ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ:- 733 ಕೋಟಿ ಸಾಲ ಮಂಜೂರು
ಮ0ಗಳೂರು : ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ರಾಜ್ಯ ಮಟ್ಟದ ಹಣಕಾಸು ಸಂಸ್ಥೆಯಾಗಿದ್ದು, ರಾಜ್ಯ ಹಣಕಾಸು ಸಂಸ್ಥೆಗಳ ಕಾಯ್ದೆ 1951ರ ಅನ್ವಯ 1959ರಲ್ಲಿ ರಾಜ್ಯ ಸರ್ಕಾರದಿಂದ ಸ್ಥಾಪಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಮಧ್ಯಮ ಹಾಗೂ ದೀರ್ಘಾವಧಿ ಹಣಕಾಸಿನ ನೆರವನ್ನು ನೀಡುವುದೇ ಸಂಸ್ಥೆಯ ಮೂಲೋದ್ದೇಶವಾಗಿದೆ.
ಸಂಸ್ಥೆಯ ವತಿಯಿಂದ ಮಹಿಳೆಯರಿಗಾಗಿಯೇ ವಿಶೇಷ ಮಹಿಳಾ ಉದ್ದಿಮೆದಾರರ ಯೋಜನೆಯೊಂದನ್ನು ಡಿಸೆಂಬರ್ 2015ರಲ್ಲಿ ಪ್ರಾರಂಭಿಸಲಾಗಿದೆ. ಅಲ್ಲದೆ, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಮತ್ತು ಸೇವಾ ಕ್ಷೇತ್ರದ ಘಟಕಗಳ ಸ್ಥಾಪನೆಗೆ ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ರಾಜ್ಯದ ಮಹಿಳಾ ಉದ್ದಿಮೆದಾರರಿಗೆ ಶೇ. 4ರ ನಿವ್ವಳ ಬಡ್ಡಿ ದರದಲ್ಲಿ ಹಣಕಾಸಿನ ನೆರವನ್ನು ಒದಗಿಸುತ್ತಿರುವ ಪ್ರಪ್ರಥಮ ಹಣಕಾಸು ಸಂಸ್ಥೆಯೆಂಬ ಹೆಗ್ಗಳಿಕೆಗೆ ಸಂಸ್ಥೆಯ ಪಾತ್ರವಾಗಿದೆ. ಸಂಸ್ಥೆಯು ಕರ್ನಾಟಕ ಸರ್ಕಾರದ ಸಹಯೋಗದೊಂದಿಗಿನ ಬಡ್ಡಿ ಸಹಾಯಧನ ಯೋಜನೆಯಡಿಯಲ್ಲಿ ನಿರಂತರವಾಗಿ ಹೆಚ್ಚಿನ ಸಂಖ್ಯೆಯ ಉದ್ದಿಮೆದಾರರಿಗೆ ಹಣಕಾಸಿನ ನೆರವನ್ನು ನೀಡಿದೆ.
ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಮತ್ತು ಸೇವಾ ಕ್ಷೇತ್ರದ ಘಟಕಗಳಿಗೆ ಸಂಸ್ಥೆಯಿಂದ ಹಣಕಾಸಿನ ನೆರವನ್ನು ನೀಡಿದ್ದು, 2016-17ರ ವರ್ಷದಲ್ಲಿ ರೂ. 733.42 ಕೋಟಿ ರೂ. ಸಾಲ ಮಂಜೂರುಗೊಳಿಸಿದೆ. ಇದರಲ್ಲಿ 614.37 ಕೋಟಿ ರೂ. ವಿತರಣೆಯಾಗಿ, ರೂ. 884.72 ಕೋಟಿ ವಸೂಲಾತಿ ಮಾಡಿದೆ. ರೂ. 733.42 ಕೋಟಿಗಳ ಒಟ್ಟಾರೆ ಮಂಜೂರಾತಿಯಲ್ಲಿ ತಯಾರಿಕಾ ವಲಯಕ್ಕೆ ರೂ.309.21 ಕೋಟಿ ಮೊತ್ತದ ಹಣಕಾಸಿನ ನೆರವನ್ನು ಸಂಸ್ಥೆಯಿಂದ ನೀಡಲಾಗಿದ್ದು, ಅದು ಒಟ್ಟು ಮಂಜೂರಾತಿಯ ಶೇ.42ರಷ್ಟಿದೆ. ಪ್ರವಾಸೋದ್ಯಮ ವಲಯ ಹಾಗೂ ರಿಯಲ್ ಎಸ್ಟೇಟ್ ವಾಣಿಜ್ಯ ವಲಯಕ್ಕೆ ಅನುಕ್ರಮವಾಗಿ ರೂ.77.30 ಕೋಟಿ ಹಾಗೂ 58.91 ಕೋಟಿ ಮೊತ್ತದ ಹಣಕಾಸಿನ ನೆರವನ್ನು ನೀಡಲಾಗಿದ್ದು ಒಟ್ಟು ಮಂಜೂರಾತಿಯಲ್ಲಿ ಪ್ರತೀ ವಲಯದ ಪಾಲು ಶೇ.11 ಹಾಗೂ 8 ರಷ್ಟಿದೆ. ಇನ್ನುಳಿದ ಮೊತ್ತವಾದ ರೂ.37.39 ಕೋಟಿ ಮತ್ತು 250.59 ಕೋಟಿಗಳು ಒಟ್ಟು ಮಂಜೂರಾತಿಯ ಶೇ.39ರಷ್ಟಿದ್ದು ಅದು ಆರೋಗ್ಯ ಹಾಗೂ ಇತರೆ ವಲಯಗಳ ಪಾಲಿನದ್ದಾಗಿದೆ.
ಸಂಸ್ಥೆಯ ಒಟ್ಟಾರೆ ಮಂಜೂರಾತಿಯಾದ ರೂ.733.42 ಕೋಟಿಗಳಲ್ಲಿ ಶೇ.51ರಷ್ಟು ಅಂದರೆ ರೂ.375.94 ಕೋಟಿ ಮೊತ್ತವನ್ನು ಮಹಿಳಾ ಉದ್ದಿಮೆದಾರರಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ದಿಮೆದಾರರಿಗೆ ಶೇ.4ರ ಬಡ್ಡಿ ಸಹಾಯ ಧನ ಯೋಜನೆಯಡಿಯಲ್ಲಿ ಹಾಗೂ ಮೊದಲ ಪೀಳಿಗೆ ಉದ್ದಿಮೆದಾರರಿಗೆ ಶೇ.8ರ ಬಡ್ಡಿ ಸಹಾಯ ಧನದ ವಿಶೇಷ ಯೋಜನೆಯಡಿಯಲ್ಲಿ ಸಂಸ್ಥೆಯು ಸಾಲ ಮಂಜೂರು ಮಾಡಿದೆ. ಇನ್ನುಳಿದ ಶೇ.49ರಷ್ಟು ಮೊತ್ತವನ್ನು ಸಾಮಾನ್ಯ ಯೋಜನೆಯಡಿಯಲ್ಲಿ ಮಂಜೂರು ಮಾಡಲಾಗಿದೆ.
ಹಣಕಾಸಿನ ವರ್ಷದ ಪ್ರಾರಂಭದಲ್ಲಿದ್ದ ರೂ.238 ಕೋಟಿ ಮೊತ್ತದ ಅನುತ್ಪಾದಕ ಆಸ್ತಿಗಳಲ್ಲಿ ಇಳಿಕೆ ಕಂಡು ಬಂದಿದ್ದು ಅದು 31-03-2017ರ ವರೆಗೆ ರೂ.219 ಕೋಟಿಗಳಾಗಿದೆ. ಹಿಂದಿನ ವರ್ಷದಲ್ಲಿ ಶೇ.13.47ರಷ್ಟಿದ್ದ ಒಟ್ಟು ಅನುತ್ಪಾದಕ ಆಸ್ತಿಯು ಪ್ರಸಕ್ತ ವರ್ಷದಲ್ಲಿ ಶೇ.12 ರಷ್ಟಾಗಿದ್ದು, ಪ್ರಸ್ತುತ ವರ್ಷದಲ್ಲಿ ಮತ್ತಷ್ಟು ಇಳಿಕೆಯಾಗಬಹುದೆಂದು ಅಂದಾಜಿಸಲಾಗಿದೆ.
