ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿದೇಯಕ ವಿರೋಧಿಸಿ ಎಬಿವಿಪಿ ಪ್ರತಿಭಟನೆ
ಮಂಗಳೂರು: ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮ– 2017 ವಿಧೇಯಕವನ್ನು ಯಾವುದೇ ಸಾರ್ವಜನಿಕ, ಶಿಕ್ಷಣತಜ್ಞರು, ವಿದ್ಯಾರ್ಥಿ ಸಂಘಟನೆಗಳೊಂದಿಗೆ ಚರ್ಚಿಸದೆ ತರಾತುರಿಯಲ್ಲಿ ತರುತ್ತಿರುವುದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ನೇತೃತ್ವವನ್ನು ವಹಿಸಿದ ವಿಭಾಗ ಸಂಚಾಲಕ್ ಚೇತನ್ ಪಡೀಲ್ ಮಾತನಾಡಿ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಹಾಗೂ ದಶಕಗಳಕಾಲ ರಾಜ್ಯದ ಶೈಕ್ಷಣಿಕ ವ್ಯವಸ್ಥೆಗೆ ದೂರದರ್ಶಿತ್ವವನ್ನು ನೀಡಬೇಕಾದ ವಿಧೇಯಕವನ್ನು ಯಾವುದೇ ಚರ್ಚೆ, ಸಂವಾದ ಸಂಘೋಷ್ಠಿಗಳಿಲ್ಲದೇ ಜಾರಿಗೆ ತರಲು ಹೋರಟಿರುವ ರಾಜ್ಯ ಸರ್ಕಾರದ ನಿರ್ಧಾರವು ಹಲಾವಾರು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಸರ್ಕಾರದ ಈ ನಿಲುವು ಸಂಪೂರ್ಣ ಪ್ರಜಾತಂತ್ರ ವ್ಯವಸ್ಥೆಯ ವಿರೋಧಿಯಾಗಿದೆ.
ಡಾ. ಪರಮೇಶ್ವರ್ ಅವರು ಉನ್ನತ ಶಿಕ್ಷಣ ಸಚಿವರಿದ್ದಾಗ ವಿಶ್ವವಿದ್ಯಾಲಯ 2000ರ ಕಾಯ್ದೆಯನ್ನು ಜಾರಿಗೆ ತರುವಾಗ ಪೂರ್ಣ ಸ್ವಾಯತ್ತತೆಯನ್ನು ವಿವಿಗಳಿಗೆಕೊಟ್ಟಿದ್ದರು. ಅದೇ ಸರ್ಕಾರ ಈಗ ವಿಶ್ವವಿದ್ಯಾಲಯಗಳ ಮಧ್ಯೆ ಪ್ರವೇಶಿಸಿ ಪ್ರತಿಯೊಂದು ಕಾಮಗಾರಿ, ನಿಯಮಗಳಿಗೆ ಸರ್ಕಾರವನ್ನು ಕೇಳಿ ಮುಂದುವರಿಯಬೇಕು ಎಂದು ವಿಧೇಯಕವನ್ನು ತರುತ್ತಿರುವುದು ವಿವಿಗಳಿಗೆ ರಾಜಕೀಯ ನೇರ ಪ್ರವೇಶವಾದಂತಾಗುತ್ತದೆ. ವಿಶ್ವವಿದ್ಯಾಲಯದ ಕುಲಪತಿಯನ್ನು ನೇಮಕಾತಿ ಮಾಡುವಾಗ ಸರ್ಕಾರ, ಸಿಂಡಿಕೇಟ್, ಯು.ಜಿ.ಸಿ, ರಾಜ್ಯಪಾಲರ ಶೋಧನಾ ಸಮಿತಿಗೆ ನಾಮನಿರ್ದೇಶಿತ ಮಾಡುವಾಗ ಸರ್ಕಾರದ ಕಡೆಯಿಂದ ಇಬ್ಬರು ನಾಮನಿರ್ದೇಶಿತ ಸದಸ್ಯರಿರುವ ಹಾಗೆ ನೋಡಿಕೊಳ್ಳಲಾಗುತ್ತಿದೆ. ಈ ಮೂಲಕ ಸರ್ಕಾರವು ಕುಲಪತಿ ನೇಮಕವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಇದು ಗೌರವಾನ್ವಿತ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ಕ್ರಮ ಯು.