Home Mangalorean News Kannada News ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಸಮಾಜದ ಕರ್ತವ್ಯವಾಗಲಿ : ಡಾ.ತಲ್ಲೂರು

ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಸಮಾಜದ ಕರ್ತವ್ಯವಾಗಲಿ : ಡಾ.ತಲ್ಲೂರು

Spread the love

ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಸಮಾಜದ ಕರ್ತವ್ಯವಾಗಲಿ : ಡಾ.ತಲ್ಲೂರು

ಉಡುಪಿ: ಬ್ರಹ್ಮಾವರದ ಎಸ್‌ಎಂಎಸ್ ಶಿಕ್ಷಣ ಸಂಸ್ಥೆಯ ಮಕ್ಕಳ ಮಂಟಪದಲ್ಲಿ ಮಂಗಳವಾರ ಸಾಂಸ್ಕೃತಿಕ ಸಂಘಟನೆ ಭೂಮಿಕಾ ಹಾರಾಡಿ ಸಂಸ್ಥೆಯ ಹತ್ತನೇ ವರ್ಷದ ನಾಟಕೋತ್ಸವ `ಬಣ್ಣ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ರಂಗ ಗೌರವ ಸಮರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು, ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಸಮಾಜದ ಕರ್ತವ್ಯವಾಗಬೇಕು ಎಂದರು.ಈ ಮಣ್ಣಿನ ಜಾನಪದ ಕಲೆಗಳನ್ನು ಬೆಳೆಸುವ ಉದ್ದೇಶದಿಂದಲೇ ಹಿರಿಯ ವಿದ್ವಾಂಸರಾದ ಏರ್ಯ ಲಕ್ಷ್ಮಿನಾರಾಯಣ ಆಳ್ವ, ಎ.ಜಿ.ಕೊಡ್ಗಿ, ಡಾ.ತಿಮ್ಮೇ ಗೌಡ ಅವರ ಕೋರಿಕೆಯ ಮೇರೆಗೆ ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷನಾಗಲು ಒಪ್ಪಿದೆ. ಕಳೆದ ೬ ವರ್ಷಗಳಲ್ಲಿ ನಾಡಿನಾದ್ಯಂತ ೨೭ಕ್ಕೂ ಅಧಿಕ ಜಾನಪದ ವೈಭವ ಕಾರ್ಯಕ್ರಮಗಳನ್ನು ನಡೆಸಿ, ಈ ಮೂಲಕ ಜಾನಪದ ಕಲೆಯ ಬೆಳವಣಿಗೆಯ ಜೊತೆಗೆ ಜಾನಪದ ಕಲಾ ತಂಡಗಳಿಗೆ ಪ್ರೋತ್ಸಾಹಿಸುವ ಕಾರ್ಯ ನಡೆಸಲಾಗಿದೆ. ಅಲ್ಲದೆ ಜಾನಪದ ಸಾಧಕ ಕಲಾವಿದರು, ಕಲಾ ಸಂಘಟಕರು ಹಾಗೂ ಕಲಾ ಪ್ರೋತ್ಸಾಹಕರಿಗೆ ಜಾನಪದ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯ ನಡೆಸಲಾಗಿದೆ. ಉಡುಪಿಯ ಕಲಾಮಯಂ ನಂತಹ ಜಾನಪದ ತಂಡಗಳು ಇಂದು ಬಿಡುವಿಲ್ಲದೆ ಕಾರ್ಯಕ್ರಮಗಳನ್ನು ನೀಡುವಷ್ಟು ಬೆಳವಣಿಗೆಯಾಗಿರುವುದು ನಾಡಿನಾದ್ಯಂತ ಜಾನಪದ ಕಲೆ ಹಾಗೂ ಪರಿಷತ್ತಿನ ಬಗ್ಗೆ ಜನ ಜಾಗೃತಿ ಮೂಡಿಸಿದೆ ಎಂಬುದನ್ನು ಸಾರುತ್ತಿದೆ ಎಂದರು.