ಸಂಸ್ಥೆಯ ವತಿಯಿಂದ ಪ್ರಾರಂಭದಿಂದಲೂ ಹಲವಾರು ವಿಶೇಷ ಯೋಜನೆಯಡಿಯಲ್ಲಿ ರೂ.3286.21 ಕೋಟಿಗಳ ಅವಧಿ ಸಾಲವನ್ನು ಸುಮಾರು 29890 ಮಹಿಳಾ ಉದ್ದಿಮೆದಾರರಿಗೆ ನೀಡುವ ಮೂಲಕ ಯಶಸ್ವಿ ಉದ್ದಿಮೆದಾರರಾಗುವಂತೆ ಪ್ರೇರೇಪಿಸಲಾಗಿದೆ. ಅಲ್ಲದೆ, ಸುಮಾರು 20,776 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ದಿಮೆದಾರರಿಗೆ ಒಟ್ಟು ರೂ.1,265.94 ಕೋಟಿ ಮೊತ್ತದ ಹಣಕಾಸಿನ ನೆರವನ್ನು ನೀಡುವ ಮೂಲಕ ಉದ್ದಿಮೆಗಳನ್ನು ಸ್ಥಾಪಿಸಲು ಸಂಸ್ಥೆಯು ಸಹಾಯಹಸ್ತ ನೀಡಿದೆ.
ಇದಲ್ಲದೆ, ಅಲ್ಪ ಸಂಖ್ಯಾತ ವರ್ಗಗಳ ಉದ್ದಿಮೆದಾರರಿಗೆ ಉತ್ತೇಜನ ನೀಡಲು ಸಂಸ್ಥೆಯವತಿಯಿಂದ ರೂ.11,282.94 ಕೋಟಿ ಮೊತ್ತದ ಹಣಕಾಸಿನ ನೆರವನ್ನು 19,052 ಉದ್ದಿಮೆದಾರರಿಗೆ ನೀಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಕೈಗಾರಿಕೀಕರಣವನ್ನು ಉತ್ತೇಜಿಸಲು ಕಳೆದ 58 ವರ್ಷಗಳಿಂದಲೂ ಸತತವಾಗಿ ಸಂಸ್ಥೆಯು 1,71,414 ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಘಟಕಗಳ (ಒSಒಇs) ಸ್ಥಾಪನೆಗೆ ಒಟ್ಟು ರೂ.15,276.05 ಕೋಟಿ ಮೊತ್ತವನ್ನು ಮಂಜೂರು ಮಾಡುವ ಮೂಲಕ ಗಮನಾರ್ಹ / ಅಸಾಧಾರಣ ಸೇವೆಯನ್ನು ಸಂಸ್ಥೆಯು ಮಾಡಿದೆ.
ಸಂಸ್ಥೆಯು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಹಾಗೂ ಸೇವಾ ಕ್ಷೇತ್ರದ ವಲಯದಲ್ಲಿನ ಉದ್ದಿಮೆಗಳ ಸ್ಥಾಪನೆಗೆ ಹಣಕಾಸಿನ ನೆರವು ನೀಡುವುದರ ಮೂಲಕ ಅವುಗಳಿಗೆ ಒಂದು ಅತ್ಯಾಧುನಿಕ ವೇದಿಕೆಯನ್ನು ಸೃಷ್ಟಿಸಿ, ಉತ್ತೇಜಿಸುವ ದೂರದರ್ಶಿತ್ವವನ್ನು ಹೊಂದಿರುತ್ತದೆ. ಈ ಬೆಳವಣಿಗೆಯು ಉದ್ಯಮಶೀಲತೆಗೆ ಉತ್ತೇಜನ, ಹೂಡಿಕೆ ಮತ್ತು ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಬೇಕಾದ ಉದ್ಯೋಗಾವಕಾಶ ಹಾಗೂ ರಾಜ್ಯದ ಬೆಳವಣಿಗೆಗೆ ಕಾರಣವಾಗಿದೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.