Home Mangalorean News Kannada News ಕಲೆಗೆ ಜಾತಿಯಿಲ್ಲ- ಕೋಲು ಹೊಯ್ಯುವ ಪದಗಳ ದಾಖಲಾತಿ ಕಮ್ಮಟದಲ್ಲಿ ಶೋಭಾ ಕರಂದ್ಲಾಜೆ

ಕಲೆಗೆ ಜಾತಿಯಿಲ್ಲ- ಕೋಲು ಹೊಯ್ಯುವ ಪದಗಳ ದಾಖಲಾತಿ ಕಮ್ಮಟದಲ್ಲಿ ಶೋಭಾ ಕರಂದ್ಲಾಜೆ

Spread the love

ಕಲೆಗೆ ಜಾತಿಯಿಲ್ಲ- ಕೋಲು ಹೊಯ್ಯುವ ಪದಗಳ ದಾಖಲಾತಿ ಕಮ್ಮಟದಲ್ಲಿ ಶೋಭಾ ಕರಂದ್ಲಾಜೆ

ಮಂಗಳೂರು : ಸ್ಥಳೀಯ ಕಲೆ, ಸಂಪ್ರದಾಯ, ಸಂಸ್ಕøತಿ, ಪರಂಪರೆ ಮುಂತಾದ ವಿಷಯಗಳನ್ನು ಧ್ವನಿ ಮುದ್ರಿಸಿಕೊಂಡು, ಮುಂದಿನ ಪೀಳಿಗೆಗೆ ಕಾಪಿಡುವ ಕೆಲಸ ಆಕಾಶವಾಣಿ ಮಾಡುತ್ತಿರುವದು ತುಂಬಾ ಸಂತಸ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಮಂಗಳೂರು ಆಕಾಶವಾಣಿಯು ಮಂದರ್ತಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಹಯೋಗದಲ್ಲಿ ಆಯೋಜಿಸಿದ್ದ ಕುಂದಗನ್ನಡದ ಹಾಡುಗಬ್ಬ-ಕೋಲು ಹೊಯ್ಯುವ ಪದಗಳ ಎರಡು ದಿನಗಳ ದಾಖಲಾತಿ ಕಮ್ಮಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕುಂದಗನ್ನಡದ ಜನಪದ ಗಾಯನ ಸಂಪ್ರದಾಯವಾದ ಕೋಲು ಹುಯ್ಯುವ ಪದಗಳು ದಲಿತ ಸಮುದಾಯವೊಂದು ಸಮಾಜದ ನೈತಿಕ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತು, ವರ್ಷಕ್ಕೊಮ್ಮೆ ಕಟ್ಟುನಿಟ್ಟಿನ ಸಂಸ್ಕಾರ-ನೀತಿ-ಪಾಠಗಳನ್ನು ಬೋಧಿಸುವ ಬಲು ಕುತೂಹಲಕಾರಿ ವಿದ್ಯಮಾನವನ್ನು ಅನಾವರಣಗೊಳಿಸುವ ಈ ಕಲೆ ನಮ್ಮ ಉಡುಪಿ ಜಿಲ್ಲೆಯಲ್ಲಿರುವುದು ನಮಗೆ ಹೆಮ್ಮೆ ತಂದಿದೆ ಎಂದು ನುಡಿದರು.

folk-songs-air

ಕಲೆಯ ಕುರಿತು ಉಪನ್ಯಾಸ ನೀಡಿದ ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಉದಯ ಬಾರಕೂರು ಅವರು ಕೋಡಿ ತಿಂಗಳಿನಲ್ಲಿ ದಲಿತ ಸಮುದಾಯವೊಂದರ ಮಹಿಳೆಯರು ಮನೆಮನೆಗಳಿಗೆ ತೆರಳಿ ಬಾಗಳಕೋಲಿನ ತಾಕಲಾಟದೊಂದಿಗೆ ಹಾಡುತ್ತಿದ್ದ ಕುಂದಗನ್ನಡದ ಹಾಡುಗಬ್ಬವೇ ಕೋಲು ಹೊಯ್ಯುವ ಪದಗಳು. ಒಂದು ಗುಂಪಿನಲ್ಲಿ ಕನಿಷ್ಠ ಮೂವರು ಮಹಿಳೆಯರು ಇರುತ್ತಾರೆ. ತಾವು ಭೇಟಿ ನೀಡಿದ ಮನೆಯವರು ತಮ್ಮ ಕುಲಾಚಾರಗಳನ್ನು ಅನುಸರಿಸುವ ಮತ್ತು ಸತ್ಯಧರ್ಮ ನ್ಯಾಯನೀತಿಗಳನ್ನು ಪಾಲಿಸುವುದರ ಬಗ್ಗೆ ಹಾಡುತ್ತಾರೆ ಎಂದು ನುಡಿದರು.

