ಕಲಾ ವಿಮರ್ಶಕ, ಹಿರಿಯ ಪತ್ರಕರ್ತ ಈಶ್ವರಯ್ಯ ನಿಧನ
ಉಡುಪಿ: ಕಲಾ ಚಿಂತಕ, ವಿಮರ್ಶಕ ಅನಂತಪುರ ಈಶ್ವರಯ್ಯ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾಗಿದ್ದಾರೆ. ಕುಂಬಳೆ ಅನಂತಪುರದ ಈಶ್ವರಯ್ಯ ಕಲೆ, ಸಂಸ್ಕೃತಿಯ ವಿಮರ್ಶೆಗಳಿಗೆ ಹೆಸರಾಗಿದ್ದರು. ಹಲವು ಕಲಾವಿದರನ್ನು ಪ್ರೋತ್ಸಾಹಿಸಿದ್ದರು. ಸಂಗೀತ, ಯಕ್ಷಗಾನ, ಸಾಹಿತ್ಯ, ಛಾಯಾಗ್ರಹಣದಲ್ಲಿ ಅಭಿರುಚಿ ಹೊಂದಿದ್ದ ಅವರು ರಾಜ್ಯ ಮಟ್ಟದ ಪತ್ರಿಕೆಯೊಂದರ ಸಾಪ್ತಾಹಿಕ ಪುರವಣಿಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು.
ಜಮೀನುದಾರ ದಿ. ಅನಂತಪುರ ನಾರಾಯಣಯ್ಯ ಮತ್ತು ವೆಂಕಟಲಕ್ಷ್ಮಮ್ಮ ದಂಪತಿಯ 8 ಜನ ಮಕ್ಕಳಲ್ಲಿ ಮೊದಲನೆಯವರಾಗಿ 1940 ಅಗಸ್ಟ್ 12ರಂದು ಜನಿಸಿದರು. ಉಡುಪಿ ಎಂಜಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ನಂತರ ಪತ್ರಕರ್ತರಾಗಿ ಸೇರಿದ್ದರು.
ಇವರ ಸೇವೆಗಾಗಿ ಪೊಲ್ಯ ಯಕ್ಷಗಾನ ಪ್ರಶಸ್ತಿ (1994), ಕರ್ನಾಟಕ ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ (2000), ರಾಜ್ಯಮಟ್ಟದ ಸಂದೇಶ ಪತ್ರಿಕೋದ್ಯಮ ಸಮ್ಮಾನ ಪ್ರಶಸ್ತಿ (2001), ರಂಗವಾಚಸ್ಪತಿ ಬಿರುದು (2003), ಪರಶುರಾಮ ಪ್ರಶಸ್ತಿ (2003), ವ್ಯಾಸ ಸಾಹಿತ್ಯ ಪ್ರಶಸ್ತಿ (2008), ನುಡಿಸಿರಿ ರಾಜ್ಯ ಪ್ರಶಸ್ತಿ ಮೊದಲಾದ ಶ್ರೇಷ್ಠ ಪ್ರಶಸ್ತಿಗಳು ಸಂದಿವೆ.