ಕಲ್ಮಾಡಿ ಚರ್ಚಿನ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವ; ಸಾವಿರಾರು ಭಕ್ತಾದಿಗಳು ಭಾಗಿ
ಉಡುಪಿ: ರಾಷ್ಟ್ರಕ್ಕಾಗಿ ಉತ್ತಮ ಕೆಲಸವನ್ನು ಮಾಡುವುದರೊಂದಿಗೆ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದಾಗ ನಿಜವಾದ ಸ್ವಾತಂತ್ರ್ಯ ಪ್ರತಿಯೊಬ್ಬರು ನೈಜ ಅರ್ಥದಿಂದ ಸಂಭ್ರಮಿಸಿದಂತಾಗುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಮಂಗಳವಾರ ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚಿನ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವದ ಪ್ರಧಾನ ಬಲಿಪೂಜೆಯನ್ನು ಅರ್ಪಿಸಿ ಸಂದೇಶ ನೀಡಿದರು.
ನಮ್ಮಲ್ಲಿನ ಕೆಟ್ಟ ಚಟಗಳನ್ನು ಬಿಟ್ಟು ಹೊಸ ಜೀವನದ ನಡೆಸುವುದೇ ನಿಜವಾದ ಸ್ವಾತಂತ್ರ್ಯವಾಗಿದೆ. ದೇಶ ಇಂದು ಹಲವರು ಸಮಸ್ಯೆಗಳಿಗೆ ಸಿಲುಕಿ ಒದ್ದಾಡುತ್ತಿದ್ದು ಅದರಿಂದ ಮುಕ್ತರಾಗಬೇಕಾದ ಅವಶ್ಯಕತೆ ಇದ್ದು ಆಳುವ ವರ್ಗದೊಂದಿಗೆ ಪ್ರತಿಯೊಬ್ಬ ನಾಗರಿಕನೂ ಕೂಡ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಬೇಕಾಗಿದೆ ಎಂದರು.
ಮೇರಿ ಮಾತೆಯು ನಮಗೆ ಭರವಸೆಯ ಬೆಳಕಾಗಿದ್ದು ದೇವರ ವಾಕ್ಯದಂತೆ ನಡೆದು ಪ್ರತಿಯೊಬ್ಬರಿಗೆ ಆದರ್ಶಪ್ರಾಯವಾಗಿ ಬದುಕಿದವರಾಗಿದ್ದಾರೆ. ಅವರ ಧ್ಯೇಯದಂತೆ ಪ್ರತಿಯೊಬ್ಬ ವ್ಯಕ್ತಿಯು ನಡೆಯುವುದರೊಂದಿಗೆ ಮೋಕ್ಷದ ದಾರಿಯನ್ನು ಸಂಪಾದಿಸುವಂತಾಗಬೇಕು ಎಂದರು.
ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ 7 ಗಂಟೆಗೆ ಕೊಂಕಣಿ ಹಾಗೂ 4 ಗಂಟೆಗೆ ಕನ್ನಡ ಮತ್ತು 6 ಗಂಟೆಗೆ ಇಂಗ್ಲೀಷ್ ಭಾಷೆಯಲ್ಲಿ ಬಲಿಪೂಜೆಗಳು ಜರುಗಿದವು. ಪ್ರಧಾನ ಬಲಿಪೂಜೆಯ ವೇಳೆ ದಾನಿಗಳಿಗೆ ಗೌರವಿಸಿಲಾಯಿತು ಅಲ್ಲದೆ ಭಾಗವಹಿಸಿದ ಪ್ರತಿಯೊಬ್ಬ ಭಕ್ತಾದಿಗಳಿಗೂ ಅನ್ನ ಸಂತರ್ಪಣೆ ಜರುಗಿತು. ಇಡೀ ದಿನದ ವಿವಿಧ ಬಲಿಪೂಜೆಗಳಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಭಕ್ತಾದಿಗಳು ಭಾಗವಹಿಸಿದರು.
ಪ್ರಧಾನ ಬಲಿಪೂಜೆಯಲ್ಲಿ ಉಡುಪಿ ವಲಯ ಪ್ರಧಾನ ಧರ್ಮಗುರು ವಂ ವಲೇರಿಯನ್ ಮೆಂಡೊನ್ಸಾ, ಉಜ್ವಾಡ್ ಪತ್ರಿಕೆಯ ಸಂಪಾದಕ ವಂ ಚೇತನ್ ಲೋಬೊ, ಮಣಿಪಾಲ ಚರ್ಚಿನ ವಂ ಫೆಡ್ರಿಕ್ ಡಿಸೋಜಾ, ತೊಟ್ಟಾಂ ಚರ್ಚಿನ ವಂ ಫ್ರಾನ್ಸಿಸ್ ಕರ್ನೇಲಿಯೋ, ಉಡುಪಿ ಸಹಾಯಕ ಧರ್ಮಗುರು ವಂ ವಿಜಯ್ ಡಿಸೋಜಾ, ಕಲ್ಮಾಡಿ ಚರ್ಚಿನ ಧರ್ಮಗುರು ವಂ ಆಲ್ಬನ್ ಡಿಸೋಜಾ ಹಾಗೂ ಇತರರು ಉಪಸ್ಥಿತರಿದ್ದರು.
ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೊನ್ಸಾ, ಪಾಲನಾ ಸಮಿಯ ಪದಾಧಿಕಾರಿಗಳು, ಯುವ ಸಂಘಟನೆಯ ಕಾರ್ಯಕರ್ತರು, ಇತರ ಸ್ವಯಂಸೇವಕರು ಸಹಕರಿಸಿದರು.