ಕರ್ನಾಟಕ ದರ್ಶನ: ಸಾಹಿತ್ಯ, ರಾಮಾಯಣ: ಸಮಕಾಲೀನ ನೆಲೆಗಳು – ಚಿಂತಕ ಲಕ್ಷ್ಮೀಶ್ ತೋಳ್ಪಾಡಿ

Spread the love

ಕರ್ನಾಟಕ ದರ್ಶನ: ಸಾಹಿತ್ಯ, ರಾಮಾಯಣ: ಸಮಕಾಲೀನ ನೆಲೆಗಳು – ಚಿಂತಕ ಲಕ್ಷ್ಮೀಶ್ ತೋಳ್ಪಾಡಿ

ಮೂಡಬಿದಿರೆ: ನಾಗರೀಕತೆಯ ಬೆಳವಣಿಗೆಗೆ ಕರುಣ ರಸ ಅತ್ಯಗತ್ಯ. ರಸಗಳಲ್ಲಿ ಕರುಣ ರಸವು ಪ್ರಮುಖವಾದುದು, ಉಳಿದವುಗಳು ಅದರ ಪ್ರಬೇಧಗಳು. ರಾಮಾಯಣವು ಕರುಣರಸ ಪ್ರಯೋಗದಿಂದಲೇ ಆರಂಭವಾಯಿತು. ಒಬ್ಬ ಸಾಹಿತಿಗಳಿಗೆ ತನ್ನ ಸಾಹಿತ್ಯದಲ್ಲಿ ಯಾವ ರಸವನ್ನು ಪ್ರಮುಖವಾಗಿ ಉಪಯೋಗಿಸಬೇಕು ಎಂಬುದರ ಅರಿವನ್ನು ಹೊಂದಿರಬೇಕು ಎಂದು ಚಿಂತಕ ಲಕ್ಷ್ಮೀಶ್ ತೋಳ್ಪಾಡಿ ಹೇಳಿದರು.

ಆಳ್ವಾಸ್ ನುಡಿಸಿರಿಯ `ಕರ್ನಾಟಕ ದರ್ಶನ:ಸಾಹಿತ್ಯ’ ವಿಚಾರಗೋಷ್ಠಿಯಲ್ಲಿ `ರಾಮಾಯಣ: ಸಮಕಾಲೀನ ನೆಲೆಗಳು’ ಎಂಬ ವಿಷಯದ ಕುರಿತು ಮಾತನಾಡಿದರು.

ಕಾವ್ಯಕ್ಕಿರುವ ಮುಖ್ಯ ದಾರಿ ಕರುಣ ರಸ. ಈ ಭಾವನೆಯೇ ರಾಮಾಯಣ ಬೆಳೆಯಲು ಪ್ರಮುಖ ಕಾರಣವಾಯಿತು. ಏಕೆಂದರೆ ವಾಲ್ಮೀಕಿ ರಾಮಾಯಣದ ಆರಂಭದಲ್ಲಿ ಯಾವುದೇ ಪ್ರಶ್ನೆಯನ್ನೂ ಕೇಳದೆ ಕೈಕೇಯಿಯ ಆದೇಶದನುಸಾರವಾಗಿ ರಾಮನು ಕಾಡಿಗೆ ಹೋಗುತ್ತಾನೆ. ಆ ಸಂದರ್ಭವು ಕಾರುಣ್ಯತ್ತ್ವವನ್ನು ಹುಟ್ಟುಹಾಕುವುದರಿಂದ ಮಹಾಕಾವ್ಯಕ್ಕೆ ಕರುಣ ರಸವು ಪ್ರಮುಖವಾಯಿತು. ಈ ಭಾವವು ಓದುಗರನ್ನು ಸಾಹಿತ್ಯದ ಕಡೆಗೆ ಸೆಳೆಯುತ್ತದೆ. ಕರುಣ ರಸವೆಂಬುದು ಒಂದು ಕಲೆ. ರಾಮಾಯಣದಲ್ಲಿ ಕಾಮರೂಪಿ ಮಾರೀಚ ಕಲಾಕಾರ ಏಕೆಂದರೆ ಅವನು ತನ್ನದಲ್ಲದ ಅನೇಕ ರೂಪಗಳನ್ನು ಧರಿಸುತ್ತಾನೆ. ಕಲಾಕಾರನು ಮರಣದ ಸಂದರ್ಭದಲ್ಲಿಯೂ ತನ್ನೊಳಗಿರುವ ಸತ್ಯವನ್ನು ಬಯಲು ಮಾಡಬಾರದು ಆದರೆ ಮಾರೀಚನು ತನ್ನಲ್ಲಿದ್ದ ಸತ್ಯವನ್ನು ಬಹಿರಂಗ ಪಡಿಸುತ್ತಾನೆ. ಕರುಣ ರಸದ ಪ್ರಯೋಗ ಸುಲಭವಲ್ಲ, ಸಾಹಿತ್ಯದಲ್ಲಿ ಕಾರುಣ್ಯದ ಅನುಭವವನ್ನು ಹುಸಿಯಾಗದಂತೆ ಸಂದರ್ಭವನ್ನು ಸೃಷ್ಟಿಸುವುದು ಕಠಿಣ ಎಂದರು.