ಯಕ್ಷಗಾನ ಕಲಾರಂಗದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಯಕ್ಷಗಾನವನ್ನು ಕಲಿತು ೪೦೦ಕ್ಕೂ ಅಧಿಕ ಬಾರಿ ಪಾತ್ರಗಳನ್ನು ನಿರ್ವಹಿಸಿದ ತೃಪ್ತಿ ನನಗಿದೆ. ಅಲ್ಲದೆ ರಾಜಾಂಗಣದಲ್ಲಿ ಚಿಟ್ಟಾಣಿ, ಧಾರೇಶ್ವರ, ಗೋವಿಂದ ಭಟ್ಟ, ಸಾಮಗ ಮೊದಲಾದ ಮೇರು ಕಲಾವಿದರ ಸಪ್ತಾಹಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದಲ್ಲದೆ ಸಾಧಕ ಯಕ್ಷಗಾನ ಕಲಾವಿದರುಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುವ ನನ್ನ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮೂಲಕ ನಡೆಸಿದ್ದೇನೆ ಎಂದ ಅವರು, ಕಲೆ ನನ್ನನ್ನು ಒಪ್ಪಿಕೊಂಡು ನಾನು ಕಲೆಯನ್ನು ಅಪ್ಪಿಕೊಂಡು ಮುನ್ನಡೆಯುವ ಈ ಪಯಣದಲ್ಲಿ ಕಲಾಭಿಮಾನಿಗಳಿಂದ ನಾನು ಮಾಡಿದ ಉತ್ತಮ ಕಾರ್ಯಗಳಿಗೆ ಉತ್ತರ ರೂಪದಲ್ಲಿ ಸಿಗುತ್ತಿರುವ ಈ ಗೌರವ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.

ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಮಾತನಾಡಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಯಕ್ಷಗಾನ, ಜಾನಪದ, ಸಾಂಸ್ಕೃತಿಕ ರಂಗಕ್ಕೆ ನೀಡಿದ ವಿಶೇಷ ಕೊಡುಗೆಯನ್ನು ಪರಿಗಣಿಸಿ ಅವರಿಗೆ ರಂಗ ಗೌರವ ಸಮರ್ಪಣೆ ಮಾಡಿರುವುದು ಸಂತೋಷ ತಂದಿದೆ. ಡಾ,ತಲ್ಲೂರು ಅವರು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಯಕ್ಷಗಾನ ಕಲೆ ಹಾಗೂ ಕಲಾವಿದರ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.

ಭೂಮಿಕಾ ಹಾರಾಡಿ ಸಂಸ್ಥೆಯ ಸಂಸ್ಥಾಪಕ ಬಿ.ಎಸ್. ರಾಮ್ ಶೆಟ್ಟಿ ಅವರು ಮಾತನಾಡಿ, ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಯಕ್ಷಗಾನ, ಜಾನಪದ ಕ್ಷೇತ್ರಕ್ಕೆ ನೀಡಿರುವ ಅನುಪಮ ಸೇವೆಯನ್ನು ಪರಿಗಣಿಸಿ ಸರಕಾರ ಅವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರನ್ನಾಗಿ ಮಾಡಿದೆ, ಈ ಸಂದರ್ಭದಲ್ಲಿ ಅವರಿಗೆ ರಂಗ ಗೌರವವನ್ನು ಸಮರ್ಪಿಸಲು ಸಂಸ್ಥೆ ಹೆಮ್ಮೆ ಪಡುತ್ತಿದೆ. ರಂಗಭೂಮಿಯ ಬೆಳವಣಿಗೆಗಾಗಿ ಅವರು ನೀಡುತ್ತಿರುವ ಪ್ರೋತ್ಸಾಹ ಮಾದರಿಯಾಗಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ರಂಗಕರ್ಮಿಗಳಿಗೂ ಸಮಾಜದಲ್ಲಿ ಒಳ್ಳೆಯ ಗೌರವ ಸಿಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.ಯುವಜನತೆಯನ್ನು ರಂಗಭೂಮಿ ತನ್ನತ್ತ ಸೆಳೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಕಾಂತರ ಖ್ಯಾತಿಯ ಯುವ ಚಿತ್ರನಟ ಪ್ರಮೋದ್ ಶೆಟ್ಟಿ, ಎಸ್‌ಎಂಎಸ್ ಕಾಲೇಜಿನ ಪ್ರಾಂಶುಪಾಲ ಐವನ್ ಸುವಾರಿಸ್ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಟ್ರಸ್ಟಿ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಭೂಮಿಕಾ ಹಾರಾಡಿ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version