ಜಿ.ಸಿ ನಿಯಮಾವಳಿಗಳಿಗೂ ವಿರುದ್ಧವಾಗಿದೆ. 1 ಕೋಟಿಗಿಂತ ಹೆಚ್ಚು ಕಾಮಗಾರಿ ಅಥವಾ ಕೆಲಸ ನಡೆಯುವುದಕ್ಕೆ ಸರ್ಕಾರದಿಂದ ಅನುಮತಿ ಪಡೆದು ಕೊಳ್ಳಬೇಕಾಗುತ್ತದೆ. ಇದು ವಿವಿಗಳ ಸ್ವಾಯುತ್ತತೆಗೆ ಧಕ್ಕೆ ತರುವಂತಹದಾಗಿದ್ದು, ಸರ್ಕಾರವು ನೇರವಾಗಿ ವಿವಿಯ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಕುಲಸಚಿವರ ಹುದ್ದೆಗೆ ಆಡಳಿತಾತ್ಮಕ ಸೇವೆಯ ಅಧಿಕಾರಿಗಳನ್ನು ನೇಮಿಸಲು ಹೊರಟಿರುವುದು ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸೇವೆಗಳ ನಡುವೆ ಸಂಘರ್ಷಕ್ಕೆ ದಾರಿಮಾಡಿಕೊಡಲಿದೆ.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸೂಕ್ತರೀತಿಯಲ್ಲಿ ಶೈಕ್ಷಣಿಕ ವಿಷಯಗಳಿಗೆ ಸಂಬಂಧ ಪಟ್ಟಂತೆ ನೀತಿಗಳನ್ನು ರೂಪಿಸುವ ಸ್ವಾಯುತ್ತ ಸಂಸ್ಥೆಯಾಗಿರಬೇಕೆ ಹೊರೆತು, ಸರ್ಕಾರದ ಕೃಪೆಯಿಂದ ಅಸ್ಥಿತ್ವದಲ್ಲಿರುವ ಸಂಸ್ಥೆಯಾಗಬಾರದು. ಸರ್ಕಾರ ವಿಶ್ವವಿದ್ಯಾಲಯಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಿ ಸಂವಿಧಾನದ ಉನ್ನತ ಹುದ್ದೆಯಲ್ಲಿರುವ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಿ ಸರ್ಕಾರದ ಕೆಳಗೆ ಬರುವಂತೆ ನೋಡಿಕೊಳ್ಳಲಾಗುತ್ತಿದೆ.ಎಲ್ಲಾ ವಿಶ್ವವಿದ್ಯಾಲಯಗಳು ಒಂದೇ ಸೂರಿನಡಿ ತರಬೇಕು ಎನ್ನುವುದು ಎನ್.ಆರ್.ಶೆಟ್ಟಿಯವರ ಸಮಿತಿಯ ವರದಿ. ಆದರೆ ಇವರಿಗೆ ಬೇಕಾದ ರೀತಿಯಲ್ಲಿ ವಿಧೇಯಕವನ್ನು ತಯಾರಿಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ರೀತಿಯಲ್ಲಿ ಮಹಿಳಾ ವಿಶ್ವವಿದ್ಯಾಲಯ ಮಹಿಳೆಯರ ಸ್ಥಿತಿಗತಿಗಳ ಅಧ್ಯಯನ ಸಮಗ್ರ ವಿಕಾಸ ಕೇಂದ್ರಿತ ವಿಷಯಗಳ ಕುರಿತಂತೆ ದಿಶೆ ನೀಡಬೇಕಾದ ಸ್ವಾಯತ್ತ ಸಂಸ್ಥೆಯಾಗಬೇಕಾಗಿದೆ.
ಪ್ರತಿಭಟನೆಯ ನೇತೃತ್ವವನ್ನು ವಿಭಾಗ ಸಂಚಾಲಕ್ ಚೇತನ್ ಪಡೀಲ್, ಜಿಲ್ಲಾ ಸಂಚಾಲಕ್ ಸುದಿತ್, ಶೀತಲ್ ಕುಮಾರ್, ಸಂಕೇತ್, ರಾಜೇಂದ್ರ, ನವೀನ್, ಗಣೇಶ್, ವಿಕಾಸ್, ರಾಕೇಶ್, ಮಹೇಶ್, ರಿಷಾ, ಬಿಂದು, ಅಭಿಲಾಶ್, ಸಂಪತ್ ಮೊದಲಾದವರು ವಹಿಸಿದ್ದರು.