ಸಮಾರಂಬದ ಅಧ್ಯಕ್ಷತೆಯನ್ನು ವಹಿಸಿದ್ದ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರು ಹಾಗೂ ಸಹಾಯಕ ನಿಲಯ ನಿರ್ದೇಶಕರು ಡಾ. ವಸಂತಕುಮಾರ ಪೆರ್ಲ ಅವರು ಕಲಾವಿದರ ಚಾರಿತ್ರಿಕ ಸ್ಥಾನವನ್ನು ಗುರುತಿಸಿ, ಗೌರವಿಸಿ ಕಲೆಯನ್ನು ಇಂದಿನ ಜನಸಾಮಾನ್ಯರೆಡೆಗೆ ತರುವುದು ಮತ್ತು ಅದರ ಸೌಹಾರ್ದಯುತ ಸುಂದರ ಕಾವ್ಯಾತ್ಮಕ ಭಾಷೆಯನ್ನು ಸಂವಹನದ ಇತರ ಮಾಧ್ಯಮಗಳಿಗೆ ದೊರಕುವಂತೆ ಮಾಡುವುದು ಆಕಾಶವಾಣಿಯ ಗುರಿ ಎಂದರು. ಜತೆಗೆ ಕಣ್ಮರೆಯಾಗುತ್ತಿರುವ ಜನಪದ ಕಲಾಪ್ರಕಾರಗಳನ್ನು ಪ್ರಸಾರಕ್ಕೆ ಅಳವಡಿಸಿ, ದಾಖಲೀಕರಣಮಾಡುವ ಆಶಯವೂ ನಮ್ಮದಾಗಿದೆ. ದಾಖಲೀಕರಣಗೊಂಡ ಕಲಾಪ್ರಕಾರವನ್ನು ಹಿಂದಿ ಹಾಗೂ ಇಂಗ್ಲೀಷನಲ್ಲಿ ಅನುವಾದಿಸಿ ಅದನ್ನು ಕೇಂದ್ರ ಭಂಡಾರಕ್ಕೆ ಕಳಿಸುವ ಕೆಲಸವೂ ನಮ್ಮದು ಎಂದು ನುಡಿದರು.

ಕಲೆ ಇಂದು ಯಾರ ಸೊತ್ತೂ ಅಲ್ಲ. ಯಾವ ರೀತಿಯಾಗಿ ಭರತನಾಟ್ಯ, ಯಕ್ಷಗಾನವು ಇಂದು ಎಲ್ಲ ಜಾತಿ ಜನಾಂಗದವರಿಂದ ಬೆಳೆಯುತ್ತಿದೆಯೋ, ಹಾಗೇಯೇ ಎಲ್ಲ ಜನಪದ ಕಲೆಗಳೂ ಸಹ ಜಾತಿಯನ್ನು ಮೀರಿ ಬೆಳೆಯುವ ಅನಿವಾರ್ಯತೆ ಇದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಶೋಭಾ ಕರಂದ್ಲಾಜೆ ಅವರು ತಮ್ಮ ಸಮಾರೋಪ ಭಾಷಣದಲ್ಲಿ ತಿಳಿಸಿದರು. ಜನಪದ ಕಲಾವಿದರು ಮುಗ್ಧರು, ಸರಳ ಜನರು ಅವರಿಗೆ ಪಟ್ಟಣದ ಹಮ್ಮು ಬಿಮ್ಮಿನ ಅರಿವಿಲ್ಲ, ತಮ್ಮ ಸಂಕೋಚವನ್ನು ಬಿಟ್ಟು ಮುಖ್ಯ ವಾಹಿನಿಗೆ ಬರಬೇಕು. ಎಲ್ಲರೂ ಅವರನ್ನು ಸ್ವಾಗತಿಸಬೇಕು ಎಂದು ತಿಳಿಸಿದರು.

ಆಶಯ ಭಾಷಣ ಮಾಡಿದ ಸಂಪನ್ಮೂಲ ಮತ್ತು ತರಬೇತಿ ತಜ್ಞರಾದ ಬಿ. ಮೋಹನ್‍ಚಂದ್ರ ಕಾಳಾವರ್ಕರ್ ಅವರು ಆಕಾಶವಾಣಿಯು ಜನರ ಬಳಿ ಬಂದು ಜನಪದ ಗೀತೆಗಳನ್ನು ದಾಖಲೀಕರಣಗೊಳಿಸುತ್ತಿರುವದು ತುಂಬಾ ಸಂತಸ ಇದರ ಉಪಯೋಗ ಮುಂದಿನ ಜನಾಂಗಕ್ಕೆ ಆಗುವದರಲ್ಲಿ ಸಂಶಯವಿಲ್ಲ. ಕೋಲು ಹೊಯ್ಯುವ ಪದದ ಆಶಯವನ್ನು ತುಂಬಾ ಮಾರ್ಮಿಕವಾಗಿ ತಿಳಿಸಿದರು.

ಇಪ್ಪತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜಾನಪದ ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿ ಕೊಂಡಿದ್ದವು. ತಂಡಗಳು ಪ್ರಸ್ತುತಪಡಿಸಿದ ಕಲೆಯನ್ನು ಎಲ್ಲ ಸಭಿಕಕರು ಅಸ್ವಾದಿಸಿದರು. ಸದಾನಂದ ಪೆರ್ಲ ಎಲ್ಲರನ್ನು ಸ್ವಾಗತಿಸಿದರು. ಸದಾನಂದ ಹೊಳ್ಳ ಅವರು ವಂದನಾರ್ಪಣೆ ಮಾಡಿದರು. ದೇವು ಹನೇಹಳ್ಳಿ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸಮಾರಂಬದಲ್ಲಿ ದೇವಸ್ಥಾನದ ಅಧ್ಯಕ್ಷರು ಎಚ್. ಧನಂಜಯ ಶೆಟ್ಟಿ, ಟ್ರಸ್ಟೀ ಗೋಪಾಲ ನಾಯ್ಕ್, ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.


Spread the love

Exit mobile version