ರಾಮಾಯಣ ಹುಟ್ಟಿಕೊಂಡ ಬಗೆಯನ್ನು ವಿವರಿಸಿದ ಲಕ್ಷ್ಮೀಶ ತೋಳ್ಪಾಡಿಯವರು ಸೃಷ್ಟಿಶೀಲತೆಯ ತಲ್ಲಣದ ಕಥೆ ಹಾಗೂ ತತ್ ಕ್ಷಣದ ಕಾವ್ಯವೇ ರಾಮಾಯಣ ಎಂದು ಅಭಿಪ್ರಾಯಪಟ್ಟರು. ಜಾನಪದ ರಾಮಾಯಣದಿಂದಲೇ ಬಂದಂತಹದು ವಾಲ್ಮೀಕಿ ರಾಮಾಯಣ. ಏಕೆಂದರೆ ಲೋಕ ಸಂಚಾರಿ ನಾರದನು ವಾಲ್ಮಿಕಿಗೆ ರಾಮಾಯಣದ ಕಥೆಯನ್ನು ಹೇಳುವುದು, ವಾಲ್ಮಿಕಿಯ ದೂರದೃಷ್ಟೀತ್ವವು ಮಹಾಕಾವ್ಯದಲ್ಲಿ ಕಾಣಸಿಗುತ್ತದೆ. ಹಕ್ಕಿಯ ದುರಂತವು ವಾಲ್ಮೀಕಿಯಲ್ಲಿ ಕರುಣಾ ಭಾವವನ್ನು ಉಂಟುಮಾಡಿತು ಆದ್ದರಿಂದ ಇದೇ ಭಾವನೆಯನ್ನು ತಾನು ಬರೆಯುವ ಮಹಾಕಾವ್ಯದಲ್ಲಿ ಅಳವಡಿಸಿಕೊಂಡನು ಎಂದು ಅದಕ್ಕೆ ಸ್ಪಷ್ಟೀಕರಣವನ್ನು ನೀಡಿದರು.

 ವಿಚಾರಗೋಷ್ಠಿಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷೆಯಾದ ಡಾ. ಮಲ್ಲಿಕಾ ಎಸ್. ಘಂಟಿ ಹಾಗೂ ನುಡಿಸಿರಿ ಸಮಿತಿಯ ಉಪಾಧ್ಯಕ್ಷರಾದ ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕ ಯೋಗೀಶ್ ಕೈರೋಡಿ ನಿರೂಪಿಸಿದರು.

ಬಾಕ್ಸ್ ಐಟಮ್:

ಸಮಕಾಲೀನತೆ ಎಂದರೇನು?

ಸಮಕಾಲೀನತೆಯೆಂದರೆ ಆಧುನಿಕತೆಯೊಂದಿಗೆ ಜನರ ಮನಸ್ಸು ಒಗ್ಗುವುದು ಎಂಬುದು ಸಾಮಾನ್ಯ ಅಭಿಪ್ರಾಯ. ಆದರೆ ಸಮಕಾಲೀನತೆ ಎಂಬುದರ ಅರ್ಥದ ವ್ಯಾಪ್ತಿ ದೊಡ್ಡದು. ತತ್ ಕ್ಷಣದ ಸ್ಪಂದನೆ ಸಮಕಾಲೀನತೆ. ಸಮಕಾಲೀನತೆ ಎನ್ನುವುದು ಇಹ ಜೀವನಕ್ಕೆ  ಸಂಬಂಧಿಸಿದ್ದಲ್ಲದೇ ಅಲೌಕಿಕ ನಿತ್ಯ ಸತ್ಯಗಳ ಅರಿವು. ಸತ್ಯಾಸತ್ಯತೆಯನ್ನು ಪ್ರತಿನಿಧಿಸುವುದು ಪ್ರಮುಖವಾದುದು. ಕುವೆಂಪು ಅವರ ‘ರಾಮಾಯಣ ದರ್ಶನಂ’ ಎಂಬ ಗ್ರಂಥವು ಸಮಕಾಲೀನ ಗ್ರಂಥ.


Spread the love