸಂಸ್ಥೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಉದ್ಯೋಗಿಗಳು ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ.
• ಪತ್ರಿಕಾಗೋಷ್ಠಿಯಲ್ಲಿನ ಉಪಸ್ಥಿತರಿದ್ದವರು: ರೆವೆ. ಕೆ. ಸಾಗರ್ ಸುಂದರ್ ರಾಜ್, ಖಜಾಂಚಿಗಳು, ಕಾಸೆಸ್ ಮತ್ತು ಸಹಾಯಕ ಪ್ರಾಧ್ಯಾಪಕರು.ಕೆ.ಟಿ.ಸಿ, ಶ್ರೀ ಚೇತನ್ ಆರ್. ಪ್ರಾಂಶುಪಾಲರು, ಹೆಬಿಕ್ ತಾಂತ್ರಿಕ ಸಂಸ್ಥೆ, ಶ್ರೀ ವಿಜಯ್ ಅಮ್ಮನ್ನ.