ಕಲ್ಕಡ್ಕದ ನಿಶಾಂತ್ ಆತ್ಮಹತ್ಯೆ ; ಶೋಭಾ ಕರಂದ್ಲಾಜೆ – ಖಾದರ್ ನಡುವೆ ಟ್ವೀಟ್ ವಾರ್
ಮಂಗಳೂರು: ಭಾನುವಾರ ಪಾಣೆಮಂಗಳೂರಿನ ನೇತ್ರವತಿ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಕಲ್ಲಡ್ಕ ನಿವಾಸಿ ನಿಶಾಂತ್ ಅವರ ಆತ್ಮಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು ಸಂಸದೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಚಿವ ಯು ಟಿ ಖಾದರ್ ನಡುವೆ ಟ್ವಿಟ್ ವಾರ್ ಗೆ ಕಾರಣವಾಗಿದೆ.
ಭಾನುವಾರ ಶೋಭಾ ಕರಂದ್ಲಾಜೆಯವರದ್ದು ಎನ್ನಲಾದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು “ ಜಿಹಾದಿಗಳಿಂದ ಹಿಂದೂ ಸಂಘಟನೆಯ ಕಲ್ಲಡ್ಕದ ನಿಶಾಂತ್ ಎಂಬ ಯುವಕನ ಹತ್ಯೆ ನಡೆದಿದೆ ಎಂಬ ಮಾಹಿತಿ ಬಂದಿದೆ ಈ ಕೂಡಲೇ ಆ ಜಿಹಾದಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅಮಿತ್ ಶಾ ರಿಗೆ ತಿಳಿಸಿದ್ದೇನೆ” ಎಂದು ಬರೆಯಲಾಗಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಸಚಿವ ಹಾಗೂ ಪ್ರಸ್ತುತ ಶಾಸಕ ಯು ಟಿ ಖಾದರ್ “ ಮಾನ್ಯ ಶೋಭಾ ಕರಂದ್ಲಾಜೆ ಅವರೇ ನಿಮ್ಮ ಹೆಸರಿನ ಟ್ವೀಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಓಡಾಡ್ತಾ ಇದೆ ಟ್ವೀಟ್ ಸತ್ಯಾಸತ್ಯತೆಯ ಬಗ್ಗೆ ನೀವೇ ಹೇಳಬೇಕು. ನೀವೋ ಅಥವಾ ನಿಮ್ಮ ಭಕ್ತರೋ ಯಾರೇ ಇರಲಿ ಆತ್ಮಹತ್ಯೆ ಬಗ್ಗೆ ನೇರವಾಗಿ ಅಮಿತ್ ಶಾ ಗೆ ಹೇಳೀದ್ದು ಒಳ್ಳೆಯ ವಿಚಾರ ಅದೇ ರೀತಿಯಲ್ಲಿ ಲಾಕ್ ಡೌನ್ ನಿಂದ ಒದ್ದಾಡುತ್ತಿರುವ ರಾಜ್ಯದ ಜನರಿಗೆ ಬೇಗ ಹಣ ಬಿಡುಗಡೆ ಮಾಡಲು ಹೇಳಿ” ಎಂಬ ಅರ್ಥದಲ್ಲಿ ಪ್ರತಿಕ್ರಿಯೆ ನೀಡಿದ್ದರು.
ಸಂಜೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಟ್ವೀಟ್ ಬಗ್ಗೆ ವೀಡಿಯೋ ಸಂದೇಶದ ಮೂಲಕ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ ಅವರು ಇದು ಜಿಹಾದಿಗಳ ಷಡ್ಯಂತ್ರ ಆಗಿದ್ದು ನಾನು ಈ ರೀತಿಯ ಯಾವುದೇ ಹೇಳಿಕೆ ಅಥವಾ ಟ್ವೀಟ್ ಮಾಡಿರುವುದಿಲ್ಲ. ಇದು ಎಡಿಟ್ ಮಾಡಿ ನನ್ನದೆಂದು ಬಿಂಬಿಸುವ ಪ್ರಯತ್ನ ಕಿಡಿಗೇಡಿಗಳು ಮಾಡಿರುತ್ತಾರೆ. ಕಿಡಿಗೇಡಿಗಳ ಈ ಕೃತ್ಯಕ್ಕೆ ಸಾಥ್ ನೀಡುವ ಮತ್ತು ಸಾರ್ವಜನಿಕ ವಲಯದಲ್ಲಿ ವದಂತಿಗಳ ಮೂಲಕ ಸಾಮರಸ್ಯ –ಶಾಂತಿ ಕದಡುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಮಂಗಳೂರು ಪೊಲೀಸರಿಗೆ ಸೂಚಿಸಲಾಗಿದೆ. ಮತಾಂದ ಜಿಹಾದಿಗಳ ಈ ದುಷ್ಕೃತ್ಯಕ್ಕೆ ಕಾಂಗ್ರೆಸ್ ನಾಯಕರು ಸೇರಿ ಕೊಂಡಿರುವುದು ಅವರ ವಿಕೃತ ಮನಸ್ಥಿತಿಯನ್ನು ತೆರೆದಿರುಸುತ್ತದೆ ಎಂದು ಹೇಳಿದ್ದಾರೆ.
ಸಂಸದೆ ಶೋಭಾ ರ ಸ್ಪಷ್ಟನೆಗೆ ಪ್ರತಿಕ್ರಿಯೆ ನೀಡಿದ ಯು ಟಿ ಖಾದರ್ “ ಟ್ವೀಟ್ ವಿಚಾರವಾಗಿ ಗೌರವಾನ್ವಿತ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ಗಮನಿಸಿದ್ದೇನೆ. ತಮ್ಮ ಹೆಸರಿನ ಟ್ವೀಟ್ ನಕಲಿ ಅಂತಾ ಹೇಳಿದ್ದಾರೆ, ತನಿಖೆಗೂ ಆಗ್ರಹಿಸಿದ್ದಾರೆ, ನಾನು ಕೂಡ ಪೊಲೀಸ್ ತನಿಖೆಯನ್ನು ಸ್ವಾಗತಿಸುತ್ತೇನೆ. ಸಂಸದರ ಟ್ವೀಟ್ ಅಕೌಂಟ್ ಅನ್ನೇ ನಕಲು ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕು. ಸಮಾಜದ ಶಾಂತಿ ಕದಡುವ ಯಾವ ಶಕ್ತಿಗಳಿದ್ರೂ ಪೊಲೀಸರು ತನಿಖೆ ಮಾಡಿ ಶಿಕ್ಷೆ ನೀಡಲೇ ಬೇಕು ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ಮತ್ತು ಬೆಂಬಲ ಇದೆ. ಇದರ ಹೊರತಾಗಿ ಶೋಭಾ ಕರಂದ್ಲಾಜೆ ಅವರು ಮತ್ತದೇ ಹಳೆ ರಾಗದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಅಪವಾದ ಹೊರಿಸುವುದು ಸರಿಯಲ್ಲ ಎಂದಿದ್ದಾರೆ.
ಒಟ್ಟಾರೆ ಹಿಂದೂ ಯುವಕ ನಿಶಾಂತ್ ಅವರ ಆತ್ಮಹತ್ಯೆಗೆ ಯತ್ನಿಸಿದ್ದ ವೇಳೆ ಅವರನ್ನು ಪ್ರಾಣದ ಹಂಗು ತೊರೆದು ರಕ್ಷಣೆಗೆ ಯತ್ನಿಸಿದ್ದ ಮುಸ್ಲಿಂ ಯುವಕರ ಕಾರ್ಯದ ಬಗ್ಗೆ ರಾಜಕೀಯ ನಾಯಕರು ಪರಸ್ಪರ ದೂಷಣೆ ಮಾಡಿಕೊಳ್ಳುತ್ತಿದ್ದರೆ ಇನ್ನೊಂದೆಡೆ ಯುವಕರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.